Basava samskruti abhiyan: ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ ʼಬಸವ ಸಂಸ್ಕೃತಿ ಅಭಿಯಾನʼ
ರಾಜ್ಯ ಸರ್ಕಾರವು ಬಸವಣ್ಣನನ್ನು ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1ರವರೆಗೆ ಒಂದು ತಿಂಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ʼಬಸವ ಸಂಸ್ಕೃತಿ ಅಭಿಯಾನʼ ನಡೆಸಲು ತೀರ್ಮಾನಿಸಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ರಾಜ್ಯ ಸರ್ಕಾರವು ಬಸವಣ್ಣನನ್ನು ʼಕರ್ನಾಟಕದ ಸಾಂಸ್ಕೃತಿಕ ನಾಯಕʼ ಎಂದು ಘೋಷಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1ರವರೆಗೆ ಒಂದು ತಿಂಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ʼಬಸವ ಸಂಸ್ಕೃತಿ ಅಭಿಯಾನʼ (Basava samskruti abhiyan) ನಡೆಸಲು ತೀರ್ಮಾನಿಸಿದೆ.
ಈ ಸಂಬಂಧ ಒಕ್ಕೂಟದಲ್ಲಿರುವ ಸ್ವಾಮೀಜಿಗಳು ಶನಿವಾರ ಲಿಂಗಾಯತ ಮುಖಂಡ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಅವರ ಸದಾಶಿವನಗರದ ಮನೆಯಲ್ಲಿ ಚರ್ಚೆ ನಡೆಸಿದ್ದಾರೆ. ಒಕ್ಕೂಟದ ಪರವಾಗಿ ಭಾಲ್ಕಿ ಮಠದ ಶ್ರೀ ಬಸವಲಿಂಗ ಪಟ್ಟದ್ದೇವರು, ಅಥಣಿಯ ಶ್ರೀ ಚೆನ್ನಬಸವ ಸ್ವಾಮೀಜಿ, ನೆಲಮಂಗಲದ ಪವಾಡ ಶ್ರೀಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗೊರವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ನಿಜಗುಣ ಮಠದ ಇಮ್ಮಡಿ ನಿಜಗುಣ ಶ್ರೀಗಳು, ಬಸವ ಧರ್ಮಪೀಠದ ಬಸವಯೋಗಿ ಸ್ವಾಮೀಜಿ, ಚನ್ನಪಟ್ಟಣದ ಬೇಗೂರು ಮಠದ ಮೃತ್ಯುಂಜಯ ಸ್ವಾಮೀಜಿ ಸಚಿವರ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ್ದರು.
ಬಳಿಕ ಮಾತನಾಡಿದ ಸಚಿವರು, ಈ ಅಭಿಯಾನವು ಬಸವಣ್ಣನ ಜನ್ಮಸ್ಥಳವಾದ ಬಸವನ ಬಾಗೇವಾಡಿಯಲ್ಲಿ ಸೆ.1ರಂದು ಚಾಲನೆ ಕಾಣಲಿದೆ. ಬಸವರಥವು ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಅ.1ರಂದು ಬೆಂಗಳೂರನ್ನು ತಲುಪಲಿದೆ. ಅ.5ರಂದು ಲಕ್ಷಾಂತರ ಲಿಂಗಾಯತ ಅನುಯಾಯಿಗಳನ್ನು ಸೇರಿಸಿ, ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲಾಗುವುದು. ಇಲ್ಲಿ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಆದರೆ ಸಮಾರೋಪದ ಸ್ಥಳವಿನ್ನೂ ನಿಗದಿಯಾಗಿಲ್ಲ. ಮುಖ್ಯಮಂತ್ರಿಗಳ ಕಾಲಾವಕಾಶ ನೋಡಿಕೊಂಡು ಇದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಅಭಿಯಾನದಲ್ಲಿ ಪ್ರತಿದಿನವೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜತೆ ಸಂವಾದ, ಸಂಜೆ ಪಾದಯಾತ್ರೆ, ವಚನ ಸಂಗೀತ, ಸ್ವಾಮೀಜಿಗಳು ಮತ್ತು ಆಹ್ವಾನಿತ ಉಪನ್ಯಾಸಕರ ಭಾಷಣ, ರಾತ್ರಿ ಹೊತ್ತು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಬರೆದಿರುವ ʼಜಂಗಮದೆಡೆಗೆʼ ನಾಟಕ ಪ್ರದರ್ಶನ ನಡೆಯಲಿವೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕದಳಿ ಮಹಿಳಾ ವೇದಿಕೆ ಮುಂತಾದ ಬಸವಪರ ಸಂಘಟನೆಗಳು ಕೈಜೋಡಿಸಿವೆ ಎಂದು ಒಕ್ಕೂಟದ ಅಧ್ಯಕ್ಷರಾಗಿರುವ ಶ್ರೀ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇದೆ 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ
ಸಮ ಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜ, ಅಂಧಶ್ರದ್ಧೆ ಅಳಿಸಿ ಹಾಕುವುದು, ಸದೃಢ ಸಮಾಜ, ಮಕ್ಕಳಲ್ಲಿ ಅಧ್ಯಾತ್ಮದ ಅರಿವು, ಮಹಿಳೆಯರ ಘನತೆ ಮತ್ತು ವ್ಯಕ್ತಿತ್ವ ವಿಕಸನಗಳು ಅಭಿಯಾನದ ಪ್ರಮುಖ ಆಶಯಗಳಾಗಿವೆ ಎಂದು ಒಕ್ಕೂಟವು ತಿಳಿಸಿದೆ.