Sunday, 28th April 2024

ಅಂದುಕೊಳ್ಳುವುದು ಜೀವನವಲ್ಲ, ಹೊಂದಿಕೊಳ್ಳುವುದು ಜೀವನ

ಶ್ವೇತಪತ್ರ

shwethabc@gmail.com

ಒಮ್ಮೆ ಬಿದಿರು ಸೃಷ್ಟಿಕರ್ತ ಬ್ರಹ್ಮನಲ್ಲಿಗೆ ಹೋಗಿ  ತನ್ನ ಅಸಮಾಧಾನಗಳನ್ನು ಹೊರಹಾಕಿತು. ‘ಬ್ರಹ್ಮದೇವ ನಾನು ಬಿದಿರು, ಕಾಡಿನಲ್ಲಿದ್ದರೂ ಇತರೆ ಗಿಡಮರಗಳಂತೆ ನನ್ನಲ್ಲಿ ಹೂವಿಲ್ಲ, ಹಣ್ಣಿಲ್ಲ, ಕಾಯಿಲ್ಲ, ಎಲೆಯಲ್ಲೂ ರಸವಿಲ್ಲ. ಹೋಗಲಿ ದಣಿದು ಬಂದವರಿಗೆ ನೆರಳಾದರೂ ಕೊಡೋಣವೆಂದರೆ ಅದೂ ಸಾಧ್ಯವಿಲ್ಲ. ಅಂದಮೇಲೆ ನನ್ನ ಅಸ್ತಿತ್ವಕ್ಕೆ ಬೆಲೆಯಿದೆಯೇ? ನನ್ನ ಹುಟ್ಟಿಗೇನು ಅರ್ಥ? ನಿನ್ನ ಸೃಷ್ಟಿಯಲ್ಲಿ ನನ್ನದೊಂದು ಇಂಥ ಪಾತ್ರ ಬೇಕಿತ್ತೇ? ಇದೊಂದು ರೀತಿಯಲ್ಲಿ ಶಾಪ ವಲ್ಲವೇ?’ ಎಂದು ಕೇಳಿತು.

ಅದಕ್ಕೆ ಬ್ರಹ್ಮ ನಕ್ಕು, ‘ನಾನು ಯಾರಿಗೂ ಶಾಪವನ್ನಾಗಲೀ ವರವನ್ನಾಗಲೀ ಕೊಡುವುದಿಲ್ಲ. ನನ್ನ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಪಾತ್ರ-ಪ್ರಾಮುಖ್ಯ- ಸ್ವರೂಪ ಇವೆ. ಕತ್ತಲೆಯನ್ನು ಮೀರಿ ದೀಪ ಬೆಳಕು ನೀಡುವುದಿಲ್ಲವೇ? ಪೆಟ್ಟು ತಿಂದ ಕಲ್ಲು ಕೂಡ ಗುಡಿಯೊಳಗಿನ ವಿಗ್ರಹವಾಗುವು ದಿಲ್ಲವೇ? ಹೊರಟರೆ ಚಿಕ್ಕ ಇರುವೆಯೂ ನೂರು ಯೋಜನ ದಾಟುವುದಿಲ್ಲವೇ? ಅಂದ ಮೇಲೆ ನೀನೇಕೆ ಚಿಂತಿಸಬೇಕು? ನಿನ್ನಲ್ಲೂ ಸಾಮರ್ಥ್ಯವಿದೆ, ಯತ್ನಿಸು. ಛಲದಿಂದ ಮುನ್ನುಗ್ಗಿದರೆ ನಿನ್ನ ಪ್ರಾಮುಖ್ಯ ಬೆಳಕಿಗೆ ಬಂದೀತು’ ಎಂದ.

