ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Kaangala Column: ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನ: ವೈರಾಗ್ಯಮೂರ್ತಿ ಅಕ್ಕಮಹಾದೇವಿ

12ನೇ ಶತಮಾನದ ಪ್ರಸಿದ್ಧ ವಚನಕಾರ್ತಿಯಾಗಿದ್ದ ಅಕ್ಕಮಹಾದೇವಿ ಕ್ರಿ.ಶ. 1160ರಲ್ಲಿ ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದ ಶರಣ ದಂಪತಿಗಳಾದ ನಿರ್ಮಲಶೆಟ್ಟಿ ಹಾಗೂ ಸುಮತಿ ಅವರ ಮಗಳಾಗಿ ಜನಿಸಿದರು. ಭಗವಂತ ಮತ್ತು ಭಕ್ತಿಯಲ್ಲಿ ಲೀನರಾದ ಅಕ್ಕಮಹಾದೇವಿ, ಶರಣಸತಿ-ಲಿಂಗಪತಿ ತತ್ವಕ್ಕೆ ಒಳಗಾಗಿ ಸಾಂಪ್ರದಾಯಿಕ ಬದುಕನ್ನು ತಿರಸ್ಕರಿಸಿ, ಆಧ್ಯಾತ್ಮಿಕ ಬದುಕನ್ನು ಆಯ್ಕೆ ಮಾಡಿ ಕೊಂಡು ಕೇಶಾಂಬರೆಯಾದರು.

ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನ: ವೈರಾಗ್ಯಮೂರ್ತಿ ಅಕ್ಕಮಹಾದೇವಿ

Profile Ashok Nayak Apr 12, 2025 7:22 AM

ತನ್ನಿಮಿತ್ತ

ರವಿ ರಾ. ಕಂಗಳ

(ಇಂದು ಅಕ್ಕಮಹಾದೇವಿ ಜಯಂತಿ)

ಹನ್ನೆರಡನೆಯ ಶತಮಾನದ ಇತಿಹಾಸವನ್ನು ಅವಲೋಕಿಸಿದರೆ, ಆ ಕಾಲದಲ್ಲಿ ಬಸವಾದಿ ಶರಣರು ಕೈಗೊಂಡ ತ್ರಿವಿಧ ಕ್ರಾಂತಿಯು ಮೈಲುಗಲ್ಲಾಗಿ ನಿಂತು ಎಲ್ಲರ ಗಮನ ಸೆಳೆಯುತ್ತದೆ. ಇಡೀ ಮಾನವ ಸಮಾಜವನ್ನು ಮೇಲು ಕೀಳೆನ್ನದೆ ಒಗ್ಗೂಡಿಸಿ, ಏಕದೇವೋಪಾಸನೆಯನ್ನು ಬೋಧಿಸಿ, ಪುರುಷರಂತೆ ಮಹಿಳೆಯರಿಗೂ ತಮ್ಮ ಮನದಾಳದ ಭಾವ, ನೋವು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶವಿತ್ತು, ಮನೆಗೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆಯ ಕಾರ್ಯಕ್ಷೇತ್ರವನ್ನು ಪ್ರಾಪಂಚಿಕ, ಪಾರಮಾರ್ಥಿಕ ವಲಯದವರೆಗೂ ಅವರು ವಿಸ್ತರಿಸಿದರು.

ಹೀಗೆ ಮಹಿಳೆಯರಿಗೆ ನೀಡಿದ ಅವಕಾಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದಾಗಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಅಕ್ಕಮಹಾದೇವಿ, ಸತ್ಯಮ್ಮ, ಮುಕ್ತಾಯಕ್ಕ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ ಹೀಗೆ ಅನೇಕ ಮಹಿಳೆಯರು ತಮ್ಮ ಅನುಭವಗಳ ಸಾರವನ್ನು ಯಾವುದೇ ಕಟ್ಟುಕಟ್ಟಳೆ ಯಿಲ್ಲದಂತೆ ಸರಳ ಕನ್ನಡ ಭಾಷೆಯಲ್ಲಿ ವಚನ ಮಾಧ್ಯಮದ ಮೂಲಕ ಮನಸ್ಸಿಗೆ ನಾಟುವಂತೆ ವಚನಗಳ ರೂಪದಲ್ಲಿ ಹೊರಗೆಡಹಿದರು. ಇಂಥವರ ಸಾಲಿನಲ್ಲಿ ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನವೇ ಅಕ್ಕಮಹಾದೇವಿ.

