Saturday, 27th April 2024

ಕಾಮನ್ ವೆಲ್ತ್ ಗೇಮ್ಸ್: ಮಹಿಳಾ ಕ್ರಿಕೆಟ್ ತಂಡ ಫೈನಲ್ ಪ್ರವೇಶ

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶ ಮಾಡಿದೆ.

ಭಾರತ ವನಿತೆಯರ ತಂಡ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರನ್ನು 4 ರನ್ ಗಳ ಅಂತರದಲ್ಲಿ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.

ಭಾರತ ನೀಡಿದ 165 ರನ್ ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳನ್ನು ಮಾತ್ರ ಕಲೆ ಹಾಕಿತು. ಆ ಮೂಲಕ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.

ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಸೋಫಿಯಾ ಡಂಕ್ಲಿ 19, ಡೇನಿಯಲ್ ವ್ಯಾಟ್ 35, ಆಲಿಸ್ ಕ್ಯಾಪ್ಸಿ 13, ನಾಯಕಿ ನಟಾಲಿ ಸ್ಕೀವರ್ 41, ಆಯಮಿ ಜೋನ್ಸ್ 31, ಕ್ಯಾಥರಿನ್ ಬ್ರಂಟ್ ಡಕ್ ಔಟ್, ಮಿಯಾ ಬೌಷರ್ ಅಜೇಯ 4 ಮತ್ತು ಸೋಫಿ ಎಕ್ಸ್ಲೆಸ್ಟೋನ್ ಅಜೇಯ 7 ರನ್ ಕಲೆ ಹಾಕಿದರು. ಭಾರತದ ಪರ ಸ್ನೇಹ್ ರಾಣಾ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಯರಾಗಿ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಕಣಕ್ಕಿಳಿದರು. ಈ ಪೈಕಿ ಶೆಫಾಲಿ ವರ್ಮಾ 15 ರನ್ ಕಲೆ ಹಾಕಿ ಔಟಾದರೆ, ಸ್ಮೃತಿ ಮಂದಾನ 32 ಎಸೆತಗಳಲ್ಲಿ ಬರೋಬ್ಬರಿ 61 ರನ್ ಚಚ್ಚುವುದರ ಮೂಲಕ ಅಕ್ಷರಶಃ ಅಬ್ಬರಿಸಿ ದರು. 8 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ ಸ್ಮೃತಿ ಮಂದಾನ 190.62 ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟ್ ಬೀಸಿದರು.

ಬಳಿಕ ಟೀಮ್ ಇಂಡಿಯಾದ ರನ್ ವೇಗ ತಗ್ಗಿತು. ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 20 ಎಸೆತಗಳಲ್ಲಿ 20 ರನ್ ಕಲೆ ಹಾಕಿದರೆ, ದೀಪ್ತಿ ಶರ್ಮಾ 20 ಎಸೆತಗಳಲ್ಲಿ 22 ರನ್ ಬಾರಿಸಿದರು, ಪೂಜಾ ವಸ್ತ್ರಾಕರ್ ಡೈಮಂಡ್ ಡಕ್ ಔಟ್ ಆದರು ಹಾಗೂ ಜೆಮಿಮಾ ರೊಡ್ರಿಗಸ್ ಅಜೇಯ 44 ರನ್ ಮತ್ತು ಸ್ನೇಹ್ ರಾಣಾ ಯಾವುದೇ ರನ್ ಕಲೆ ಹಾಕದೇ ಅಜೇಯರಾಗಿ ಉಳಿದರು.

ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿರುವ ಭಾರತ ವನಿತೆಯರ ತಂಡ ಭಾನುವಾರದ ಫೈನಲ್ ಪಂದ್ಯದಲ್ಲಿ ಎರಡನೇ ಸೆಮಿಫೈನಲ್ ಗೆದ್ದು ಬರುವ ತಂಡದ ಜತೆ ಸೆಣಸಾಟ ನಡೆಸಲಿದೆ.

ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತವಾಗಿದ್ದು, ಭಾರತ ಕ್ರಿಕೆಟ್ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಯೋಜನೆಯಾದ ಮೊದಲನೇ ಆವೃತ್ತಿಯಲ್ಲಿಯೇ ಪದಕ ಪಡೆದ ಐತಿಹಾಸಿಕ ದಾಖಲೆ ಬರೆಯಲಿದೆ.

error: Content is protected !!