Wednesday, 11th December 2024

ಸಿಂಧೂರಿ – ನಾಗ್ ಸಮರ ಮುಂದುವರಿಕೆ

ಮುಖ್ಯಕಾರ‍್ಯದರ್ಶಿ ಅಂಗಳಕ್ಕೆ ವಿವಾದದ ಚೆಂಡು

ಸುತ್ತೂರು ಶ್ರೀಗಳೊಂದಿಗೆ ಶಿಲ್ಪಾನಾಗ್ ಚರ್ಚೆ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ನಡುವಿನ ವೈಷಮ್ಯ ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ.
ಒಂದೆಡೆ ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ, ಮೈಸೂರು ನಾಗರೀಕ ವೇದಿಕೆ ಆಯೋಜಿಸಿದ್ದ ಆಹಾರ ಧಾನ್ಯ ವಿತರಣಾ
ಕಾರ‍್ಯಕ್ರಮದಲ್ಲಿ ಮಾತನಾಡಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳ ಹೆಸರು ಹೇಳದೆ ಒಬ್ಬರ ಅಹಕಾರದಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮತ್ತೊಂದೆಡೆ ಮಾಧ್ಯಮಗಳ ಬಲವಂತಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಲ್ಲ ವಿಚಾರಗಳನ್ನೂ ಕೂಲಂಕುಷವಾಗಿ ಮುಖ್ಯ ಕಾರ‍್ಯದರ್ಶಿಗಳ ಗಮನಕ್ಕೆ ತರುತ್ತೇನೆ ಎಂದಷ್ಟೇ ಹೇಳಿದ್ದಾರೆ. ಈ ಮೂಲಕ ಇಬ್ಬರು ಮಹಿಳಾಧಿಕಾರಿ ಗಳ ನಡುವಿನ ಸಮರ ಮುಂದುವರಿದಿದೆ. ಮತ್ತೊಂದೆಡೆ ಇಬ್ಬರ ನಡುವಿನ ಗುದ್ದಾಟಕ್ಕೆ ತೀಲಾಂಜಲಿ ಇಡಲು ಸರಕಾರ ಇನ್ನಿಲ್ಲದ
ಕಸರತ್ತು ನಡೆಸಿದೆ. ಈ ಮಧ್ಯೆ ಶಿಲ್ಪಾನಾಗ್ ಪರ ನಗರ ಪಾಲಿಕೆ ಮುಂಭಾಗ ಪಾಲಿಕೆ ಸದಸ್ಯರು, ಸ್ವಚ್ಛತಾ ಕಾರ್ಯವನ್ನು ಕೈಬಿಟ್ಟು ಪೌರಕಾರ್ಮಿಕರು ಧರಣಿ ನಡೆಸಿದ್ದು, ಶಿಲ್ಪಾನಾಗ್ ಪರವಾಗಿ ಜಿಲ್ಲೆಯಾದ್ಯಂತ ದೊಡ್ಡಮಟ್ಟದ ಅಲೆ ಎದ್ದಿದೆ. ಇನ್ನೊಂದೆಡೆ
ರೋಹಿಣಿ ಸಿಂಧೂರಿ ಪರವಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತವಾಗಿದೆ.

ಎರಡು ದಿನ ಕಾದು ನೋಡಿ; ಸಚಿವ: ಜಿಲ್ಲೆಯಲ್ಲಿ ಐಎಎಸ್ ಅಧಿಕಾರಿಗಳ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಕೋವಿಡ್ ನಿಯಂತ್ರಣ ಮಾಡೋದು ನನ್ನ ಆದ್ಯತೆ. ಆ ನಿಟ್ಟಿನಲ್ಲಿ
ನಾನು ಕೆಲಸ ಮಾಡುತ್ತಿದ್ದೇನೆ. ಮೈಸೂರು ಸಾಂಸ್ಕೃತಿಕ ನಗರ, ಕಳೆದ ಒಂದು ವರ್ಷದಿಂದ ಕೋವಿಡ್‌ನಿಂದ ನರಳುತ್ತಿದೆ. ಬೆಂಗಳೂರು ಹೊರತುಪಡಿಸಿ ಮೈಸೂರಲ್ಲಿ ಅತಿಹೆಚ್ಚು ಕೋವಿಡ್ ಇದೆ.