12ನೇ ಶತಮಾನದ ಪ್ರಸಿದ್ಧ ವಚನಕಾರ್ತಿಯಾಗಿದ್ದ ಅಕ್ಕಮಹಾದೇವಿ ಕ್ರಿ.ಶ. 1160ರಲ್ಲಿ ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದ ಶರಣ ದಂಪತಿಗಳಾದ ನಿರ್ಮಲಶೆಟ್ಟಿ ಹಾಗೂ ಸುಮತಿ ಅವರ ಮಗಳಾಗಿ ಜನಿಸಿದರು. ಭಗವಂತ ಮತ್ತು ಭಕ್ತಿಯಲ್ಲಿ ಲೀನರಾದ ಅಕ್ಕಮಹಾದೇವಿ, ಶರಣಸತಿ-ಲಿಂಗಪತಿ ತತ್ವಕ್ಕೆ ಒಳಗಾಗಿ ಸಾಂಪ್ರದಾಯಿಕ ಬದುಕನ್ನು ತಿರಸ್ಕರಿಸಿ, ಆಧ್ಯಾತ್ಮಿಕ ಬದುಕನ್ನು ಆಯ್ಕೆ ಮಾಡಿಕೊಂಡು ಕೇಶಾಂಬರೆಯಾದರು.

ಇದನ್ನೂ ಓದಿ: Yagati Raghu Naadig Column: 3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

ವೀರವೈರಾಗ್ಯವನ್ನು ತಳೆದು ಅಧ್ಯಾತ್ಮದ ಮೇರು ಶಿಖರವನ್ನೇರಿದ ಅಕ್ಕಮಹಾದೇವಿ, ಪರಮ ವೈರಾಗ್ಯನಿಧಿ ಅಲ್ಲಮಪ್ರಭು, ಭಕ್ತಿಭಂಡಾರಿ ಬಸವೇಶ್ವರ, ಶಿವಯೋಗಿ ಸಿದ್ಧರಾಮಯ್ಯ, ಷಟ್ಸ್ಥಲ ಜ್ಞಾನಿ ಚೆನ್ನಬಸವಣ್ಣ ಮುಂತಾದ ಮಹಾಶರಣರಿಂದ ‘ನಮೋ ನಮೋ’ ಎನ್ನಿಸಿಕೊಂಡು ಕಿರಿಯ ವಯಸ್ಸಿಗೇ ಜಗದಕ್ಕನಾಗಿ ನಿಂತದ್ದು ಅವರ ಹಿರಿಮೆ-ಗರಿಮೆಗಳಿಗೆ ಸಾಕ್ಷಿಯಾಗಿದೆ.

ಜ್ಞಾನ ವೈರಾಗ್ಯಗಳ ಜತೆಗೆ ಅಂದಿನ ಕಾಲಕ್ಕೆ ಅಪರೂಪವಾದ ಧೈರ್ಯ, ಮನೋಬಲಗಳು ಆಕೆಯ ವ್ಯಕ್ತಿತ್ವಕ್ಕೊಂದು ವಿಶೇಷತೆಯನ್ನು ನೀಡಿದವು. ಆಕೆ ಪ್ರಪ್ರಥಮ ಕವಿಯತ್ರಿಯೂ ಹೌದು. ‘ಚನ್ನಮಲ್ಲಿಕಾರ್ಜುನ’ ಎಂಬ ಅಂಕಿತನಾಮದಲ್ಲಿ ವಚನ ಸಾಹಿತ್ಯಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ರಚಿಸಿದ 365ವಚನಗಳು ಲಭ್ಯವಾಗಿವೆ. ಇವಲ್ಲದೆ ಯೋಗಾಂಗ ತ್ರಿವಿಧಿ, ಮಂತ್ರಗೋಪ್ಯಗಳೆಂಬ ಕೃತಿಗಳನ್ನು ರಚಿಸಿರುವುದು ತಿಳಿದುಬರುತ್ತದೆ.

