Friday, 13th December 2024

ಆಧ್ಯಾತ್ಮಿಕ ಪ್ರಜ್ಞೆಯ ನಿಜಪ್ರವರ್ತಕ

ಸಂಸ್ಮರಣೆ

ನರೇಂದ್ರ ಮೋದಿ

ಸ್ವಾಮಿ ಸ್ಮರಣಾನಂದ ಜೀ ಅವರು ಅಚಾರ್ಯ ರಾಮಕೃಷ್ಣ ಪರಮಹಂಸ, ಮಾತಾ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜಗತ್ತಿನಾದ್ಯಂತ ಪಸರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಶಾಶ್ವತ ನಿರ್ಗಮನ ಅನೇಕ ಜನರನ್ನು ದುಃಖಿತರನ್ನಾಗಿಸಿದೆ.

ಲೋಕಸಭಾ ಚುನಾವಣೆಯ ಮಹಾ ಉತ್ಸವ, ಸಡಗರದ ನಡುವೆ ಶ್ರೀಮದ್ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್ ಅವರ ಅಗಲಿಕೆಯ ಸುದ್ದಿ ನಮ್ಮ ಮನಸ್ಸನ್ನು ಕೆಲವು ಕಾಲ ಸ್ತಬ್ದಗೊಳಿಸಿತು. ಶ್ರೀಮದ್ ಸ್ವಾಮಿ ಸ್ಮರಣಾನಂದ ಜೀ ಮಹಾರಾಜ್
ಭಾರತದ ಆಧ್ಯಾತ್ಮಿಕ ಪ್ರeಯ ಪ್ರವರ್ತಕರು ಮತ್ತು ಅವರ ನಿಧನದಿಂದ ನಮಗೆಲ್ಲರಿಗೂ ವೈಯಕ್ತಿಕವಾಗಿ ನಷ್ಟವಾಗಿದೆ. ಕೆಲವು ವರ್ಷಗಳ ಹಿಂದೆ ಸ್ವಾಮಿ ಆತ್ಮಸ್ಥಾನಂದ ಜೀ ಅವರು ನಿಧನ ಹೊಂದಿದರು ಮತ್ತು ಈಗ ಸ್ವಾಮಿ ಸ್ಮರಣಾನಂದ ಜೀ ಅವರ ಶಾಶ್ವತ ನಿರ್ಗಮನ ಅನೇಕ ಜನರನ್ನು ದುಃಖಿತರನ್ನಾಗಿ ಮಾಡಿದೆ.

ಕೋಟ್ಯಂತರ ಭಕ್ತರು, ಸಂತರು ಮತ್ತು ರಾಮಕೃಷ್ಣ ಮಠ ಹಾಗೂ ಮಿಷನ್‌ನ ಅನುಯಾಯಿಗಳ ಹೃದಯದಂತೆ ನನ್ನ ಹೃದಯ ಕೂಡ ದುಃಖಿತವಾಗಿದೆ. ಈ ತಿಂಗಳ ಆರಂಭದಲ್ಲಿ ನಾನು ಕೋಲ್ಕತ್ತಾಗೆ ಭೇಟಿ ನೀಡಿದ್ದಾಗ ಸ್ವಾಮಿ ಸ್ಮರಣಾನಂದ ಜೀ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದೆ. ಸ್ವಾಮಿ ಆತ್ಮಸ್ಥಾನಂದ ಜೀ ಅವರಂತೆ ಸ್ವಾಮಿ ಸ್ಮರಣಾನಂದ ಜೀ ಅವರು ಸಹ
ಅಚಾರ್ಯ ರಾಮಕೃಷ್ಣ ಪರಮಹಂಸ, ಮಾತಾ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಜಗತ್ತಿ ನಾದ್ಯಂತ ಪಸರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಈ ಲೇಖನ ಬರೆಯುವಾಗ ಅವರೊಂದಿಗಿನ ಭೇಟಿಗಳು ಮತ್ತು ಸಂವಾದಗಳು ನನ್ನ ಮನಸ್ಸನ್ನು ಹೊಸದಾಗಿ ಹಾದುಹೋದವು.

