ಲಿಂಕ್ಡ್ ಇನ್‌ನ 2025ರ ಭಾರತದ ಅಗ್ರ ಕಂಪನಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳ ಪಡೆದ ಟಿಸಿಎಸ್, ಆಕ್ಸೆಂಚರ್ ಮತ್ತು ಇನ್ಫೋಸಿಸ್
ಅಭಿವೃದ್ಧಿ ಹೊಂದಬಹುದಾದ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಹೊರಗಿನ ಅವಕಾಶಗಳು ಮತ್ತು ಕಂಪನಿಯ ಮೇಲಿನ ಒಲವು ಸೇರಿದಂತೆ ಒಟ್ಟು ಎಂಟು ಅಂಶಗಳ ಆಧಾರದಲ್ಲಿ ಲಿಂಕ್ಡ್ ಇನ್ ಡೇಟಾ ವನ್ನು ಬಳಸಿಕೊಂಡ ರೂಪಿಸಲಾದ ಈ ಪಟ್ಟಿಯು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಿಗಳ ಮೇಲೆ ಹೂಡಿಕೆ ಮಾಡುತ್ತಿ ರುವ ಮತ್ತು ಈಗ ತೀವ್ರ ಗತಿಯಲ್ಲಿ ನೇಮಕಾತಿ ಮಾಡುತ್ತಿ ರುವ ಸಂಸ್ಥೆಗಳನ್ನು ಹೈಲೈಟ್ ಮಾಡಿ ತೋರಿಸಿದೆ.


● ಒಟ್ಟು ಅಗ್ರ 25 ಸ್ಥಾನಗಳಲ್ಲಿ ಫೈನಾನ್ಸ್, ಐಟಿ ಮತ್ತು ಸಾಫ್ಟ್ ವೇರ್ ಕ್ಷೇತ್ರದ ಕಂಪನಿಗಳು 19 ಸ್ಥಾನಗಳನ್ನು ಗಳಿಸಿವೆ ● ಫಿಡೆಲಿಟಿ ಇನ್ವೆಸ್ಟ್ ಮೆಂಟ್ಸ್ (#4), ಸರ್ವಿಸ್‌ನೌ (#17), ಮತ್ತು ಸ್ಟ್ರೈಪ್ (#21) ಈ ವರ್ಷದ ಪಟ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿವೆ
ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್ ಇನ್ ಇಂದು 2025ರ ಭಾರತದ ಉನ್ನತ ಕಂಪನಿ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವೃತ್ತಿಪರರು ತಮ್ಮ ವೃತ್ತಿಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾದ ಭಾರತದ 25 ದೊಡ್ಡ ಕಂಪನಿಗಳನ್ನು ಹೆಸರಿಸಲಾಗಿದೆ. ಲಿಂಕ್ಡ್ ಇನ್ ಪ್ಲಾಟ್‌ಫಾರ್ಮ್ ನಲ್ಲಿ ಲಕ್ಷಾಂತರ ವೃತ್ತಿಪರರ ಚಟುವಟಿಕೆಯ ಆಧಾರದ ಮೇಲೆ ರೂಪಿಸಲಾ ಗಿರುವ ಈ ಪಟ್ಟಿಯು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮುಂದಿನ ಉದ್ಯೋಗಾವಕಾಶ ವನ್ನು ಹುಡುಕಲು ಸಹಾಯ ಮಾಡುವಂತೆ ರೂಪುಗೊಂಡಿದೆ.