ಅಂತೆಯೇ ಬಿದಿರು ಹಠ ಹಿಡಿದು ಅತಿವೇಗವಾಗಿ ಬೆಳೆಯಿತು. ಕೃಷ್ಣನ ಕೈಯಲ್ಲಿ ಕೊಳಲಾಯಿತು, ತೂಗುವ ತೊಟ್ಟಿಲು, ಬಾಗಿನಕ್ಕೆ ಮೊರ, ಅಂಬಿಗನ ಹುಟ್ಟು, ಮನೆಯೊಳಗಿನ ಪೀಠೋಪಕರಣ, ಹತ್ತಲು ಏಣಿ, ಧಾನ್ಯದ ಕಣಜ, ದೀಪದ ಕಂಬ, ಆನೆಗಳಿಗೆ ಪ್ರಿಯವಾದ ಆಹಾರ, ಮದುಕರಿಗೆ ಊರುಗೋಲು,
ಸತ್ತವರಿಗೆ ಚಟ್ಟ ಹೀಗೆ ಏನೆಲ್ಲಾ ಆಯಿತು! ‘ಹುಟ್ಟಿದಾಗಲೂ ಬಿದಿರು, ಸತ್ತಾಗಲೂ ಬಿದಿರು’ ಎಂದು ಮನೆಮಾತಾಯಿತು. ತಾನೇನೂ ಅಲ್ಲವೆಂದು ಕೊಂಡಿದ್ದ ಬಿದಿರು, ತಾನೇ ಎಲ್ಲವೂ ಎನ್ನುವಂತೆ ಬೆಳೆಯಿತು. ನನ್ನಿಂದ ಏನೂ ಆಗದು ಎಂದು ಕೈಚೆಲ್ಲಿ ಕುಳಿತುಕೊಳ್ಳುವವರಿಗೆ, ‘ಮನಸ್ಸಿದ್ದರೆ
ಮಾರ್ಗ’ ಎಂಬ ಗುಟ್ಟನ್ನು ಹೇಳಿತು. ದಾರಿಯಿಲ್ಲ ಅಂತ ನಡೆಯುವುದನ್ನು ನಿಲ್ಲಿಸಬಾರದು; ನಡೆದದ್ದೇ ದಾರಿಯಾಗಬೇಕು. ಆ ದಾರಿಯು ಇತರರಿಗೆ ಪ್ರೇರಣೆಯಾಗ ಬೇಕು!

ಅದು ಆ ವರ್ಷದ ನನ್ನ ಕ್ಲಾಸಿನ ಮೊದಲ ದಿನವಾಗಿತ್ತು. ವಿದ್ಯಾರ್ಥಿನಿಯರನ್ನು ಕುರಿತು, ‘ನಿಮಗೀಗ ಒಂದು ಸಣ್ಣ ಪರೀಕ್ಷೆ, ಬರೆಯಲು ಸಿದ್ಧರಾಗಿ’ ಎಂದೆ. ಇದ್ದಕ್ಕಿದ್ದಂತೆ ಪರೀಕ್ಷೆ ಎನ್ನುತ್ತಿದ್ದಾರಲ್ಲಾ, ಏನಿರಬಹುದು? ಎಂಬ ಕುತೂಹಲದಿಂದಲೇ ಅವರೆಲ್ಲ ಪರೀಕ್ಷೆಗೆ ಸಿದ್ಧರಾದರು. ಎಲ್ಲರಿಗೂ ಪ್ರಶ್ನೆ ಪತ್ರಿಕೆ ಕೊಟ್ಟು, ಪುಟವನ್ನು ತಿರುಗಿಸಿ ನೋಡಿ ಉತ್ತರ ಬರೆಯಲು ಹೇಳಿದೆ. ಅವರು ಹಾಗೇ ಮಾಡಿದಾಗ ಒಂದು ಅಚ್ಚರಿ ಕಾದಿತ್ತು. ಏಕೆಂದರೆ, ಖಾಲಿ
ಹಾಳೆಯ ಮಧ್ಯೆ ಒಂದು ಕಪ್ಪುಚುಕ್ಕೆ ಬಿಟ್ಟರೆ ಯಾವುದೇ ಪ್ರಶ್ನೆಗಳಿರಲಿಲ್ಲ. ಕಕ್ಕಾಬಿಕ್ಕಿಯಾಗಿ ಸುಮ್ಮನಿದ್ದ ಅವರಿಗೆ, ‘ನಿಮಗೆ ತೋಚಿದ್ದನ್ನು ಬರೆಯಿರಿ’ ಎಂದೆ. ಅಂತೆಯೇ ಆ ಕಪ್ಪುಚುಕ್ಕೆಯನ್ನು ವರ್ಣಿಸಿ ಬರೆಯತೊಡಗಿದರು.

