ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಮೋದಿಯನ್ನೂ ಮರೆಸುವವ ಸಿಗುವುದಾದರೆ ಸರಿ

75 ವರ್ಷ ತುಂಬಿದ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು ಎಂಬ ಮೋಹನ್ ಭಾಗವತ್ ಮಾತು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಆಡಿರುವಂಥದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಈ ವರ್ಷದ ಸೆಪ್ಟೆಂಬರ್‌ಗೆ ಮೋದಿಯವರು 75 ವರ್ಷ ಪೂರೈಸ ಲಿದ್ದಾರೆ.

ಮೋದಿಯನ್ನೂ ಮರೆಸುವವ ಸಿಗುವುದಾದರೆ ಸರಿ

ವಿದ್ಯಮಾನ

vinayakavbhat@autoaxle.com

ಬದಲಾವಣೆ ಜಗದ ನಿಯಮ. ಅದು ಅಪೇಕ್ಷಿತವಲ್ಲದಿದ್ದರೂ ಬದಲಾವಣೆಯನ್ನು ತಡೆದು ನಿಲ್ಲಿಸಲಂತೂ ಸಾಧ್ಯವಿಲ್ಲ. ನದಿಯ ನೀರಿನಂತೆ ಚಲನಶೀಲತೆಯೇ ಅದರ ಧರ್ಮವಾಗಿರುತ್ತದೆ. ನಾವಿದ್ದ ಜಾಗದಿಂದ ಹಳೆನೀರು ಹೋಗಿ ಹೊಸನೀರು ಬರುತ್ತಲೇ ಇರುತ್ತದೆ. ಒಬ್ಬ ಗೃಹಸ್ಥನ ದೇಹದ ಮೇಲೆ ಸುಕ್ಕುಗಳು ಕಾಣಲು, ಕೂದಲು ಬಿಳಿ ಬಣ್ಣಕ್ಕೆ ಹೊರಳಲು ಶುರುವಾದಾಗ, ಮೊಮ್ಮ ಕ್ಕಳು ಮನೆಯಲ್ಲಿ ಆಡುತ್ತಿರುವುದನ್ನು ಆತ ಕಂಡಾಗ, ತನ್ನ ಕರ್ತವ್ಯಗಳು ಮುಗಿದವು ಎಂದು ಕೊಂಡು, ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ಅವನು ಕಾಡಿನ ದಾರಿಯನ್ನು ನೋಡಿಕೊಳ್ಳಬೇಕು, ವಾನಪ್ರಸ್ಥಾಶ್ರಮಿಯಾಗಿ ಶೇಷಾಯುಷ್ಯವನ್ನು ಶಾಂತಿಯಿಂದ ಕಳೆಯಬೇಕು ಎಂಬುದು ಮನು ಮುಂತಾದ ಪ್ರಾಚೀನ ಸ್ಮೃತಿಕಾರರು ನಮಗೆ ವಿಧಿಸಿದ ಕಟ್ಟಳೆಯಾಗಿದೆ.

‘ಇಲ್ಲ, ನಾನು ಈ ಕುಟುಂಬಕ್ಕೆ ಅನಿವಾರ್ಯವಾಗಿದ್ದೇನೆ, ನನ್ನನ್ನು ಬಿಟ್ಟರೆ ಈ ಕುಟುಂಬ ಅನಾಥ ವಾಗಿಬಿಡುತ್ತದೆ’ ಎನ್ನುವ ಭ್ರಮೆಯಿಂದ, ಯಜಮಾನಿಕೆಯ ಕೀಲಿಕೈಯನ್ನು ಮಕ್ಕಳಿಗೆ ನಿಸ್ಪೃಹತೆ ಯಿಂದ ಹಸ್ತಾಂತರಿಸದೇ ತನ್ನ ಉಳಿಸಿಕೊಂಡು ಸಾಗಿದರೆ, ಸಂಸಾರದಲ್ಲಿ ಆತ ತಿರಸ್ಕೃತನಾಗುತ್ತಾನೆ ಎನ್ನುವ ಪಾಠವನ್ನು ನಮ್ಮ ಪ್ರಾಚೀನರು ಹೇಳಿದ್ದಾರೆ.

