Rangaswamy Mookanahalli Column: ದಿನವೂ ರಜೆಯಾದರೆ, ಭಾನುವಾರಕ್ಕೆಲ್ಲಿ ಮಜಾ ? !
ಎಲ್ಲಾ ದಿನಗಳೂ ರಜಾದಿನಗಳೇ ಆಗಿಬಿಟ್ಟರೆ, ಭಾನುವಾರಕ್ಕೆ ಈಗಿರುವ ವಿಶೇಷ ಬೆಲೆ ಇರುತ್ತಿರಲಿಲ್ಲ. 1922ರ ಡಿಸೆಂಬರ್ ೨೮ರಂದು ಜನಿಸಿದ ಸ್ಟಾನ್ ಲಿ, ಯೆಹೂದಿ ರೀತಿನೀತಿಗಳಲ್ಲಿ ಬೆಳೆದರು. ಇವರ ತಂದೆ-ತಾಯಿ ಮೂಲತಃ ರುಮೇನಿಯನ್ನರು. ಸ್ಟಾನ್ ಲಿ ತನ್ನ ರುಮೇನಿಯನ್ ಮೂಲದ ಬಗ್ಗೆ ಹೆಚ್ಚು ಮಾತ ನಾಡುವುದಿಲ್ಲ.

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

ಮನುಷ್ಯನು ಬದುಕಿನಲ್ಲಿ ಹಣ ಮತ್ತು ಹೆಸರು ಸಂಪಾದಿಸಬೇಕು ಎಂಬುದೇನೋ ನಿಜ; ಆದರೆ ದೈಹಿಕವಾಗಿ ಕಷ್ಟಪಡುವುದರಿಂದ ಮಾತ್ರವೇ ಅದು ಎಂದಿಗೂ ಸಾಧ್ಯವಿಲ್ಲ. ಮನುಷ್ಯನ ಬುದ್ಧಿ ಶಕ್ತಿ, ಚಿಂತನೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ‘ಇಮ್ಯಾಜಿನೇಷನ್’ ಅವನನ್ನು ಯಾವ ಎತ್ತರಕ್ಕೂ ಏರಿಸಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಸ್ಟಾನ್ ಲಿ. ಹಣ ಮತ್ತು ಹೆಸರನ್ನು ಗಳಿಸು ವುದು ಬದುಕಿನ ಒಂದು ಸಣ್ಣಭಾಗ; ನಂತರದ ಕಥೆಯಿದೆಯಲ್ಲಾ, ಬದುಕಿದೆಯಲ್ಲಾ, ಗಳಿಸಿದ ಹೆಸರು ಮತ್ತು ಸಂಪತ್ತನ್ನು ಉಳಿಸಿಕೊಳ್ಳುವುದು, ಬೆಳೆಸಿಕೊಳ್ಳುವುದು ಮತ್ತು ಜನಮಾನಸವು ಮಾಡಿಕೊಂಡಿದ್ದ ಕಲ್ಪನೆಯಂತೆ ಬದುಕುವುದು ಎಲ್ಲಕ್ಕಿಂತ ದೊಡ್ಡ ಸವಾಲು. ಈ ಸವಾಲನ್ನು ಜಯಿಸುವುದರಲ್ಲಿ ಮುಕ್ಕಾಲುಪಾಲು ಜನ ಎಡವುತ್ತಾರೆ. ಬದುಕು ಎಂದ ಮೇಲೆ ಸೋಲು-ಗೆಲುವು, ಏರಿಳಿತಗಳು ಇದ್ದದ್ದೇ. ಅದು ಇರಬೇಕು ಕೂಡ!
ಎಲ್ಲಾ ದಿನಗಳೂ ರಜಾದಿನಗಳೇ ಆಗಿಬಿಟ್ಟರೆ, ಭಾನುವಾರಕ್ಕೆ ಈಗಿರುವ ವಿಶೇಷ ಬೆಲೆ ಇರುತ್ತಿರಲಿಲ್ಲ. 1922ರ ಡಿಸೆಂಬರ್ 28ರಂದು ಜನಿಸಿದ ಸ್ಟಾನ್ ಲಿ, ಯೆಹೂದಿ ರೀತಿನೀತಿಗಳಲ್ಲಿ ಬೆಳೆದರು. ಇವರ ತಂದೆ-ತಾಯಿ ಮೂಲತಃ ರುಮೇನಿಯನ್ನರು. ಸ್ಟಾನ್ ಲಿ ತನ್ನ ರುಮೇನಿಯನ್ ಮೂಲದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.
