ಸಂಸ್ಮರಣೆ
ಟಿ.ದೇವಿದಾಸ್
ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸಾಂಸ್ಕೃತಿಕ ಸಮೃದ್ಧಿಗೆ ಮುಕುಟಪ್ರಾಯವಾಗಿ ಶೋಭಿಸುತ್ತಿರುವುದು ಯಕ್ಷಗಾನ ಎಂಬುದು ಸರ್ವಕಾಲಕ್ಕೂ ಅನ್ವಯಿಸುವಂಥ ಸತ್ಯ. ಯಕ್ಷಗಾನದ ಹುಚ್ಚು ಅಂತಿಂಥ ಹುಚ್ಚಲ್ಲ. ೪೬ ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಈಗ ಅರ್ಧಕ್ಕೇ ಆಟ ನಿಲ್ಲಿಸಿ ಹೋದ ಸುಬ್ರಹ್ಮಣ್ಯ ಧಾರೇಶ್ವರರಿಗೂ ಅಂಥದ್ದೇ ಆಟದ ಹುಚ್ಚು ಬಾಲ್ಯದಲ್ಲಿತ್ತು ಎಂಬುದನ್ನು ಅವರೇ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.
ಯಕ್ಷಗಾನದ ಮೂರು ಪ್ರಕಾರಗಳಾದ ತೆಂಕುತಿಟ್ಟು, ಬಡಗುತಿಟ್ಟು, ಬಡ ಬಡಗುತಿಟ್ಟುಗಳಲ್ಲೂ ಧಾರೇಶ್ವರ ಭಾಗವತರದು ಒಂಥರಾ ಆಕರ್ಷಣೀಯ ಪ್ರಭುತ್ವ. ಅದರಲ್ಲೂ ಬಡಗುತಿಟ್ಟಿನಲ್ಲಿ ಅವರದು ಎತ್ತಿದ ಕೈ. ಜತೆಗೆ ಅಪಾರ ಅಭಿಮಾನಿಗಳನ್ನು ತಮ್ಮ ಕೊರಳ ಸಿರಿಯಿಂದ ಸೆಳೆವ ತಾಕತ್ತು ಅವರಿಗಿತ್ತು. ಧಾರೇಶ್ವರರು ಮೊನ್ನೆ ಗುರುವಾರ ಬೆಳಗಿನ ಜಾವ ನಾಕೂವರೆಗೆ ನಿಧನರಾದರು ಎಂದು ಸುದ್ದಿ ಕೇಳಿದಾಗ ನನಗೆ ತಕ್ಷಣ ಅನಿಸಿದ್ದು ಹೀಗೆ: ಅವರು ರಂಗಸ್ಥಳಕ್ಕೆ ಬರುವುದು ರಾತ್ರಿ ಸುಮಾರು ಒಂದೂವರೆಯಿಂದ ಎರಡು ಗಂಟೆಯ ಹೊತ್ತಿಗೆ. ಸರಿಸುಮಾರು ನಾಕು ನಾಕೂವರೆ ಹೊತ್ತಿಗೆ ಅಂದರೆ ಬೆಳಗಿನ ಜಾವದಲ್ಲಿ ದುರ್ಗಪ್ಪ ಗುಡಿ
ಗಾರರ (ಇಬ್ಬರ ಜೋಡಿ ದ್ವಂದ್ವ ಯಕ್ಷಲೋಕದಲ್ಲೇ ಅಪೂರ್ವವಾದದ್ದು, ಅವಿಸ್ಮರಣೀಯವಾದದ್ದು, ಅಪ್ರತಿಮವಾದದ್ದು) ಏರು ಮದ್ದಳೆಯ ಶ್ರುತಿಗೆ ಕರುಣ
ಮತ್ತು ಶೃಂಗಾರ ರಸದ ಪದಗಳನ್ನು ಧಾರೇಶ್ವರರು ಹಾಡುವ ಹೊತ್ತು.
