Viral Video: ಬೆಂಗಳೂರು ಮೇಟ್ರೋದಲ್ಲಿ ಸಂಗೀತ ಕಲರವ; ವಿಡಿಯೊ ವೈರಲ್
ಜನಪ್ರಿಯ ಗಾಯಕ ಎಡ್ ಶೀರನ್ ಫೆ. 8 ಮತ್ತು 9 ರಂದು ಬೆಂಗಳೂರಿನಲ್ಲಿ ಪ್ರೇಕ್ಷಕರ ಮುಂದೆ ಸಂಗೀತ ಕಾರ್ಯಕ್ರಮದ ಪ್ರದರ್ಶನ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಭಿಮಾನಿಗಳು ಬೆಂಗಳೂರು ಮೆಟ್ರೋದಲ್ಲಿ ಹಿಂತಿರುಗುವಾಗ 'ಪರ್ಫೆಕ್ಟ್' ಹಾಡನ್ನು ಹಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
![ಮೇಟ್ರೋದಲ್ಲಿ ಸಂಗೀತ ಕಲರವ; ವಿಡಿಯೊ ವೈರಲ್](https://cdn-vishwavani-prod.hindverse.com/media/original_images/music_in_viral_video.jpg)
Viral video
![Profile](https://vishwavani.news/static/img/user.png)
ಬೆಂಗಳೂರು: ಜನಪ್ರಿಯ ಗಾಯಕ ಎಡ್ ಶೀರನ್ ಫೆಬ್ರವರಿ 8 ಮತ್ತು 9 ರಂದು ಬೆಂಗಳೂರಿನಲ್ಲಿ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಉಣ ಬಡಿಸಿದ್ದಾರೆ. ಈ ಸಂಗೀತ ಮಾಂತ್ರಿಕನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಗೀತ ಪ್ರೇಮಿಗಳು ವಾಪಾಸ್ ಮನೆಗೆ ತೆರಳುವಾಗ ಎಡ್ ಶೀರನ್ ಹಾಡಿನಿಂದ ಪ್ರೇರಿತಗೊಂಡು ಮೆಟ್ರೋದಲ್ಲಿ ಸಂಗೀತ ಕಚೇರಿ ಶುರುಮಾಡಿದ್ದಾರೆ. ಬೆಂಗಳೂರು ಮೆಟ್ರೋದಲ್ಲಿ ಎಡ್ ಶೀರನ್ ಅಭಿಮಾನಿಗಳು ಮೆಟ್ರೋದಲ್ಲಿ ಹಾಡಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಸಲೋನಿ ಎಂಬ ವ್ಯಕ್ತಿ ಸಂಗೀತದ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ಜನರ ಗಮನ ಸೆಳೆದಿದೆ.
"ಲವ್ ದಿ ವೈಬ್" ಎಂದು ಒಬ್ಬರು ವಿಡಿಯೊಗೆ ಕಾಮೆಂಟ್ ಮಾಡಿದರೆ, "ಬೆಲೆ ಏರಿಕೆಗೆ ಇದೇ ಕಾರಣ" ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಸಂಗೀತವು ನಮ್ಮ ಮೆಟ್ರೋದಲ್ಲಿ ಗರಿಷ್ಠ ಶುಲ್ಕವನ್ನು 60 ರೂ.ಗಳಿಂದ 90 ರೂ.