ಇದನ್ನೂ ಓದಿ: Rangaswamy Mookanahally Column: ಸ್ತ್ರೀ ಎಂದರೆ ಕಳೆದ ನಿನ್ನೆಯ ನೆನಪು...
“ನನಗೆ ಆ ಬಗ್ಗೆ ಹೆಚ್ಚಿನದು ಗೊತ್ತಿಲ್ಲ, ನಾನು ರುಮೇನಿಯಾಗೆ ಹೋಗಿಲ್ಲ" ಎನ್ನುವುದು ಅವರ ಮಾತು. ಸ್ಟಾನ್ ಹೆತ್ತವರ ಹಣಕಾಸು ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಹೀಗಾಗಿ ಸ್ಟಾನ್ ಬಾಲ್ಯದಲ್ಲಿ ಹತ್ತಾರು ನೋವುಗಳನ್ನು ಅನುಭವಿಸಬೇಕಾಗಿ ಬಂತು. ಬಡತನವೆಂಬುದು ‘ಬಾಳಿನಲ್ಲಿ’ ಇದ್ದರೆ ಅದನ್ನು ಹೇಗೋ ಸಂಭಾಳಿಸಬಹುದು, ಆದರೆ ಬಡತನವು ‘ಮನಸ್ಸಿಗೆ’ ಹತ್ತಬಾರದು. ಅದ್ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಬಾಲಕ ಸ್ಟಾನ್ ಮಾನಸಿಕವಾಗಿ ಸಿರಿವಂತನಾಗಿದ್ದ.
1929ರ ಕಾಲಘಟ್ಟದಲ್ಲಿ ಅಮೆರಿಕ ದೇಶವು ‘ಗ್ರೇಟ್ ಡಿಪ್ರೆಶನ್’ಗೆ ಒಳಗಾಗಿತ್ತು; ಅಂದರೆ ದೇಶದ ಆರ್ಥಿಕತೆ ಹದಗೆಟ್ಟು ಜನರು ಬದುಕನ್ನು ಅರಸಿಕೊಂಡು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಗುಳೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿ ದೇಶ ನಲುಗುತ್ತಿತ್ತು. ಅಂತೆಯೇ, ಸ್ಟಾನ್ ಹೆತ್ತವರು ಅನ್ನವನ್ನು ಅರಸಿ ಒಂದು ಜಾಗದಿಂದ ಮತ್ತೊಂದಕ್ಕೆ ಗುಳೆ ಹೋಗುತ್ತಿದ್ದರು.
ಆರೇಳು ವರ್ಷದ ಸ್ಟಾನ್ ಬಡತನವನ್ನು ಹತ್ತಿರದಿಂದ ನೋಡಿದ್ದು, ಇದನ್ನು ಬದಲಿಸಲು ಏನೂ ಮಾಡಲಾಗದ ಅಸಹಾಯಕತೆ ಮುಂದೆ ಸೂಪರ್ ಪವರ್ ಇರುವ, ಎಲ್ಲಾ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿ ಸರಿಮಾಡಬಲ್ಲ ಕಾಲ್ಪನಿಕ ಹೀರೋಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಅಂದಿಗೆ ಯಾರಿಗೂ ಗೊತ್ತಿರಲಿಲ್ಲ. ‘ಇಮ್ಯಾಜಿನೇಷನ್’ ಎಂಬುದು ಜ್ಞಾನಕ್ಕಿಂತ ಹೆಚ್ಚು ಬಲಶಾಲಿ ಎನ್ನುವು ದನ್ನು ಸ್ಟಾನ್ ನಿಜ ಮಾಡುತ್ತಾರೆ.