ಆದರೆ, ಕುಟುಂಬದ ಒಬ್ಬ ಯಜಮಾನನಿಂದ ಹಿಡಿದು, ಪೀಠಾಧಿಪತಿಗಳು, ಸಿನಿತಾರೆಯರು, ಕ್ರೀಡಾಲೋಕದ ದಿಗ್ಗಜರು ಹಾಗೂ ಅಧಿಕಾರದಲ್ಲಿರುವ ರಾಜಕಾರಣಿಗಳವರೆಗೆ ಎಲ್ಲರಿಗೂ ತಮಗಿಂತ ಮೊದಲು ಈ ಜಾಗದಲ್ಲಿ ಬೇರೆಯವರಿದ್ದರು, ಸಮಯಸಂದಾಗ ತಾವೂ ಬೇರೆಯವರಿಗೆ ಅವಕಾಶ ನೀಡುವ ಮೂಲಕ ತಮಗಿರುವ ಅಧಿಕಾರವನ್ನು ಸುಗಮವಾಗಿ ಬಿಟ್ಟುಕೊಟ್ಟು ನಿರಾಳರಾಗಬೇಕು ಎನ್ನುವ ಮನಸ್ಸೇ ಬರುವುದಿಲ್ಲ ಎನ್ನುವುದು ವಾಸ್ತವ.

7 R

ಈ ವಿಷಯವನ್ನು ಈಗ ಹೇಳುತ್ತಿರುವುದೇಕೆಂದರೆ, ಭಾರತದ ಅತ್ಯಂತ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಅಮಿತ್ ಶಾ ಅವರು ತಮ್ಮ ನಿವೃತ್ತಿ ಜೀವನದ ಕನಸುಗಳನ್ನು ಬಿಚ್ಚಿಡುತ್ತಾ, “ವೇದೋ ಪನಿಷತ್ತುಗಳ ಅಧ್ಯಯನ ಮತ್ತು ಸಾವಯವ ಕೃಷಿಗೆ ನನ್ನ ಸಮಯವನ್ನು ಮೀಸಲಿಡಲು ಬಯಸು ತ್ತೇನೆ" ಎಂದಿದ್ದರು.

ಆದರೆ ತಾವು ಯಾವಾಗ ನಿವೃತ್ತರಾಗುವುದು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಅದೇ ರೀತಿ, ಕಳೆದ ಬುಧವಾರ ನಾಗ್ಪುರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಿದ್ಧಾಂತವಾದಿ ಯಾಗಿದ್ದ ದಿವಂಗತ ಮೋರೋಪಂತ ಪಿಂಗಳೆಯವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, “75 ವರ್ಷ ತುಂಬಿದಾಗ, ಜೀವ ಮಾನದ ಸಾಧನೆಗಾಗಿ ನಿಮಗೆ ಶಾಲು ಹೊದಿಸಿ ಸನ್ಮಾನಿಸಿದರು ಅಂತಾದರೆ, ನಿಮ್ಮ ಕೆಲಸ ವಾಯಿತು, ಇನ್ನು ಇತರರಿಗೆ ದಾರಿ ಮಾಡಿಕೊಡಬೇಕು ಎಂದು ತಿಳಿದುಕೊಳ್ಳಬೇಕು ಎಂದು ಪಿಂಗಳೆಯವರು ಹೇಳುತ್ತಿದ್ದರು" ಎಂದು ಉಲ್ಲೇಖಿಸಿ, ಪಿಂಗಳೆಯವರ ಅಭಿಪ್ರಾಯವನ್ನು ಸಮರ್ಥಿಸಿದ್ದರು.

75 ವರ್ಷ ತುಂಬಿದ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು ಎಂಬ ಮೋಹನ್ ಭಾಗವತ್ ಮಾತು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಆಡಿರುವಂಥದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಈ ವರ್ಷದ ಸೆಪ್ಟೆಂಬರ್‌ಗೆ ಮೋದಿಯವರು 75 ವರ್ಷ ಪೂರೈಸಲಿದ್ದಾರೆ.

