Drink & Drive Case: ಮತ್ತೊಂದು ಡ್ರಿಂಕ್ & ಡ್ರೈವ್ ಕೇಸ್- ಕಾರು ಚಾಲಕನ ಹುಚ್ಚಾಟಕ್ಕೆ ಮೂವರು ಬಲಿ
Viral Video: ರಾಜಸ್ಥಾನದ ಜೈಪುರದಲ್ಲಿ ಭೀಕರ ರಸ್ತೆ ಅಪಘಾತದಿಂದಾಗಿ ಮೂವರು ಮಂದಿ ಅಸುನೀಗಿದ್ದು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಯೊಬ್ಬ ತನ್ನ ಕಾರನ್ನು ಚಲಾಯಿಸಿದರ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಉಳಿದವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಜೈಪುರ: ರಾಜಸ್ಥಾನದ ಜೈಪುರದಲ್ಲಿ (Rajasthan Accident) ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕಾರನ್ನು ಒಂಬತ್ತು ಜನರಿಗೆ ಡಿಕ್ಕಿ ಹೊಡೆದಿದ್ದು(Drink & Drive Case) ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಉಳಿದವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕಾರು ಈ ಹಿಂದೆ ಹಲವಾರು ವಾಹನಗಳಿಗೂ ಡಿಕ್ಕಿ ಹೊಡೆದಿತ್ತು. ಒಂದು ಅಪಘಾತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಚಾಲಕ ಮೂರು ಬೇರೆ ಬೇರೆ ಸ್ಥಳಗಳಲ್ಲಿ ಅಪಘಾತ ಮಾಡಿದ್ದ. ಅಂತಿಮವಾಗಿ, ಸ್ಥಳೀಯರು ಚಾಲಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
“ಸೋಮವಾರ ನಹರ್‌ಗಢ ಪ್ರದೇಶದಿಂದ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಅಪಘಾತದಲ್ಲಿ ಒಂಬತ್ತು ಜನರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸಾವನ್ನಪ್ಪಿದ್ದಾರೆ" ಎಂದು ಸ್ಥಳೀಯ ಪೊಲೀಸರು ಸೋಮವಾರ ತಿಳಿಸಿದ್ದರು. ಆದರೆ, ಮಂಗಳವಾರ ಬೆಳಗ್ಗಿನ ಹೊತ್ತಿಗೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ಅಪಘಾತ ಮಾಡಿದ ಕಾರು ಚಾಲಕನನ್ನು ಉಸ್ಮಾನ್ ಎಂದು ಗುರುತಿಸಲಾಗಿದ್ದು, ಈತ ಸತತವಾಗಿ ಒಂದು ಮೋಟಾರ್ ಸೈಕಲ್, ಸ್ಕೂಟರ್ ಸೇರಿ ಒಟ್ಟು ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಇದಾದ ನಂತರ, ನಹರ್‌ಗಢದ ಕಿರಿದಾದ, ಜನದಟ್ಟಣೆಯಿಂದ ಕೂಡಿದ ಸಂದಿಯೊಳಗೆ ಕಾರು ನುಗ್ಗಿಸಿ ಮೂವರನ್ನು ಕೊಂದಿದ್ದಾನೆ.
ಭೀಕರ ದೃಶ್ಯ ಇಲ್ಲಿದೆ
Jaipur: More innocents lost their lives in a drunk driving case... The driver didn’t even stop — he kept going as if it were a video game. And Milords will grant him instant bail... pic.twitter.com/xNXGZ0XJQu
— Mr Sinha (@MrSinha_) April 8, 2025
ಕಾರು ಏಕಾಏಕಿ ನುಗ್ಗಿದಾಗ ಹಲವಾರು ಪಾದಚಾರಿಗಳು ಭಯದಿಂದ ಕಿರುಚುತ್ತಾ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಇದರಿಂದಾಗಿ, ಹಲವು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸೋಮವಾರ ರಾತ್ರಿ 9:15 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯ ನಂತರ, ಸ್ಥಳೀಯರು ಗಾಯಾಳುಗಳಿಗೆ ಸಹಾಯ ಮಾಡಲು ಧಾವಿಸಿದ್ದು ಅವರನ್ನು ಹತಿರದಲ್ಲೇ ಇರುವ ಆಸ್ಪತ್ರೆಗೆ ದಾಖಲಿಸಿದರು.ಈ ಸಂದರ್ಭದಲ್ಲಿ ಅಲ್ಲಿಂದಲೂ ಪರಾರಿಯಾಗಲು ಯತ್ನಿಸುತ್ತಿದ್ದ ಉಸ್ಮಾನ್‌ನನ್ನು ಹಿಡಿದು ಜನರು ಥಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ಮಮತಾ ಕನ್ವರ್ (50), ಅವಧೇಶ್ ಪರೀಕ್ (37) ಮತ್ತು ವೀರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನು ಓದಿ:Viral Video: ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲೆ ಅಪಾಯಕಾರಿ ಸ್ಟಂಟ್ ಮಾಡಿದ ಯುವಕ; ವಿಡಿಯೊ ವೈರಲ್
ಕೊಲ್ಕತ್ತಾದ ಮಾರುಕಟ್ಟೆಗೆ ಕಾರು ನುಗ್ಗಿಸಿದ್ದ ನಿರ್ದೇಶಕಿ
ಇತ್ತೀಚಿಗೆ, ಕೋಲ್ಕತ್ತಾದ ಸೌತ್ ಸಿಟಿ ಮಾಲ್‌ನಲ್ಲಿರುವ ಪಬ್‌ನಲ್ಲಿ ಟಿವಿ ಕಾರ್ಯಕ್ರಮವೊಂದರ ಸಕ್ಸಸ್ ಪಾರ್ಟಿಗೆ ಸೇರಿದ್ದ ಬಂಗಾಳಿ ನಿರ್ದೇಶಕರಿಬ್ಬರು, ಕುಡಿದ ಮತ್ತಿನಲ್ಲಿ ಯದ್ವಾತದ್ವ ಗಾಡಿ ಚಲಾಯಿಸಿ ಮಾರುಕಟ್ಟೆಯೊಳಗೆ ನುಗ್ಗಿಸಿದ್ದರು. ಇದರಿಂದಾಗಿ ಓರ್ವ ಮೃತಪಟ್ಟು, ಒಟ್ಟು ಆರು ಜನರು ಗಾಯಗೊಂಡಿದ್ದರು. ನಿರ್ದೇಶಕ ಸಿದ್ದಾಂತ ದಾಸ್ ಮತ್ತು ಟಿವಿ ಕಾರ್ಯಕ್ರಮಗಳ ನಿರ್ದೇಶಕಿ ಶ್ರೀಯಾ ಬಸು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಘಟನೆ ಮಾಸುವ ಮುನ್ನವೇ ರಾಜಸ್ಥಾನದಲ್ಲಿ ಮತ್ತೊಂದು ಘಟನೆ ನಡೆದಿದೆ.