Sunday, 19th May 2024

ಮೇ ತಿಂಗಳಲ್ಲಿ ಕರೋನಾ ಉಲ್ಬಣ, ಭಾರೀ ಎಚ್ಚರಿಕೆ ಅಗತ್ಯ: ಡಾ. ಸುಧಾಕರ್ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕು ಇನ್ನಷ್ಟು ಉಲ್ಬಣ ಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿ ನಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಅಧಿಕೃತ ವರದಿ ಬಂದ ಬಳಿಕ ಸಿಎಂ ಯಡಿಯೂರಪ್ಪ ಈ ಬಗ್ಗೆ ನಿರ್ಧರಿಸುತ್ತಾರೆ. ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಅಧಿಕೃತ ವರದಿ ನೀಡುವಂತೆ ತಜ್ಞರನ್ನು ಕೇಳಲಾಗಿದೆ. ವರದಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಲುಪಿಸಲಿದ್ದು, ಅವರೊಂದಿಗೆ ಅಂತಿಮವಾಗಿ ಚರ್ಚಿಸಿ ನಿರ್ಧರಿಸಲಾಗು ವುದು ಎಂದರು.

ಕರೋನಾ ಒಂದು ಅಲೆ 80-120 ದಿನಗಳ ಕಾಲ ಇರಲಿದೆ. ಇದು ಕೇವಲ ಆರಂಭ ಮಾತ್ರ. 2-3 ವಾರಗಳಲ್ಲಿ ಅಂದರೆ, ಮೇ 2ನೇ ವಾರದಲ್ಲಿ ಕರೋನಾ ಸೋಂಕು ಇನ್ನಷ್ಟು ಹೆಚ್ಚಲಿದೆ ಎಂದು ಸಮಿತಿ ಮಾಹಿತಿ ನೀಡಿದೆ ಎಂದು ತಿಳಿಸಿದರು.

ಹಬ್ಬಗಳಿಗೆ ನಗರಗಳಿಂದ ಊರುಗಳಿಗೆ ತೆರಳುತ್ತಿರುವ ಜನರು ಕರೋನಾ ವಿಚಾರದಲ್ಲಿ ಅಗತ್ಯ ಮುಂಜಾಗೃತೆ ವಹಿಸುವುದು ಮುಖ್ಯ. ಕರೋನಾ ಲಕ್ಷಣಗಳಿಲ್ಲದಿದ್ದರೂ ಸೋಂಕು ಕಾಣಿಸಿಕೊಂಡಿದೆ. 10 ದಿನಗಳ ಬಳಿಕ ಸೋಂಕಿನ ಲಕ್ಷಣ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಹೇಳಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *

error: Content is protected !!