ಇದನ್ನೂ ಓದಿ: Vinayak V Bhat Column: ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ಭಾಗವತ್ ಅವರ ಹೇಳಿಕೆಯು ಬಿಜೆಪಿಯ ‘75 ವರ್ಷದ ನಿವೃತ್ತಿ ಸೂತ್ರ’ವನ್ನು ಮತ್ತೆ ಚರ್ಚೆಗೆ ತಂದಿದೆ. ಮೋದಿಯವರಿಗೆ ಆರೆಸ್ಸೆಸ್ ನೀಡಿರುವ ಸೂಕ್ಷ್ಮ ಸಂದೇಶವಿದು ಎಂದೇ ಬಣ್ಣಿಸಲಾಗುತ್ತಿದೆ. ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾಗುವ ಹೊತ್ತಿಗೆ, ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಜಸ್ವಂತ್ ಸಿಂಗ್ ಅವರಂಥ ನಾಯಕರು 75 ವರ್ಷದ ಆಸುಪಾಸಿ ನಲ್ಲಿದ್ದರು.

ವಯಸ್ಸಿನ ಕಾರಣ ನೀಡಿ ಅವರನ್ನು ಮೋದಿಯವರು ಮಾರ್ಗದರ್ಶಕ ಮಂಡಳಿಗೆ ಸೇರಿಸಿ, ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವಂತೆ ಮಾಡಿದ್ದರು. ಈಗ ತಾವೂ ಅದೇ ನಿಯಮವನ್ನು ಪಾಲಿಸುತ್ತಾರೋ ಎಂದು ಕುತೂಹಲದಿಂದ ಕಾದು ನೋಡುತ್ತಿರುವವರಿದ್ದಾರೆ.

ಮೋದಿ 2029ರವರೆಗೆ ಸರಕಾರವನ್ನು ಮುನ್ನಡೆಸಲಿದ್ದಾರೆ. ಮಧ್ಯದಲ್ಲಿ ನಿವೃತ್ತಿ ಹೊಂದುತ್ತಾರೆ ಎನ್ನುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಬಿಜೆಪಿಯ ಸಂವಿಧಾನದಲ್ಲಿ ನಿವೃತ್ತಿಯ ಷರತ್ತು ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಸ್ಪಷ್ಟಪಡಿಸಿದ್ದನ್ನು ನೆನಪಿಸಿಕೊಳ್ಳ ಬಹುದು. ಇದು ಮೋದಿಯವರಿಗೆ ಮೋಹನ್ ಭಾಗವತರು ಪರೋಕ್ಷವಾಗಿ ನೀಡುತ್ತಿರುವ ಸಂದೇಶ ಎಂದು ಬಣ್ಣಿಸುವವರು, ಸ್ವತಃ ಮೋಹನ್ ಭಾಗವತ್ ಅವರು ಕೂಡ ಬರುವ ಸೆಪ್ಟೆಂಬರ್‌ಗೆ 75 ವರ್ಷಗಳನ್ನು ಪೂರೈಸಲಿದ್ದಾರೆ ಎನ್ನುವುದನ್ನು ನೆನಪಿನಲ್ಲಿಡಬೇಕು.

ಕಳೆದ ಒಂದೂ ಕಾಲು ದಶಕದಿಂದ ದೇಶವನ್ನು ಅತ್ಯಂತ ದಕ್ಷತೆಯಿಂದ, ಪ್ರಧಾನಿಯಾಗಿ ಮುನ್ನಡೆಸಿ ಮಿಂಚಿದ ಮೋದಿಯವರು ನಾಳೆಯಿಂದ ಆ ಸ್ಥಾನದಲ್ಲಿ ಇರುವುದಿಲ್ಲ ಎನ್ನುವುದು, ನಮ್ಮ ಊಹೆಗೂ ನಿಲುಕದ ಹಾಗೂ ಫಕ್ಕನೆ ದಕ್ಕಿಸಿಕೊಳ್ಳಲಾಗದ ಸಂಗತಿಯಾಗಿರುವುದು ಸ್ವಾಭಾವಿಕವೇ ಆಗಿದೆ. ಏಕೆಂದರೆ, ‘ಪ್ರಧಾನಿ ಎಂದರೆ ಮೋದಿ’ ಎನ್ನುವಂತೆ ಅವರು ನಡೆದುಕೊಂಡಿ ದ್ದಾರೆ. ಅವರ ಸ್ವಾರ್ಥರಹಿತ, ಸೇವಾಭಾವದ ಜೀವನ ಮತ್ತು ಕಾರ್ಯಶೈಲಿಗಳು ದೇಶದಲ್ಲಷ್ಟೇ ಅಲ್ಲ, ಜಾಗತಿಕವಾಗಿ ಕೂಡ ಭಾರತದ ಪ್ರಧಾನಮಂತ್ರಿಗಳ ಸ್ಥಾನವನ್ನು ಅತ್ಯಂತ ಗೌರವದಿಂದ ನೋಡುವ ಹಾಗೆ ಮಾಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಹಾಗಾಗಿ, ಮೋದಿಯವರಂಥ ವರ್ಚಸ್ವಿ ನಾಯಕನನ್ನು ಕಳೆದುಕೊಳ್ಳಲು ಯಾವ ದೇಶವಾಸಿಯೂ ಬಯಸುವುದಿಲ್ಲ. ಕಾರಣ, ಇಂಥವರು ಇನ್ನೊಬ್ಬರು ಸಿಗಬಹುದು ಎನ್ನುವ ಭರವಸೆಯಿಲ್ಲ. ಆದರೆ, ಕಾಲಾಘಾತಕ್ಕೆ ಎಲ್ಲರೂ ಮಣಿಯಲೇಬೇಕಲ್ಲವೇ? ಜತೆಗೆ ಅವರನ್ನೂ ಮೀರಿಸುವ ಉತ್ತಮಿಕೆ ಹೊಂದಿರುವವನೊಬ್ಬ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತೆಯೂ ಇಲ್ಲ ತಾನೆ? ನಮಗೆಲ್ಲ ತಿಳಿವಳಿಕೆ ಬರುವ ಹೊತ್ತಿಗೆ, ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಅವರು ನಿವೃತ್ತಿಯ ಅಂಚಿನಲ್ಲಿದ್ದರು.