ಅವರು ಟೀನೇಜ್‌ಗೆ ಬರುವ ಸಮಯಕ್ಕೆ ಒಂದು ಕೊಠಡಿಯ ಮನೆಯಲ್ಲಿ ವಾಸಿಸುವಷ್ಟರ ಮಟ್ಟಿಗೆ ಅವರ ಆರ್ಥಿಕತೆ ಸುಧಾರಿಸಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ ಎಂದರೆ, ಅದಕ್ಕಿಂತ ಮುಂಚಿ ನ ಅವರ ಬದುಕನ್ನು ಊಹಿಸಿಕೊಳ್ಳಬಹುದು. ಮೇಲಿನ ಸಾಲುಗಳಲ್ಲಿ ಹೇಳಿದಂತೆ, ಬಾಲಕ ಸ್ಟಾನ್ ಮಾನಸಿಕವಾಗಿ ಸಿರಿವಂತನಾಗಿದ್ದ. ಹೀಗಾಗಿ ಬದುಕಿನಲ್ಲಿದ್ದ ಹಣಕಾಸಿನ ಬಡತನ ಆತನನ್ನು ಕುಗ್ಗಿಸಲಿಲ್ಲ. ಆ ನೋವಿನಲ್ಲೂ ಆತನಿಗೆ ಬರೆಯುವ ಹುಚ್ಚು ಮತ್ತು ಆಸಕ್ತಿ ಹೆಚ್ಚಾಗಿತ್ತು. ಆದರೆ, ಎಲ್ಲಿಂದ ಮತ್ತು ಹೇಗೆ ಶುರುಮಾಡಬೇಕು ಎಂದು ಗೊತ್ತಿಲ್ಲದ ಕಾರಣ ವರ್ತಮಾನ ಪತ್ರಿಕೆ ಗಳಿಗೆ ಸತ್ತವರ ಬಗ್ಗೆ ಸಂತಾಪ ಬರೆಯುವುದು, ಕಾರ್ಯಕ್ರಮದ ಪ್ರೆಸ್ ನೋಟ್ ಬರೆದು ಕೊಡುವುದು ಮಾಡಿ ಒಂದಷ್ಟು ಪುಡಿಗಾಸು ಸಂಪಾದಿಸಲು ಶುರುಮಾಡಿದ.
ಆದರೆ ಇಷ್ಟು ಮಾಡುವುದರಿಂದ ಬದುಕಿನ ಬಂಡಿ ಎಳೆಯುವಲ್ಲಿ ಹೆತ್ತವರಿಗೆ ಹೆಚ್ಚು ಸಹಾಯ ಆಗುತ್ತಿಲ್ಲ ಎಂದು ಅವನಿಗೆ ಅನಿಸುತ್ತದೆ. ಹೀಗಾಗಿ, ತಮ್ಮ ಯೌವನದ ದಿನಗಳಲ್ಲಿ ಒಂದಲ್ಲ ಹತ್ತಾರು ಪುಡಿ ನೌಕರಿಯನ್ನು ಸ್ಟಾನ್ ಮಾಡುತ್ತಾರೆ. 15ನೇ ವಯಸ್ಸಿನಲ್ಲಿ ಹೈಸ್ಕೂಲ್ ಓದುತ್ತಿರು ವಾಗ ಜೀವನದ ಮೊದಲ ತಿರುವನ್ನು ಕಾಣುತ್ತಾರೆ.