akkamahadevi ಋ

ಶರಣರಿತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದ ಅಕ್ಕಮಹಾದೇವಿ ಯವರ ವಚನ ಗಳು ಆಕೆಯ ಜೀವನ ದರ್ಶನದೊಂದಿಗೆ ಮಿಳಿತವಾಗಿವೆ. ಮಹಿಳೆಯರಿಗೆ ಮುಕ್ತ ಅವಕಾಶವೇ ಇಲ್ಲದ ಕಾಲದಲ್ಲಿ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮೊದಲು ಧ್ವನಿ ಎತ್ತಿದ ಹೋರಾಟ ಗಾರ್ತಿ ಅಕ್ಕಮಹಾದೇವಿ.

ಭಾರತೀಯ ಸಮಾಜದಲ್ಲಿ ಪ್ರತಿಯೊಂದು ಹೆಣ್ಣು ತನ್ನ ಗಂಡನ ಹೆಸರಿನಿಂದಲೇ ಗುರುತಿಸಿಕೊಳ್ಳ ಬೇಕು ಎಂಬ ನಿಯಮವಿತ್ತು. ಹೀಗಿರುವಾಗ ಸಂಸಾರ ತೊರೆದು ಭವಿತನದಿಂದ ಭಕ್ತಿಯೆಡೆಗೆ ಸಾಗಿದ ಅಕ್ಕಮಹಾದೇವಿ ಸಮಸಮಾಜದ ಕಲ್ಪನೆಯಲ್ಲಿದ್ದರು. ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಅಕ್ಕಮಹಾದೇವಿಯವರ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬಸವಣ್ಣನವರಿಗೆ, “ಬುದ್ಧಿ, ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸು ತ್ತಿದ್ದಾರೆ" ಎಂದು ಹೇಳುತ್ತಾರೆ.

ಆಗ ಬಸವಣ್ಣನವರು “ಮಾಚಿದೇವರೇ, ಮಹಾದೇವಿಯವರನ್ನು ಮರ್ಯಾದೆಯಿಂದ ಕರೆ ತನ್ನಿ" ಎಂದು ಹೇಳುತ್ತಾರೆ. ಅನುಭವ ಮಂಟಪದ ಒಳ ಬಂದ ಅಕ್ಕ “ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ" ಎನ್ನುತ್ತಾರೆ. ಆಗ ಅಲ್ಲಮರು “ನಿಲ್ಲು, ತುಂಬು ಯೌವನದ ಸತಿ ನೀನು, ಇತ್ತಲೇಕೆ ಬಂದೆಯವ್ವ? ಸತಿ ಎಂದರೆ ಮುನಿಯುವರು ನಮ್ಮ ಶರಣರು.

ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು, ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ" ಎನ್ನುತ್ತಾರೆ.

ಆಗ ಅಕ್ಕಮಹಾದೇವಿಯು “ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ಧಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೆ" ಎಂದು ಗಟ್ಟಿ ಧ್ವನಿಯಲ್ಲಿ ಚನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಹೇಳುತ್ತಾರೆ.

ಆಗ ಮತ್ತೆ ಅಲ್ಲಮಪ್ರಭುಗಳು “ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು" ಎನ್ನುತ್ತಾರೆ.

ಆಗ ಪ್ರತಿಯಾಗಿ ಅಕ್ಕಮಹಾದೇವಿ “ನನ್ನ ಮದುವೆಯ ಕಥೆಯನ್ನು ಪ್ರಪಂಚ ಹೇಗಾದರೂ ತಿಳಿದುಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂಥವಳು" ಎನ್ನುತ್ತಾರೆ.