ಇನ್ನು ಭಾರತಕ್ಕೆ ಕ್ರಿಕೆಟ್‌ನಲ್ಲಿ ಭವಿಷ್ಯವಿಲ್ಲ ಎಂತಲೇ ಆಗ ಜನ ಭಾವಿಸಿದ್ದರು. ಆದರೆ, ಮೂರು ಗಾವಸ್ಕರ್‌ಗೆ ಸಮನಾಗಬಲ್ಲ, ಕ್ರಿಕೆಟ್ ಲೋಕಕ್ಕೆ ದೇವರೆನಿಸಿಕೊಳ್ಳಬಲ್ಲ ಸಚಿನ್ ತೆಂಡೂಲ್ಕರ್ ಎಂಬ ದೈತ್ಯಪ್ರತಿಭಾವಂತ, ಗಾವಸ್ಕರ್ ಅವರ ಪಕ್ಕದ ಮನೆಯ ಹುಟ್ಟಿದ್ದ. ಸಚಿನ್ ನಂತರ ಭಾರತದ ಕ್ರಿಕೆಟ್ ಭವಿಷ್ಯ ಉಡುಗಿಹೋಯಿತಾ? ಇಲ್ಲ.

ಮೂರೂ ಸ್ತರಗಳಲ್ಲಿ ಪ್ರಶಸ್ತಿ ಗೆಲ್ಲುವಂತೆ ಮಾಡಿದ, ಮಹೇಂದ್ರ ಸಿಂಗ್ ಧೋನಿ ಎಂಬ ಜಗದೇಕಮಲ್ಲ ಸಿಕ್ಕ, ಆಮೇಲೆ ವಿರಾಟ್, ಮತ್ತೆ ರೋಹಿತ್. ಈಗ, ಮೊನ್ನೆ ಮೊನ್ನೆ ತಾನೇ ಕಣ್ಣುಬಿಟ್ಟ ಶುಭಮನ್ ತನ್ನ ನಾಯಕತ್ವದಲ್ಲಿ, ಹಿರಿಯರಿಲ್ಲದ ತಂಡವನ್ನು ಮುನ್ನಡೆಸಿ ಇಂಗ್ಲೆಂಡಿನಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಭಾರತದ ಕ್ರಿಕೆಟ್ ಭವಿಷ್ಯ ಉಜ್ವಲವಾಗಿದೆ ಎನ್ನುವುದರ ಜತೆಗೆ ಇಲ್ಲಿ ಯಾರೂ ಅನಿವಾರ್ಯವಲ್ಲ ಎನ್ನುವ ಸಂದೇಶವಿತ್ತ.

