Mahakumbh 2025: ʼಮಾಘಿ ಪೂರ್ಣಿಮಾʼಕ್ಕಾಗಿ ಪ್ರಯಾಗ್‍ರಾಜ್‍ನಲ್ಲಿ ಹೊಸ ಸಂಚಾರ ನಿಯಮ ಜಾರಿ
ಮಹಾಕುಂಭದಲ್ಲಿ ಮುಂಬರುವ ವಿಶೇಷ ದಿನವಾದ ಮಾಘಿ ಪೂರ್ಣಿಮಾ ಸಂದರ್ಭದಲ್ಲಿ ಕೋಟ್ಯಂತರ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಯಾವುದೇ ಅವಗಢಗಳು ಸಂಭವಿಸುವುದನ್ನು ತಡೆಯಲು ಮುಂಚಿತವಾಗಿ ಪ್ರಯಾಗ್ರಾಜ್ ಅಧಿಕಾರಿಗಳು ಹೊಸ ನಿರ್ಬಂಧಗಳನ್ನು ಹೊರಡಿಸಿದ್ದಾರೆ. ಜನವರಿ 29ರಂದು ಮೌನಿ ಅಮಾವಾಸ್ಯೆಯಂದು ಕಾಲ್ತುಳಿತದಲ್ಲಿ ಕನಿಷ್ಠ 30 ಯಾತ್ರಿಕರು ಸಾವನ್ನಪ್ಪಿದ ನಂತರ ಈ ಸಂಚಾರ ನಿಯಮವನ್ನು ಜಾರಿಗೆ ತರಲಾಗಿದೆ ಎನ್ನಲಾಗಿದೆ.
![ಮಹಾಕುಂಭಮೇಳದಲ್ಲಿ ಹೊಸ ಸಂಚಾರ ನಿಯಮ; ಏನೇನಿದೆ?](https://cdn-vishwavani-prod.hindverse.com/media/original_images/kumba_mela_viral.jpg)
kumba mela viral
![Profile](https://vishwavani.news/static/img/user.png)
ಲಖನೌ: ಜನವರಿ 29ರ ವಿಶೇಷ ದಿನದಂದು ಮುಂಜಾನೆ ಕಾಲ್ತುಳಿತದಲ್ಲಿ ಕನಿಷ್ಠ 30 ಯಾತ್ರಿಕರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಹಾಕುಂಭದಲ್ಲಿ(Mahakumbh 2025) ಮುಂಬರುವ ವಿಶೇಷ ದಿನಕ್ಕೆ ಮುಂಚಿತವಾಗಿ ಪ್ರಯಾಗ್ರಾಜ್ ಅಧಿಕಾರಿಗಳು ಹೊಸ ನಿರ್ಬಂಧಗಳನ್ನು ಹೊರಡಿಸಿದ್ದಾರೆ. ಸ್ನಾನದ ಆರು ಪವಿತ್ರ ದಿನಗಳಲ್ಲಿ ಐದನೇ ದಿನವಾದ ಮಾಘಿ ಪೂರ್ಣಿಮಾ(ಫೆ.12)ಸಂದರ್ಭದಲ್ಲಿ ಕೋಟ್ಯಂತರ ಭಕ್ತರು ನಗರಕ್ಕೆ ಬರುವ ನಿರೀಕ್ಷೆ ಇರುವುದರಿಂದ ಪೊಲೀಸರು ನಗರದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಮಂಗಳವಾರ (ಫೆ.11)ಬೆಳಿಗ್ಗೆ 4 ಗಂಟೆಯಿಂದ ಜಾತ್ರೆ ಪ್ರದೇಶವನ್ನು ವಾಹನ ನಿಷೇಧ ವಲಯವೆಂದು ಘೋಷಿಸಲಾಗಿದೆ.
ಇದನ್ನು ಸಂಜೆ 5 ಗಂಟೆಯಿಂದ ಇಡೀ ನಗರಕ್ಕೆ ವಿಸ್ತರಿಸಲಾಗಿದೆ. ವಿವಿಧ ಮಾರ್ಗಗಳಿಗೆ ವಿಭಿನ್ನ ಪಾರ್ಕಿಂಗ್ ವಲಯಗಳನ್ನು ಗೊತ್ತುಪಡಿಸಲಾಗಿದ್ದು, ನಗರದ ಹೊರಗಿನಿಂದ ಬರುವ ಭಕ್ತರು ತಮ್ಮ ವಾಹನಗಳನ್ನು ಅಲ್ಲೇ ನಿಲ್ಲಿಸಬೇಕು ಎಂದು ಆದೇಶಿಸಲಾಗಿದೆ. ನಾಳೆ (ಫೆಬ್ರವರಿ 12)ಭಕ್ತರು ಜಾತ್ರೆ ಪ್ರದೇಶದಿಂದ ಸರಾಗವಾಗಿ ಹೋಗುವವರೆಗೆ ಸಂಚಾರ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಹಾಗೂ ಅಗತ್ಯ ಮತ್ತು ತುರ್ತು ಸೇವೆಗಳಿಗೆ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ.
