Ravi Sajangadde Column: ವಿವಿ ಮುಚ್ಚಲಿ ಬಿಡಲಿ; ಶಿಕ್ಷಣದ ಗುಣಮಟ್ಟ ಹೆಚ್ಚಲಿ !
ಯಾವುದೇ ಹೊಸ ವಿವಿಯ ಸ್ಥಾಪನೆಗೆ ಪಾಲಿಸಬೇಕಾದ ಒಂದಷ್ಟು ಶಿಫಾರಸು ಮತ್ತು ಮಾನದಂಡ ಗಳನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ದಾಖಲೀಕರಿಸಿದೆ; ಆದರೆ ಅದರಲ್ಲಿನ ಕನಿಷ್ಠ ಅಂಶ ಗಳನ್ನೂ ಪರಿಗಣಿಸದೆ ಕಾಲಕಾಲಕ್ಕೆ ವಿವಿಗಳನ್ನು ಘೋಷಿಸಲಾಗಿದೆ. ಹೊಸ ವಿವಿಯ ಸ್ಥಾಪನೆ, ಸಂಪೂ ರ್ಣ ಬೆಳವಣಿಗೆ ಮತ್ತು ಸಾಮಾನ್ಯ ಕಾರ್ಯನಿರ್ವಹಣೆಗೆ 50 ರಿಂದ 250 ಎಕರೆ ಭೂಮಿ ಬೇಕು

ಅಂಕಣಕಾರ ರವೀ ಸಜಂಗದ್ದೆ

ಸದಾಶಯ
ರವೀ ಸಜಂಗದ್ದೆ
ಇನ್ನೂ ಸಂಪೂರ್ಣ ‘ಟೇಕಾ-’ ಆಗಿಲ್ಲದ, ಬಿಳಿಯಾನೆಗಳಂತಾಗಿರುವ ರಾಜ್ಯದ 9 ವಿಶ್ವವಿದ್ಯಾಲಯ ಗಳನ್ನು ಮುಚ್ಚುವ/ಮುಂದುವರಿಸುವ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿ ಅನೇಕ ಕಾಂಗ್ರೆಸ್ಸಿಗರ ವಿರೋಧದ ಜತೆಗೆ, ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವ ಸುಳಿವು ಸಿಕ್ಕ ಪರಿಣಾಮ, ಈ ವಿವಿಗಳನ್ನು ಮುಚ್ಚುವ/ಮುಂದುವರಿಸುವ ಕುರಿತಂತೆ ಸರಕಾರದಲ್ಲಿನ್ನೂ ಯಾವುದೇ ಸ್ಪಷ್ಟತೆ ಇದ್ದಂತಿಲ್ಲ. “ವಿವಿಗಳನ್ನು ಮುಚ್ಚುವ ಬದಲು, ಈಗಿರುವ ಇತರ ಪ್ರತಿಷ್ಠಿತ (?!) ವಿವಿಗಳ ಮಾದರಿಯಲ್ಲಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು" ಎಂದು ಸರಕಾರ ಹೇಳುತ್ತಿದೆ. ಹಾಗಾದಲ್ಲಿ ಅದು ಒಂದು ರೀತಿಯಲ್ಲಿ ಸ್ವಾಗತಾರ್ಹ ಬೆಳವಣಿಗೆಯೇ!
ಇದನ್ನೂ ಓದಿ: Ravi Sajangadde Column: AI ತಂತ್ರಜ್ಞಾನದಲ್ಲಿ ಪ್ರಭುತ್ವ ಸಾಧಿಸಲು ಪೈಪೋಟಿ !
