Kunal Kamra: ಕುತ್ತು ತಂದ ಕಾಮಿಡಿ; FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಮ್ರಾ
Kunal Kamra: ಮಹಾರಾಷ್ಟ್ರದ ಶಿವಸೇನಾ ನಾಯಕ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಕುರಿತು ಕಾಮಿಡಿ ಶೋವೊಂದರಲ್ಲಿ ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಸ್ಟ್ಯಾಂಡ್-ಅಪ್ ಕಾಮೀಡಿಯನ್ ಕುನಾಲ್ ಕಮ್ರಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕುನಾಲ್ ಕಮ್ರಾ

ಮುಂಬೈ: ಮಹಾರಾಷ್ಟ್ರದ ಶಿವಸೇನಾ ನಾಯಕ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ(Maharashtra DCM Eknath Shinde) ಕುರಿತು ಕಾಮಿಡಿ ಶೋವೊಂದರಲ್ಲಿ ಅಪಹಾಸ್ಯ ಮಾಡಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಸ್ಟ್ಯಾಂಡ್-ಅಪ್ ಕಾಮೀಡಿಯನ್(Stand-up comedian) ಕುನಾಲ್ ಕಮ್ರಾ(Kunal Kamra) ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್(Bombay High Court)ಗೆ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಪ್ರಕರಣ ದಾಖಲಿಸುವುದು ಅಸಂವಿಧಾನಿಕ ಎಂದಿರುವ ಕಮ್ರಾ, ಇದು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಸಿಗುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಮತ್ತು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಿಗುವ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ಪ್ರಕರಣದ ವಿಚಾರಣೆ ಏಪ್ರಿಲ್ 21 ರಂದು ನಡೆಯಲಿದೆ.
ಈ ಹಿಂದೆ, ಮದ್ರಾಸ್ ಹೈಕೋರ್ಟ್ ಕಮ್ರಾರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿ ಆದೇಶ ಹೊರಡಿಸಿತ್ತು. ಮುಂಬೈ ಪೊಲೀಸರು ಮೂರು ಬಾರಿ ಸಮನ್ಸ್ ನೀಡಿದರೂ ಕಮ್ರಾ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು.
ಏನಿದು ವಿವಾದ?
ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಏಕನಾಥ್ ಶಿಂಧೆ ಅವರನ್ನ ಗುರಿಯಾಗಿಸಿ ಕಮ್ರಾ ಬರೆದ ಆ ಒಂದು ಹಾಡು. ಹಿಂದಿ ಸಿನಿಮಾದಲ್ಲಿ ಬರುವ ಹಾಡಿನ ಲಿರಿಕ್ಸ್ ಬದಲಾಯಿಸಿದ್ದ ಕಮ್ರಾ, ಶಿಂಧೆಯವರನ್ನು ʼದ್ರೋಹಿʼ ಎಂದು ಕರೆದಿದ್ದರು. ಇದು 2022 ರಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಎರಡು ಬಣಗಳಾಗಿ ಒಡೆದಿದ್ದನ್ನು ಉಲ್ಲೇಖಿಸಿ ಹೇಳಲಾಗಿತ್ತು. ಠಾಕ್ರೆ ಕೂಡ ಹಲವು ಬಾರಿ ಶಿಂಧೆಯನ್ನು ದ್ರೋಹಿ ಎಂದು ಕರೆದಿದ್ದರು.
ಕಮ್ರಾ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿದ್ದಂತೆಯೇ ಆಕ್ರೋಶಗೊಂಡ ಶಿಂಧೆ ಬೆಂಬಲಿಗರು, ಕಾರ್ಯಕ್ರಮ ನಡೆದ ಸ್ಥಳವಾದ ಹ್ಯಾಬಿಟಾಟ್ ಸ್ಟುಡಿಯೋಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅಲ್ಲಿನ ಪೀಠೋಪಕರಣಗಳನ್ನು ಒಡೆದು ಹಾಕಿ, ಕಮ್ರಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸ್ಟುಡಿಯೋ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಹತ್ತಾರು ಜನರನ್ನು ಪೊಲೀಸರು ಬಂಧಿಸಿದ್ದರಾದರೂ, ಅವರೆಲ್ಲರಿಗೂ ಅದೇ ದಿನ ಜಾಮೀನು ಸಿಕ್ಕಿತ್ತು.