ಕಳೆದ ೨೦೨೦ರ ಜನವರಿಯಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದರ ಕೋಣೆ ಯಲ್ಲಿ ಧ್ಯಾನ ಮಾಡಿದ್ದೆ. ಭೇಟಿ ಕಾಲದಲ್ಲಿ ಸ್ವಾಮಿ ಆತ್ಮಸ್ಥಾನಂದ ಜೀ ಅವರ ಕುರಿತು ಸ್ವಾಮಿ ಸ್ಮರಣಾನಂದ ಜೀ ಅವರೊಂದಿಗೆ ಸುದೀರ್ಘ ಕಾಲ ಸಂಭಾಷಣೆ ನಡೆಸಿದ್ದೆ. ನಾನು ಬೇಲೂರು ಮಠ ಮತ್ತು ರಾಮಕೃಷ್ಣ ಮಿಷನ್ ನೊಂದಿಗೆ ನಿಕಟವಾದ ಬಾಂಧವ್ಯ ಹೊಂದಿರುವುದು ವಿಸ್ತೃತವಾಗಿ ಎಲ್ಲರಿಗೂ ತಿಳಿದಿದೆ. ಆಧ್ಯಾತ್ಮಿಕತೆಯ ಅನ್ವೇಷಕನಾಗಿ ನಾನು ವಿವಿಧ ಸಾಧು-ಸಂತರು ಮತ್ತು ಮಹಾತ್ಮರನ್ನು ಭೇಟಿ ಮಾಡಿದ್ದೇನೆ ಮತ್ತು ಐದು ದಶಕಗಳಲ್ಲಿ ಅನೇಕ ಸ್ಥಳಗಳಿಗೆ ತೆರಳಿದ್ದೇನೆ.

ರಾಮಕೃಷ್ಣ ಮಠದಲ್ಲಿ, ಆಧ್ಯಾತ್ಮಿಕವಾಗಿ ತಮ್ಮ ಬದುಕನ್ನು ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ
ಅವರಂತೆ ಪ್ರಮುಖವಾಗಿ ಸಮರ್ಪಿಸಿಕೊಂಡವರ ಬಗ್ಗೆ ಮಾಹಿತಿ ಇದೆ. ಅವರ ಪವಿತ್ರ ಆಲೋಚನೆಗಳು ಮತ್ತು ಜ್ಞಾನ ನನ್ನ ಮನಸ್ಸಿಗೆ ತೃಪ್ತಿ ನೀಡಿವೆ. ನನ್ನ ಜೀವನದ ಅತ್ಯಂತ ಮಹತ್ವದ ಅವಧಿಯಲ್ಲಿ ಇಂಥ ಸಂತರು ‘ಜನಸೇವೆಯೇ ಪ್ರಭುಸೇವೆ’ ಎಂಬ ನಿಜವಾದ ತತ್ವವನ್ನು ನಮಗೆಲ್ಲ ಕಲಿಸಿದ್ದಾರೆ. ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂತೆ ರಾಮಕೃಷ್ಣ ಮಿಷನ್‌ನ ‘ಆತ್ಮನೋ ಮೋಕ್ಷಾಥಂ ಜಗದ್ಧಿತಾಯ ಚ’ ಎಂಬ ಧ್ಯೇಯವಾಕ್ಯವು ಅಳಿಸಲಾಗದ ಉದಾಹರಣೆಯಾಗಿದೆ.

ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ರಾಮಕೃಷ್ಣ ಮಿಷನ್‌ನ ಪ್ರಮುಖ ಕೆಲಸ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಭಾರತದ ಆಧ್ಯಾತ್ಮಿಕ ಜ್ಞಾನ, ಶೈಕ್ಷಣಿಕ ಸಬಲೀಕರಣ ಮತ್ತು ಮಾನವೀಯ ವಲಯದಲ್ಲಿ ರಾಮಕೃಷ್ಣ ಮಿಷನ್ ಸೇವೆ ಸಲ್ಲಿಸು ತ್ತಿದೆ. ೧೯೭೮ರಲ್ಲಿ ಬಂಗಾಳದಲ್ಲಿ ಪ್ರವಾಹದಿಂದ ಸಂಕಷ್ಟ ಎದುರಾದಾಗ ರಾಮಕೃಷ್ಣ ಮಿಷನ್ ಕೈಗೊಂಡ ಸ್ವಾರ್ಥರಹಿತ ಸೇವೆ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದೆ. ೨೦೦೧ರಲ್ಲಿ ಗುಜರಾತ್‌ನ ಕಛ್‌ನಲ್ಲಿ ಭೂಕಂಪನವಾದಾಗ, ಸ್ವಾಮಿ ಆತ್ಮಸ್ಥಾನಂದ ಜೀ ಅವರು ಮೊದಲು ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವ್ಯಕ್ತಿಯಾಗಿದ್ದರು ಮತ್ತು  ಸಂಕಷ್ಟದಲ್ಲಿ ರುವ ಜನರಿಗೆ ಸಾಧ್ಯವಾದಷ್ಟು ನೆರವು ನೀಡಲು ರಾಮಕೃಷ್ಣ ಮಿಷನ್ ಸಿದ್ಧವಾಗಿದೆ ಎಂದು ಹೇಳಿದ್ದರು. ಇದು ನನಗೆ ಚೆನ್ನಾಗಿ ನೆನಪಿದೆ. ಅವರ ಮಾರ್ಗದರ್ಶನದಲ್ಲಿ ರಾಮಕೃಷ್ಣ ಮಿಷನ್, ಭೂಕಂಪನ ದಿಂದ ತೊಂದರೆಗೀಡಾದ ಹಲವಾರು ಜನರಿಗೆ ನೆರವಾಯಿತು.