ಮೈಸೂರಿನ ಜನರ ಹಿತದೃಷ್ಟಿಯಿಂದ ಕೋವಿಡ್ ಹೇಗೆ ನಿಯಂತ್ರಣಕ್ಕೆ ತರಬಹುದೆಂಬ ಚಿಂತನೆಯನ್ನು ಹೊರತುಪಡಿಸಿದರೆ
ಬೇರಾವುದೇ ಮಾತನಾಡುವುದಿಲ್ಲ ಎಂದರು. ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿದರೂ ಕೂಡ ನನ್ನ ಮನಸ್ಸಿಗೆ ನೋವಾಗಿದೆ. ಮೈಸೂರಿನಲ್ಲಿ ಕರೋನಾ ಕಡಿಮೆ ಮಾಡುವುದಕ್ಕೆ ಎಲ್ಲರ ಅಭಿಪ್ರಾಯ ಪಡೆದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು. ಅದಕ್ಕೂ
ತೊಂದರೆಯಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ವಿನಃ ಬೇರೆ ಸಣ್ಣಪುಟ್ಟದ್ದಕ್ಕೆ ಗಮನ ಕೊಡುವಷ್ಟು ವ್ಯವಧಾನ ಇಲ್ಲ.

ಮೈಸೂರಿನ ಜನತೆ ಗೌರವಯುತವಾಗಿ ಇದ್ದಾರೆ. ಗೌರವದ ವಿರುದ್ಧ ನಾನು ಹೋಗಲ್ಲ, ಮೈಸೂರಿನಲ್ಲಿ ಕರೋನಾ ನಿಯಂತ್ರಣಕ್ಕೆ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಅಽಕಾರಿಗಳ ವಿಷಯ ಉಸ್ತುವಾರಿ ಸಚಿವರಿಗೂ ಮೀರಿದ್ದು, ಮುಖ್ಯಮಂತ್ರಿಗಳ
ಗಮನಕ್ಕೆ ತಂದಿದ್ದೇನೆ. ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ. ಸರಿಪಡಿಸುವುದಾಗಿ ಹೇಳಿದ್ದಾರೆಂದು ಸ್ಪಷ್ಟಪಡಿಸಿದರು.

ಸಿಎಸ್ ಜತೆ ವಿಚಾರ ಹಂಚಿಕೆ; ಡಿಸಿ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮಾಡಿರುವ ಕಿರುಕುಳ ಆರೋಪದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ಒಟ್ಟಾರೆ ವಿಚಾರವನ್ನು ರಾಜ್ಯ ಸರಕಾರದ ಮುಖ್ಯ ಕಾರ‍್ಯದರ್ಶಿ ರವಿಕುಮಾರ್ ಅವರಿಗೆ ವಿವರಿಸುತ್ತೇನೆ ಎಂದಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೋವಿಡ್ ಸಂದರ್ಭ ಹಿನ್ನೆಲೆ ಎಲ್ಲರ ಸಹಕಾರ ಬೇಕಾಗುತ್ತೆ. ಅಂಕಿ ಅಂಶಗಳನ್ನು ಅಧಿಕೃತವಾಗಿ ನಾವು ಕೊಡುತ್ತಿದ್ದೇವೆ. ಕರೋನಾ ವಿಚಾರದಲ್ಲಿ ಅಂಕಿಅಂಶ ತಪ್ಪಾಗಬಾರದು. ವಾರ್ಡ್ ಪಂಚಾಯಿತಿ
ಗಳಲ್ಲಿ ಈವತ್ತು ೪೦, ನಾಳೆ ೪೦೦ ಬರಬಾರದು. ಅಂಕಿಅಂಶ ಸರಿ ಇರಬೇಕು ಎಂಬ ಕಾರಣಕ್ಕೆ ನಮ್ಮ ಒತ್ತಡ ಅಷ್ಟೇ. ನಾನು ಅಥಾರಿಟಿ ಅಲ್ಲ ಅನ್ನೋದನ್ನು ಸಿಎಸ್ ಕ್ಲಾರಿಫೈ ಮಾಡ್ತಾರೆ. ಆಫೀಸರ್ಸ್ ಸಮಸ್ಯೆ ಏನೇ ಇದ್ದರೂ ಫಾರಂ ಇರುತ್ತೆ, ಅಲ್ಲಿ
ಹೇಳಬಹುದು. ಹೈಯರ್ ಆರ್ಮಿ ಇರುತ್ತೆ, ಅಲ್ಲಿ ಹೇಳಬಹುದಿತ್ತು ಎಂದರು.