ನಂತರ, ‘ಒಬ್ಬೊಬ್ಬರಾಗಿ ನೀವು ಬರೆದಿರುವುದನ್ನು ಓದಿ ಹೇಳಿ’ ಎಂದೆ. ವಿದ್ಯಾರ್ಥಿನಿಯರು, ಕಪ್ಪುಚುಕ್ಕೆ ಎಲ್ಲಿದೆ, ಅದರ ಆಕಾರವೇನು, ಗಾತ್ರವೇನು ಇತ್ಯಾದಿ ವಿವರಗಳನ್ನು ಓದಿದರು. ಎಲ್ಲರದ್ದೂ ಓದಿ ಮುಗಿದ ನಂತರ, ‘ನಾನು ನಿರೀಕ್ಷಿಸಿದ ಉತ್ತರವನ್ನು ಯಾರೊಬ್ಬರೂ ಬರೆಯದ ಕಾರಣ, ಈ ಪರೀಕ್ಷೆಯಲ್ಲಿ ನಿಮಗೆ ಗ್ರೇಡ್ ಕೊಡಲಾರೆ’ ಎಂದೆ. ವಿದ್ಯಾರ್ಥಿನಿಯರಿಗೆ ಮತ್ತೆ ಅಚ್ಚರಿ! ‘ಮೇಡಂ, ಒಂದು ಕಪ್ಪುಚುಕ್ಕೆ ಬಿಟ್ಟರೆ ಈ ಹಾಳೆಯಲ್ಲಿ ಬರೆಯಲು
ಇನ್ನೇನಿದೆ?’ ಎಂದರು ಅವರೆಲ್ಲ. ಆಗ ನಾನು, ‘ನೀವೆಲ್ಲರೂ ಕಪ್ಪುಚುಕ್ಕೆ ಬಿಟ್ಟು ಬೇರೇನೂ ಇಲ್ಲವೆಂದುಕೊಂಡು ಅದರ ಬಗ್ಗೆಯೇ ಬರೆದಿರುವಿರಿ; ಆದರೆ ಅದರ ಸುತ್ತಲಿನ ಬಿಳಿಬಣ್ಣದ ಬಗ್ಗೆ ಗಮನ ಹರಿಸಲೇ ಇಲ್ಲ. ಚಿಕ್ಕ ಚುಕ್ಕೆಯ ಮೇಲೇ ಗಮನ ಕೇಂದ್ರೀಕರಿಸುವ ಬದಲು, ಅದರ ಸುತ್ತಲೂ ವ್ಯಾಪಿಸಿರುವ ಬಿಳಿಬಣ್ಣದ ಮೇಲೆ ಗಮನ ಹರಿಸಿ ದ್ದಿದ್ದರೆ ನಿಮಗೆ ಬರೆಯಲು ವಿಷಯ ಸಿಗುತ್ತಿತ್ತು, ನಿಮ್ಮ ಯೋಚನಾಲಹರಿ ಬದಲಾಗುತ್ತಿತ್ತು, ದೃಷ್ಟಿಕೋನ
ವಿಸ್ತರಿಸುತ್ತಿತ್ತು’ ಎಂದೆ.

ಇದನ್ನೇ ನಾವೆಲ್ಲರೂ ನಮ್ಮ ಬದುಕಿಗೂ ಅನ್ವಯಿಸಿಕೊಳ್ಳಬಹುದು. ಜೀವನದಲ್ಲಿ ಬರುವ ನೋವು, ನಿರಾಶೆ, ಸೋಲು, ಹತಾಶೆ, ಸಮಸ್ಯೆ, ಸವಾಲು, ಕೊರಗು, ಬೇಸರ ಇವೆಲ್ಲ ಚಿಕ್ಕ ಕಪ್ಪುಚುಕ್ಕೆಗಳಿಂದ್ದಂತೆ. ನಾವು ಅವುಗಳ ಬಗ್ಗೆಯೇ ಯೋಚಿಸುತ್ತಾ, ಅವುಗಳಾಚೆಗಿನ ಅದ್ಭುತ ಬದುಕಿನ ಕಡೆಗೆ ದೃಷ್ಟಿ ಹರಿಸುವುದನ್ನು ಬಿಟ್ಟುಬಿಡುತ್ತೇವೆ. ಹಾಗಾಗಬಾರದು. ಅವುಗಳಾಚೆಗೆ ದೃಷ್ಟಿ ಹರಿಸಿದಾಗಲೇ ಈ ಪ್ರಪಂಚದ ಬೆರಗನ್ನು ಕಾಣಲು, ಬದುಕಿನ ಪ್ರತಿ
ಕ್ಷಣಕ್ಕೂ ಅರ್ಥವಿದೆ, ಉದ್ದೇಶವಿದೆ ಎಂದರಿತು ಸಂತಸ ದಿಂದ ಬದುಕಲು ಸಾಧ್ಯ.