ಮೊದಲ ಗೆಲುವು, ಮೊದಲ ಪ್ರವರ್ಧಮಾನವನ್ನು ಅವರು ಕಂಡಿದ್ದು ಆಗಲೇ. ಪ್ರಸಿದ್ಧ ‘ನ್ಯೂಯಾ ರ್ಕ್ ಹೆರಾಲ್ಡ್’ ಪತ್ರಿಕೆಯು ‘ಬಿಗ್ಗೆಸ್ಟ್ ನ್ಯೂಸ್ ಆಫ್ ದಿ ವೀಕ್ ಕಾಂಟೆಸ್ಟ್’ ಎನ್ನುವ ಸ್ಪರ್ಧೆಯನ್ನು ಏರ್ಪಡಿಸಿರುತ್ತದೆ. ಈ ಸ್ಪರ್ಧೆಯಲ್ಲಿ ಸ್ಟಾನ್ ಸತತವಾಗಿ 3 ವಾರ ಗೆಲ್ಲುತ್ತಾರೆ. ಈ ಸ್ಪರ್ಧೆಯ ಆಯೋ ಜಕರು, ‘ಬೇರೆಯವರು ಕೂಡ ಗೆಲ್ಲಲಿ, ನೀವು ಇನ್ನು ಸ್ಪರ್ಧಿಸುವುದು ಬೇಡ’ ಎಂದು ಹೇಳುತ್ತಾರೆ. ಇದು ಯುವಕ ಸ್ಟಾನ್‌ಗೆ ಅತೀವ ಆತ್ಮವಿಶ್ವಾಸವನ್ನು ನೀಡುತ್ತದೆ. ಅದೇ ಪತ್ರಿಕೆಯ ವರು, ‘ನೀವು ವೃತ್ತಿಪರ ಬರಹಗಾರರಾಗಲು ಪ್ರಯತ್ನಿಸಬಹುದು" ಎನ್ನುವ ಮಾತು ಗಳನ್ನು ಕೂಡ ಆಡುತ್ತಾರೆ.
ಸ್ಟಾನ್ ಅದೇ ವರ್ಷ ಬರೆದ ಕಥೆ 7ನೇ ಸ್ಥಾನ ಪಡೆಯುತ್ತದೆ, ಅದಕ್ಕೆ ಸಂಭಾವನೆಯಾಗಿ ಅವರಿಗೆ ಎರಡೂವರೆ ಡಾಲರ್ ಕೂಡ ಸಿಗುತ್ತದೆ. ಸ್ಟಾನ್ ವಿಶ್ವಪ್ರಸಿದ್ಧರಾದ ನಂತರ, “ನನ್ನ ಬದುಕನ್ನು ಬದಲಿಸಿದ್ದು ಆ ಸ್ಪರ್ಧೆ, ಆ ಕಥೆಗೆ ಸಿಕ್ಕ ಸಂಭಾವನೆ" ಎನ್ನುತ್ತಾರೆ. ಯಶಸ್ಸು ಎನ್ನುವುದು ಒಮ್ಮೆಲೇ ಬರುವುದಿಲ್ಲ. ನಿತ್ಯಜೀವನದಲ್ಲಿ ಸಿಗುವ ಸಣ್ಣ ಸಣ್ಣ ಗೆಲುವುಗಳ ಒಟ್ಟಾರೆ ಮೊತ್ತವೇ ಯಶಸ್ಸು. ಕೇವಲ ಎರಡೂವರೆ ಡಾಲರ್ ಪಡೆಯುವುದರಿಂದ ಶುರುವಾದ ಕಥೆ ಬರೆಯುವ ಪಯಣವು, ಮುಂದೆ ಸ್ಟಾನ್‌ರನ್ನು ‘ಮಲ್ಟಿ ಮಿಲಿಯನೇರ್’ ಮಾಡುತ್ತದೆ.
ಊಹೆಗೂ ಮೀರಿದ ಹಣವನ್ನು ಅವರು ಸಂಪಾದಿಸುತ್ತಾರೆ, ತಪ್ಪುಗಳಿಂದ ಕಳೆಯುತ್ತಾರೆ. ಸಾಯುವ ವೇಳೆಯಲ್ಲೂ ಸ್ಟಾನ್ ಅವರ ನೆಟ್‌ವರ್ತ್ 70 ಮಿಲಿಯನ್ ಡಾಲರ್ ಆಗಿತ್ತು. ಕಲ್ಪನೆಗೆ ಇರುವ ಶಕ್ತಿ ಯ ಸಣ್ಣ ಉದಾಹರಣೆಯಿದು. 1939ರಲ್ಲಿ ಟೈಮ್ಲಿ ಕಾಮಿಕ್ಸ್ ಡಿವಿಷನ್‌ಗೆ ಸಹಾಯಕರಾಗಿ ಸ್ಟಾನ್ ಸೇರಿಕೊಳ್ಳುತ್ತಾರೆ. ಪಲ್ಪ್ ಮ್ಯಾಗಜಿನ್ ಇದನ್ನು ಹೊರತರುತ್ತಿರುತ್ತದೆ. ಮುಂದೆ, ಅಂದರೆ 1960ರ ಸಮಯದಲ್ಲಿ ಇದು ‘ಮಾರ್ವೆಲ್ ಕಾಮಿಕ್ಸ್’ ಎನ್ನುವ ಹೆಸರಿನಲ್ಲಿ ವಿಶ್ವಮಾನ್ಯತೆಯನ್ನು ಪಡೆದು ಕೊಳ್ಳುತ್ತದೆ. ಆದರೆ ಅಂದಿಗೆ ಕಾಮಿಕ್ಸ್ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿರಲಿಲ್ಲ.