ಭೀಮ್‌ಸೇನ್ ಜೋಶಿ, ಲತಾ ಮಂಗೇಶ್ಕರ್ ಅವರಂಥ ದಿಗ್ಗಜರು ಹಾಡುವುದನ್ನು ನಿಲ್ಲಿಸಿದಾಗ, ಸಂಗೀತಲೋಕ ಸ್ತಬ್ಧವಾಗಲಿಲ್ಲ. ಅವರ ಹೆಸರು ಹೇಳಿಕೊಂಡು ಸಾವಿರಾರು ಯುವಗಾಯಕರು ಮುನ್ನೆಲೆಗೆ ಬರುವಂತಾಯ್ತು. ಧೀರೂಭಾಯಿ ಅಂಬಾನಿಯವರೊಂದಿಗೆ ರಿಲಯನ್ಸ್ ಸಂಸ್ಥೆ ಕಳೆದು ಹೋಗಲಿಲ್ಲ, ಹೊಸ ನಾಯಕತ್ವದಲ್ಲಿ ಇನ್ನೂ ಹೆಚ್ಚಿನದಾಗಿ ಬೆಳೆಯಿತು.

ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ಇಂದಿರಾರನ್ನು ಬಿಟ್ಟರೆ ದೇಶವನ್ನು ಮುನ್ನಡೆಸಬಲ್ಲ ವ್ಯಕ್ತಿ ಇನ್ನಾರಿಲ್ಲ ಎನ್ನುವ ಪರಿಸ್ಥಿತಿ ಅದಾಗಿತ್ತು. ಆ ಮಟ್ಟದ ಪ್ರಶ್ನಾತೀತ ನಾಯಕಿಯಾಗಿದ್ದವರು ಇಂದಿರಾ. ಇಡೀ ದೇಶದಲ್ಲಿ, ಅವರಿಗೆ ಹತ್ತಿರದ ಸ್ಪರ್ಧಿಯೂ ಇರಲಿಲ್ಲ. ದೇಶಕ್ಕೆ ಇಂದಿರಾ ಬಿಟ್ಟರೆ ಇನ್ನಾರಿಲ್ಲ ಎನ್ನುವಷ್ಟು ಅನಿವಾರ್ಯವಾಗಿದ್ದರು.

ನಿಮಗೆ ವಯಸ್ಸಾಯಿತು, ಈಗ ಬೇರೆಯವರನ್ನು ಈ ಹುದ್ದೆಗೇರಿಸೋಣ ಎನ್ನುವ ಧೈರ್ಯ ಆ ಪಕ್ಷದಲ್ಲಿ ಯಾರಿಗೂ ಇರಲಿಲ್ಲ. ಆದರೆ, ಅವರು ದುರದೃಷ್ಟವಶಾತ್ ಅಂಗರಕ್ಷಕರ ಗುಂಡಿನ ದಾಳಿಗೆ ಬಲಿಯಾದಾಗ, ರಾಜೀವ್ ಗಾಂಧಿಯವರು ಆಕಸ್ಮಿಕವಾಗಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಬೇಕಾಗಿ ಬಂತಲ್ಲವೇ? ಒಂದು ಮಟ್ಟದಲ್ಲಿ ಇಂದಿರಾರಿಗಿಂತ ಪಾರದರ್ಶಕ, ಸ್ವಚ್ಛ ಹಾಗೂ ಜನಮೆಚ್ಚುವ ಆಡಳಿತವನ್ನೇ ಅವರು ನೀಡಿದರು, ವಿವಿಧ ಆಯಾಮಗಳಲ್ಲಿ ಜನರ ನಿರೀಕ್ಷೆಗೂ ಮೀರಿ ದೇಶವು ಮುನ್ನಡೆ ಸಾಧಿಸುವಂತೆ ಮಾಡಿ ತೋರಿಸಿದರು ಕೂಡಾ. ರಾಜೀವರೂ ಅನಿರೀಕ್ಷಿತವಾಗಿ ಉಗ್ರದಾಳಿಯಲ್ಲಿ ಹತರಾದಾಗ, ಪಿ.ವಿ.ನರಸಿಂಹರಾಯರಿಗೆ ದೇಶವನ್ನು ಮುನ್ನಡೆಸುವ ಅವಕಾಶ ಒದಗಿತು.