ತತ್ವಜ್ಞಾನಿ ಸಾಕ್ರೆಟಿಸ್ ಒಮ್ಮೆ ನದಿತೀರದಲ್ಲಿ ತಿರುಗಾಡುತ್ತಿದ್ದಾಗ ಅವನಲ್ಲಿಗೆ ಬಂದ ಯುವಕನೊಬ್ಬ, ‘ಅಪಾರ ಕೀರ್ತಿವಂತರಾದ ನೀವು ನಮ್ಮ ದೇಶದ ಹೆಮ್ಮೆ. ನಿಮ್ಮ ಯಶಸ್ಸಿನ ಗುಟ್ಟೇನು?’ ಎಂದು ಕೇಳಿದ. ಅದಕ್ಕೆ ಸಾಕ್ರೆಟಿಸ್, ‘ನಾಳೆ ಬೆಳಗ್ಗೆ ಇದೇ ಸ್ಥಳಕ್ಕೆ ಬಾ, ಉತ್ತರಿಸುತ್ತೇನೆ’ ಎಂದರು. ಮರುದಿನ ಯುವಕ ಖುಷಿಯಿಂದಲೇ ಆ ಸ್ಥಳಕ್ಕೆ ಬಂದ. ಅವನೊಂದಿಗೆ ಸ್ವಲ್ಪ ದೂರ ನಡೆದ ಸಾಕ್ರೆಟಿಸ್ ನೀರಿನ ಬಳಿ ಸಾಗಿ, ‘ಇಬ್ಬರೂ ನೀರಿಗಿಳಿಯೋಣವೇ?’ ಎಂದು ಕೇಳಿದರು.

‘ಸರಿ’ ಎಂದ ಯುವಕ. ಇಬ್ಬರೂ ನೀರಿಗಿಳಿದರು. ನೀರು ಕಂಠಮಟ್ಟದವರೆಗೂ ಬಂದಾಗ ಯುವಕ ಸಾಕ್ರೆಟಿಸ್ ಕಡೆಗೆ ಅಚ್ಚರಿಯಿಂದ ನೋಡಿದ. ಅವರು
ಏನೂ ಪ್ರತಿಕ್ರಿಯಿಸದೆ, ಅವನ ತಲೆಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಿ ಹೊರಸೆಳೆದರು. ಏದುಸಿರು ಬಿq ತೊಡಗಿದ ಯುವಕ ನಂತರ ಸಾವರಿಸಿ ಕೊಂಡು, ‘ಹೀಗೇಕೆ ಮಾಡಿದಿರಿ?’ ಎಂದು ಕೇಳಿದ. ಆಗ ಸಾಕ್ರೆಟಿಸ್, ‘ನಿಮ್ಮ ಯಶಸ್ಸಿನ ಗುಟ್ಟೇನು ಎಂದು ನಿನ್ನ ಪ್ರಶ್ನಿಸಿದ್ದೆಯಲ್ಲವೇ, ಅದಕ್ಕೆ ಉತ್ತರಿಸಿದೆ’ ಎಂದರು. ಅರ್ಥವಾಗದ ಯುವಕ ‘ಅದು ಹೇಗೆ ಸಾಧ್ಯ?’ ಎಂದು ಮರುಪ್ರಶ್ನಿಸಿದಾಗ ಸಾಕ್ರೆಟಿಸ್, ‘ನೋಡಪ್ಪಾ, ನೀರಿನಲ್ಲಿ ತಲೆ ಮುಳುಗಿರುವಷ್ಟೂ ಹೊತ್ತು ನಿನಗೆ ಯಾವುದು ಮುಖ್ಯ, ಯಾವುದು ಅವಶ್ಯ ಎನಿಸಿತು?’ ಎಂದು ಕೇಳಿದರು.