“ಎಲ್ಲಿ ಕೆಲಸ ಮಾಡುತ್ತೀರಿ?" ಎನ್ನುವುದೇ ಜನಸಾಮಾನ್ಯರ ಮೊದಲ ಮಾತು ಆಗಿರುತ್ತದೆ. ಯಾರಾ ದರೂ ಹೀಗೆ ಕೇಳಿದಾಗ, “ಕಾಮಿಕ್ಸ್ ಬುಕ್ಸ್‌ನಲ್ಲಿ ಸಹಾಯಕನಾಗಿ ಬರೆಯುತ್ತಿದ್ದೇನೆ" ಎಂದರೆ ಜನ ಏನಂದುಕೊಂಡಾರು? ಎನ್ನುವ ಭಯದಲ್ಲಿ ಸ್ಟಾನ್ ತಮ್ಮ ಪೆನ್‌ನೇಮ್ ಆಗಿ ‘ಸ್ಟಾನ್ಲಿ’ ಎಂಬ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಮುಂದೆ ಅದನ್ನೇ ಲೀಗಲ್ ನೇಮ್ ಆಗಿ ಕೂಡ ಮಾಡಿಕೊಳ್ಳುತ್ತಾರೆ.
1941ರಲ್ಲಿ ಇವರು ರಚಿಸಿದ ‘ಕ್ಯಾಪ್ಟನ್ ಅಮೆರಿಕ’ ಪುಸ್ತಕ ಮನೆಮಾತಾಗುತ್ತದೆ. ಅದು ಕಾಮಿಕ್ಸ್ ಇಂಡಸ್ಟ್ರಿಗೆ ಸ್ವರ್ಣಯುಗಾರಂಭ ಕೂಡ ಆಗುತ್ತದೆ. ನಂತರ ಅವರ ‘ಕಾಮಿಕ್ಸ್ ದಿ ಡೆಸ್ಟ್ರಾಯರ್’ ಕೂಡ ಪ್ರಸಿದ್ಧವಾಗುತ್ತದೆ. 1942-1945ರ ಅವಧಿಯಲ್ಲಿ ಅಮೆರಿಕದ ಸೇನೆಯಲ್ಲೂ ಸೇವೆ ಸಲ್ಲಿಸು ತ್ತಾರೆ, 1946ರಲ್ಲಿ ಕಾಮಿಕ್ಸ್ ಲೋಕಕ್ಕೆ ಮರಳುತ್ತಾರೆ, 1947ರಲ್ಲಿ ಒಂದು ಕಾಮಿಕ್ ಬುಕ್ ಬರೆಯು ತ್ತಾರೆ.
ಅಲ್ಲಿಂದ 1961ರವರೆಗೆ ಜೀವನದ ಗತಿ ಪರವಾಗಿಲ್ಲ ಎನ್ನುವಂತಿರುತ್ತದೆ. ಯಾವುದನ್ನೇ ಆಗಲಿ ಸೋತೆವು ಎಂದು ಬಿಡಬಾರದು ಎನ್ನುವುದಕ್ಕೆ ಸ್ಟಾನ್ ಉತ್ತಮ ನಿದರ್ಶನ. ಅವರು ತಾವು ಮಾಡು ತ್ತಿದ್ದ ಕೆಲಸದಲ್ಲಿ ನಂಬಿಕೆಯಿಟ್ಟು ತಾಳ್ಮೆಯಿಂದ ಕಾದರು. 1961ರಲ್ಲಿ ‘ದಿ ಫೆಂಟಾಸ್ಟಿಕ್ ಫಾರ್’ ಎನ್ನುವ ಕಾಮಿಕ್ಸ್ ಬರೆಯುತ್ತಾರೆ. ಅದು ಅಮೆರಿಕ ಮಾತ್ರವಲ್ಲದೆ ಜಗತ್ತಿನಾದ್ಯಂತ ಹೆಸರು ತಂದು ಕೊಡುತ್ತದೆ. ಇಂದಿಗೂ ಈ ಕಾಮಿಕ್‌ನ ಹೆಸರು ಕೇಳದವರಿಲ್ಲ.