ಆದರೆ, ಆ ನಿರ್ಧಾರದಿಂದಾಗಿ ವಿವಿಗಳ ಈಗಿರುವ ಸಮಸ್ಯೆಗೆ ಮತ್ತಷ್ಟು ಕೂಡಿಕೊಂಡು, ಆರ್ಥಿಕ ಹೊರೆ ಇನ್ನೂ ಹೆಚ್ಚಾಗಿ ಗಾಯದ ಮೇಲೆ ಮತ್ತಷ್ಟು ಬರೆ ಎಳೆದಂತಾಗುತ್ತದೆ. ರಾಜ್ಯದಲ್ಲಿ ಈಗಿರುವ ಹಳೆಯ ವಿವಿಗಳಿಗೇ ಅಗತ್ಯ ಅನುದಾನವನ್ನು ಕೊಡಲಾಗದೆ ಸರಕಾರ ಒದ್ದಾಡುತ್ತಿದೆ, ಇದರಿಂದಾಗಿ ವಿವಿಗಳು ಸುಗಮವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ, ಅನೇಕ ವಿವಿಗಳಲ್ಲಿ ಸಿಬ್ಬಂದಿಗೆ ತಿಂಗಳ ವೇತನ ನೀಡಲೂ ಸಾಲ ಮಾಡಬೇಕಾದ ಪರಿಸ್ಥಿತಿಯಿದೆ. ಹೀಗಿರುವಾಗ, ಹೊಸ ವಿವಿಗಳನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬದ್ಧವಾದರೆ, ‘ಇರುವ ಒಂದು ಮಗುವಿನ ಸಂಸಾರವನ್ನೇ ನಿಭಾ ಯಿಸಲು ಹೆಣಗುತ್ತಿರುವಾತನ ಹೆಂಡತಿಯು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ’ ಪರಿಸ್ಥಿತಿ ಎದುರಾಗ ಬಹುದಲ್ಲವೇ?! ಕರ್ನಾಟಕದಲ್ಲಿ ಈ ಹಿಂದೆ ಆಡಳಿತ ನಡೆಸಿದವರು ದೂರಾಲೋಚನೆ ಮಾಡದೆ ಯೇ, ಪ್ರಮಾಣಿತ ಮಾನದಂಡಗಳನ್ನು ಅನುಸರಿಸದೆಯೇ, ತಂತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಬೇಕಾಬಿಟ್ಟಿಯಾಗಿ ವಿವಿಗಳನ್ನು ಅನುಮೋದಿಸಿ ಸ್ಥಾಪಿಸಿ ದ್ದಾರೆ.
ಯಾವುದೇ ಹೊಸ ವಿವಿಯ ಸ್ಥಾಪನೆಗೆ ಪಾಲಿಸಬೇಕಾದ ಒಂದಷ್ಟು ಶಿಫಾರಸು ಮತ್ತು ಮಾನದಂಡ ಗಳನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ದಾಖಲೀಕರಿಸಿದೆ; ಆದರೆ ಅದರಲ್ಲಿನ ಕನಿಷ್ಠ ಅಂಶಗಳನ್ನೂ ಪರಿಗಣಿಸದೆ ಕಾಲಕಾಲಕ್ಕೆ ವಿವಿಗಳನ್ನು ಘೋಷಿಸಲಾಗಿದೆ. ಹೊಸ ವಿವಿಯ ಸ್ಥಾಪನೆ, ಸಂಪೂರ್ಣ ಬೆಳವಣಿಗೆ ಮತ್ತು ಸಾಮಾನ್ಯ ಕಾರ್ಯನಿರ್ವಹಣೆಗೆ 50 ರಿಂದ 250 ಎಕರೆ ಭೂಮಿ ಬೇಕು. ಜತೆಗೆ ಕಟ್ಟಡ, ವೇತನ, ನಿರ್ವಹಣೆ ಮತ್ತಿತರ ವ್ಯವಸ್ಥೆಗಾಗಿ ೫ ವರ್ಷಗಳ ಕಾಲಾವಧಿ ಗೆ ಕನಿಷ್ಠ 370 ಕೋಟಿ ರುಪಾಯಿಗಳನ್ನು ಸರಕಾರ ವ್ಯಯಿಸಬೇಕು ಎನ್ನುವ ಸೂಚನೆ ನೀಡಲಾಗಿದೆ.