ಆರ್ಥಿಕವಾಗಿ ಅತ್ಯಂತ ದುರ್ಭರ ಸ್ಥಿತಿಯಲ್ಲಿದ್ದ ಭಾರತವನ್ನು, ತಮ್ಮ ವಿಚಕ್ಷಣತೆಯಿಂದ ಸದೃಢ ಶಕ್ತಿಯನ್ನಾಗಿಸಿದ ಕೀರ್ತಿ ಗಳಿಸಿದರು ರಾಯರು. ಮುಂದೆ, ಅಷ್ಟಾಗಿ ರಾಜಕೀಯ ಅನುಭವವಿಲ್ಲದ ಮನಮೋಹನ ಸಿಂಗರಿಗೆ ಈ ಅವಕಾಶ 2 ಬಾರಿ ದೊರೆಯಿತು. ಅವರೂ ಒಂದು ಮಟ್ಟದ ಯಶಸ್ಸನ್ನೇ ಗಳಿಸಿದರು ಎನ್ನಬಹುದು. ಅಂತೂ, ‘ಇಂದಿರಾ ಅನಿವಾರ್ಯವಲ್ಲ’ ಎಂಬುದನ್ನು ಈ ಎಲ್ಲ ನಾಯಕರು ಸಾಬೀತುಪಡಿಸಿ ತೋರಿಸಿದಂತಾಯಿತು.

ಕಾಲಪ್ರವಾಹದಲ್ಲಿ ಇಂದಿರಾ ಮರೆತುಹೋದರು. ಇನ್ನು, ಅಟಲ್ ಬಿಹಾರಿ ವಾಜಪೇಯಿಯವರ ವಿಷಯಕ್ಕೆ ಬರೋಣ. ಅವರನ್ನು ಬಿಟ್ಟರೆ ಪ್ರಧಾನಿ ಸ್ಥಾನಕ್ಕೆ ಹೊಂದುವ ವ್ಯಕ್ತಿಯೇ ಇನ್ನೊಬ್ಬನಿಲ್ಲ ಎನ್ನುವಷ್ಟು ಎಲ್ಲರೊಂದಿಗೂ ಹೊಂದಿಕೊಂಡು ಅಧಿಕಾರ ನಡೆಸಿದವರು ಅಟಲ್‌ಜಿ. ತಮ್ಮ ಭಾಷಣ ಹಾಗೂ ಕವಿತ್ವದಿಂದ ಜನಪ್ರಿಯತೆಯ ಉತ್ತುಂಗವನ್ನು ಕಂಡ ಅವರು, ಸರ್ವಾಂಗೀಣ ಅಭಿವೃದ್ಧಿಗೆ ಶ್ರೀಕಾರ ಬರೆದು ದೇಶವು ಪ್ರಕಾಶಿಸುವಂತೆ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಅವರ ನೇತೃತ್ವದ ಬಿಜೆಪಿಯ ಗೆಲುವು ನಿಶ್ಚಿತ, ಅವರು ಮತ್ತೆ ಪ್ರಧಾನಿ ಯಾಗುವುದನ್ನು ನೋಡಲಿದ್ದೇವೆ ಎಂದು ಭಾವಿಸಿದ್ದ ದೇಶದ ಜನರಿಗೆ ನಿರಾಸೆಯಾಯಿತು. ‘ವಾಜಪೇಯಿ-ಆಡ್ವಾಣಿ ಜೋಡಿಗೆ ವಯಸ್ಸಾಯಿತು, ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರಕ್ಕೆ ತರುವ ಹುಮ್ಮಸ್ಸು ಅವರಲ್ಲಿ ಉಳಿದಿಲ್ಲ; ಇನ್ನು ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬಲ್ಲ ಸಮರ್ಥ ನಾಯಕ ಆ ಪಕ್ಷದಲ್ಲಿ ಯಾರೂ ಕಾಣುತ್ತಿಲ್ಲ’ ಎಂದೇ ಆ ಕಾಲಕ್ಕೆ ಭಾವಿಸಲಾಗಿತ್ತು.

ಆದರೆ ಆಗಿದ್ದೇ ಬೇರೆ. ಪಕ್ಷಕ್ಕಿಂತ ಹೆಚ್ಚಾಗಿ, ತನ್ನ ಸ್ವಂತ ಹೆಸರು ಹಾಗೂ ಚಾರಿತ್ರ್ಯದ ಬಲದಿಂದ, ಹೆಚ್ಚು ಕಡಿಮೆ ಇಡೀ ದೇಶದ ರಾಜಕೀಯ ಭೂಪಟವನ್ನು ಕೇಸರಿಮಯವನ್ನಾಗಿಸಿದ ಧೀರ ನರೇಂದ್ರ ಮೋದಿ ಉದಯಿಸಿದರು. ಈ ವ್ಯಕ್ತಿಯಿಂದ ಬಿಜೆಪಿ ಹಾಗೂ ದೇಶ ತನ್ನ ಸುವರ್ಣಕಾಲ ವನ್ನು ಕಾಣಬಹುದು ಎಂದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ಇದು ಯಾರೂ ನಿರೀಕ್ಷಿಸಿರದ ಬದಲಾವಣೆಯ ಫಲಪೂರ್ಣತೆ ಎನ್ನಬಹುದೇನೋ.