ಹಲವಾರು ವರ್ಷಗಳಿಂದ ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರು ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದು, ಇವರು ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದರು. ಈ ಮಹಾನ್ ವ್ಯಕ್ತಿಗಳ ಜೀವನವನ್ನು ಬಲ್ಲವರು ಖಂಡಿತವಾಗಿಯೂ ಈ ಸಂತರು ಆಧುನಿಕ ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಎಷ್ಟೊಂದು ಗಂಭೀರವಾಗಿ ಆಲೋಚಿಸಿ ದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಅವರ ಅನೇಕ ಸೂರ್ತಿದಾಯಕ ಗುಣಲಕ್ಷಣಗಳಲ್ಲಿ ನನ್ನನ್ನು ಹೆಚ್ಚು ಪ್ರಭಾವಿಸಿದ ಒಂದು ವಿಷಯವೆಂದರೆ ಸ್ವಾಮಿ ಆತ್ಮಸ್ಥಾ ನಂದ ಜೀ ಅವರ ಪ್ರತಿಯೊಂದು ಸಂಸ್ಕೃತಿ ಮತ್ತು ಪ್ರತಿಯೊಂದು ಸಂಪ್ರದಾಯದ ಮೇಲಿನ ಪ್ರೀತಿ ಮತ್ತು ಗೌರವ. ಈ ಕಾರಣ ದಿಂದ ಭಾರತದ ವಿವಿಧ ಭಾಗಗಳಿಗೆ ನಾನು ನಿರಂತರವಾಗಿ ಭೇಟಿ ನೀಡಿದೆ ಮತ್ತು ಹೆಚ್ಚು ಸಮಯವನ್ನು ಕಳೆದೆ. ಅವರು ಗುಜರಾತ್‌ ನಲ್ಲಿ ನೆಲೆಸಿದ್ದಾಗ ಗುಜರಾತಿ ಭಾಷೆ ಕಲಿತರು. ಅವರು ನನ್ನೊಂದಿಗೆ ಕೂಡ ಇದೇ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಅವರ ಗುಜರಾತಿ ಭಾಷೆಯನ್ನು ನಾನು ಪ್ರೀತಿಯಿಂದ ಆಲಿಸುತ್ತಿದ್ದೆ.

ಭಾರತದ ಅಭಿವೃದ್ಧಿ ಯಾನದಲ್ಲಿ ನಮ್ಮ ತಾಯ್ನೆಲವು ಹಲವಾರು ಸಂತರಿಂದ, ಸ್ವಾಮಿ ಆತ್ಮಸ್ಥಾನಂದ ಜೀ ಮತ್ತು ಸ್ವಾಮಿ ಸ್ಮರಣಾನಂದ ಜೀ ಅವರಂಥ ಶ್ರೀಗಳಿಂದ ಆಶೀರ್ವದಿಸಲ್ಪಟ್ಟಿದೆ. ಇವರೆಲ್ಲ ಸಾಮಾಜಿಕ ಬದಲಾವಣೆಗೆ ಪ್ರೇರಕ ಶಕ್ತಿಯಾಗಿದ್ದ ವರು. ಸಮಾಜದ ಎಲ್ಲಾ ಆಯಾಮದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸಾಮೂಹಿಕ ಸೂರ್ತಿಯಿಂದ ಕಾರ್ಯನಿರ್ವಹಿಸಲು
ಇವರು ಪ್ರೇರಣೆ ನೀಡಿದ್ದರು. ಈ ತತ್ವಗಳು ಶಾಶ್ವತವಾಗಿವೆ ಮತ್ತು ಅಮೃತ ಕಾಲದ ಈ ಸಮಯದಲ್ಲಿ ನಾವು ವಿಕಸಿತ ಭಾರತ ವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದಾಗ ನಮ್ಮ ಶಕ್ತಿಯ ಮೂಲವಾಗಿ ಇವು ಕಾರ್ಯನಿರ್ವಹಿಸುತ್ತವೆ.

ಇಡೀ ದೇಶದ ಪರವಾಗಿ ಇಂಥ ಸಂತರ ಆತ್ಮಗಳಿಗೆ ಮತ್ತೊಮ್ಮೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ರಾಮಕೃಷ್ಣ ಮಿಷನ್‌ಗೆ ಸಂಬಂಧಿಸಿದ ಎಲ್ಲಾ ಜನರು ಅವರು ತೋರಿಸಿದ ಹಾದಿಯಲ್ಲಿ ಮುಂದೆ ಸಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಓಂ ಶಾಂತಿ.

(ಲೇಖಕರು ಭಾರತದ ಪ್ರಧಾನಮಂತ್ರಿಗಳು)