ಅದಕ್ಕೆ ಯುವಕ, ‘ನೀರಿನಿಂದ ಬೇಗ ಹೊರಬಂದು ಉಸಿರಾಡಬೇಕು, ಅದಕ್ಕೆ ಗಾಳಿ ತುಂಬಾ ಅವಶ್ಯಕವೆನಿಸಿತು’ ಎಂದ. ಆಗ ಸಾಕ್ರೆಟಿಸ್, ‘ನಿನ್ನೆ ನೀನು ಕೇಳಿದ ಪ್ರಶ್ನೆಗೆ ಇದೇ ಉತ್ತರ. ಅದುವೇ ಅವಶ್ಯಕತೆ. ಯಶಸ್ಸು ಯಾರ ಸ್ವತ್ತೂ ಅಲ್ಲ; ಅದನ್ನು ಯಾರು ಬೇಕಾದರೂ ಗಳಿಸಬಹುದು. ಅದಕ್ಕೆ ಬೇಕಿರು
ವುದು, ಎಲ್ಲಾ ಹುಡುಕಾಟಕ್ಕೂ ತಾಯಿಯಂತಿರುವ ಅವಶ್ಯಕತೆ ಮತ್ತು ಸಾಽಸಬೇಕೆಂಬ ಪ್ರಬಲ ಇಚ್ಛೆ. ಆಗ ಫಲಿತಾಂಶ ಉತ್ತಮವಾಗಿಯೇ ಇರುತ್ತದೆ. ಇದುವೇ ಯಶಸ್ಸಿನ ಗುಟ್ಟು’ ಎಂದರು.

ಒಮ್ಮೆ ಗುರುಗಳು, ‘ಶಿಷ್ಯರೇ, ಈ ಗುರುಕುಲದಲ್ಲಿ ಇಂದಿಗೆ ನಿಮ್ಮೆಲ್ಲರ ಒಂದು ಹಂತದ ಶಿಕ್ಷಣ ಮುಗಿಯಿತು. ಮುಂದಿನ ಮತ್ತು ಕೊನೆಯ ಹಂತದ ಶಿಕ್ಷಣಕ್ಕಾಗಿ ಅನತಿ ದೂರದಲ್ಲಿರುವ ಮತ್ತೊಬ್ಬ ಗುರುಗಳ ಬಳಿ ನೀವು ಹೋಗಿ’ ಎಂದಾಗ ಶಿಷ್ಯರೆಲ್ಲರಿಗೂ ಅಚ್ಚರಿಯಾಯಿತು. ‘ಇವರೇಕೆ ನಮ್ಮನ್ನು ಅಲ್ಲಿಗೆ ಕಳುಹಿಸುತ್ತಿದ್ದಾರೆ? ಇವರಿಗಿಂತ ಮಿಗಿ ಲಾದ ಗುರು ಇನ್ನಾರು ತಾನೇ ಇರಲು ಸಾಧ್ಯ? ಇಲ್ಲಿ ಕಲಿಯದೇ ಉಳಿದಿರುವುದು ಅಲ್ಲೇನಿದೆ?’ ಎಂದು ಕೊಳ್ಳುತ್ತ ಶಿಷ್ಯರು ಒಲ್ಲದ ಮನಸ್ಸಿನಿಂದಲೇ ಮತ್ತೊಂದು ಗುರುಕುಲಕ್ಕೆ ಹೊರಟರು. ಅಲ್ಲಿ ಶಿಷ್ಯಂದಿರಿಗೆ ತಾವೇ ಪ್ರೀತಿ ಯಿಂದ ಊಟ ಬಡಿಸುತ್ತಿದ್ದ ಗುರುಗಳು ಇವರನ್ನು ಕಂಡು ಊಟಕ್ಕೆ ಕುಳಿತುಕೊಳ್ಳಲು ಹೇಳಿ ಇವರಿಗೂ ಊಟ ಬಡಿಸುತ್ತಾರೆ. ಊಟವಾದ ಬಳಿಕ ತಾವೇ ಎಲ್ಲ ತಟ್ಟೆಗಳನ್ನು ತೊಳೆದಿಡುತ್ತಾರೆ. ಅಡುಗೆ ಮಾಡಿದ ಪಾತ್ರೆಗಳನ್ನು ಚೆನ್ನಾಗಿ ಉಜ್ಜಿ ತೊಳೆದು ಕ್ರಮವಾಗಿ ಜೋಡಿಸುತ್ತಾರೆ.