ಲೋಕದಲ್ಲಿ ಯಾರೂ ಅನಿವಾರ್ಯವಲ್ಲ, ತನ್ನನ್ನು ಬಿಟ್ಟರೆ ಮುಗಿದುಹೋಯಿತು ಎನ್ನುವಂತೆಯೂ ಇಲ್ಲ. ಇದು ಸಾಮಾನ್ಯ ಮನೆಯೊಂದರ ಯಜಮಾನನಿಂದ ಹಿಡಿದು, ದೇಶದ ಪ್ರಧಾನಿಯವರೆಗೂ ಅನ್ವಯಿಸುವ ಮಾತು ಎನ್ನಲು ಇಷ್ಟು ಉದಾಹರಣೆ ಸಾಕು ಎನಿಸುತ್ತದೆ. ಹಾಗೆ, ಇಂದು ದೇಶದ ಜನಪ್ರಿಯ ಹಾಗೂ ಹೆಮ್ಮೆಯ ಪ್ರಧಾನಿಯಾದ ಮೋದಿಯವರು ತೆರೆಮರೆಗೆ ಸರಿಯುವುದು ಯಾರಿಗೂ ಇಷ್ಟವಿಲ್ಲದಿದ್ದರೂ, ಇಂದೋ ನಾಳೆಯೋ ಆ ದಿನ ಬಂದೇ ಬರುತ್ತದೆಯಲ್ಲವೆ? 75ರ ವಯಸ್ಸು ಎನ್ನುವುದು ಸಣ್ಣ ಸಂಖ್ಯೆಯಲ್ಲ. ಅದರಲ್ಲೂ, ದಿನದ 18 ತಾಸು ಕೆಲಸ ಮಾಡಬಯಸುವ ಮೋದಿಯಂಥವರಿಗಂತೂ ಅದು ಪ್ರಯಾಸದಾಯಕವೇ ಆಗಿರುತ್ತದೆ.

ದೇಹಾಯಾಸ ಎನ್ನುವುದು ಅವರಿಗೂ ಸಹಜವೇ ತಾನೆ? ಅವರು ವೈಯಕ್ತಿಕವಾಗಿ ಇನ್ನೂ ಏನೇನು ಆಧ್ಯಾತ್ಮಿಕ ಸಾಧನೆಗಳನ್ನು ಮುಂದೆ ಮಾಡಲಿಕ್ಕೆ ಯೋಜಿಸಿದ್ದಾರೊ! ಅವರು ತಮ್ಮ ವ್ಯಕ್ತಿಗತ ಜೀವನವನ್ನು ಗೌರವಿಸುವುದಕ್ಕೂ ಅವಕಾಶವಾಗಬೇಕಲ್ಲವೆ? ಬಹುಕಾಲ ದೇಶವನ್ನಾಳಿದ ದಶರಥ ಮಹಾರಾಜ, ಹಿರಿಯ ಮಗ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುವುದೆಂದು ತೀರ್ಮಾನಿಸಿದನಂತೆ.

ಅದನ್ನು ಅಯೋಧ್ಯೆಯ ಪ್ರಮುಖರಿಗೆಲ್ಲ ತಿಳಿಸಲೆಂದು ಆತ ಸಭೆ ಕರೆದ. ಶ್ರೀರಾಮನನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಆತನ ನಿರ್ಧಾರದಿಂದ ಪುರಜನರೆಲ್ಲ ಪುಳಕಿತರಾಗಿ ಕುಣಿದು ಕುಪ್ಪಳಿಸಿದರಂತೆ. ಈ ಸಂತೋಷವನ್ನು ಕಂಡ ದಶರಥನಿಗೆ, ತನ್ನ ನಿರ್ಧಾರವನ್ನು ಪ್ರಜೆಗಳು ಒಪ್ಪಿಕೊಂಡಿದ್ದಾರೆ ಎನ್ನುವ ಸಮಾಧಾನವೇನೋ ಆಯಿತು.