ಆ ಸಮಯದಲ್ಲಿ ಪ್ರಸಂಗದ ಕ್ಲೈಮಾಕ್ಸಿನ ರೋಚಕತೆಯ ಆರಂಭದ ಸ್ಪರ್ಶ ಆಗುತ್ತಿರುತ್ತದೆ. ಕಥೆಯ ಓಘ ಮತ್ತು ಧಾರೇಶ್ವರರ ದನಿ ಮಲಗಿದ ವನನ್ನು ಎಬ್ಬಿಸುತ್ತದೆ. ಧಾರೇಶ್ವರರು ಕೊರಳು ಸೋಲದ ಹಾಗೆ ಹಾಡುವ ಅಂಥ ಹೊತ್ತಲ್ಲಿ ನಿಧನರಾಗಿದ್ದಾರೆ; ಆಟ ಅರ್ಧಕ್ಕೇ ನಿಂತಿದೆಯೇನೋ ಎಂದು ಭಾಸವಾಗುವಂತೆ! ಒಬ್ಬ ಸಾಧಕನ ಶಾಶ್ವತ ಅಗಲಿಕೆಯು ಹುಟ್ಟಿಸ ಬಹುದಾದ ಶೂನ್ಯವನ್ನು ಇನ್ನೊಬ್ಬ ಸಾಧಕ ತುಂಬುವುದಕ್ಕೆ ಸಾಧ್ಯವೇ ಇಲ್ಲವೆಂದು ನಾನು ಭಾವಿಸಿದವನು.
ಧಾರೇಶ್ವರರ ಅಗಲಿಕೆ ಯಕ್ಷಗಾನಕ್ಕೆ ಆ ತೆರನಾದದ್ದು. ಅವರ ಪ್ರಯೋಗಶೀಲತೆ ಮತ್ತು ಕರ್ತೃತ್ವ ಶಕ್ತಿ ಸಮಕಾಲೀನ ಯಕ್ಷಗಾನ ಲೋಕಕ್ಕೆ ಸವಾಲಾಗೇ ಇರುವಂಥದ್ದು. ಪೆರ್ಡೂರು, ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ, ಶಿರಸಿ, ಸಾಲಿಗ್ರಾಮ (ಅಲ್ಪಸಮಯ ಮಾತ್ರ) ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದ ಧಾರೇಶ್ವರರು ಬಡಗು ತಿಟ್ಟಿನ ಜನಪ್ರಿಯ ಮತ್ತು ಜನಪ್ರಸಿದ್ಧ ಮೇಳವಾದ ಪೆರ್ಡೂರು ಮೇಳವೊಂದರಲ್ಲೇ ೨೮ ವರ್ಷಗಳ ನಿರಂತರ
ಭಾಗವತಿಕೆ ಮಾಡಿದವರು. ಈ ಕಾಲದಲ್ಲೇ ಅವರು ಹೊಸತನಕ್ಕೆ ಮುನ್ನುಡಿಯನ್ನು ಹಾಕಿ ಯಶಸ್ಸನ್ನು ಕಂಡವರು.
ಯಕ್ಷಗಾನಕ್ಕೆ ಹೊಸಸ್ಪರ್ಶವನ್ನು ನೀಡಿದವರು. ಇದರಿಂದ ಅವರಿಗೆ ಹೆಸರೂ ಬಂದಿದೆ. ಸಮ್ಮಾನವೂ ಗೌರವವೂ ದೊರೆತಿದೆ. ಅದೇ ಪ್ರಮಾಣದಲ್ಲಿ ವ್ಯಂಗ್ಯವೂ
ವಿಡಂಬನೆಯೂ ಆರೋಪವೂ ಅವರನ್ನು ಸುತ್ತಿಕೊಂಡಿವೆ. ಯಕ್ಷಗಾನದ ಪ್ರಸಂಗವೊಂದರಲ್ಲಿ ಜಂಜುಟಿ ರಾಗ, ರೂಪಕ ತಾಳವನ್ನು ಪರಿಚಯಿಸಿದಾಗ, ‘ಧಾರೇಶ್ವರರು ಯಕ್ಷಗಾನವನ್ನು ಲೈಟ್ ಮ್ಯೂಸಿಕ್ ಮಾಡ್ತಾರೆ’ ಎಂದು ತಮ್ಮ ಬಗ್ಗೆ ಕೆಟ್ಟದಾಗಿ ಬರೆದುದನ್ನು ಅವರು ನೋವಿನಲ್ಲೇ ಹೇಳಿಕೊಂಡಿದ್ದಿದೆ. ಇದೊಂದು ಉದಾಹರಣೆಯಷ್ಟೆ.