ಆದರೆ ಪ್ರಸ್ತುತ ಚರ್ಚೆಯಲ್ಲಿರುವ ಎಲ್ಲಾ 9 ವಿವಿಗಳಿಗೆ ಕಳೆದ ಕೆಲ ವರ್ಷಗಳಲ್ಲಿ ಸರಕಾರ ನೀಡಿದ ಅನುದಾನ ಕೇವಲ 2 ಕೋಟಿ! ಪರಿಣಾಮವಾಗಿ, ಅವು ಕಟ್ಟಡ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ತಾಣಗಳಾಗಿವೆ, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಕೆಲ ವಿವಿಗಳ ಕುಲಪತಿಗಳು ಬಾಡಿಗೆ ಕಾರಿನಲ್ಲಿ ಓಡಾಡುತ್ತಿದ್ದಾರೆ.
ಸಿಬ್ಬಂದಿ ನೇಮಕವಾಗಿಲ್ಲ, ಆದವರಿಗೂ ಕ್ಲುಪ್ತ ಸಮಯದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಲಭ್ಯ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ರಾಜೀವ್ ಗಾಂಧಿ ಆರೋಗ್ಯ ವಿವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿ ಸೇರಿದಂತೆ ಒಟ್ಟು 41 ಸರಕಾರಿ ವಿವಿಗಳಿವೆ. ರಾಜಕೀಯ ಪಕ್ಷಗಳ ಮುಖಂಡರು, ಕ್ರೈಸ್ತ ಸಂಘಟನೆಗಳು, ಮಠ-ಮಾನ್ಯಗಳ ನಿರ್ವಹಣೆಯಲ್ಲಿರುವ 27 ಖಾಸಗಿ ವಿವಿ ಮತ್ತು 11 ಡೀಮ್ಡ್ ವಿವಿಗಳಿವೆ. ಬೆಂಗಳೂರಿನಲ್ಲಿರುವ ಸೇಂಟ್ ಜೋಸೆಫ್ ವಿವಿಯು, ಸಾರ್ವ ಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಮತ್ತೊಂದು ವಿವಿ. ಇವುಗಳ ಹೊರತಾಗಿ 10 ಉನ್ನತ ಶಿಕ್ಷಣ ಸಂಸ್ಥೆಗಳು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ರಾಜ್ಯದ ಎಲ್ಲಾ 41 ಸರಕಾರಿ ವಿವಿಗಳು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಅವುಗಳಡಿ ಸಂಯೋಜಿತಗೊಂಡ ಅಂದಾಜು 3440 ಕಾಲೇಜುಗಳಿವೆ. ಮಂಜೂರಾದ 4158 ಬೋಧಕ ಹುದ್ದೆಗಳ ಪೈಕಿ 2266ಕ್ಕೆ ನೇಮಕವಾಗದೆ ಖಾಲಿ ಉಳಿದಿವೆ. ಈ ಕಾಲೇಜುಗಳಲ್ಲಿ 2300ರಷ್ಟು ಅತಿಥಿ ಉಪ ನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಯಾವ ವಿವಿಯೂ ಸುವ್ಯವಸ್ಥಿತವಾಗಿ ನಡೆಯು ತ್ತಿಲ್ಲ ಮತ್ತು ಹೆಚ್ಚಿನ ವಿವಿಗಳಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ.
ಒಂದು ಕಾಲಕ್ಕೆ ದೇಶಾದ್ಯಂತ ಖ್ಯಾತವಾಗಿದ್ದ ಮೈಸೂರು ವಿವಿಯು, ಮಂಗಳೂರು-ಬೆಂಗಳೂರು-ಶಿವಮೊಗ್ಗದಲ್ಲಿ ಪ್ರತ್ಯೇಕ ವಿವಿಗಳು ಸ್ಥಾಪನೆಯಾದ ಕಾರಣ ವ್ಯಾಪ್ತಿ ತಗ್ಗಿಸಿಕೊಂಡು ಈಗ ಮೈಸೂ ರಿಗಷ್ಟೇ ಸೀಮಿತವಾಗಿದೆ. ಪಿಂಚಣಿಗೂ ಹಣವಿಲ್ಲದೆ ವಾರ್ಷಿಕ 50 ಕೋಟಿ ರು. ಕೊರತೆ ಎದುರಿಸು ತ್ತಿದೆ. ಚಾಮರಾಜನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಕಾಲೇಜುಗಳು ಇತ್ತೀಚೆಗೆ ಹೊಸ ವಿವಿಗಳಡಿಯಲ್ಲಿ ಸಂಯೋಜನೆಗೊಂಡ ಕಾರಣಕ್ಕೆ ಮೈಸೂರು ವಿವಿಯ ಸಂಪನ್ಮೂಲವೂ ತಗ್ಗಿದೆ.