ಮುಂದುವರಿದು ಮನುಷ್ಯನ ವ್ಯಕ್ತಿತ್ವದ ಬಗೆಗೆ ಹೇಳುವಾಗ “ಫ ಒಳಗೆ ಪಕ್ವವಾಗಿಯಲ್ಲದೆ ಹೊರಗಳಸಿಪ್ಪೆ ಒಪ್ಪಗೆಡದು" ಎನ್ನುತ್ತಾರೆ. ಅಂದರೆ ಮನ ಪರಿಪೂರ್ಣವಾಗಬೇಕಾದರೆ ಭಕ್ತಿರಸಪೂರಣವಾಗಬೇಕು. ಅದಕ್ಕೆ ಸಾಧಿಸಿಕೊಂಡಾಗ “ಅಂಗದ ಲಿಂಗಮುಖದಲಿ ಅರ್ಪಿಸಿ ಅಂಗ ಅನಂಗವಾಯಿತು" ಎಂದು ಪುಳಕಗೊಳ್ಳುತ್ತಾರೆ.

ಭವಿಗೂ ಭಕ್ತಳಿಗೂ ಇರುವ ವ್ಯತ್ಯಾಸವನ್ನು “ಭಾನುವಿನಂತಿಪ್ಪುದು ಜ್ಞಾನ ಕಿರಣದಂತಪ್ಪುದು ಭಕ್ತಿ" ಎನ್ನುತ್ತಾರೆ. ಇನ್ನೊಂದೆಡೆ “ಅಂಗದ ಭಂಗದ ಲಿಂಗ ಮುಖದಿಂದ ಗೆಲಿದೆಮನದ ಭಂಗದ ಅರುಹಿನ ಮುಖದಿಂದ ಗೆಲಿದೆ" ಎಂದು ಜ್ಞಾನಮಾರ್ಗ ಯಾವುದೆಂದು ಹೇಳುತ್ತಾರೆ. ಹೀಗೆ ಈ ವಿಚಾರವಾಗಿ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯವರ ನಡುವೆ ಸುದೀರ್ಘವಾದ ಸಂಭಾಷಣೆ ನಡೆಯುತ್ತದೆ. ಕೊನೆಯಲ್ಲಿ ಅಲ್ಲಮಪ್ರಭುದೇವರಿಗೆ ತಮ್ಮ ಮನದ ಇಂಗಿತವನ್ನು ಬಹಳ ಸ್ಪಷ್ಟವಾಗಿ ಅಭಿವ್ಯಕ್ತಿಸಿ ಅಲ್ಲಮರ ಗೌರವಕ್ಕೆ ಪಾತ್ರರಾಗುತ್ತಾರೆ.

ಅಕ್ಕಮಹಾದೇವಿಯವರ ವಚನಗಳಲ್ಲಿನ ವಿಶೇಷ ಸಂಗತಿಯೆಂದರೆ ಆಧ್ಯಾತ್ಮಿಕ ಅನುಭವಗಳನ್ನು ಅವುಗಳ ವೈಶಿಷ್ಟ್ಯಗಳನ್ನು ವಸ್ತು, ಪ್ರತಿಮೆಗಳ ಮೂಲಕ ಅಭಿವ್ಯಕ್ತಿಸುವಿಕೆ. “ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಕೊಳನತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಗಿರಿ ಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೆ? ಚನ್ನಮಲ್ಲಿಕಾಜುನನೆಲ್ಲಿದ್ದಹನೆಂದು ಹೇಳಿರೆ" ಎನ್ನುವ ಮೂಲಕ ತನ್ನ ಆರಾಧ್ಯದೈವ ಚನ್ನಮಲ್ಲಿಕಾರ್ಜುನನನ್ನು ಹುಡುಕಾಡುವ ಸನ್ನಿವೇಶವು ಎಂಥವರ ಕಣ್ಣಾಲಿಗಳೂ ತುಂಬಿ ಬರುವಂತೆ ಮಾಡುತ್ತದಲ್ಲವೇ? ಈ ಚಿಂತನೆಯೊಳಗೆ ಶಿವನೇ ತನ್ನ ಗಂಡ ಆತನೇ ತನ್ನ ಸರ್ವಸ್ವ ಎಂಬುದನ್ನು ಸಾಬೀತು ಮಾಡುವಂತೆ “ಇಹಕ್ಕೊಬ್ಬ ಗಂಡನೇ? ಪರಕ್ಕೊಬ್ಬ ಗಂಡನೆ?" ಎಂದು ಪ್ರಶ್ನಿಸಿ “ನನ್ನ ಗಂಡ ಚನ್ನಮಲ್ಲಿಕಾರ್ಜುನದೇವರಲ್ಲದೆ ಮಿಕ್ಕನ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ" ಎನ್ನುತ್ತಾರೆ.