ಇಂಥದ್ದು ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಪ್ರಭುತ್ವ ಇರುವ ಒಬ್ಬ ಕಲಾವಿದನ ಸೃಷ್ಟಿಶೀಲತೆಯನ್ನು ಪ್ರಶ್ನಿಸುವ ಪ್ರಶ್ನೆಯಲ್ಲಿಯೂ ನಿಜವಾದ ಶ್ರದ್ಧೆಯಿರಬೇಕು ಎಂಬು ದನ್ನು ಧಾರೇಶ್ವರರ ಮಾತಿನಲ್ಲಿ ಗುರುತಿಸಬೇಕು ಎಂಬಲ್ಲಿಗೆ ಧಾರೇಶ್ವರರು ತಾವು ಪ್ರಶ್ನಾತೀತರಲ್ಲ ಎಂಬುದನ್ನು ಒಪ್ಪುತ್ತಾರೆ.
೧೯೫೭ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹುಟ್ಟಿದ ಧಾರೇಶ್ವರರು ಸಂಗೀತ ಕಲಿತು ಕಾರ್ಯಕ್ರಮ ಗಳನ್ನು ನೀಡುತ್ತಿದ್ದ ಕಾಲವೊಂದಿತ್ತು. ಇಲೆಕ್ಟ್ರಿಕ್ ಅಂಗಡಿ ಯನ್ನು ಆರಂಭಿಸಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿಕೊಡುತ್ತಿದ್ದ ದಿನಗಳಲ್ಲಿ ಧಾರೇಶ್ವರರ ಹಾಡು ಗಾರಿಕೆಯ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಯಕ್ಷಗಾನದ ಪ್ರಾತಃಸ್ಮರಣೀಯ ದಿ. ಶ್ರೀ ನಾರಣಪ್ಪ ಉಪ್ಪೂರರು ಗುರುತಿಸಿ ಗ್ರಹಿಸಿ ಧಾರೇಶ್ವರ ಮಾಣಿಯನ್ನು ರಂಗಸ್ಥಳಕ್ಕೆ ಕರೆತಂದರು. ಶ್ರೇಷ್ಠ ಗುರುವಿನ ಗರಡಿಯಲ್ಲಿ ಪಳಗಿದ ಧಾರೇಶ್ವರರು ಜನಪ್ರಿಯರಾದರು.
ಪೌರಾಣಿಕ ಮಾತ್ರ ವಲ್ಲದೆ ಸಾಮಾಜಿಕ ಕಥಾಹಂದರವುಳ್ಳ ಪ್ರಸಂಗಗಳಲ್ಲಿ ಹೊಸತನದ ಪ್ರಯೋಗ ಮಾಡಿ ಯಶಸ್ಸನ್ನು ಅದರ ತುರೀಯದಲ್ಲಿ ಕಂಡವರು ಧಾರೇಶ್ವರರು. ಯಕ್ಷಗಾನದ ಇನ್ನೊಬ್ಬ ಜನ್ಮಜಾತ ಅಪ್ರತಿಮ ಅನುಪಮ ಸೃಜನಶೀಲ ಪ್ರತಿಭೆಯಾದ ದಿ.ಕಾಳಿಂಗ ನಾವುಡರ ಅಗಲುವಿಕೆಯಿಂದ ಉಂಟಾಗಿದ್ದ ನಿರ್ವಾತವನ್ನು ತುಂಬುವಲ್ಲಿ ಧಾರೇಶ್ವರರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರು ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯಂತೂ ಖಂಡಿತವಾಗಿಯೂ ಇಲ್ಲ. ಆದರೆ
ನಾವುಡರ ಲೋಕವೇ ಬೇರೆ. ಅದೊಂದು ಅತ್ಯದ್ಭುತ ಯಕ್ಷ ಪ್ರಪಂಚದಲ್ಲಿ ಮುಳುಗೇರಿದ ತನ್ಮಯತೆಯ ವಿಹಾರದ ಅನುಭೂತಿ. ಧಾರೇಶ್ವರರ ಲೋಕವೇ ಇನ್ನೊಂದು ತೆರನಾದ ಅನುಭೂತಿ. ಇಬ್ಬರನ್ನೂ ಪರಸ್ಪರ ಹೋಲಿಕೆ ಮಾಡುವುದೇ ಅಸಮರ್ಪಕವಾದುದು. ಹೋಲಿಕೆ ಮಾಡಿದರೆ ಇಬ್ಬರಿಗೂ ಅನ್ಯಾಯ ಮಾಡಿದಂತೆ! ಅಚ್ಚರಿಯೆಂಬಂತೆ ಕೀರ್ತಿಯ ಉತ್ತುಂಗದಲ್ಲಿರುವಾಗಲೇ ನಾವುಡರು ಸಣ್ಣ ವಯಸ್ಸಿನಲ್ಲೇ ಅಕಾಲ ಮೃತ್ಯುವಿಗೀಡಾದರು.