ಸೋಮವಾರ (ಫೆಬ್ರವರಿ 10) ರಾತ್ರಿ, ಪೊಲೀಸರು ಮತ್ತು ನಾಗರಿಕ ಅಧಿಕಾರಿಗಳೊಂದಿಗಿನ ಸಭೆಯಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂದರ್ಭಕ್ಕಾಗಿ ಮಾಡಿದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸಿಎಂ ಆದಿತ್ಯನಾಥ್ ಅವರು ಸುವ್ಯವಸ್ಥಿತ ಸಂಚಾರ ಮತ್ತು ಜನಸಂದಣಿ ನಿರ್ವಹಣಾ ಯೋಜನೆಗೆ ಕರೆ ನೀಡಿದ್ದಾರೆ. ಲಭ್ಯವಿರುವ 5 ಲಕ್ಷಕ್ಕೂ ಹೆಚ್ಚು ವಾಹನಗಳ ಪಾರ್ಕಿಂಗ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
“ರಸ್ತೆಗಳಲ್ಲಿ ವಾಹನಗಳ ಉದ್ದನೆಯ ಸರತಿ ಸಾಲುಗಳು ನಿಲ್ಲಲು ಅವಕಾಶ ನೀಡಬಾರದು. ಯಾವುದೇ ಬೆಲೆ ತೆತ್ತಾದರೂ ಸಂಚಾರ ದಟ್ಟಣೆಯನ್ನು ತಡೆಗಟ್ಟಬೇಕು" ಎಂದು ಅವರು ತಿಳಿಸಿದ್ದಾರೆ. ಜನವರಿ 29 ರಂದು ಮೌನಿ ಅಮಾವಾಸ್ಯೆಯಂದು ಎರಡನೇ ಶಾಹಿ ಸ್ನಾನ (ಪವಿತ್ರ ಸ್ನಾನ) ದಲ್ಲಿ ಕಾಲ್ತುಳಿತದ ನಂತರ ಈ ಸಂಚಾರ ನಿಯಮವನ್ನು ಜಾರಿಗೆ ತರಲಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಈ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ವಿಶ್ವದ ಅತಿದೊಡ್ಡ ಜನಸಮೂಹ ಸೇರುವಂತಹ ಮಹಾ ಕುಂಭ ಜನವರಿ 13 ರಂದು ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ನಡೆಯಲಿದೆ. ಫೆಬ್ರವರಿ 10 ರವರೆಗೆ 44.74 ಕೋಟಿ ಜನರು ಕುಂಭಮೇಳದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:Viral News: ಮಹಾ ಕುಂಭಮೇಳದಲ್ಲಿ ಭಾರೀ ಟ್ರಾಫಿಕ್ ಜಾಮ್; 300 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು
ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಪ್ರತಿ ದಿನ ಆಗಮಿಸುತ್ತಿದ್ದಾರೆ. ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಬರುತ್ತಿರುವ ಹಿನ್ನೆಲೆಯಲ್ಲಿ ನೂರಾರು ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಭಾರೀ ಟ್ರಾಫಿಕ್ ಜಾಮ್ ಕಂಡು ಬಂದ. ಇದರಿಂದ ಮಹಾ ಕುಂಭಕ್ಕೆ ಹೋಗುವ ಸಾವಿರಾರು ಭಕ್ತರು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಬಿದ್ದ ವಾಹನಗಳ ಸಾಲು 300 ಕಿ.ಮೀ.ವರೆಗೆ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಎಲ್ಲೆಡೆ ವೈರಲ್ ಆಗಿದೆ.
ವಸಂತ ಪಂಚಮಿಯ ಅಮೃತ್ ಸ್ನಾನದ ಬಳಿಕವೂ ಲಕ್ಷಾಂತರ ಜನರು ಪವಿತ್ರ ಸ್ನಾನಕ್ಕಾಗಿ ಪ್ರಯಾಗ್‍ರಾಜ್‍ಗೆ ಹೋಗುತ್ತಿದ್ದಾರೆ. ಸಂಚಾರವನ್ನು ನಿರ್ವಹಿಸಲು ಕಷ್ಟಪಡುತ್ತಿರುವ ನೆರೆಯ ಮಧ್ಯಪ್ರದೇಶದ ಹಲವಾರು ಜಿಲ್ಲೆಗಳ ಪೊಲೀಸರು ಪ್ರಯಾಗ್‍ರಾಜ್‍ಗೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಲ್ಲಿಸಿದ್ದಾರೆ. "200-300 ಕಿ.ಮೀ. ಟ್ರಾಫಿಕ್ ಜಾಮ್ ಇರುವುದರಿಂದ ಇಂದು ಪ್ರಯಾಗ್‌ರಾಜ್ ಕಡೆಗೆ ಹೋಗುವುದು ಅಸಾಧ್ಯ" ಎಂದು ಪೊಲೀಸರು ತಿಳಿಸಿದ್ದಾರೆ.