ಹೆಸರಾಂತ ಬೋಧಕರಿದ್ದ ಈ ವಿವಿ ಈಗ ಪಾಠ-ಪ್ರವಚನಕ್ಕೆ ಗುತ್ತಿಗೆ ಆಧಾರದ ಅರೆಕಾಲಿಕ ಉಪನ್ಯಾಸಕರನ್ನು ನೆಚ್ಚಿದೆ. ಕೆಲ ರಾಜಕಾರಣಿಗಳ ತೆವಲು ಮತ್ತು ದುರಾಸೆಗೆ ನಲುಗುತ್ತಿರುವ, 60 ವರ್ಷಗಳ ಇತಿಹಾಸವಿರುವ ಬೆಂಗಳೂರು ವಿವಿಯದ್ದು ಇನ್ನೊಂದು ದುರಂತ ಕಥೆ! ಸಾರ್ವಜನಿಕರು ಮತ್ತು ತಜ್ಞರ ವಿರೋಧದ ಮಧ್ಯೆಯೂ ಇದನ್ನು ‘ಬೆಂಗಳೂರು ನಗರ’ ಮತ್ತು ‘ಬೆಂಗಳೂರು ಉತ್ತರ’ ಎಂದು ವಿಭಜಿಸಿ ಕಾಲೇಜುಗಳನ್ನು ಹಂಚಲಾಯಿತು.
ಕಳೆದ ವರ್ಷ ಸಲ್ಲಿಸಲಾಗಿದ್ದ 67 ಕೋಟಿ ರುಪಾಯಿಗಳ ಪ್ರಸ್ತಾವನೆಗೆ ಸರಕಾರದಿಂದ ಮಂಜೂ ರಾಗಿದ್ದು 15 ಕೋಟಿ ಮಾತ್ರ! ಪರಿಣಾಮವಾಗಿ, 1536 ನಿವೃತ್ತರ ಪಿಂಚಣಿಗೆ ಸಮಸ್ಯೆಯಾಗಿದೆ. ಅಮೃತ ಮಹೋತ್ಸವ ವರ್ಷಾಚರಣೆಯಲ್ಲಿರುವ ಧಾರವಾಡದ ಕರ್ನಾಟಕ ವಿವಿಯು ನಿವೃತ್ತ ಉಪನ್ಯಾಸಕರು/ನೌಕರರಿಗೆ ಪಿಂಚಣಿ ನೀಡಲಾಗದೆ ಸುಸ್ತಾಗಿದೆ. ಈ ವಿವಿಯ ಬೋಧಕ ಹುದ್ದೆಗಳ ಮುಕ್ಕಾಲು ಭಾಗ ಖಾಲಿ ಉಳಿದಿದ್ದು, ಬಹುತೇಕ ಎಲ್ಲ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರೇ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪಾವತಿಸುವ ಶುಲ್ಕವಷ್ಟೇ ಈ ವಿವಿಯ ಆದಾಯ. ಅದು ಏನೇನೂ ಸಾಲದು!