ಜೊತೆಗೆ ಈ ಪಟ್ಟಿಯು ಬೇಡಿಕೆಯಲ್ಲಿರುವ ಕೌಶಲ್ಯಗಳು, ಟಾಪ್ ಲೊಕೇಷನ್ ಗಳು ಮತ್ತು ಈ ಉನ್ನತ ಕಂಪನಿಗಳಲ್ಲಿನ ಪ್ರಮುಖ ಉದ್ಯೋಗ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಅಭಿವೃದ್ಧಿ ಹೊಂದಬಹುದಾದ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಹೊರಗಿನ ಅವಕಾಶಗಳು ಮತ್ತು ಕಂಪನಿಯ ಮೇಲಿನ ಒಲವು ಸೇರಿದಂತೆ ಒಟ್ಟು ಎಂಟು ಅಂಶಗಳ ಆಧಾರದಲ್ಲಿ ಲಿಂಕ್ಡ್ ಇನ್ ಡೇಟಾವನ್ನು ಬಳಸಿಕೊಂಡ ರೂಪಿಸಲಾದ ಈ ಪಟ್ಟಿಯು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಿ ಗಳ ಮೇಲೆ ಹೂಡಿಕೆ ಮಾಡುತ್ತಿ ರುವ ಮತ್ತು ಈಗ ತೀವ್ರ ಗತಿಯಲ್ಲಿ ನೇಮಕಾತಿ ಮಾಡುತ್ತಿರುವ ಸಂಸ್ಥೆಗಳನ್ನು ಹೈಲೈಟ್ ಮಾಡಿ ತೋರಿಸಿದೆ. ಲಿಂಕ್ಡ್ ಇನ್ ನ ಕರಿಯರ್ ಎಕ್ಸ್ ಪರ್ಟ್ ಮತ್ತು ಭಾರತದ ಹಿರಿಯ ವ್ಯವಸ್ಥಾಪಕ ಸಂಪಾದಕಿ ನಿರಾಜಿತಾ ಬ್ಯಾನರ್ಜಿ ಅವರು, "ಈ ವರ್ಷದ ಪಟ್ಟಿ ಯಿಂದ ದೊರೆತ ದೊಡ್ಡ ಪಾಠ ವೆಂದರೆ, ಕಂಪನಿಗಳು ಪ್ರಸ್ತುತ ಅಗತ್ಯಕ್ಕೆ ಬೇಕಾಗಿ ಮಾತ್ರವೇ ನೇಮಕಾತಿ ಮಾಡುತ್ತಿಲ್ಲ, ಬದಲಿಗೆ ನಾಳೆಯ ಕುರಿತು ಯೋಚನೆ ಮಾಡಿಯೇ ನೇಮಕಾತಿ ಮಾಡಿ ಕೊಳ್ಳುತ್ತಿವೆ.
ಇದನ್ನೂ ಓದಿ: Bangalore News: ಪ್ಲಾಸ್ಟಿಕ್ ಮರುಬಳಕೆ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ: ಸರ್ಕಾರಿ ಶಾಲೆಗೆ ಮರುಬಳಕೆ
ಭಾರತದ ಉನ್ನತ 25 ಕಂಪನಿಗಳಲ್ಲಿ 19 ಕಂಪನಿಗಳು ತಂತ್ರಜ್ಞಾನ, ಫೈನಾನ್ಸ್ ಮತ್ತು ಎಂಟರ್ ಪ್ರೈಸ್ ಸಾಫ್ಟ್ ವೇರ್ ಕ್ಷೇತ್ರಗಳ ಕಂಪನಿಗಳಾಗಿವೆ. ಈ ಕಂಪನಿಗಳು ತಾಂತ್ರಿಕ ಪರಿಣತಿ ಹೊಂದಿದ, ವಿವಿಧ ತಂಡಗಳಲ್ಲಿ ಕೆಲಸ ಮಾಡಬಲ್ಲ, ಚಿಂತನಾತ್ಮಕವಾಗಿ ಆಲೋಚಿಸುವ, ತ್ವರಿತವಾಗಿ ಹೊಂದಿ ಕೊಳ್ಳುವ ಮತ್ತು ಕಂಪನಿಯೊಂದಿಗೆ ಬೆಳೆಯಬಲ್ಲ ವೃತ್ತಿಪರರನ್ನು ಹುಡುಕುತ್ತಿವೆ.