ಆದರೆ, ಧಾರೇಶ್ವರರು ಕೀರ್ತಿಯ ಉತ್ತುಂಗವನ್ನು ತಮ್ಮ ಕಾಲದ ಸರಿಹೊತ್ತಿನ ಭಾಗವತರ ಸಾಲಿನಲ್ಲಿ ಮೆರೆದವರು. ಅಲ್ಲಿಯೇ ಕೆಲಕಾಲ ನಿಂತು ವಿಶ್ರಮಿಸಿ ನಿವೃತ್ತರೂ ಆಗಿದ್ದ ವರು. ಬೇಡಿಕೆಯ ಉತ್ತುಂಗವನ್ನು ಮುಟ್ಟಿದಂತೆ ಇತ್ತೀಚೆಗೆ ಬೇಡಿಕೆಯ ಕೊರತೆಯನ್ನೂ ಅನುಭವಿಸಿದ ಧಾರೇಶ್ವರರು ನೆಲದಿಂದ ಚಿಮ್ಮಿ ಮೇಲಕ್ಕೆ ಹೋಗಿ ಅಲ್ಲಿಯೇ ಬಹುಕಾಲ ಸ್ವೇಚ್ಛೆಯಿಂದ ಹಾರಾಡುತ್ತ ಅಸಾಧ್ಯವನ್ನು ಸಾಧ್ಯವಾಗಿಸಿ ಮತ್ತೆ ನೆಲಕಚ್ಚಿದರು ಎಂದರೆ ಅನ್ಯಥಾ ಭಾವಿಸಲಾಗದು.
ಭಾವಿಸಬಾರದು. ಪ್ರತಿಯೊಬ್ಬ ಸಾಧಕನ ಬದುಕೂ ಹೀಗೆಯೇ ಅಲ್ಲವೆ? ಹಲವು ಮಕ್ಕಳ ತಾಯಿ ಕೋಟ ಅಮೃತೇಶ್ವರಿ ಮೇಳ, ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸರಾಗ ಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿ ಸುಮಾರು ೪೦೦ಕ್ಕಿಂತಲೂ ಅಧಿಕ ಯಕ್ಷ
ಗಾನದ ಆಡಿಯೋ ಕ್ಯಾಸೆಟ್‌ಗಳಲ್ಲಿ ಧಾರೇಶ್ವರರು ಹಾಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರರು ಸುಮಾರು ನಾಲ್ಕು ದಶಕಗಳನ್ನು ಮೀರಿ
ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿದ್ದರು. ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದ ಧಾರೇಶ್ವರರು, ಸಾಧನೆಯ ಮೂಲಕ ಎತ್ತರವನ್ನು
ತಲುಪಿದವರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಧಾರೇಶ್ವರರು, ರಂಗಕ್ಕೆ ಬಂದಾಗ ಚಪ್ಪಾಳೆ ಸಿಳ್ಳೆಗಳಿಗೆ ಕೊನೆಯೇ ಇರುತ್ತಿರಲಿಲ್ಲ.
ಕೋಟದ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆಯ ಮಟ್ಟುಗಳನ್ನು, ಜತೆಗೆ ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತ ಧಾರೇಶ್ವರರು ಜನಪ್ರಿಯ ಪೆರ್ಡೂರು ಮೇಳದಲ್ಲಿಯೇ ಸುಮಾರು ೨೬ ವರ್ಷಗಳಿಗೂ ಅಧಿಕ ತಿರುಗಾಟ ಮಾಡಿದವರು. ಸುಮಾರು ೩೦೦ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆ ಮುಂತಾದವರ ಕವನಗಳೂ ಯಕ್ಷಗಾನದ ಹಾಡು ಗಳಾಗಿದ್ದು ಧಾರೇಶ್ವರರ ಕಂಠಸಿರಿಯಲ್ಲಿ! ಅಮೃತ ವರ್ಷಿಣಿ, ಸಿಂಧೂರಭಾಗ್ಯ, ರಕ್ತತಿಲಕ, ಶೂದ್ರ ತಪಸ್ವಿನಿ, ಚಾರುಚಂದ್ರಿಕೆ, ಗಗನಗಾಮಿನಿ, ವಸಂತಸೇನೆ, ಚಂದ್ರ ಚಕೋರಿ, ಪದ್ಮಪಲ್ಲವಿ, ನಾಗವಲ್ಲಿ- ಹೀಗೆ ಧಾರೇಶ್ವರರು
ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.