ಮರುದಿನ ಬಿಎಂಸಿ ಅಧಿಕಾರಿಗಳು ಬಂದು ಹ್ಯಾಬಿಟಾಟ್ ಸ್ಟುಡಿಯೋದ ʼಅಕ್ರಮʼ ಭಾಗಗಳನ್ನು ಒಡೆದು ಹಾಕಿದ್ದರು. ಈ ಕ್ರಮಕ್ಕೂ ಕಮ್ರಾ ವಿಡಿಯೋಗೂ ಯಾವುದೇ ಸಂಬಂಧವಿಲ್ಲವೆಂದು ಅಧಿಕಾರಿಗಳು ಹೇಳಿದ್ದರು. ಆದರೂ, ಶಿಂಧೆ ಆದೇಶದ ಮೇರೆಗೆಯೇ ಸ್ಟುಡಿಯೋ ವಿರುದ್ಧ ಬಿಎಂಸಿ ಕ್ರಮ ಕೈಗೊಂಡಿದೆ ಎಂದು ಹಲವು ವರದಿಗಳು ಹೇಳಿದ್ದವು.
ಈ ಸುದ್ದಿಯನ್ನು ಓದಿ: Viral News: ಈ ದೇಶದಲ್ಲಿ ಮೃತದೇಹದ ಬೂದಿಯನ್ನು ಸೂಪ್‌ನಲ್ಲಿ ಬೆರೆಸಿ ಕುಡಿಯುತ್ತಾರೆ!
ʼರಾಜಕೀಯ ವ್ಯವಸ್ಥೆಯ ಗೇಲಿ ಕಾನೂನು ಬಾಹಿರವಲ್ಲʼ
ಈ ವಿವಾದ ಹುಟ್ಟುಕೊಂಡ ನಂತರ ಕುನಾಲ್ ಕಮ್ರಾ ವಾಕ್ ಸ್ವಾತಂತ್ರ್ಯದ ಹಕ್ಕನ್ನ ಪದೇ ಪದೇ ಉಲ್ಲೇಖಿಸಿದ್ದಾರೆ. “ಒಬ್ಬ ಪ್ರಭಾವಿ ರಾಜಕಾರಣಿ ಕುರಿತು ಮಾಡಿದ ತಮಾಷೆಯನ್ನು ತಮಾಷೆಯಂತೆ ಪರಿಗಣಿಸಲು ನಿಮಗೆ ಬಾರದಿರುವುದು ನನ್ನ ಹಕ್ಕಿನ ಮಹತ್ವವನ್ನು ಬದಲಾಯಿಸುವುದಿಲ್ಲ. ನಮ್ಮ ನಾಯಕರು ಮತ್ತು ರಾಜಕೀಯ ವ್ಯವಸ್ಥೆಯನ್ನು ಗೇಲಿ ಮಾಡುವುದು ಕಾನೂನು ಬಾಹಿರವಲ್ಲ” ಎಂದು ಅವರು ಹೇಳಿದ್ದಾರೆ. “ನಾನು ಕ್ಷಮೆಯಾಚಿಸುವುದಿಲ್ಲ. ಪೊಲೀಸರು ಮತ್ತು ಕೋರ್ಟ್ ಜತೆಗೆ ಸಹಕರಿಸಲು ನಾನು ಸಿದ್ಧ. ಆದರೆ, ಸ್ಟುಡಿಯೋ ಮೇಲೆ ದಾಳಿ ನಡೆಸಿದವರ ಮೇಲೂ ಕ್ರಮ ಕೈಗೊಳ್ಳುತ್ತಾರೆಯೇ?” ಎಂದು ಕಮ್ರಾ ಪ್ರಶ್ನಿಸಿದ್ದಾರೆ.
ಈ ವಿವಾದ ಸದ್ಯಕ್ಕೆ ಅಲ್ಪಮಟ್ಟಿಗೆ ತಣ್ಣಗಾಗಿದ್ದರೂ, ಇನ್ನೂ ಯಾವುದೇ ತಾರ್ಕಿಕ ಅಂತ್ಯ ಕಾಣಲಿಲ್ಲ. ಈ ಹಿಂದೆಯೂ ಹಲವು ಬಾರಿ ವಿವಾದಗಳಿಗೆ ಕಾರಣರಾಗಿದ್ದ ಕಮ್ರಾ, ಇನ್ನು ಮುಂದೆ ಈ ಪ್ರಕರಣದಲ್ಲಿ ಹೇಗೆ ಮುಂದುವರೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.