ಮಂಗಳೂರು ವಿವಿಯೂ ಕಳೆದ ಕೆಲ ವರ್ಷಗಳಿಂದ ‘ಐಸಿಯು’ನಲ್ಲಿದೆ! ಯುಜಿಸಿಯಿಂದ ಬರುತ್ತಿದ್ದ ಅನುದಾನ ನಿಂತು ವರ್ಷಗಳೇ ಆಗಿವೆ, ರಾಜ್ಯ ಸರಕಾರದ ಅನುದಾನವೂ ಕಡಿತಗೊಂಡಿದೆ. ಬೋಧಕ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆದು ಎಷ್ಟೋ ಕಾಲವಾಯಿತು. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಂಡು ವಿವಿ ಕುಂಟುತ್ತಾ ಸಾಗುತ್ತಿದೆ. ಕಲಬುರ್ಗಿ ಮತ್ತು ಹಂಪಿ ವಿವಿಗಳ ಆರೋಗ್ಯವೂ ಕ್ಷೀಣಿಸಿದೆ.
ಕಲಬುರ್ಗಿ ವಿವಿಯಲ್ಲಿ ಕೊನೆಯ ಬಾರಿ ನೇಮಕಾತಿ ನಡೆದಿದ್ದು 27 ವರ್ಷಗಳ ಹಿಂದೆ ಅಂದರೆ ನಂಬಲೇಬೇಕು! ಹಂಪಿ ವಿವಿಗೆ ಕೊನೆಯ ಬಾರಿಗೆ ಯುಜಿಸಿ ಅನುದಾನ ಬಂದು ವರ್ಷಗಳೇ ಆದವು! ಶಿಗ್ಗಾವಿಯ ಜಾನಪದ ವಿವಿ, ಹುಬ್ಬಳ್ಳಿಯ ಕಾನೂನು ವಿವಿ, ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸೇರಿದಂತೆ, ವಿಭಿನ್ನ ದೃಷ್ಟಿಕೋನದೊಂದಿಗೆ ಸ್ಥಾಪಿತವಾದ ವಿವಿಗಳಿಗೂ ಸರಕಾರದ ಅನುದಾನ ಮರೀಚಿಕೆಯಾಗಿದೆ.
ಕೃಷಿ ವಿವಿ ಮತ್ತು ತಾಂತ್ರಿಕ ಶಿಕ್ಷಣ ವಿವಿಗಳೂ ಕಾರ್ಯನಿರ್ವಹಿಸಲು ಹೆಣಗಾಡುತ್ತಿವೆ. ಇಷ್ಟು ಸಾಲ ದೆಂಬಂತೆ, ಬಹುತೇಕ ವಿವಿಗಳಲ್ಲಿ ಸಾಲುಸಾಲು ಹಗರಣಗಳು, ಪಿಎಚ್‌ಡಿ ಸೀಟುಗಳ ಮಾರಾಟ, ಕುಲಪತಿ ಮತ್ತಿತರ ಆಯಕಟ್ಟಿನ ಹುದ್ದೆಗಳಿಗೆ ದರಗಳ ನಿಗದಿ/ರಾಜಕೀಯ ಶಿಫಾರಸು/ವಶೀಲಿಬಾಜಿ ಹಾಗೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಅಧ್ಯಯನಶೀಲತೆ, ಹೊಸದನ್ನು ಕೊಡು ವಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ರಾಜ್ಯದ ಬಹುತೇಕ ವಿವಿಗಳು ಎಡವಿವೆ ಮತ್ತು ಓಬೀರಾಯನ ಕಾಲದಲ್ಲಿವೆ ಎಂಬುದು ಕಹಿಸತ್ಯ.
ಇಷ್ಟೆಲ್ಲಾ ಅವಾಂತರಗಳ ನಡುವೆಯೂ, ರಾಜಕೀಯ ಮೈಲೇಜ್‌ಗಾಗಿ ಎಲ್ಲ ಅಽಕಾರಾರೂಢರೂ ಕಳೆದೊಂದು ದಶಕದಿಂದ ಒಟ್ಟಾರೆಯಾಗಿ 10 ಹೊಸ ವಿವಿಗಳನ್ನು ಸ್ಥಾಪಿಸಿದರು. ಆದರೆ ಅವುಗಳ ನಿರ್ವಹಣಾ ವೆಚ್ಚದ ಹೊರೆಯನ್ನು ಸರಿದೂಗಿಸಲು ಈಗಿನ ಸರಕಾರ ಹೆಣಗಾಡುತ್ತಿದೆ. ಅಪಾರ ಕೋಟಿಗಳಲ್ಲಿ ಅನುದಾನ ಬೇಡುವ ಈ ವಿವಿಗಳನ್ನು ಮುಚ್ಚುವ ಪ್ರಸ್ತಾವ ಸಲ್ಲಿಸಲು ತಜ್ಞರ ಸಮಿತಿಯೇ ಬೇಕೆಂದಿಲ್ಲ; ಅದಕ್ಕೆ ಪ್ರಾಥಮಿಕ ಶಿಕ್ಷಣ ಪಡೆದ ಒಬ್ಬ ಸಾಮಾನ್ಯ ವ್ಯಕ್ತಿ ಸಾಕು.