ಇವರಲ್ಲಿ ಅದೆಂಥ ಆತ್ಮವಿಶ್ವಾಸವಿತ್ತೆಂದರೆ ತವರುಮನೆ-ಲೌಕಿಕದ ಗಂಡನ ಮನೆಯನ್ನು ತೊರೆದು ಬಂದವಳು ಅಬಲೆ ಎಂಬ ಅಳುಕಿಲ್ಲ. ಅದಕ್ಕಾಗಿಯೇ “ಆರು ಇಲ್ಲದವಳೆಂದು ಅಳಲುಗೊಳಬೇಡ ಕಂಡೆಯಾವನ ಮಾಡಿದೊಡೆಯೂ ನಾನಂಜುವಳಲ್ಲ" ಎಂದು ಧೈರ್ಯ ಪ್ರದರ್ಶನ ಗೈಯುತ್ತಾರೆ. ತಮ್ಮ ಮನಸ್ಸನ್ನೇ ಕಾಡಿದುದು “ಕಿಚ್ಚಲ್ಲದ ಬೇಗೆಯಲ್ಲಿ ಬೆಂದೆನವ್ವಾ ಏರಿಲ್ಲದ ಗಾಯದಲ್ಲಿ ನೊಂದೆನವ್ವಾ ಸುಖವಿಲ್ಲದ ದಾವತಿಗೊಂಡೆನವ್ವಾ" ಎನ್ನುವ ಮಾತಿನೊಳಗೆ ತಮ್ಮೊಳಗಿನ ಅಗಾಧವಾದ ನೋವನ್ನು ಅಕ್ಕ ಅಭಿವ್ಯಕ್ತಿಸಿದ್ದಾರೆ. ಈ ಬಗೆಯ ನೋವುಗಳನ್ನು ದಾಟಲು ಅವರಿಗೆ ಯಾವುದೋ ಒಂದು ಕ್ಷಣ ಕಾರಣವಾಗಿರಬಹುದು.