ಜುಲೈ ಒಳಗೆ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಬೇಕು. ಹೀಗಾಗಿ ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ. ನಾನು ಹೇಳಬೇಕಾದುದನೆಲ್ಲಾ ಪ್ರೆಸ್‌ನೋಟ್‌ನಲ್ಲಿ ಹೇಳಿದ್ದೇನೆ. ಸಮನ್ವಯತೆ ಸಮಸ್ಯೆಯಾಗಿತ್ತು ಎಂಬ
ಭಾವನೆ ನನಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕೋವಿಡ್ ನಿರ್ವಹಣೆಯಲ್ಲಿ ಡಿಸಿ ವಿಫಲತೆ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೋವಿಡ್ ನಿರ್ವಹಣೆ ವಿಚಾರದಲ್ಲಿ ಎಡವಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಕೆಲ ಗಂಭೀರ ಆಕ್ಷೇಪ
ಮಾಡಿದ್ದು, ಜಿಲ್ಲಾಧಿಕಾರಿಗೆ ಅಗತ್ಯ ನಿರ್ದೇಶನ ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಜಿಲ್ಲಾಡಳಿತ ಎಲ್ಲೆಲ್ಲಿ ಎಡವಿದೆ? ಆಗಬೇಕಾಗಿರುವ ಕ್ರಮಗಳೇನು ಎಂಬ ಕುರಿತು ಸಮಗ್ರವಾದ ವರದಿ ನೀಡಿರುವ ಅವರ ಪತ್ರದ ಸಾರಾಂಶ ಈ ಕೆಳಗಿನಂತಿದೆ. ‘ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣದಲ್ಲಿ ಇಳಿಕೆ
ಕಾಣುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸುಮಾರು ಸಾವಿರಕ್ಕೂ ಹೆಚ್ಚು ಜನರು ಅವರವರ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ಆದರೆ ಅವರು ಕ್ವಾರಂಟೈನ್ ನಿಬಂಧನೆಗಳನ್ನು ಅನುಸರಿಸುತ್ತಿಲ್ಲವಾದ್ದರಿಂದ ಸೋಂಕು ಇತರರಿಗೆ
ತಗುಲದಂತೆ ನೋಡಿಕೊಳ್ಳಲು ಇಂತಹವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು.

ಈ ನಿಟ್ಟಿನಲ್ಲಿ ಹೋಬಳಿ/ಪಂಚಾಯಿತಿ ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುವಂತೆ ನನ್ನ ಹಿಂದಿನ ಭೇಟಿಯ ಸಂದರ್ಭ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೆ. ಆದರೆ, ಪ್ರತಿ ಹೋಬಳಿಗೆ ಒಂದರಂತೆ ಎಲ್ಲ ತಾಲೂಕುಗಳಲ್ಲೂ ಕೋವಿಡ್ ಕೇರ್
ಸೆಂಟರ್ ಪ್ರಾರಂಭಿಸಿಲ್ಲ. ಪ್ರಾರಂಭ ಮಾಡಿರುವ ಕೇಂದ್ರಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ಈ ಪೈಕಿ ಕೇಂದ್ರಗಳ ವ್ಯವಸ್ಥೆ ತೀರಾ ಕಳಪೆಯಾಗಿದ್ದು, ಕೂಡಲೇ ಸರಿಪಡಿಸಬೇಕು.