ಮರುದಿನ ಅಡುಗೆ ಮಾಡುವ ಮುನ್ನ, ಹಿಂದಿನ ದಿನ ತೊಳೆದಿದ್ದ ಪಾತ್ರೆಗಳನ್ನು ಮತ್ತೆ ತೊಳೆದು ಅಡುಗೆ ಪ್ರಾರಂಭಿಸುತ್ತಾರೆ. ಇದನ್ನು ನೋಡಿದ ಈ ವಿದ್ಯಾರ್ಥಿ ಗಳಲ್ಲೊಬ್ಬ ಕುತೂಹಲವನ್ನು ತಡೆಯಲಾರದೆ, ‘ಗುರು ಗಳೇ, ನಿನ್ನೆ ತೊಳೆದ ಪಾತ್ರೆಗಳನ್ನು ಇಂದು ಮತ್ತೆ ತೊಳೆದಿರಲ್ಲ ಏಕೆ?’ ಎಂದು ಕೇಳಿದ. ಆಗ ಗುರುಗಳು, ‘ಪ್ರತಿದಿನ ನೆಲ ಗುಡಿಸುತ್ತೇವೆ, ಕಿಟಕಿ ಬಾಗಿಲುಗಳ ಧೂಳನ್ನು ತೆಗೆ ಯುತ್ತೇವೆ, ಪಾತ್ರೆಗಳನ್ನು ತೊಳೆಯುತ್ತೇವೆ, ದೇಹದ ಕೊಳೆ ತೆಗೆಯಲು ಸ್ನಾನ ಮಾಡುತ್ತೇವೆ. ಇವೆಲ್ಲ ಬಹಿರಂಗ ಶುದ್ಧಿ. ಇವುಗಳ ಉದ್ದೇಶ ಸ್ವಚ್ಛತೆ. ಎಲ್ಲಿ ಸ್ವಚ್ಛತೆ ಇರುವುದೋ ಅಲ್ಲಿ ಪವಿತ್ರತೆ ಇರುತ್ತದೆ ಅಲ್ಲವೇ? ಪ್ರತಿದಿನ
ಇದನ್ನು ಮಾಡದಿದ್ದಲ್ಲಿ ಕಸ, ಧೂಳು, ಮಲಿನತೆ ಶೇಖರಣೆ ಯಾಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು.

ಹಾಗೆಯೇ, ಅಂತರಂಗದ ಶುದ್ಧಿ ಬಹಳ ಮುಖ್ಯವಾಗಿರುವುದರಿಂದ ಅದರ ಸ್ವಚ್ಛತೆಯ ಕಡೆಗೂ ಹೆಚ್ಚಿನ ಗಮನ ಹರಿಸಬೇಕು, ಪ್ರತಿದಿನವೂ ಪ್ರಯತ್ನಿಸ ಬೇಕು’ ಎಂದರು. ಆಗ ಶಿಷ್ಯರು, ‘ಗುರುಗಳೇ, ನಿಜಕ್ಕೂ ಇದು ಬಹಳ ಕುತೂಹಲಕಾರಿಯಾದ ಹೊಸ ವಿಚಾರ. ಅಂತರಂಗ ಎಂದರೇನು, ಅದನ್ನು ಶುಚಿಗೊಳಿಸುವ ಬಗೆ ಹೇಗೆ?’ ಎಂದು ಕೇಳುತ್ತಾರೆ. ಆಗ ಗುರುಗಳು, ‘ಅಂತರಂಗ ಎಂದರೆ ಮನಸ್ಸು. ಮನೆಯಲ್ಲಿ ಪ್ರತಿದಿನವೂ ಧೂಳು, ಕಸ ಸೇರಿಕೊಳ್ಳು ವಂತೆ ಮನಸ್ಸಿನಲ್ಲಿ ಪ್ರತಿದಿನವೂ ಬೇಡದ ವಿಚಾರಗಳು ಧೂಳು-ಕಸಗಳ ಹಾಗೆ ತುಂಬಿಕೊಳ್ಳುತ್ತಾ ಹೋಗುತ್ತವೆ. ಅವನ್ನು ಆಗಿಂದಾಗಲೇ ಹೊರಹಾಕ ದಿದ್ದರೆ ಶೇಖರಣೆಯಾಗುತ್ತಾ ಹೋಗುತ್ತವೆ. ಮನಸ್ಸು ಬೇಡವಾದ ಆಲೋಚನೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಉಗ್ರಾಣವಾಗಿ ಬಿಡುತ್ತದೆ.