ಹಾಗಂತ, ನಿರ್ವಹಿಸಲಾಗದಿರುವುದನ್ನು ಹಿಂದು-ಮುಂದು ನೋಡದೆ ಮುಚ್ಚುವುದೇ ಏಕೈಕ ಪರಿಹಾರವಲ್ಲ. ಹಾಗಾದರೆ ಏನು ಮಾಡಬಹುದು ಎಂಬುದನ್ನು ಅವಲೋಕಿಸೋಣ: ದಶಕ ಗಳಿಂದ ಅಸ್ತಿತ್ವದಲ್ಲಿರುವ ವಿವಿಗಳನ್ನು ಮೊದಲು ಆಮೂಲಾಗ್ರವಾಗಿ ರಿಪೇರಿ ಮಾಡಬೇಕು. ಅವುಗಳ ಬೇಕು-ಬೇಡಗಳನ್ನು ಪರಿಶೀಲಿಸಿ ಪೂರೈಸುವ ಕೆಲಸವಾಗಬೇಕು. ಅದಕ್ಕೆ ಒಂದಿಷ್ಟು ಅನು ದಾನ ಎತ್ತಿಟ್ಟು ವಿನಿಯೋಗಿಸಬೇಕು. ಅಂಥ 20-22 ಹಳೆಯ ವಿವಿಗಳನ್ನು ಹಳಿಗೆ ತಂದು, ಗುಣ ಮಟ್ಟವನ್ನು ಮೇಲ್ದರ್ಜೆಗೇರಿಸಬೇಕು.
ಈ ವಿವಿಗಳಲ್ಲಿ ತೂರಿಕೊಂಡಿರುವ ಎಲ್ಲ ನಕಾರಾತ್ಮಕ ವ್ಯವಸ್ಥೆಗಳು, ದಂಧೆಕೋರರು, ಕೆಲಸಗಳ್ಳ ರನ್ನು ಮುಲಾಜಿಲ್ಲದೆ ತೊಲಗಿಸಬೇಕು. ವಿವಿಗಳಲ್ಲಿ ರಾರಾಜಿಸುತ್ತಿರುವ ರಾಜಕಾರಣಕ್ಕೆ ಬ್ರೇಕ್ ಹಾಕಬೇಕು. ಹೀಗೆ ಹಂತಹಂತವಾಗಿ ವಿವಿಗಳ ಶುದ್ಧೀಕರಣವಾದಲ್ಲಿ, ಪ್ರವೇಶ ಪಡೆಯಲು ವಿದ್ಯಾ ರ್ಥಿಗಳು ಉತ್ಸುಕರಾಗುತ್ತಾರೆ.
ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು, ನಿರ್ವಹಣೆ ಕಷ್ಟವಿರುವ ಒಂದೊಂದೇ ವಿವಿ ಮತ್ತು ಅದರ ಅಧೀನದಲ್ಲಿರುವ ಕಾಲೇಜುಗಳನ್ನು ಅವಲೋಕಿಸಿ, ಗುಣಮಟ್ಟ ಸುಧಾರಿಸಿದ ಹಳೆಯ ವಿವಿಗಳ ಜತೆ ವಿಲೀನಗೊಳಿಸಬೇಕು. ಹಾಗಾದಾಗ ಕ್ರಮೇಣ ಗುಣಮಟ್ಟ ವೃದ್ಧಿಸಿ ಅವು ನಿಜಾರ್ಥ ದಲ್ಲಿ ಜ್ಞಾನದೇಗುಲಗಳಾಗುತ್ತವೆ.