ಜಿಲ್ಲಾಧಿಕಾರಿ ಪ್ರತಿನಿತ್ಯ ರಿಂದ ಗಂಟೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಹಲವು ಅಧಿಕಾರಿಗಳೊಂದಿಗೆ ಕೋವಿಡ್‌ಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ ಖುದ್ದಾಗಿ ಭಾಗವಹಿಸಲು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೊ ಕಾನರೆನ್ಸ್ ಮೂಲಕ ಭಾಗವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಜಿಲ್ಲೆಯ
ಬಹುತೇಕ ಅಧಿಕಾರಿಗಳು ಅರ್ಧ ದಿವಸ ಕೆಲಸ, ಉಳಿದ ಅರ್ಧ ದಿವಸ ಸಭೆಯಲ್ಲಿ ಕಳೆಯುತ್ತಿದ್ದಾರೆ. ಈ ರೀತಿಯ ಪದ್ಧತಿಯಿಂದ ಅಽಕಾರಿಗಳು ಪ್ರವಾಸ ಮಾಡುತ್ತಿಲ್ಲ ಹಾಗೂ ಜನರಿಗೆ ಹಾಗೂ ಜನಪ್ರತಿನಿಽಗಳಿಗೆ ಅಲಭ್ಯವಾಗುತ್ತಿದ್ದು, ಇದು ಅಕ್ಷೇಪಣೀಯ. ಆದ್ದರಿಂದ ಪ್ರತಿನಿತ್ಯದ ಈ ಸಭೆಗಳನ್ನು ವಾರಕ್ಕೆ ಅಥವಾ ಕ್ಕೆ ಸೀಮಿತಗೊಳಿಸುವುದು ಇಂದಿನ ವಿಪತ್ತಿನ ಸನ್ನಿವೇಶಕ್ಕೆ ತೀರಾ ಅಗತ್ಯವಾಗಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿಲ್ಲೆಯಾದ್ಯಂತ ಜಂಟಿ/ಪ್ರತ್ಯೇಕ ಪ್ರವಾಸ ಕೈಗೊಂಡು ಕೋವಿಡ್ ಕೇರ್ ಸೆಂಟರ್‌ಗಳು, ಆಸ್ಪತ್ರೆಗಳು, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ
ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸುವುದು ತುರ್ತು ಅನಿವಾರ್ಯ. ಇವರುಗಳ ಪ್ರವಾಸದ ಸಂದರ್ಭದಲ್ಲಿ ಪಂಚಾಯಿತಿ ಟಾಸ್ಕ್ ಫೋರ್ಸ್ ಸದಸ್ಯರನ್ನು ಭೇಟಿ ಮಾಡಿ ರೋಗ ನಿಯಂತ್ರಣದಲ್ಲಿ ಅವರನ್ನು ಸಜ್ಜುಗೊಳಿಸುವ, ಮುಂಚೂಣಿ ಕಾರ್ಯಕರ್ತರನ್ನು
ಉತ್ತೇಜಿಸುವ ಮತ್ತು ಜನಪ್ರತಿನಿಧಿಗಳ ಸಹಕಾರ/ ಬೆಂಬಲ ಪಡೆಯುವುದಕ್ಕಾಗಿ ಈ ಪ್ರವಾಸವನ್ನು ಬಳಸಿಕೊಂಡಲ್ಲಿ ಜನಸಾಮಾನ್ಯರಲ್ಲಿ ಸರಕಾರಿ ವ್ಯವಸ್ಥೆ ಕುರಿತು ಆತ್ಮವಿಶ್ವಾಸ ಮೂಡುತ್ತದೆ.