ಅದನ್ನೇ “ಕೋಟಿರವಿ ಶಶಿಗಳ್ಗೆಮೀಟಾದ ಪ್ರಭೆ ಬಂದು ನಾಟಿತು ತನ್ನ ಮನಗೊಳಗದರಿಂದ ದಾಟಿದೆನೋ ಭವದ ಕೊಳಗಳ" ಎಂದು ಆಧ್ಯಾತ್ಮದ ಚಿಲುಮೆಗೆ ಕಾರಣವಾದ ಸಮಯವನ್ನು ಸಂತೋಷದಿಂದ ನೆನೆದಿದ್ದಾರೆ. ಅಕ್ಕನ ವಚನಗಳಲ್ಲಿಯ ಬಹುತೇಕ ಆಶಯ- ಬಹಿರಂಗದ ಶತ್ರು ಗಳಿಗಿಂತ ಅಂತರಂಗದ ಅಂದರೆ ಅರಿಷಡ್ವರ್ಗದ ನಾಶ ಅಗತ್ಯ ಎನ್ನುವುದು. ಇದನ್ನು ಪ್ರತಿಮೆಯ ಮೂಲಕ ಈ ವಚನದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ: ‘ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನ್ನೇ ಸುತ್ತಿ ಸುತ್ತಿ ಸಾವತೆರನಂತೆ ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯಾ, ಎನ್ನ ಮನದ ದುರಾಶೆಯ ಮಾಣಿಸು ನಿಮ್ಮತ್ತ ತೋರಾ ಚನ್ನಮಲ್ಲಿಕಾರ್ಜುನ" ಎಂಬ ಈ ವಚನದಲ್ಲಿ ತೆರಣಿ(ರೇಷ್ಮೆ)ಯ ಹುಳು ತಾನೇ ಕಾಳಜಿ ವಹಿಸಿ ತನ್ನ ದೇಹದಿಂದ ಉತ್ಪತ್ತಿಯಾಗುವ ನೂಲನ್ನು ತನ್ನ ಸುತ್ತ ಸುತಿ, ಇರುವುದಕ್ಕೊಂದು ಗೂಡನ್ನು ಕಟ್ಟಿಕೊಳ್ಳುತ್ತದೆ. ತಾನು ಸುಖವಾಗಿರಲೆಂದು ಆಶ್ರಯಕ್ಕಾಗಿ ತನ್ನ ದೇಹದ ಒಂದಂಗದಿಂದ ಉತ್ಪತ್ತಿಯಾದ ನೂಲನ್ನೇ ಬಳಸಿಕೊಂಡು ಗೂಡನ್ನು ಮಾಡಿಕೊಳ್ಳುತ್ತದೆ. ಆದರೂ ಅದು ಅದರೊಳಗೆ ಸುಖವಾಗಿ ಇರಲು ಸಾಧ್ಯವಾಗದೇ ಬೆಂದು ಸತ್ತುಹೋಗುತ್ತದಲ್ಲವೇ? ಈ ಪರಿಯಂತೆ ಅಕ್ಕನಿಗೆ ತಮ್ಮ ಬದುಕೂ ಇದಕ್ಕಿಂತ ಭಿನ್ನವೆಂದು ಅನ್ನಿಸುವುದಿಲ, ಮನಸ್ಸು ಕಂಡದ್ದನೆಲ್ಲ ಬಯಸಿ ಬಯಸಿ ತನ್ನ ಅವಸಾನಕ್ಕೆ ತಾನೇ ಕಾರಣವಾದಂತೆ ಭವಿಯು ತನ್ನ ಅತಿಯಾದ ಆಸೆಯಿಂದಲೇ ಅಂತ್ಯಗೊಳ್ಳುತ್ತಾನೆ ಎಂಬುದು ನಿರ್ವಿವಾದವಲ್ಲವೇ? ಹಾಗಾಗಿಯೇ ಅಕ್ಕಮಹಾದೇವಿ ‘ಎನ್ನ ಮನದಲ್ಲಿನ ದುರಾಶೆಯನ್ನು ಮಾಣಿಸಿ ಭಕ್ತಿಯ ಸಿಂಚನವನ್ನು ಮಾಡಿಸು’ ಎಂದು ಬೇಡಿಕೊಳ್ಳುವ ಈ ವಚನದಲ್ಲಿ ‘ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನೋಭಾವವನ್ನು ತಾಳಿ ಇದ್ದುದರಲ್ಲಿ ಸಂತೃಪ್ತಿ ಕಾಣುವುದು ಸಾತ್ವಿಕ ಬದುಕಿನ ಗುಟ್ಟು’ ಎಂಬುದನ್ನು ನಮ್ಮೆಲ್ಲರಿಗೂ ಸ್ಪಷ್ಟಪಡಿಸುತ್ತಾರೆ.

ಇವರ ಇನ್ನೊಂದು ಜನಪ್ರಿಯ ವಚನದ ವಿಶ್ಲೇಷಣೆ ಮಾಡದಿದ್ದರೆ ಈ ಲೇಖನ ಅಪೂರ್ಣವಾದಂತೆ ಎಂಬುದು ನನ್ನ ವಾದ. ಅದುವೇ ಈ ವಚನ: “ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದೊಡೆಂತಯ್ಯಾ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯಾ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯಾ? ಚನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದೆಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು" ಎಂದು ಹೇಳುವ ಅಕ್ಕನ ಆತ್ಮವಿಶ್ವಾಸದ ಮಾತುಗಳು ನಮ್ಮೆಲ್ಲರ ವಾಸ್ತವ ಬದುಕಿಗೆ ಎಷ್ಟೊಂದು ಹತ್ತಿರ ವಾಗಿದೆಯಲ್ಲವೇ? ದೀಪಕ್ಕೆ ಎಣ್ಣೆ ಇದ್ದಂತೆ ಎಲ್ಲ ಚಟುವಟಿಕೆಗಳಿಗೂ ಆತ್ಮವಿಶ್ವಾಸವಿರಬೇಕು.