ಬಹುಪಾಲು ಜೊಳ್ಳು/ಹುಳುಕು ನಿವಾರಣೆಯಾಗಿ ವ್ಯವಸ್ಥೆ ಸಂಪೂರ್ಣ ಸ್ವಚ್ಛಗೊಳ್ಳುವವರೆಗೆ ಈ ಪ್ರಕ್ರಿಯೆ ಸಾಗುತ್ತಿದ್ದಲ್ಲಿ, ಕೊನೆಗೊಮ್ಮೆ ವಿವಿ/ಕಾಲೇಜು ಉತ್ಕೃಷ್ಟ ಮಟ್ಟಕ್ಕೇರುವುದು. ಉನ್ನತ ಶಿಕ್ಷಣ ಇಲಾಖೆಯ ಅವಾಂತರಗಳು ಜಗಜ್ಜಾಹೀರು. ಇದನ್ನು ‘ಶುಚಿಗೊಳಿಸಿ’ ಶೈಕ್ಷಣಿಕವಾಗಿ ಬಲಗೊ ಳಿಸುವ ಸಂಕಲ್ಪ ಆಳುಗರಿಂದ ಹೊಮ್ಮಬೇಕು. ಸರಕಾರ ನಡೆಸುವ ವಿವಿಗಳು ಗುಣಮಟ್ಟದ ಕೊರತೆ ಯಿಂದಾಗಿ ವಿಶ್ವಾಸಾರ್ಹ ಅಲ್ಲವೆಂದು ಸಾಬೀತಾದರೆ ಆ ಜಾಗವನ್ನು ಖಾಸಗಿ ಮತ್ತು ಡೀಮ್ಡ್ ವಿವಿಗಳು ಆಕ್ರಮಿಸಿಕೊಳ್ಳುತ್ತವೆ.
ಹಾಗಾದಾಗ, ಸರಕಾರಿ ವಿವಿಗಳು ಮುಚ್ಚುತ್ತಾ ಹೋಗಿ ಖಾಸಗಿಯವರ (ಪರೋಕ್ಷವಾಗಿ ಕೆಲ ರಾಜ ಕಾರಣಿಗಳ) ಕಬಂಧಬಾಹು ಎಲ್ಲೆಡೆ ಚಾಚಿ, ಉನ್ನತ ಶಿಕ್ಷಣ ಮತ್ತಷ್ಟು ದುಬಾರಿಯಾಗಿ ಬಡವರಿಗೆ ಮರೀಚಿಕೆಯಾಗುತ್ತದೆ. ಹಾಗಾಗಿ ಸರಕಾರಿ ವಿವಿಗಳು ಉಳಿಯಬೇಕಾದ್ದು ಈಗಿನ ತುರ್ತು.
ವಿವಿಗಳನ್ನು ಅಚಾನಕ್ಕಾಗಿ ಮುಚ್ಚಲು ಅಥವಾ ಅವೈಜ್ಞಾನಿಕವಾಗಿ ವಿಲೀನಗೊಳಿಸಲು ನಿರ್ಧರಿ ಸುವ ಸ್ಥಾನದಲ್ಲಿರುವರು ರಾಜಕೀಯವನ್ನು ಪಕ್ಕಕ್ಕಿಟ್ಟು ಮೇಲೆ ಸೂಚಿಸಿರುವಂತೆ ಆಲೋಚಿಸಿದರೆ, ಒಂದಷ್ಟು ಸಕಾರಾತ್ಮಕ ಫಲಿತಾಂಶ ಹೊಮ್ಮೀತು. ಇಲ್ಲಿನ ಒಟ್ಟಾರೆ ಆಶಯ ವಿಷ್ಟೇ- ವಿವಿಯನ್ನು ಮುಚ್ಚಲಿ, ಬಿಡಲಿ; ಶಿಕ್ಷಣದ ಗುಣಮಟ್ಟ ಹೆಚ್ಚಲಿ!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)