ಇದರಿಂದ ಈ ಸನ್ನಿವೇಶವನ್ನು ಎದುರಿಸಲು ಪೂರಕ ವಾತಾವರಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಿರಿಯ
ಅಧಿಕಾರಿಗಳು ಖುದ್ದಾಗಿ ಪರಿಶೀಲಿಸುವುದರಿಂದ ಲೋಪದೋಷಗಳನ್ನೂ ಸರಿಪಡಿಸಬಹುದು. ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಮಾಡುವುದರಿಂದ ಉಳಿದೆಲ್ಲ ಅಧಿಕಾರಿಗಳು ಸಹ ಹೆಚ್ಚು ಕಾರ್ಯನಿರತರಾಗಲು ಇದು ಪೂರಕವಾಗಬಲ್ಲದು. ಆದ್ದರಿಂದ ಜಿಲ್ಲಾಧಿಕಾರಿ ಅವರಿಗೆ ಸಭೆಗಳನ್ನು ಕಡಿಮೆ ಮಾಡಿ, ವಾಸ್ತವ ಸಂಗತಿ ತಿಳಿದು ಉಪಯುಕ್ತ ಕೆಲಸಗಳಲ್ಲಿ ಗಂಭೀರವಾಗಿ
ತೊಡಗಿಸಿಕೊಳ್ಳಲು ಸರಕಾರದಿಂದ ಕಟ್ಟುನಿಟ್ಟಿನ ಸೂಚನೆ ನೀಡಬೇಕು.

ಜಿಲ್ಲೆಯ ಜನರ ಯೋಗಕ್ಷೇಮದ ದೃಷ್ಟಿಯಿಂದ ಅಗತ್ಯವೆಂಬ ನನ್ನ ಅನಿಸಿಕೆಯನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ’ ಎಂದು
ಪತ್ರದಲ್ಲಿ ಗಮನ ಸೆಳೆದಿದ್ದಾರೆ. ಶಿಲ್ಪನಾಗ್ ಅವರ ರಾಜೀನಾಮೆ ಒಪ್ಪಬಾರದೆಂದು

ಮನವಿ ಸಲ್ಲಿಕೆ: ಸಚಿವ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪನಾಗ್ ಅವರ ರಾಜೀನಾಮೆಯನ್ನು ಒಪ್ಪಬಾರದೆಂದು ಮುಖ್ಯಮಂತ್ರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗೆ ಮನವಿಯನ್ನು ಮಾಡಲಾಗಿದೆ ಎಂದು ಸಹಕಾರ
ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಶುಕ್ರವಾರ ಮೈಸೂರು ಮಹಾನಗರ ಪಾಲಿಕೆ
ಆವರಣದಲ್ಲಿ ಪಾಲಿಕೆ ಸದಸ್ಯರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ರಾಜೀನಾಮೆಯನ್ನು ಒಪ್ಪಿಕೊಂಡರೆ ಅವರಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಒಳ್ಳೆಯ ಅಧಿಕಾರಿಗಳಿಗೆ ಆತ್ಮಸೈ ರ್ಯ ತುಂಬಬೇಕು. ಅವರು ಮನನೊಂದು ರಾಜೀನಾಮೆ ನೀಡಿದ್ದು, ಅದನ್ನು ಸ್ವೀಕರಿಸಬಾರದು ಎಂದು ಮುಖ್ಯ ಕಾರ್ಯದರ್ಶಿ ಗಳ ಗಮನಕ್ಕೆ ತರಲಾಗಿದೆ ಎಂದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪನಾಗ್ ಅವರಿಗೆ ಪಾಲಿಕೆಯ ಕೆಲಸ ಮಾಡಲು ಸೂಚಿಸಲಾಗಿದ್ದು, ದಿನಗಳ ನಂತರ ಇದರ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಿಳಿಸಿದರು. ಈ ವೇಳೆ ಶಾಸಕರಾದ ಜಿ.ಟಿ.ದೇವೆಗೌಡ, ತನ್ವೀರ್‌ಸೇಠ್, ಸಂಸದ ಪ್ರತಾಪ್‌ಸಿಂಹ, ಶಾಸಕ ಎಲ್.ನಾಗೇಂದ್ರ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಪ್ಪಣ್ಣ, ಪಾಲಿಕೆ ಸದಸ್ಯ ಅಯೂಬ್ ಖಾನ್ ಸೇರಿದಂತೆ ಇತರರು ಹಾಜರಿದ್ದರು.