ನಂತರದ ವರ್ಷದಲ್ಲಿ, ಅಂದರೆ 1962ರಲ್ಲಿ ಸ್ಪೈಡರ್‌ಮ್ಯಾನ್, ಥೋರ್, ಹಲ್ಕ್ ಎನ್ನುವ ಪಾತ್ರ ಗಳನ್ನು ಸೃಷ್ಟಿಸುತ್ತಾರೆ. 1963ರಲ್ಲಿ ‘ಎಕ್ಸ್ ಮ್ಯಾನ್’ ಉದಯಿಸುತ್ತಾನೆ. ಡಾಕ್ಟರ್ ಸ್ಟ್ರೇಂಜ್, ಡೇರ್ ಡೆವಿಲ್, ವಂಡರ್‌ಮ್ಯಾನ್, ಬ್ಲ್ಯಾಕ್ ಪ್ಯಾಂಥರ್, ಕ್ಯಾಪ್ಟನ್ ಮಾರ್ವೆಲ್ ಹೀಗೆ ಒಟ್ಟಾರೆ 300ಕ್ಕೂ ಹೆಚ್ಚು ಪಾತ್ರಗಳನ್ನು ಸೃಷ್ಟಿಸುತ್ತಾರೆ.
ಸ್ಪೈಡರ್‌ಮ್ಯಾನ್ ಮತ್ತು ಎಕ್ಸ್ ಮ್ಯಾನ್ ಅಮೆರಿಕದ ಸಂಸ್ಕೃತಿಯ ಭಾಗವಾಗಿ ಹೋಗಿದ್ದಾರೆ. ಜಗತ್ತಿನ ವಿಷಯಕ್ಕೆ ಬಂದರೂ ಹೆಚ್ಚುಕಡಿಮೆ ಈ ಕಾಲ್ಪನಿಕ ಹೀರೋಗಳು, ಜೀವವಿರುವ ಹೀರೋ ಗಳಿಗಿಂತ ಹೆಚ್ಚೇ ಪ್ರಸಿದ್ಧರು. 1922ರ ಡಿಸೆಂಬರ್ 28ರಂದು ಜನಿಸಿದ ಸ್ಟಾನ್, 2018ರ ನವೆಂಬರ್ 12ರಂದು ಈ ಜಗತ್ತಿಗೆ ‘ಗುಡ್ ಬೈ’ ಹೇಳಿ ಹೊರಡುವ ಮುನ್ನ 96 ವರ್ಷಗಳ ತುಂಬುಜೀವನವನ್ನ ಸವೆಸಿದ್ದರು.
ಹೆಸರು, ಹಣದ ಜತೆಗೆ ಅದನ್ನ ಅನುಭವಿಸಲು ಆಯಸ್ಸು ಕೂಡ ಸಿಕ್ಕಿದ್ದು ಸುಕೃತ. ಜಗತ್ತಿಗೆ ತನ್ನ ಮೊದಲ ಹಿಟ್ ಕಾಮಿಕ್ ‘ದಿ ಫೆಂಟಾಸ್ಟಿಕ್ ಫಾರ್’ ಕೊಟ್ಟಾಗ ಸ್ಟಾನ್‌ಗಿನ್ನೂ 39 ತುಂಬಿರಲಿಲ್ಲ! ಇದಾಗಿ ಕೆಲವೇ ವರ್ಷದಲ್ಲಿ ಲೆಜೆಂಡರಿ ಮಾರ್ವೆಲ್ ಯೂನಿವರ್ಸ್ ಅನ್ನು ಸೃಷ್ಟಿಸುತ್ತಾರೆ. ಲಾರ್ಜ ರ್ ದ್ಯಾನ್ ಲೈಫ್ ಕಾಮಿಕ್ ಹೀರೋಗಳಾದ ಸ್ಪೈಡರ್ ಮ್ಯಾನ್ ಮತ್ತು ಎಕ್ಸ್ ಮ್ಯಾನ್‌ಗಳ ಉದಯ ವಾಗುತ್ತದೆ.