ಮೊದಲ ಅಥವಾ ಮುಂದಿನ ಉದ್ಯೋಗವನ್ನು ಅರಸುತ್ತಿರುವ ಆಸಕ್ತರಿಗೆ, ಇದು ನಿಮ್ಮ ಸಾಮರ್ಥ್ಯ ವನ್ನು ಪರೀಕ್ಷಿಸಿ ಬೆಳೆಸಿಕೊಳ್ಳುವ ಸಮಯವಾಗಿದೆ. ನಿಮ್ಮ ಬೇಸಿಕ್ ಕೌಶಲಗಳನ್ನು ಬಲಪಡಿಸಿ ಕೊಳ್ಳಿ, ಮುಂದೆ ಉಪಯುಕ್ತವಾಗುವ ಕೌಶಲ್ಯಗಳನ್ನು ಕಲಿಯಿರಿ ಮತ್ತು ಉದ್ಯಮಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಗಮನಿಸಿ. ಚಂಚಲವಾಗಿರುವ ಉದ್ಯೋಗ ಮಾರುಕಟ್ಟೆಯಲ್ಲಿ, ವೃತ್ತಿ ಸ್ಥಿರತೆಯೇ ನಿಮ್ಮನ್ನು ಬೇರೆಲ್ಲರಿಗಿಂತ ವಿಭಿನ್ನವಾಗಿ ಕಾಣಿಸುವ ಸೂಪರ್ ಪವರ್ ಆಗಿದೆ" ಎಂದು ಹೇಳಿದರು.
ಟಾಪ್ 25 ಕಂಪನಿಗಳ ಪಟ್ಟಿಯಲ್ಲಿ ಈ ವರ್ಷವೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಆಕ್ಸೆಂಚರ್ (#2) ಮತ್ತು ಇನ್ಫೋಸಿಸ್ (#3) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕಾಗ್ನಿಜೆಂಟ್ #5ನೇ ಸ್ಥಾನದಲ್ಲಿದೆ. ಈ ವರ್ಷದ ಪಟ್ಟಿಯಲ್ಲಿ ಕಂಪ್ಯೂಟರ್, ಐಟಿ ಮತ್ತು ಸಾಫ್ಟ್ ವೇರ್ ಕ್ಷೇತ್ರಗಳು ಭಾರತದಲ್ಲಿ ವೃತ್ತಿಯಲ್ಲಿ ಬೆಳೆಯುವ ಅವಕಾಶಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿವೆ. ಡೆವಲಪ್ ಮೆಂಟ್ ಟೂಲ್ಸ್, ಡೇಟಾ ಸ್ಟೋರೇಜ್ ತಂತ್ರಜ್ಞಾನ ಗಳು ಮತ್ತು ಎಂಟರ್ ಪ್ರೈಸ್ ಸಾಫ್ಟ್ ವೇರ್ ವಿಭಾಗದಲ್ಲಿ ಕೌಶಲ್ಯ ಹೊಂದಿರುವವರಿಗೆ ವಿಶೇಷವಾಗಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಹೆಚ್ಚಿನ ನೇಮಕಾತಿ ಅವಕಾಶ ದೊರೆಯುತ್ತಿವೆ.
ಪಟ್ಟಿಯಲ್ಲಿರುವ 25ರಲ್ಲಿ ಸುಮಾರು ಅರ್ಧದಷ್ಟು ಅಂದ್ರೆ 12 ಕಂಪನಿಗಳು ಈ ಪಟ್ಟಿಗೆ ಈ ವರ್ಷ ಹೊಸದಾಗಿ ಸೇರಿವೆ. ಇದು ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಿರುವ ಅವಕಾಶಗಳಲ್ಲಿ ತುಂಬಾ ಬದಲಾವಣೆ ಆಗಿರುವುದನ್ನು ತೋರಿಸುತ್ತದೆ. ಮೊದಲ ಬಾರಿಗೆ ಸ್ಥಾನ ಪಡೆದ ಕಂಪನಿ ಗಳಲ್ಲಿ ಫಿಡೆಲಿಟಿ ಇನ್ವೆಸ್ಟ್ ಮೆಂಟ್ಸ್ (#4) ಅಗ್ರ ಸ್ಥಾನ ಪಡೆದರೆ ನಂತರದ ಸ್ಥಾನಗಳಲ್ಲಿ ಸರ್ವಿಸ್ ನೌ (#17) ಮತ್ತು ಸ್ಟ್ರೈಪ್ (#21) ಇವೆ. ಫೈನಾನ್ಸ್ ಸೇವಾ ಸಂಸ್ಥೆಗಳು ಈ ವರ್ಷದ ಪಟ್ಟಿಯಲ್ಲಿ ಏಳು ಸ್ಥಾನಗಳನ್ನು ಪಡೆದಿದ್ದು, ಇದರಲ್ಲಿ ಜೆಪಿಮೋರ್ಗನ್ ಚೇಸ್ (#7), ವೆಲ್ಸ್ ಫಾರ್ಗೋ (#15), ಮತ್ತು ಅಮೆರಿಕನ್ ಎಕ್ಸ್ ಪ್ರೆಸ್ (#25) ಸೇರಿವೆ.
ಈ ಕಂಪನಿಗಳಲ್ಲಿ ಬಿಸಿನೆಸ್ ಆಪರೇಷನ್ಸ್ ಅನಾಲಿಸ್ಟ್, ಪ್ರಾಡ್ ಅನಾಲಿಸ್ಟ್ ಮತ್ತು ಫೈನಾನ್ಷಿಯಲ್ ಅನಾಲಿಸ್ಟ್ ನತಹ ಪಾತ್ರಗಳಿಗೆ ಹೆಚ್ಚಿನ ನೇಮಕಾತಿ ನಡೆಯುತ್ತಿದೆ. ಇಲ್ಲಿ ಕ್ಯಾಪಿಟಲ್ ಮಾರ್ಕೆಟ್, ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ ಮತ್ತು ವಾಣಿಜ್ಯ ಬ್ಯಾಂಕಿಂಗ್ ವಿಭಾಗದಲ್ಲಿ ಹೆಚ್ಚು ಕೌಶಲ್ಯ ಹೊಂದಿ ರುವವರಿಗೆ ಬೇಡಿಕೆ ಇದೆ. ಈ ಪಟ್ಟಿಯು ಜಾಗತಿಕ ತಂತ್ರಜ್ಞಾನ ಕಂಪನಿಗಳು ಭಾರತದಲ್ಲಿ ತಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿರುವುದನ್ನು ಸಹ ತೋರಿಸುತ್ತದೆ. ಅಮೆಜಾನ್ (#8), ಆಲ್ಫಾಬೆಟ್ (#9), ಮತ್ತು ಸೇಲ್ಸ್ ಫೋರ್ಸ್ (#12) ಕಂಪನಿಗಳು ಸಾಫ್ಟ್ ವೇರ್ ಇಂಜಿನಿಯರ್, ಡೇಟಾ ಅನಾಲಿಸ್ಟ್ ಮತ್ತು ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿವೆ.
ಕೃತಕ ಬುದ್ಧಿಮತ್ತೆ, ಎಐ ಇಂಜಿನಿಯರಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ ಕೌಶಲಗಳು ಈ ಸಂಸ್ಥೆಗಳಲ್ಲಿ ಭಾರಿ ಬೇಡಿಕೆ ಇರುವ ಕೌಶಲ್ಯಗಳಾಗಿವೆ. ಸಿನೊಪ್ಸಿಸ್ ಇಂಕ್ (#13), ಕಾಂಟಿನೆಂಟಲ್ (#14) ಮತ್ತು ಆರ್ ಟಿ ಎಕ್ಸ್ (#20) ಕಂಪನಿಗಳು ತಮ್ಮ ಡಿಸೈನ್ ಇಂಜಿನಿಯರಿಂಗ್, ಟೆಸ್ಟ್ ಇಂಜಿನಿಯರಿಂಗ್ ಮತ್ತು ಕ್ವಾಲಿಟಿ ಅಶೂರೆನ್ಸ್ ತಂಡಗಳಲ್ಲಿ ಹೂಡಿಕೆ ಮಾಡುತ್ತಿದ್ದು, ಈ ಕಂಪನಿಗಳಲ್ಲಿ ಕಂಪ್ಯೂಟರ್ ಹಾರ್ಡ್ ವೇರ್, ಸಿಗ್ನಲ್ ಪ್ರೊಸೆಸಿಂಗ್ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಮ್ ಗಳ ಕೌಶಲ್ಯಗಳಿಗೆ ಬೇಡಿಕೆ ಇದೆ.
ಉನ್ನತ ಕಂಪನಿಯಲ್ಲಿ ಉದ್ಯೋಗ ಅವಕಾಶಗಳನ್ನು ಹುಡುಕಲು ಆಸಕ್ತರು ಪಾಲಿಸಬಹುದಾದ ಸಲಹೆಗಳನ್ನು ನಿರಾಜಿತಾ ಅವರು ಈ ಕೆಳಗೆ ನೀಡಿದ್ದಾರೆ: 1.ನಿಮ್ಮ ಪ್ರೊಫೈಲ್ ಉತ್ತಮಗೊಳಿಸಿ: ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ಅನ್ನು ಮಾಡುತ್ತಿರುವ ಡಿಜಿಟಲ್ ಹ್ಯಾಂಡ್‌ಶೇಕ್ ಎಂದು ಭಾವಿಸ ಬೇಕು.
ಏಕೆಂದರೆ ಸಾಮಾನ್ಯವಾಗಿ ನೇಮಕಾತಿದಾರಿಗೆ ಉತ್ತಮ ಫರ್ಸ್ಟ್ ಇಂಪ್ರೆಷನ್ ನೀಡುವುದು ನಿಮ್ಮ ಪ್ರೊಫೈಲ್. ಚೆನ್ನಾಗಿ ರೂಪಿಸಿದ ಪ್ರೊಫೈಲ್ ನಿಮ್ಮನ್ನು ಎಲ್ಲರಿಗೂ ಬೇಗನೇ ಕಾಣಿಸುತ್ತದೆ ಮತ್ತು ನೀವು ಉನ್ನತ ಕಂಪನಿಗಳಿಂದ ಗುರುತಿಸಲ್ಪಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ನಿಮ್ಮ ವೃತ್ತಿಪರ ಪಯಣವನ್ನು ಸಶಕ್ತವಾಗಿ ತೋರಿಸಲು ನಿಮ್ಮ ಪ್ರೊಫೈಲ್ ಬಳಸಿಕೊಳ್ಳಿ. ಹೆಚ್ಚು ವರಿ ಪ್ರಯೋಜನ ಪಡೆಯಲು ಲಿಂಕ್ಡ್ ಇನ್ ನ ಎಐ ಚಾಲಿತ ಪ್ರೀಮಿಯಂ ಟೂಲ್ ಗಳನ್ನು ಬಳಸಿ ಕೊಂಡು ನಿಮ್ಮ ಹೆಡ್‌ಲೈನ್ ಮತ್ತು ಅಬೌಟ್ ವಿಭಾಗಗಳನ್ನು ಆಕರ್ಷಕಗೊಳಿಸಿ. 2.ಕಂಪನಿಗಳಿಗೆ ನೀವು ಆ ಕಂಪನಿಗಳಲ್ಲಿ ಆಸಕ್ತಿ ಹೊಂದಿದ್ದೀರಿ ಎಂಬುದನ್ನುತಿಳಿಸಿ: ಲಿಂಕ್ಡ್ ಇನ್ ನ “ಐಯಾಮ್ ಇಂಟರೆಸ್ಟೆಡ್” ಪೀಚರ್ ಅನ್ನು ಬಳಸಿ ಕಂಪನಿಯ ಕುರಿತು ನಿಮ್ಮ ಆಸಕ್ತಿ ತೋರಿಸಿಕೊಳ್ಳಿ. ಅವರಲ್ಲಿ ಉದ್ಯೋಗಾವಕಾಶ ಇಲ್ಲದಿದ್ದರೂ ತೊಂದರೆ ಇಲ್ಲ.
ಇದು ಸಂಭಾವ್ಯ ಅಭ್ಯರ್ಥಿಗಳನ್ನು ಹುಡುಕುತ್ತಿರುವ ನೇಮಕಾತಿದಾರರಿಗೆ ನಿಮ್ಮ ವಿಸಿಬಿಲಿಟಿ ಯನ್ನು ಜಾಸ್ತಿ ಮಾಡುತ್ತದೆ. ಲಿಂಕ್ಡ್ ಇನ್ ಟಾಪ್ ಚಾಯ್ಸ್ ಪ್ರೀಮಿಯಂ ಫೀಚರ್ ಅವಕಾಶ ಬಂದಾಗ ನೀವು ಅವರ ತಂಡಕ್ಕೆ ಸೇರಲು ಉತ್ಸುಕರಾಗಿದ್ದೀರಿ ಎಂಬುದನ್ನು ನೇಮಕಾತಿ ವ್ಯವಸ್ಥಾಪ ಕರಿಗೆ ತಿಳಿಸಲು ಸಹಾಯ ಮಾಡುತ್ತದೆ. 3. ಕಂಪನಿಗಳನ್ನು ತಜ್ಞರಂತೆ ಸಂಶೋಧಿಸಿ: ಕಂಪನಿಗೆ ಅರ್ಜಿ ಸಲ್ಲಿಸುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿ.
ಕಂಪನಿಯ ಲಿಂಕ್ಡ್ ಇನ್ ಪುಟದಿಂದ ಪ್ರಾರಂಭಿಸಿ ಅದರ ಸಂಸ್ಕೃತಿ, ಮೌಲ್ಯಗಳು ಮತ್ತು ನಾಯ ಕತ್ವದ ಬಗ್ಗೆ ತಿಳಿಯಿರಿ. ಕಂಪನಿಯ ಪ್ರಮುಖ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಫಾಲೋ ಮಾಡುವುದರಿಂದ ಅವರಿಗೆ ಮುಖ್ಯವೆನಿಸುವ ವಿಷಯಗಳ ಕುರಿತು ನಿಮಗೆ ಒಳನೋಟ ದೊರೆಯು ತ್ತದೆ ಮತ್ತು ಆ ವಿಷಯಗಳು ನಿಮ್ಮ ಆದ್ಯತೆಗಳೊಂದಿಗೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ನೀವೇ ಮೌಲ್ಯಮಾಪನ ಮಾಡಬಹುದು. ಲಿಂಕ್ಡ್ ಇನ್ ಪ್ರೀಮಿಯಂ ವೃತ್ತಿಪರರಿಗೆ ವಿಸಿಬಿಲಿಟಿ ಯನ್ನು ಹೆಚ್ಚಿಸಲು, ಒಳನೋಟಗಳನ್ನು ತಿಳಿಯಲು ಮತ್ತು ಸೂಕ್ತ ಜಾಬ್ ಮ್ಯಾಚ್ ಗಳನ್ನು ಕಂಡುಕೊಳ್ಳಲು ಹಲವಾರು ಫೀಚರ್ ಗಳನ್ನು ಒದಗಿಸುತ್ತದೆ.
4.ನೆಟ್‌ವರ್ಕ್. ನೆಟ್‌ವರ್ಕ್. ನೆಟ್‌ವರ್ಕ್: ನೀವು ಕೆಲಸ ಹೊಂದಬೇಕೆಂದು ಬಯಸಿರುವ ಕಂಪನಿಯ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳೊಂದಿಗೆ ಕನೆಕ್ಟ್ ಆಗಿರುವುದರಿಂದ ನಿಮಗೆ ಗೊತ್ತೇ ಇರದ ಬಾಗಿಲುಗಳನ್ನು ತೆರೆಯುವ ಅವಕಾಶ ದೊರೆಯಬಹುದು. ಅವರೊಂದಿಗೆ ಸಂವಾದಿಸುವುದು, ಅವರ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುವುದು ಅಥವಾ ಮಾಹಿತಿ ನೀಡಲು ವಿನಂತಿಸುವುದು ಇತ್ಯಾದಿ ಕ್ರಮಗಳಿಗೆ ಮುಂದಾಗುವುದರಿಂದ ನಿಮಗೆ ಮೌಲ್ಯಯುತ ಒಳಗಿನ ದೃಷ್ಟಿಕೋನವನ್ನು ದೊರೆಯಬಹುದು.