ಆದರೆ, ಬಹುಕಾಲ ರಾಜ್ಯವನ್ನು ಅತ್ಯಂತ ಸತ್ಯ ಧರ್ಮದಿಂದ ನಡೆಸಿಕೊಂಡು ಬಂದಿದ್ದ ತನ್ನ ನಿವೃತ್ತಿಯ ಕುರಿತು, ತಾನು ಮಕ್ಕಳಂತೆ ಪಾಲಿಸಿಕೊಂಡು ಬಂದಿದ್ದ ಒಬ್ಬ ಪ್ರಜೆಯೂ, ದುಃಖ ವ್ಯಕ್ತಪಡಿಸಲಿಲ್ಲ; ‘ಮಹಾರಾಜರೇ, ನಮಗೇ ನೀವೇ ಮುಂದುವರಿಯಬೇಕು’ ಎಂದು ಉಪಚಾರಕ್ಕೂ ಅಳಲು ತೋಡಿಕೊಳ್ಳಲಿಲ್ಲ. ಹಾಗಾದರೆ, ತಾನು ಅಷ್ಟು ಕೆಟ್ಟ ರಾಜನಾಗಿದ್ದಾನಾ? ನಾನು ಹೋಗುವುದನ್ನೇ ಪ್ರಜೆಗಳು ಬಯಸಿದ್ದರಾ? ಎನಿಸಿತಂತೆ ದಶರಥನಿಗೆ.

ಆತನಿಗೆ ಹಾಗನಿಸಿದರೆ ತಪ್ಪಲ್ಲ ತಾನೆ? ಆದರೆ ಪ್ರಜೆಗಳು ಹಾಗೆ ನಡೆದುಕೊಳ್ಳಲು ದಶರಥ ಕೆಟ್ಟ ರಾಜನಾಗಿದ್ದ ಎನ್ನುವುದು ಕಾರಣವಾಗಿರಲಿಲ್ಲ, ಬದಲಿಗೆ ಮುಂದೆ ಬರುವ ರಾಜ ಇನ್ನೂ ಒಳ್ಳೆಯ ರಾಜನಾಗಬಲ್ಲವ ಎಂಬುದು ಅವರಿಗೆ ಗೊತ್ತಿತ್ತು. ಬದಲಾವಣೆ ಎನ್ನುವುದು ಉತ್ತಮಿಕೆಯ ಕಡೆಗಿರಬೇಕು ತಾನೆ? ಹಾಗಾಗಿ, ಮೋದಿಯವರ ಉತ್ತಮ ಅಧಿಕಾರಾವಧಿಯೂ ಒಂದಲ್ಲಾ ಒಂದು ದಿನ ಕಾಲಪ್ರವಾಹದಲ್ಲಿ ತೇಲಿಹೋಗುವ ಸಂದರ್ಭ ಬರಲಿಕ್ಕಿದೆ.

ದೇಶದ ಜನರು, ಪ್ರಧಾನಿಯಾಗಿ ಮೋದಿಯವರನ್ನೂ ಮರೆಯುವ ಕಾಲ ಬರಲಿಕ್ಕಿದೆ. ಅವರನ್ನು ಮರೆಸುವಂಥ ಸಮರ್ಪಣಾಭಾವದ ವ್ಯಕ್ತಿಯೊಬ್ಬ ಆ ಸ್ಥಾನಕ್ಕೆ ಬರುವುದಾದರೆ, ಈ ಬದಲಾ ವಣೆಯೂ ದೇಶದ ಜನರಿಗೆ ಸ್ವಾಗತಾರ್ಹವಾಗಬಹುದು. ಯಾರಿಗೆ ಗೊತ್ತು, ಮೋದಿಯವರನ್ನೂ ಮೀರಿಸುವ-ಮರೆಸುವ ‘ಯೋಗಿ’ಯೊಬ್ಬ, ದೇಶದ ಯಾವ ‘ಪ್ರದೇಶ’ದಲ್ಲಿ ಅಡಗಿದ್ದಾನೋ ಏನೋ! ಕಾಲದ ‘ಉತ್ತರ’ಕ್ಕೆ ಕಾಯಬೇಕಷ್ಟೇ...