ಗೆ ಹೆಚ್ಚಿಸಲು ಕಾರಣವಾಗಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಎಡ್ ಶೀರನ್ ಇಂಡಿಯಾ ಮ್ಯಾಥಮ್ಯಾಟಿಕ್ಸ್ ಟೂರ್‌ನ ಭಾಗವಾಗಿ ಫೆಬ್ರವರಿ 8 ಮತ್ತು 9 ರಂದು ಬೆಂಗಳೂರಿನ ನೈಸ್ ಮೈದಾನದಲ್ಲಿ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಪುಣೆ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಅಭಿಮಾನಿಗಳನ್ನು ರಂಜಿಸಿದ್ದರು. ಅಲ್ಲಿ ಅವರು ಎ.ಆರ್.ರೆಹಮಾನ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ವಿಮಾನದಲ್ಲಿ ಜೋರಾಗಿ ಅತ್ತ ಪುಟ್ಟ ಬಾಲಕಿಯನ್ನು ಸಮಾಧಾನಪಡಿಸಿದ ಲೆಬನಾನ್ ಸಂಗೀತಗಾರ... ವಿಡಿಯೊ ನೋಡಿ
ಕೆಲವು ದಿನಗಳ ಹಿಂದೆ ವಿಮಾನದಲ್ಲೂಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ವಿಮಾನದಲ್ಲಿ ಜೋರಾಗಿ ಅತ್ತ ಪುಟ್ಟ ಬಾಲಕಿಯನ್ನು ಸಮಾಧಾನಪಡಿಸಲು ಲೆಬನಾನ್ ಸಂಗೀತಗಾರ ಹಾಡು ಹಾಡಿದ್ದರು. ಮಕ್ಕಳು ಪ್ರಯಾಣ ಮಾಡುವ ಸಮಯದಲ್ಲಿ ಅಳುವುದು, ಹಠ ಮಾಡುವುದು ಸಾಮಾನ್ಯ. ಆದರೆ ಇದು ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ಪುಟ್ಟ ಬಾಲಕಿಯೊಬ್ಬಳು ಜೋರಾಗಿ ಅತ್ತಿದ್ದು, ಆಕೆಯನ್ನು ಸಮಾಧಾನಪಡಿಸಲು ಸಂಗೀತಗಾರರೊಬ್ಬರು ವಿಮಾನದಲ್ಲಿ ಸಂಗೀತ ಕಛೇರಿ ನಡೆಸಿದ್ದಾರೆ. ಪುಟ್ಟ ಬಾಲಕಿಯನ್ನು ರಂಜಿಸುವ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲೆಬನಾನ್ ಮೂಲದ ಕಲಾವಿದ ಮಿಡೋ ಬಿರ್ಜಾವಿ ದರ್ಬುಕಾ ಎಂಬ ಗೋಬ್ಲೆಟ್ ಆಕಾರದ ಸಂಗೀತ ವಾದ್ಯವನ್ನು ನುಡಿಸಿ ಪುಟ್ಟ ಬಾಲಕಿಯನ್ನು ಸಮಾಧಾನ ಮಾಡಿದ್ದಾರೆ.
ಸಂಗೀತಗಾರನ ಈ ಪ್ರದರ್ಶನವು ಪುಟ್ಟ ಬಾಲಕಿಯ ಗಮನ ಸೆಳೆಯಲು ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಅವಳನ್ನು ಸಮಾಧಾನಪಡಿಸುವ ಪ್ರಯತ್ನವಾಗಿದೆ ಎನ್ನಲಾಗಿದೆ. ವಿಡಿಯೊದಲ್ಲಿ, ಮಿಡೋ ಸಂಗೀತ ಪ್ರದರ್ಶನ ಪುಟ್ಟ ಮಕ್ಕಳನ್ನು ರಂಜಿಸುವುದು ಮಾತ್ರವಲ್ಲದೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರರಿಗೂ ಮನೋರಂಜನೆ ನೀಡಿದೆ. ಮಗುವನ್ನು ಹುರಿದುಂಬಿಸಲು ಇಡೀ ವಿಮಾನದಲ್ಲಿದ್ದ ಪ್ರಯಾಣಿಕರು ಸಂಗೀತಗಾರನಿಗೆ ಸಾಥ್ ನೀಡಿದ್ದಾರೆ. ಮಿಡೋ ಪುಟ್ಟ ಮಗುವಿಗಾಗಿ 'ಬೇಬಿ ಶಾರ್ಕ್' ನುಡಿಸಿ ಹಾಡಿದ್ದಾರೆ.