Tuesday, 10th December 2024

ಕ್ಲೈಮಾಕ್ಸ್’ನಲ್ಲಿ ಎಡವಿದ ಆರ್‌ಸಿಬಿ: ಸನ್‌ರೈಸ್‌ ಗೆಲುವಿನ ಸಮಾಧಾನ

ಅಬುಧಾಬಿ: ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (40ರನ್) ಸ್ಫೋಟಿಸಿದರೂ, ಸನ್‌ರೈಸರ್ಸ್‌ ಹೈದರಾಬಾದ್ ಬೌಲರ್‌ಗಳ ಸಂಘಟಿತ ದಾಳಿ ಎದುರು ಸಾಧಾರಣ ಮೊತ್ತ ಬೆನ್ನಟ್ಟಲು ವಿಫಲವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು.

ಚೇಸಿಂಗ್‌ ಹಾದಿಯಲ್ಲಿ ಕೊಹ್ಲಿ, ಕ್ರಿಸ್ಟಿಯನ್‌ ಮತ್ತು ಭರತ್‌ ವಿಕೆಟ್‌ ಬೇಗನೇ ಉರುಳಿತು. ಆದರೆ ಪಡಿಕ್ಕಲ್‌ ಮತ್ತು ಮ್ಯಾಕ್ಸ್‌ವೆಲ್‌ ಸೇರಿಕೊಂಡು ತಂಡವನ್ನು ಮೇಲೆತ್ತಿದರು. ಮತ್ತೊಂದು ಸೊಗಸಾದ ಇನ್ನಿಂಗ್ಸ್‌ ಆಡಿದ ಮ್ಯಾಕ್ಸಿ ಸರ್ವಾಧಿಕ 40, ಪಡಿಕ್ಕಲ್‌ 17ನೇ ಓವರ್‌ ತನಕ ನಿಂತು 41 ರನ್‌ ಕೊಡುಗೆ ಸಲ್ಲಿಸಿದರು. ಆದರೆ ಕೊನೆಯ ಹಂತದ ಒತ್ತಡವನ್ನು ನಿಭಾಯಿಸಲು ಆರ್‌ಸಿಬಿಗೆ ಸಾಧ್ಯವಾಗಲಿಲ್ಲ.

ಕಡೇ ಓವರ್‌ನಲ್ಲಿ ಆರ್‌ಸಿಬಿ ಜಯ ದಾಖಲಿಸಲು 13 ರನ್‌ಗಳ ಅವಶ್ಯಕತೆ ಇದ್ದರೂ ಎಬಿ ಡಿವಿಲಿಯರ್ಸ್‌ (19*ರನ್) ಎದುರಿಸಿದ 4 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 7 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದ ವಿರಾಟ್ ಕೊಹ್ಲಿ ಬಳಗ ಅರಬ್ ನಾಡಿನಲ್ಲಿ ಸತತ 4ನೇ ಗೆಲುವಿನಿಂದ ವಂಚಿತವಾಯಿತು. ಪ್ಲೇಆಫ್ ಖಾತ್ರಿ ಪಡಿಸಿಕೊಂಡಿರುವ ಆರ್‌ಸಿಬಿ ಅಗ್ರ 2 ರೊಳಗಿನ ಸ್ಥಾನಕ್ಕೇರುವ ಅವಕಾಶ ತಪ್ಪಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌, ಆರಂಭಿಕ ಜೇಸನ್ ರಾಯ್ (44 ರನ್) ಹಾಗೂ ನಾಯಕ ಕೇನ್ ವಿಲಿಯಮ್ಸನ್ (31 ರನ್) ಸಮಯೋಚಿತ ನಿರ್ವಹಣೆ ನೆರವಿನಿಂದ 7 ವಿಕೆಟ್‌ಗೆ 141 ರನ್‌ ಗಳಿಸಿತು. ಆರ್‌ಸಿಬಿ ಪರ ವೇಗಿ ಗಳಾದ ಹರ್ಷಲ್ ಪಟೇಲ್ (33ಕ್ಕೆ 3) ಹಾಗೂ ಡೇನಿಯಲ್ ಕ್ರಿಶ್ಚಿಯನ್ (14ಕ್ಕೆ2) ಮಾರಕ ದಾಳಿ ಸಂಘಟಿಸಿದರು.

ಹೈದರಾಬಾದ್‌ ತನ್ನ ಓಪನಿಂಗ್‌ ಕಾಂಬಿನೇಶನ್‌ನಲ್ಲಿ ಬದಲಾವಣೆ ಮಾಡಿಕೊಂಡಿತು. ವೃದ್ಧಿಮಾನ್‌ ಸಾಹಾ ಬದಲು ಅಭಿಷೇಕ್‌ ಶರ್ಮ ಇನ್ನಿಂಗ್ಸ್‌ ಆರಂಭಿಸಿ ದರು. ವೇಗಿ ಜಾರ್ಜ್‌ ಗಾರ್ಟನ್‌ ಅವರ ದ್ವಿತೀಯ ಓವರ್‌ನಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಿ ಅಬ್ಬರಿಸಿದರು. ಆದರೆ 5ನೇ ಎಸೆತದಲ್ಲೇ ಮ್ಯಾಕ್ಸ್‌ ವೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಜಾಸನ್‌ ರಾಯ್‌ ಮತ್ತು ಕೇನ್‌ ವಿಲಿಯಮ್ಸನ್‌ ಭರವಸೆಯ ಜತೆಯಾಟವೊಂದನ್ನು ನಿಭಾಯಿಸಿದರು. 10 ಓವರ್‌ ಅಂತ್ಯಕ್ಕೆ ಹೈದರಾಬಾದ್‌ ಒಂದೇ ವಿಕೆಟಿಗೆ 76 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ದ್ವಿತೀಯ ವಿಕೆಟಿಗೆ 70 ರನ್‌ ಒಟ್ಟುಗೂಡಿತು. ಹರ್ಷಲ್‌ ಪಟೇಲ್‌ 12ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು. 31 ರನ್‌ ಮಾಡಿದ ವಿಲಿಯಮ್ಸನ್‌ ಬೌಲ್ಡ್‌ ಆದರು.

ಪ್ರಿಯಂ ಗರ್ಗ್‌, ಜಾಸನ್‌ ರಾಯ್‌, ಅಬ್ದುಲ್‌ ಸಮದ್‌ ಎರಡೇ ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಗರ್ಗ್‌ (15) ಮತ್ತು ರಾಯ್‌ ಅವರನ್ನು ಒಂದೇ ಓವರ್‌ನಲ್ಲಿ ಕೆಡವಿದ ಡೇನಿಯಲ್‌ ಕ್ರಿಸ್ಟಿಯನ್‌ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದರು. 38 ಎಸೆತಗಳಿಂದ 44 ರನ್‌ ಮಾಡಿದ ರಾಯ್‌ ಹೈದರಾಬಾದ್‌ ಸರದಿಯ ಟಾಪ್‌ ಸ್ಕೋರರ್‌. ಹರ್ಷಲ್‌ ಪಟೇಲ್‌ ಮತ್ತು ಕ್ರಿಸ್ಟಿಯನ್‌ ಪರಿಣಾಮಕಾರಿ ಬೌಲಿಂಗ್‌ ನಡೆಸಿದರು.

ಸನ್‌ರೈಸರ್ಸ್‌ ಹೈದರಾಬಾದ್: 7 ವಿಕೆಟ್‌ಗೆ 141

ಆರ್‌ಸಿಬಿ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137