ಅಮೆರಿಕದ ಜತೆಗೆ ಇವರು ವಿಶ್ವದ ಮನೆಮಾತಾಗುತ್ತಾರೆ. 1960 ರಿಂದ 1990ರವರೆಗೆ ಜಾಗತಿಕ ಮಟ್ಟದ ಮನ್ನಣೆ, ಯಶಸ್ಸು ಸಿಗುವ ಮಧ್ಯೆ, ಕಾಮಿಕ್ಸ್ ಬುಕ್ ಎಂದರೆ ಹೀಗೆ ಇರಬೇಕು ಎನ್ನುವ ಕಮಿಟಿಯ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅದರ ವಿರುದ್ಧ ಕಾನೂನು ಸಮರ ಸಾರುತ್ತಾರೆ. ಕೊನೆಗೂ ಆ ಸಂಸ್ಥೆ ತನ್ನ ರೀತಿ-ನೀತಿ-ನಿಯಮಗಳನ್ನು ಬದಲಿಸಿಕೊಳ್ಳುತ್ತದೆ. ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಅಂದರೆ 1990ರಲ್ಲಿ ಮಾರ್ವೆಲ್ ಸಂಸ್ಥೆಯಿಂದ ಹೊರಬರುತ್ತಾರೆ.
ವಾರ್ಷಿಕವಾಗಿ ಒಂದು ಮಿಲಿಯನ್ ಡಾಲರ್ ಹಣವನ್ನು ನೀಡುವುದರ ಜತೆಗೆ, ಬದುಕಿರುವವರೆಗೂ ಮಾರ್ವೆಲ್ ಸಂಸ್ಥೆಯ ‘ಗೌರವ ಚೇರ್ಮನ್’ ಎನ್ನುವ ಪಟ್ಟವನ್ನು ನೀಡಲು ಒಪ್ಪಂದವಾಗುತ್ತದೆ. 1998ರಲ್ಲಿ ಪೀಟರ್ ಪೌಲ್ ಎನ್ನುವವರ ಜತೆ ಸೇರಿಕೊಂಡು ‘ಸ್ಟಾನ್ಲಿ ಮೀಡಿಯಾ’ ಎನ್ನುವ ಸಂಸ್ಥೆ ಯನ್ನು ತೆರೆಯುತ್ತಾರೆ. ಸೂಪರ್ ಹೀರೋ ಕ್ರಿಯೇಷನ್, ಪ್ರೊಡಕ್ಷನ್ ಆಂಡ್ ಮಾರ್ಕೆಟಿಂಗ್ ಮಾಡುವ ಇಂಟರ್ನೆಟ್ ಬೇಸ್ಡ್ ಸಂಸ್ಥೆ ಇದಾಗಿರುತ್ತದೆ. ಎರಡು ಸಾವಿರದ ಇಸವಿಯ ಡಾಟ್‌ಕಾಂ ಬಬಲ್ ಒಡೆಯುತ್ತದೆ. ಅಲ್ಲದೆ, ಪೌಲ್ ಇನ್ನಿತರ ಹೂಡಿಕೆದಾರರ ಜತೆ ಸೇರಿಕೊಂಡು ಷೇರುಗಳ ಮೌಲ್ಯದಲ್ಲಿ ಏರುಪೇರು ಮಾಡಿರುವುದಾಗಿ ಸ್ಟಾಕ್ ಎಕ್ಸ್‌ಚೇಂಜ್ ದೂರುತ್ತದೆ.