ನಂಬಿಕೆ, ಛಲ ಹಾಗೂ ಪ್ರಯತ್ನಗಳ ಪ್ರತಿಫಲವೇ ಆತ್ಮವಿಶ್ವಾಸವಾಗಿರುತ್ತದೆ. ಇದುವೇ ಸಾಧನೆಗೆ ಸ್ಪೂರ್ತಿಯಾಗಿರುತ್ತದೆ. ನಮ್ಮ ಜೀವನದಲ್ಲಿ ಬರುವ ಎಲ್ಲ ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸಲು ಕರೆ ನೀಡಿ, ಶಕ್ತಿಯುತವಾದ ಆತ್ಮಕ್ಕೆ ಆತ್ಮವಿಶ್ವಾಸದ ಬಲ ತುಂಬಿ ನಮ್ಮ ಸಾಧನೆಯ ಹಾದಿಗೆ ಬೆಳಕು ತೋರಿದಂತಿರುವ ಅವರ ಈ ವಚನ ವಿಶೇಷವಾಗಿದೆ: “ನರ-ಜನ್ಮವ ತೊಡೆದು ಹರ-ಜನ್ಮವ ಮಾಡಿದ ಗುರುವೆ, ಭವ ಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ, ಭವಿ ಎಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ, ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ ಕೊಟ್ಟ ಗುರುವೆ ನಮೋ ನಮೋ||" ಎನ್ನುವ ಧನ್ಯತಾಭಾವದಿಂದ ತನ್ನ ಇಷ್ಟ ದೈವ ಮಲ್ಲಿಕಾರ್ಜುನನನ್ನು ಅರಸುತ್ತ ಶ್ರೀಶೈಲದ ಕದಳಿ ವನದಲ್ಲಿ ಐಕ್ಯವಾಗುವ ಅಕ್ಕಮಹಾದೇವಿ ಶರಣ ಪರಂಪರೆಯಲ್ಲಿಯೇ ಬಹುದೊಡ್ಡ ಚೇತನವಾಗಿ ಮೂಡಿ ಬಂದ ಘನ ವ್ಯಕ್ತಿತ್ವವಾಗಿದೆ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿಯವರೇ ರಚಿಸಿದ ವಚನಗಳು ಅವರ ಘನ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವೂ, ವೈಶಿಷ್ಟ್ಯ ಪೂರ್ಣವೂ, ವೈಚಾರಿಕವೂ, ಅನುಭಾವಪೂರ್ಣವೂ ಆದ, ನುಡಿ-ನಡೆಗಳೊಂದಾದ ಪರಿಯಲ್ಲಿರು ವುದು ಕಂಡುಬರುತ್ತದೆ. ವಚನ ಚಳವಳಿಯ ಸಮಯ ಹಾಗೂ ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆದಿದ್ದಾರೆ.

ಅನುಭಾವಿ ಅಕ್ಕಮಹಾದೇವಿಯವರ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ, ಅವರ ವಿಶಿಷ್ಟ ವೈರಾಗ್ಯ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ವಚನಗಳು ಇಂದಿಗೂ ಗಮನಾರ್ಹವಾಗಿದ್ದು, ಅವುಗಳಲ್ಲಿನ ಅಂತಃಸತ್ವವು ಇಂದಿನ ಜನಜೀವನದಲ್ಲಿ ಮಿಳಿತವಾದರೆ ಬದುಕು ಸುಂದರವಲ್ಲವೇ?

(ಲೇಖಕರು ಕನ್ನಡ ಸಾಹಿತ್ಯ ಪರಿಷತ್ತಿನ ಬಾದಾಮಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರು)