Summer Tips: ಬೇಸಗೆಯ ದಾಹ ನೀಗಿಸಿಕೊಳ್ಳಲು ತಂಪು ಪಾನೀಯ ಮನೆಯಲ್ಲೇ ತಯಾರಿಸಿ
ಮಾರುಕಟ್ಟೆಯಲ್ಲಿ ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸುವ ತಂಪು ಪಾನಿಯ ಬಾಯಿಗೆ ರುಚಿ ಎನಿಸಿದರು ಆರೋಗ್ಯ ದೃಷ್ಟಿಯಿಂದ ಅನೇಕ ರೀತಿಯಲ್ಲಿ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಯಲ್ಲಿಯೇ ಬೇಸಗೆ ಕಾಲಕ್ಕೆ ಬೇಕಾಗುವ ತಂಪು ಪಾನೀಯಗಳನ್ನು ಅತ್ಯಂತ ಸುಲಭ ವಿಧಾನದಲ್ಲಿ ಸಿದ್ಧ ಪಡಿಸಬಹುದು. ಆ ಕುರಿತಾದ ಮಾಹಿತಿ ಇಲ್ಲಿದೆ.

summer drinks

ನವದೆಹಲಿ: ಬೇಸಗೆಯಲ್ಲಿ ಎಷ್ಟು ನೀರು ಕುಡಿದರೂ ಕಡಿಮೆಯೇ. ದೇಹದಲ್ಲಿ ಬೆವರು ಅತಿ ಹೆಚ್ಚು ಹೊರಹೋಗುವ ಕಾರಣ ನೀರು, ಇತರ ಪಾನೀಯಗಳನ್ನು ಅದಿಕ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಅದರಲ್ಲಿಯೂ ಮಾರುಕಟ್ಟೆಯಲ್ಲಿ ಹಾನಿಕಾರಕ ರಾಸಾಯನಿಕಗಳಿಂದ ಮಾಡಲಾಗುವ ತಂಪು ಪಾನಿಯ ಬಾಯಿಗೆ ರುಚಿ ಎನಿಸಿದರು ಆರೋಗ್ಯ ದೃಷ್ಟಿಯಿಂದ ಅನೇಕ ರೀತಿಯಲ್ಲಿ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮನೆಯಲ್ಲಿಯೇ ಬೇಸಗೆ ಕಾಲಕ್ಕೆ ಬೇಕಾಗುವ ತಂಪು ಪಾನೀಯಗಳನ್ನು (Summer Tips) ಅತ್ಯಂತ ಸುಲಭ ವಿಧಾನದಲ್ಲಿ ಸಿದ್ಧಪಡಿಸಬಹುದು. ಹಾಗಾದರೆ ಯಾವೆಲ್ಲ ಪಾನೀಯ ಬೇಸಗೆ ಕಾಲಕ್ಕೆ ಸೇವಿಸಬಹುದು, ಇದರಿಂದ ಯಾವೆಲ್ಲ ಆರೋಗ್ಯ ಪ್ರಯೋಜನ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.
ನಿಂಬು ಪಾನೀಯ
ನಿಂಬುವಿನಲ್ಲಿ ಇರುವ ಸಿಟ್ರಿಕ್ ಹಾಗೂ ತಾಜಾ ಅಂಶ ದೇಹಕ್ಕೆ ಬೇಕಾದ ಅನೇಕ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಸಾಂಪ್ರ ದಾಯಿಕ ಪಾನೀಯವಾದ ನಿಂಬು ರಸದಿಂದ ಮಾಡಿರುವ ಜ್ಯೂಸ್ ಅನ್ನು ಸೇವಿಸುವುದರಿಂದ ಅಸ್ವಸ್ಥತೆ, ಸುಸ್ತು, ಬಾಯಾರಿಕೆ ಸಮಸ್ಯೆ ಪರಿಹಾರ ಸಿಗುತ್ತದೆ. ನಿಂಬು ಪಾನೀಯಕ್ಕೆ ಕೆಲವರು ಸೋಡಾ, ಪುದೀನ ಸೇರಿಸಿ ಕುಡಿಯುವ ಹವ್ಯಾಸ ಹೊಂದಿದ್ದು ಇದು ಸಹ ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ.
ಪಾನಕ
ಇದು ನಮ್ಮ ದೇಶದ ಸಂಪ್ರದಾಯಬದ್ಧ ಪಾನೀಯದಲ್ಲಿ ಒಂದಾಗಿದ್ದು, ದಕ್ಷಿಣ ಭಾರತದಲ್ಲಂತೂ ಪಾನ ಬಹಳ ಜನಪ್ರಿಯ. ಬೆಲ್ಲಕ್ಕೆ ನಿಂಬುರಸ, ಒಣಶುಂಠಿಯ ರಸ, ಮೆಣಸು ಹಾಗೂ ಏಲಕ್ಕಿ ಬೆರೆಸಿ ನೀರಿನಲ್ಲಿ ಸಿದ್ಧಪಡಿಸುವ ಈ ಜ್ಯೂಸ್ ಸೇವಿಸಿದರೆ ದೇಹಕ್ಕೆ ತಂಪು. ಜತೆಗೆ ನಿರ್ಜಲೀಕರಣ, ಪಿತ್ತ ಇತರ ಸಮಸ್ಯೆ ಸಹ ಪರಿಹಾರವಾಗುತ್ತದೆ.