2001 ರಲ್ಲಿ ಸಂಸ್ಥೆ ದಿವಾಳಿ ಘೋಷಿಸಿಕೊಳ್ಳುತ್ತದೆ. ಸ್ಟಾನ್ಲಿ ಇದರಲ್ಲಿ ಭಾಗಿಯಾಗಿಲ್ಲ ಎಂದು ಸ್ವತಃ ಸ್ಟಾನ್ಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಕೊನೆಗೆ ಈ ಕೇಸ್‌ನಲ್ಲಿ ಅವರು ಭಾಗಿಯಲ್ಲ ಎಂದು ನ್ಯಾಯಾಲಯ ಘೋಷಿಸುತ್ತದೆ. ಸ್ಟಾನ್ಲಿ ಮೀಡಿಯಾ ದಿವಾಳಿಯಾದ ವರ್ಷ, ಅಂದರೆ 2001ರಲ್ಲೇ ಅದಕ್ಕೆ ಉತ್ತರ ಎನ್ನುವಂತೆ
ಸ್ಟಾನ್ಲಿ PuU ಎನ್ನುವ ಸಂಸ್ಥೆಯನ್ನು ಇನ್ನಿಬ್ಬರ ಜತೆಗೆ ಸೇರಿ ಕಟ್ಟುತ್ತಾರೆ. ಅವರ ಸ್ಟಾನ್ಲಿ ಮೀಡಿಯಾ ಸಂಸ್ಥೆಯನ್ನು 2007ರಲ್ಲಿ ಬೇರೆ ಹೂಡಿಕೆದಾರರು ಕೊಳ್ಳುತ್ತಾರೆ. ಕೊಂಡ ತಕ್ಷಣ, ತಮ್ಮಲ್ಲಿನ ಜ್ಞಾನ ಮತ್ತು ಕ್ಯಾರೆಕ್ಟರ್ ಬಳಸಿಕೊಂಡಿರುವುದಾಗಿ PuU ಸಂಸ್ಥೆಯ ಮೇಲೆ ಕೇಸು ಹಾಕುತ್ತಾರೆ. ಈ ಮಧ್ಯೆ 2002ರಲ್ಲಿ ತಾವು ಹೊರಬಂದಿದ್ದ ಮಾರ್ವೆಲ್ ಸಂಸ್ಥೆಯ ಮೇಲೆ, ಸ್ಪೈಡರ್‌ಮ್ಯಾನ್ ಮೊದಲ ಚಿತ್ರದ ಲಾಭದಲ್ಲಿ ಭಾಗ ನೀಡಿಲ್ಲ ಎಂದು ಸ್ಟಾನ್ಲಿ ಕೇಸು ಹಾಕುತ್ತಾರೆ, ಬರೋಬ್ಬರಿ 10 ಮಿಲಿಯನ್ ಡಾಲರ್ ಪರಿಹಾರವನ್ನು ಕೇಳಿರುತ್ತಾರೆ.
2005ರಲ್ಲಿ ಈ ಕೇಸನ್ನು ಗೆಲ್ಲುತ್ತಾರೆ. ಇಂದಿಗೆ, ಅಂದರೆ ಸ್ಟಾನ್ಲಿ ಸಾವಿನ ನಂತರ 2020ರಿಂದ ಮಾರ್ವೆ ಲ್, ಜೀನಿಯಸ್ ಬ್ರಾಂಡ್ಸ್, PuU ಎಂಟರ್‌ಟೈನ್ ಮೆಂಟ್ ಮೂರೂ ಸಂಸ್ಥೆಗಳು ಸ್ಟಾನ್ಲಿ ಹೆಸರನ್ನು ತಮ್ಮ ಚಿತ್ರಗಳು ಮತ್ತು ಪುಸ್ತಕಗಳಲ್ಲಿ ಬಳಸಿಕೊಳ್ಳುವ ಹಕ್ಕುಗಳನ್ನು ಹಣ ಕೊಟ್ಟು ಪಡೆದು ಕೊಂಡಿವೆ. ಸ್ಟಾನ್ಲಿ ಇದ್ದಾಗ ಆಗುತ್ತಿದ್ದ ಬಿಸಿನೆಸ್, ಅವರು ಸತ್ತ ನಂತರವೂ ಆಗುತ್ತಿದೆ. ಅವರು ಸೃಷ್ಟಿಸಿದ ಸೂಪರ್ ಹೀರೋಗಳಿಗೆ ಸಾವಿಲ್ಲ ನೋಡಿ!