ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Helicopter crash: ನದಿಗೆ ಬಿದ್ದ ಹೆಲಿಕಾಪ್ಟರ್: ಸೀಮೆನ್ಸ್‌ ಸಿಇಒ ಸೇರಿ ಆರು ಮಂದಿ ಸಾವು

ಸ್ಪೇನ್‌ನ ಸೀಮೆನ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಸ್ಟಿನ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಎಲ್ಲರೂ ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್‌ನ ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಇದರಲ್ಲಿದ್ದ ಪೈಲೆಟ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ಖಾಸಗಿ ಹೆಲಿಕಾಪ್ಟರ್ ಆಕಾಶದಲ್ಲಿಯೇ ಮುರಿದು ನದಿಗೆ ಬಿದ್ದಿದೆ.

ನದಿಗೆ ಹೆಲಿಕಾಪ್ಟರ್ ಬಿದ್ದು 6 ಮಂದಿ ಸಾವು

ನ್ಯೂಯಾರ್ಕ್‌: ಸ್ಪೇನ್‌ನ (Spain) ಸೀಮೆನ್ಸ್‌ನ ಅಧ್ಯಕ್ಷ ಮತ್ತು ಸಿಇಒ (Siemens CEO) ಅಗಸ್ಟಿನ್ ಎಸ್ಕೋಬಾರ್ ( Agustin Escobar ) ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ (Helicopter crash) ಎಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ (New York) ಹಡ್ಸನ್ ನದಿಯಲ್ಲಿ (Hudson River) ಹೆಲಿಕಾಪ್ಟರ್ ಪತನವಾಗಿದ್ದು, ಪೈಲೆಟ್ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ಖಾಸಗಿ ಹೆಲಿಕಾಪ್ಟರ್ ಆಕಾಶದಲ್ಲಿಯೇ ಮುರಿದು ನದಿಗೆ ಬಿದ್ದಿದೆ. ಹೆಲಿಕಾಪ್ಟರ್ ಅಪಘಾತದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌, ಈ ದೃಶ್ಯದಲ್ಲಿ ಹೆಲಿಕಾಪ್ಟರ್ ಹಿಂಭಾಗ ಕಾಣೆಯಾಗಿ ಹಡ್ಸನ್ ನದಿಗೆ ತಲೆಕೆಳಗಾಗಿ ಅಪ್ಪಳಿಸುತ್ತಿರುವುದನ್ನು ಕಾಣಬಹುದು.

ಈ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಜಾಗತಿಕ ತಂತ್ರಜ್ಞಾನ ಕಂಪೆನಿ ಸೀಮೆನ್ಸ್‌ನ ಸ್ಪ್ಯಾನಿಷ್ ವಿಭಾಗದ ಮುಖ್ಯಸ್ಥ ಅಗಸ್ಟಿನ್ ಎಸ್ಕೋಬಾರ್, ಅವರ ಪತ್ನಿ ಮೆರ್ಸ್ ಕ್ಯಾಂಪ್ರುಬಿ ಮಾಂಟಲ್ ಮತ್ತು ಅವರ 4, 5 ಮತ್ತು 11 ವರ್ಷದ ಮೂವರು ಮಕ್ಕಳು ಸೇರಿದ್ದಾರೆ. ಪೈಲಟ್‌ನ ಗುರುತು ಇನ್ನೂ ಪತ್ತೆಯಾಗಿಲ್ಲ.

helicopter (1)

ಅಗಸ್ಟಿನ್ ಎಸ್ಕೋಬಾರ್ ಯಾರು?

ಇಂಧನ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ 25 ವರ್ಷಗಳಿಗೂ ಹೆಚ್ಚು ಅಂತಾರಾಷ್ಟ್ರೀಯ ನಾಯಕತ್ವದ ಅನುಭವ ಹೊಂದಿರುವ ನಿಪುಣ ಕಾರ್ಯನಿರ್ವಾಹಕರಾಗಿ ಅಗಸ್ಟಿನ್ ಎಸ್ಕೋಬಾರ್ 2022ರ ಡಿಸೆಂಬರ್ ನಿಂದ ಸೀಮೆನ್ಸ್ ಸ್ಪೇನ್‌ನ ಅಧ್ಯಕ್ಷ ಮತ್ತು ಸಿಇಒ ಹಾಗೂ ಸೀಮೆನ್ಸ್ ಮೊಬಿಲಿಟಿ ಸೌತ್‌ವೆಸ್ಟ್ ಯುರೋಪ್‌ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ನ್ಯೂಯಾರ್ಕ್‌ ನ ಮೇಯರ್ ಎರಿಕ್ ಆಡಮ್ಸ್, ಬಲಿಯಾದವರಲ್ಲಿ ಇಬ್ಬರನ್ನು ಆರಂಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅನಂತರ ಅವರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್ ಪತನದಿಂದ ನದಿಗೆ ಬಿದ್ದ ಆರು ಮಂದಿಯನ್ನು ನೀರಿನಿಂದ ಹೊರತೆಗೆಯಲಾಗಿದೆ. ಆದರೆ ಈ ಆರು ಮಂದಿಯೂ ಮೃತಪಟ್ಟಿದ್ದಾರೆ. ಇದು ಹೃದಯವಿದ್ರಾವಕ ಮತ್ತು ದುರಂತ ಅಪಘಾತ ಎಂದು ಹೇಳಿದರು.

ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಡ್ಸನ್ ನದಿಯಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತದಿಂದ ಆರು ಜನರಲ್ಲಿ ಪೈಲಟ್, ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳು ಈಗ ನಮ್ಮೊಂದಿಗಿಲ್ಲ. ಈ ಅಪಘಾತದ ದೃಶ್ಯಗಳು ಭಯಾನಕವಾಗಿವೆ ಎಂದು ತಿಳಿಸಿದರು.

ದೇವರು ಇವರ ಕುಟುಂಬ ಮತ್ತು ಸ್ನೇಹಿತರಿಗೆ ಧೈರ್ಯ ತುಂಬಲಿ, ನೋವನ್ನು ಸಹಿಸುವ ಶಕ್ತಿ ಕೊಡಲಿ. ನಿಖರವಾಗಿ ಏನಾಯಿತು ಮತ್ತು ಹೇಗೆ ನಡೆಯಿತು ಎಂಬುದು ಗೊತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಪ್ರಕಟಣೆಗಳನ್ನು ಮಾಡಲಾಗುವುದು ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣವಾದ ಟ್ರುತ್‌ನಲ್ಲಿ ಬರೆದಿದ್ದಾರೆ.



ನ್ಯೂಯಾರ್ಕ್ ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಶ್ ಅವರ ಪ್ರಕಾರ, ನ್ಯೂಯಾರ್ಕ್ ಹೆಲಿಕಾಪ್ಟರ್ ಟೂರ್ಸ್ ನಿರ್ವಹಿಸುವ ಬೆಲ್ 206 ಹೆಲಿಕಾಪ್ಟರ್ ಸ್ಥಳೀಯ ಕಾಲಮಾನ ಗುರುವಾರ ಮಧ್ಯಾಹ್ನ 3 ಗಂಟೆಗೆ ಡೌನ್‌ಟೌನ್ ಹೆಲಿಕಾಪ್ಟರ್ ಪ್ಯಾಡ್‌ನಿಂದ ಹೊರಟು ಹಡ್ಸನ್ ಮೇಲೆ ಉತ್ತರಕ್ಕೆ ಹಾರಿದೆ. ಜಾರ್ಜ್ ವಾಷಿಂಗ್ಟನ್ ಸೇತುವೆಯನ್ನು ತಲುಪಿದಾಗ ಅದು ದಕ್ಷಿಣಕ್ಕೆ ತಿರುಗಿ ಕೆಲವು ನಿಮಿಷಗಳ ಅನಂತರ ಭೀಕರ ಅಪಘಾತಕ್ಕೀಡಾಗಿ ಮಧ್ಯಾಹ್ನ 3.15 ರ ಸುಮಾರಿಗೆ ಲೋವರ್ ಮ್ಯಾನ್‌ಹ್ಯಾಟನ್ ಬಳಿ ತಲೆಕೆಳಗಾಗಿ ನೀರಿಗೆ ಬಿದ್ದು ನದಿಯಲ್ಲಿ ಮುಳುಗಿತು.

ಇದನ್ನೂ ಓದಿ: Roopa Gururaj column: ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ಮೊದಲು ನದಿಗೆ ಹೆಲಿಕಾಪ್ಟರ್ ನ ಮುಂಭಾಗ ಬಿದ್ದಿದ್ದು, ಬಳಿಕ ಹಿಂಭಾಗದ ತುಂಡು ಬಿದ್ದಿದೆ. ಕೂಡಲೇ ಸ್ಥಳೀಯ ತುರ್ತು ಪಡೆ ಮತ್ತು ಪೊಲೀಸರು ದೋಣಿಯಲ್ಲಿ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು.

ಪ್ರತ್ಯಕ್ಷದರ್ಶಿ ಬ್ರೂಸ್ ವಾಲ್ ಎಂಬವರು ಹೆಲಿಕಾಪ್ಟರ್ ಆಕಾಶದಲ್ಲೇ ತುಂಡಾಗಿ ಕೆಳಗೆ ಬೀಳುವುದನ್ನು ನೋಡಿದೆ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಸಾಮಾನ್ಯವಾಗಿ ಮ್ಯಾನ್‌ಹ್ಯಾಟನ್‌ ಬಳಿ ನಿರಂತರವಾಗಿ ವಿಮಾನ, ಹೆಲಿಕಾಪ್ಟರ್‌ಗಳು ಸುತ್ತುತ್ತಿರುತ್ತವೆ. ಇದರಲ್ಲಿ ಹೆಚ್ಚಾಗಿ ಖಾಸಗಿ, ವಾಣಿಜ್ಯ ಮತ್ತು ಪ್ರವಾಸಿ ವಿಮಾನಗಳನ್ನು ಒಳಗೊಂಡಿರುತ್ತವೆ.

2018ರಲ್ಲಿ ಇಲ್ಲಿ ಚಾರ್ಟರ್ ಹೆಲಿಕಾಪ್ಟರ್ ನದಿಯ ಪೂರ್ವ ಭಾಗದಲ್ಲಿ ಅಪ್ಪಳಿಸಿ ಐದು ಮಂದಿ ಸಾವನ್ನಪ್ಪಿದ್ದರು. 2009ರಲ್ಲಿ ಹಡ್ಸನ್ ನದಿಯ ಮೇಲೆ ವಿಮಾನ ಮತ್ತು ಪ್ರವಾಸಿ ಹೆಲಿಕಾಪ್ಟರ್ ನಡುವೆ ಡಿಕ್ಕಿಯಾಗಿ ಒಂಬತ್ತು ಮಂದಿ ಸಾವನ್ನಪ್ಪಿದರು ಎನ್ನಲಾಗಿದೆ.