ಶ್ರೀಗಳೊಂದಿಗೆ ಶಿಲ್ಪಾನಾಗ್ ಗೌಪ್ಯ ಮಾತುಕತೆ: ಈ ನಡುವೆ ಸುತ್ತೂರು ಕ್ಷೇತ್ರದಲ್ಲಿ ಮೈಸೂರು ನಾಗರಿಕ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ‍್ಯಕ್ರಮದಲ್ಲಿ ಕಾಣಿಸಿಕೊಂಡ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಕಾರ‍್ಯಕ್ರಮದ ಬಳಿಕ ಸುತ್ತೂರು
ಶ್ರೀಗಳನ್ನು ಭೇಟಿ ಮಾಡಿ, ಕೆಲ ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆಸಿದರು.

ಇದಕ್ಕೂ ಮುನ್ನ ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಮಾತನಾಡಿದ ಶಿಲ್ಪಾನಾಗ್, ‘ನಾನು ರಾಜೀನಾಮೆ ನೀಡಿರುವುದು ಯಾವುದೇ ರೀತಿಯ ದುಡುಕಿನ ನಿರ್ಧಾರ ಅಲ್ಲ. ಬಹಳ ನೋವಿನಿಂದ ರಾಜೀನಾಮೆ ನೀಡಿದ್ದೇನೆ. ಕರೋನಾ ನಿಯಂತ್ರಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ವಿನಾಕಾರಣ ಪಾಲಿಕೆಯನ್ನು ದೂಷಿಸಲಾಗುತ್ತಿತ್ತು. ಅದನ್ನು ಸಹಿಸಲು ಆಗುತ್ತಿರಲಿಲ್ಲ. ಯಾರಿಗೂ ಕೂಡ ನಾನು ಮಾಡಿದ್ದು ಸರಿ ಎಂಬ ಭಾವನೆ ಇರಬಾರದು. ಒಬ್ಬರ ಅಹಂಕಾರದಿಂದ ಇಡೀ ವ್ಯವಸ್ಥೆ ಹಾಳಾಗುವ ಹಂತಕ್ಕೆ ತಲುಪಿರುವುದು ಬೇಸರ ತಂದಿದೆ’ ಎಂದು ಡಿಸಿ ಹೆಸರೇಳದೆ ಕುಟುಕಿದರು.

ಸಚಿವರ ಸಭೆಗೂ ಡಿಸಿ ಗೈರು
ಮೈಸೂರು ನಾಗರಿಕ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಸುತ್ತೂರು ಮಠದಲ್ಲಿ ಆಯೋಜಿಸಲಾಗಿದ್ದ ಆಹಾರ ಪದಾರ್ಥಗಳ ವಿತರಣಾ ಕಾರ‍್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸುತ್ತೂರು ಶ್ರೀ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಎಲ್ಲ ಕ್ಷೇತ್ರಗಳ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಏಕಾಏಕಿ ಸುದ್ದಿಗೋಷ್ಠಿ ಏಕೆ?
ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಗುರುವಾರ ಸುದ್ಧಿಗೋಷ್ಠಿ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಶಿಲ್ಪಾನಾಗ್ ಅವರಿಗೆ ದಾಖಲೆಗಳನ್ನು ನೀಡಲು ಮುಖ್ಯ ಕಾರ್ಯದರ್ಶಿ ಸಿಎಸ್ ರವಿಕುಮಾರ್ ಕೇಳಿದ್ದಾರೆ ಎನ್ನಲಾಗಿದೆ. ನೀವು ನಿನ್ನೆ ಏಕಾಏಕಿ ಹೇಗೆ ಸುದ್ದಿಗೋಷ್ಠಿ ನಡೆಸಿದಿರಿ? ಅದರ ಅಗತ್ಯ ಏನಿತ್ತು? ಯಾವ ಆಧಾರದಲ್ಲಿ ಸುದ್ದಿಗೋಷ್ಠಿ ನಡೆಸಿದಿರಿ, ಉದ್ದೇಶ ಏನಿತ್ತು? ನನಗೆ ದೂರು ನೀಡಬಹುದಿತ್ತು.

ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ನಿಯಮ ಉಲ್ಲಂಘನೆ ಅಲ್ಲವೆ? ಈಗ ಡಿಸಿ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದೆಯಾ? ಎಂದು ಶಿಲ್ಪಾನಾಗ್ ಅವರಿಗೆ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.