ಆಗ ನಮಗೆ ಮಾತ್ರವಲ್ಲ ಇತರರಿಗೂ ಅದು ವಿನಾಶಕಾರಿಯಾಗಿ ಕಾಡಬಹುದು. ಆದ್ದರಿಂದ ಜೀವನವನ್ನು ಹಾಳುಮಾಡುವ ಇಂಥ ಕಸವನ್ನು
ಪ್ರತಿದಿನವೂ ತೆಗೆಯಬೇಕು’ ಎನ್ನುತ್ತಾರೆ. ‘ಅದು ಹೇಗೆ ಗುರುಗಳೇ?’ ಎಂದು ಶಿಷ್ಯರು ಪ್ರಶ್ನಿಸಿದಾಗ, ‘ಮನಸ್ಸನ್ನು ಯಾವಾಗಲೂ ಕ್ರಿಯಾಶೀಲ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಳ್ಳುತ್ತಾ ತಿದ್ದಿಕೊಳ್ಳಬೇಕು. ಸಜ್ಜನರ ಸಹವಾಸ, ಒಳ್ಳೆಯ ಗ್ರಂಥಗಳ ಅಧ್ಯಯನ, ಪ್ರಾರ್ಥನೆ, ಧ್ಯಾನ, ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಒಳ್ಳೆಯ ವಿಚಾರಗಳನ್ನು ಕೇಳುವುದು ಇತ್ಯಾದಿಗಳ ಮೂಲಕ ಮನಸ್ಸನ್ನು ಅಚ್ಚುಕಟ್ಟಾಗಿಟ್ಟುಕೊಳ್ಳಬೇಕು. ಮನಸ್ಸನ್ನು ತಿದ್ದುವ ಸಂಸ್ಕಾರವನ್ನು ರೂಢಿಸಿಕೊಂಡು ಅದನ್ನು ಜೀವನದಲ್ಲಿ ಆಚರಣೆಗೆ ತರಬೇಕು.

ಮನಸ್ಸು ಅಚ್ಚುಕಟ್ಟಾಗಿದ್ದರೆ ಏಕಾಗ್ರತೆ ಬೆಳೆಯುತ್ತದೆ, ಏಕಾಗ್ರತೆಯಿಂದ ಸಾಧನೆ ಸಿದ್ಧಿಸುತ್ತದೆ’ ಎಂದರು ಗುರುಗಳು. ಆಗ ಶಿಷ್ಯರಿಗೆ ಹಿಂದಿನ ಗುರುಕುಲದ ಆ ಗುರುಗಳು ತಮ್ಮನ್ನು ಇಲ್ಲಿಗೆ ಕಳುಹಿಸಿದ ಉದ್ದೇಶವೇನು ಎಂಬುದು ಅರ್ಥವಾಯಿತು. ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರು ತ್ತದೋ, ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸೂ ಅಷ್ಟೇ ಸುಂದರವಾಗಿರುತ್ತದೆ. ಮನಸ್ಸು ಸುಂದರವಾಗಿದ್ದರೆ ಬದುಕೂ ಸುಂದರ. ನಾವು ಏನನ್ನು ಯೋಚಿಸು ತ್ತೇವೋ ಅದೇ ನಾವಾಗುತ್ತೇವೆ. ನಾವು ಏನಾಗಿದ್ದೇವೆಯೋ ಅದಕ್ಕೆ ನಮ್ಮ ಮನಸ್ಸೇ ಕಾರಣ ವಾಗಿರುತ್ತದೆ. ನಮ್ಮ ಮನಸ್ಸಿ ನಲ್ಲಿ ಇರುವಂಥ ಬೇಡದ ವಿಚಾರಗಳನ್ನು ಹೊರಹಾಕಿದಾಗ ಮನಸ್ಸು ಹಗುರಾಗಿ ನೆಮ್ಮದಿ, ಖುಷಿ ಮೂಡುತ್ತವೆ.

Leave a Reply

Your email address will not be published. Required fields are marked *

error: Content is protected !!