ಉತ್ತಮ ನೆಟ್ ವರ್ಕ್ ಹೊಂದುವುದರಿಂದ ರೆಫರಲ್ ಕೂಡ ಸಿಗಬಹುದು. ಲಿಂಕ್ಡ್ ಇನ್ ಡೇಟಾ ಪ್ರಕಾರ, ಕನೆಕ್ಷನ್ ಗಳ ಮೂಲಕ ಅರ್ಜಿದಾರರು ಉದ್ಯೋಗ ಪಡೆಯುವ ಸಾಧ್ಯತೆ 4 ಪಟ್ಟು ಹೆಚ್ಚಾ ಗಿರುತ್ತದೆ. 5.ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಮತ್ತು ಕೌಶಲ್ಯಾಭಿವೃದ್ಧಿ ಮಾಡಿ: ಉದ್ಯೋಗ ಮಾರುಕಟ್ಟೆಯನ್ನು ಎಐ ಬದಲಾಯಿಸುತ್ತಿರುವ ಈ ಹೊತ್ತಿನಲ್ಲಿ ಕಂಪನಿ ನಾಯಕರು ಮತ್ತು ನೇಮಕಾತಿದಾರರು ಸರಿಯಾದ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರನ್ನು ಹುಡುಕುವ ಕಡೆಗೆ ತೀವ್ರ ಗಮನ ಹರಿಸುತ್ತಿದ್ದಾರೆ. ಹಾಗಾಗಿ ನಿಮ್ಮ ಪ್ರೊಫೈಲ್ ನಿಮಗೆ ಸಂಬಂಧಿತ ತಾಂತ್ರಿಕ ಮತ್ತು ತಾಂತ್ರಿಕವಲ್ಲದ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಸೂಕ್ತ ರೀತಿಯಲ್ಲಿ ತೋರಿಸುವಂತೆ ನೋಡಿಕೊಳ್ಳಿ.
ಲಿಂಕ್ಡ್ ಇನ್ ಲರ್ನಿಂಗ್ ನಲ್ಲಿ ಹೊಸ ಕೋರ್ಸ್ ಗಳು ಮತ್ತು ಕೌಶಲ್ಯಗಳನ್ನು ಕಲಿಯುವ ಮೂಲಕ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಿ. 2025ರ ಭಾರತದ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ 25 ಕಂಪನಿಗಳು ಇಲ್ಲಿವೆ: 1.ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 2.ಆಕ್ಸೆಂ ಚರ್ 3.ಇನ್ಫೋಸಿಸ್ 4.ಫಿಡೆಲಿಟಿ ಇನ್ವೆಸ್ಟ್ಮೆಂಟ್ಸ್ 5.ಕಾಗ್ನಿಜಂಟ್ 6. ಒರಾಕಲ್ 7.ಜೆಪಿ ಮೋರ್ಗನ್ ಚೇಸ್ 8.ಅಮೆಜಾನ್ 9.ಆಲ್ಫಾಬೆಟ್ 10.ದಿ ಡಿಪಾಸಿಟರಿ ಟ್ರಸ್ಟ್ & ಕ್ಲಿಯರಿಂಗ್ ಕಾರ್ಪೊರೇಷನ್ (ಡಿಟಿಸಿಸಿ) 11.ಕ್ಯಾಪ್ ಜೆಮಿನಿ 12.ಸೇಲ್ಸ್ ಫೋರ್ಸ್ 13.ಸಿನಾಪ್ಸಿಸ್ ಇಂಕ್ 14.ಕಾಂಟಿನೆಂಟಲ್ 15.ವೆಲ್ಸ್ ಫಾರ್ಗೊ 16.ಹೆಚ್ ಸಿ ಎಲ್ ಟೆಕ್ 17.ಸರ್ವೀಸ್ ನೌ 18.ಮೋರ್ಗನ್ ಸ್ಟಾನ್ಲಿ 19.ಮಾಸ್ಟರ್ ಕಾರ್ಡ್ 20.ಆರ್ ಟಿ ಎಕ್ಸ್ 21.ಸ್ಟ್ರೈಪ್ 22.ಅಟ್ಲಾಸಿಯನ್ 23.ಎಂ ಎಸ್ ಸಿ ಐ ಇಂಕ್. 24. ಎಲಿ ಲಿಲ್ಲಿ ಆಂಡ್ ಕಂಪನಿ 25.ಅಮೆರಿಕನ್ ಎಕ್ಸ್ ಪ್ರೆಸ್ 2025ರ ಭಾರತದ ಅಗ್ರ ಕಂಪನಿಗಳ ಬಗ್ಗೆ ಲಿಂಕ್ಡ್ ಇನ್ ನ್ಯೂಸ್ ಇಂಡಿಯಾದ ಸಂಪೂರ್ಣ ಲೇಖನವನ್ನು ಇಲ್ಲಿ ಓದಿ: https://www.linkedin.com/pulse/linkedin-top-companies-2025-25-workplaces-india-grow-7jmac/.