ಕುಲುಕ್ಕಿ ಪಾನೀಯ
ಇದು ಕೇರಳ ಮೂಲದ ಪಾನೀಯವಾಗಿದ್ದು, ಮಲಯಾಳಂನ ಹೆಸರಿನಿಂದಲೇ ಇದು ಹೆಸರುವಾಸಿ. ವಿಶೇಷವಾಗಿ ಸಿಹಿ ಮತ್ತು ಖಾರದ ಮಿಶ್ರ ರುಚಿ ಇದರಲ್ಲಿ ಇರುತ್ತದೆ. ತುಳಸಿ ಬೀಜ, ಹಸಿ ಮೆಣಸಿನ ಕಾಯಿ ಮತ್ತು ಲಿಂಬು ರಸಕ್ಕೆ ಬೆಲ್ಲ ಸೇರಿಸಿ ಈ ಪಾನೀಯ ಸಿದ್ಧ ಮಾಡಲಾಗುವುದು. ಇದನ್ನು ವಾರಕ್ಕೆ 2-3 ಸಲ ಸೇವಿಸಿದರೆ ಡಿ ಹೈಡ್ರೇಶನ್, ಸುಸ್ತು, ಬಾಯಾರಿಕೆ ಇತರ ಸಮಸ್ಯೆಗಳು ಶಮನವಾಗುತ್ತದೆ.
ದಾಬ್ ಶರಬತ್ತು
ಬೇಸಗೆ ಕಾಲಕ್ಕೆ ಎಳನೀರು ಸೇವನೆ ಮಾಡುವುದು ಕಾಮನ್. ಜತೆಗೆ ನೀವು ಎಳನೀರನ್ನೇ ದಾಬ್ ಶರಬತ್ ಮಾಡಿ ಸೇವಿಸಿದರೆ ಅದ್ಭುತ ರುಚಿ ಜತೆಗೆ ಆರೋಗ್ಯವೂ ವೃದ್ಧಿಯಾಗಲಿದೆ. ದಾಬ್ ಶರಬತ್ತು ಎನ್ನುವುದು ಬಂಗಾಳಿ ಶೈಲಿಯ ಒಂದು ಪಾನೀಯ. ಎಳನೀರಿಗೆ ಪುದೀನ ಎಲೆಯ ರಸ, ಸಕ್ಕರೆ ಮತ್ತು ನಿಂಬೆ ರಸ ಬೆರೆಸಬೇಕು. ಬಾಯಿ ಒಣಗುವುದು, ಬಾಯಿ ವಾಸನೆ, ತಲೆ ಸುತ್ತು, ಸುಸ್ತು ಇತರ ಸಮಸ್ಯೆಗೆ ಈ ಪಾನೀಯ ಉತ್ತಮ ಔಷಧದಂತೆ ಪರಿಣಾಮ ಬೀರುತ್ತದೆ.
ಇಮ್ಲಿ ಶರಬತ್ತು
ಹೆಸರೆ ಸೂಚಿಸುವಂತೆ ಹುಣಸೆ ಹಣ್ಣಿನ ರಸದಿಂದ ಮಾಡುವ ಒಂದು ತರನಾದ ಜ್ಯೂಸ್ ಇದು. ಹುಣಸೆ ರಸ, ಬೆಲ್ಲ, ಕರಿ ಮೆಣಸಿನ ರಸ ಸೇರಿಸಿ, ಚಿಟಿಕೆ ಉಪ್ಪು ಬೆರೆಸಿದರೆ ಹುಳಿ ಸಿಹಿ ಮಿಶ್ರಿತ ಇಮ್ಲಿ ಪಾನೀಯ ಸಿದ್ಧವಾಗುತ್ತದೆ. ಇದನ್ನು ಸೇವಿಸಿದರೆ ಬೇಸಗೆಯ ತಾಪ ಮಾನದ ಸಮಸ್ಯೆ ನಿವಾರಣೆ ಆಗುತ್ತದೆ.
ಚಾಸ್ ಪಾನೀಯ
ನಮ್ಮ ಪ್ರಾದೇಶಿಕ ಭಾಷೆಯಲ್ಲಿ ಇದಕ್ಕೆ ಮಜ್ಜಿಗೆ ಎಂದು ಹೇಳುತ್ತೇವೆ. ಮೊಸರು ಕಡೆದು ಅದಕ್ಕೆ ಕೊತ್ತಂಬರಿ ಸೊಪ್ಪು, ಚಿಟಿಕೆ ಜೀರಿಗೆ ಪುಡಿ, ಹಸಿ ಮೆಣಸು, ಅಜ್ವಾನ, ಶುಂಠಿ ರಸ ಮತ್ತು ಉಪ್ಪು ಬೆರೆಸಿದರೆ ಮಜ್ಜಿಗೆ ಸಿದ್ಧವಾಗುತ್ತದೆ. ಸ್ವಲ್ಪ ಹುಳಿ, ಉಪ್ಪಿನ ರುಚಿ ಹೊಂದಿರುವ ಮಜ್ಜಿಗೆ ಸೇವಿಸುದರಿಂದ ದೇಹ ತಂಪಾಗಿ ಇರುವ ಜತೆಗೆ ಜೀರ್ಣಕ್ರಿಯೆ ಸಹ ಉತ್ತಮವಾಗುತ್ತದೆ.
ಆಮ್ ಪನ್ನಾ
ಮಹಾರಾಷ್ಟ್ರದ ರುಚಿಕರ ಪಾನೀಯ ಸಾಲಿನಲ್ಲಿ ಆಮ್ ಪನ್ನಾ ಕೂಡ ಒಂದು. ಮಾವಿನ ತಿರುಳು ಬಳಸಿ ಅದಕ್ಕೆ ಜೀರಿಗೆ, ಕೊತ್ತಂಬರಿ, ಪುದೀನ ಎಲೆ ಸೇರಿಸಲಾಗುತ್ತದೆ. ಆಮ್ ಪನ್ನಾ ಬಾಯಿಗೆ ಅತ್ಯಂತ ರುಚಿಯಾದ ಪಾನೀಯವಾಗಿದ್ದು, ದೇಹವನ್ನು ತಂಪಾಗಿ ಇಡುತ್ತದೆ.
ಜಲ್ ಜೀರಾ
ನೀರಿನಲ್ಲಿ ಜೀರಿಗೆ ಕುದಿಸಿ ಅದಕ್ಕೆ ಹುಣಸೆ ಹಣ್ಣಿನ ರಸ, ನಿಂಬುರಸ, ಪುದೀನ ಎಲೆಯ ರಸ, ಬೆಲ್ಲ ಮತ್ತು ಉಪ್ಪು ಬೆರೆಸಿದರೆ ರುಚಿಯದ ಜಲ್ ಜೀರಾ ಪಾನೀಯ ತಯಾರಾಗುತ್ತದೆ. ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಬಲಗೊಳ್ಳುತ್ತದೆ.
ಇದನ್ನು ಓದಿ: Health Tips: ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?
ಸೋಲ್ ಕಧಿ
ಸೋಲ್ ಕಧಿ ಎನ್ನುವುದು ಭಾರತೀಯ ಪಾಕವ್ಯವಸ್ಥೆಯಲ್ಲಿನ ಕೊಂಕಣಿ ಶೈಲಿಯ ಪಾನೀಯ. ತೆಂಗಿನ ಹಾಲಿನ ಜತೆಗೆ ಕೋಕಂನ ರಸ ಬೆರೆಸುವ ಮೂಲಕ ಈ ಪಾನೀಯ ಸಿದ್ಧ ಪಡಿಸಲಾಗುತ್ತದೆ. ಇದನ್ನು ಸೇವಿಸಿದರೆ ಅಜೀರ್ಣ ಸಮಸ್ಯೆ ಇರಲಾರದು. ಜೀರ್ಣ ಕ್ರಿಯೆ ಉತ್ತಮವಾಗುವ ಜತೆಗೆ ದೇಹ ತಂಪಾಗಿಯೂ ಇರುತ್ತದೆ.
ಕೋಕಮ್ ಶರಬತ್ತು
ಇದು ಕೂಡ ಒಂದು ಸಾಂಪ್ರದಾಯಿಕ ಪಾನೀಯವಾಗಿದ್ದು ಕೋಕಂನ ಸಿಪ್ಪೆಯಿಂದ ರಸ ತೆಗೆದು ಅದಕ್ಕೆ ಸಕ್ಕರೆ ಬೆರೆಸಿ ಸಿದ್ಧ ಪಡಿಸಲಾಗುತ್ತದೆ. ಕೋಕಂ ಶರಬತ್ತು ಸೇವಿಸಿದರೆ ಹೊಟ್ಟೆ ನೋವು, ಉರಿಯೂತ, ನಿರ್ಜಲೀಕರಣ, ತಲೆ ಸುತ್ತು, ಪಿತ್ತ ಇತರ ಸಮಸ್ಯೆ ನಿವಾರಿಸಲು ಸಾಧ್ಯವಿದೆ.