ಜನಮಾನಸವನ್ನು ಗೆದ್ದಿವೆ. ಮತ್ತೆ ಮತ್ತೆ ಪ್ರಯೋಗಕ್ಕೆ ಒಳಗಾಗಿ ನಾವೀನ್ಯವನ್ನು ಪಡೆದಿವೆ. ಪೆರ್ಡೂರು ಮೇಳವನ್ನು ಬಿಟ್ಟು ೯ ವರ್ಷದ ಬಳಿಕ ಅನಿವಾರ್ಯ ಸಂದರ್ಭವೊಂದರಲ್ಲಿ ಮತ್ತೆ ಮೇಳ ಸೇರಿ ಒಂದು ವರ್ಷ ತಿರುಗಾಟ ನಡೆಸಿ, ಕಳೆದ ಮೂರು ವರ್ಷ ಗಳಿಂದ ಮೇಳದಿಂದ ದೂರವಿದ್ದು ಯಕ್ಷಗಾನ ಕಾರ್ಯ
ಕ್ರಮಗಳನ್ನು ಸಂಯೋಜಿಸುತ್ತಿದ್ದ ಧಾರೇಶ್ವರರು ಕೆಲ ಸಮಯದಿಂದ ಅನಾರೋಗ್ಯದಲ್ಲಿದ್ದರು. ಪೆರ್ಡೂರು ಮೇಳವನ್ನು ಬಿಡುವಾಗಲೇ ಅವರಿಗೆ ಸ್ವರದ ಅನಾರೋಗ್ಯ ಇತ್ತೆಂಬ ವದಂತಿಯೂ ಹಬ್ಬಿತ್ತು. ತಮ್ಮ ಯಕ್ಷಗಾನದ ಬದುಕಿನಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಧಾರೇಶ್ವರರು ವೈರುದ್ಧ್ಯಗಳನ್ನೂ ನೋಡಿದವರು.
ಬಡಗುತಿಟ್ಟಿನ ಯಕ್ಷಲೋಕಕ್ಕೆ ಅಸಾಧಾರಣ ಅಸಾಮಾನ್ಯ ಕೊಡುಗೆಗಳನ್ನು ಕೊಟ್ಟ ಕೆರೆಮನೆ ಮನೆತನದ ಕಲಾ ಪುಂಗವರನ್ನು, ನಟಸಾರ್ವಭೌಮ ಚಿಟ್ಟಾಣಿ ರಾಮಚಂದ್ರ ಹೆಗಡೆ, ತೆಂಕುತಿಟ್ಟಿನ ಶ್ರೇಷ್ಠ ಕಲಾವಿದರನ್ನು ರಂಗದಲ್ಲಿ ಆಡಿಸಿ ಸೈ ಎನಿಸಿಕೊಂಡ ಅನುಭವಿ ಹಿರಿಯರಾದ ಧಾರೇಶ್ವರರು ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಬಹು ಮಾನ್ಯತೆಯನ್ನು ಗಳಿಸಿದ್ದರು. ಜನಸಂಪರ್ಕದಿಂದ, ಅಭಿಮಾನಿಗಳಿಂದ ಅಭೂತಪೂರ್ವವೆನಿಸಿದ್ದನ್ನು ಸಾಧಿಸಿದ್ದರು. ಹಗಲಿಡೀ ಹೊಸತನಕ್ಕಾಗಿ ಕನಸನ್ನು ಹೊತ್ತು ರಾತ್ರಿ ಹೊತ್ತು ಅದನ್ನು ರಂಗದಲ್ಲಿ ನನಸು ಮಾಡಿಕೊಳ್ಳುತ್ತಿದ್ದ ಧಾರೇಶ್ವರರು ಯಾವ ಪ್ರಸಂಗವನ್ನು ಹೇಗೆ ಆಡಿಸಿ
ಕೊಳ್ಳಬೇಕು, ಯಾವ ಕಲಾವಿದನನ್ನು ಹೇಗೆ ದುಡಿಸಿ ಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದರು.
ಇಂದು ರಂಗದಲ್ಲಿ ಮಿಂಚುತ್ತಿರುವ ಅನೇಕ ಕಲಾವಿದರು ಧಾರೇಶ್ವರರ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. ಹವ್ಯಕ ಬ್ರಾಹ್ಮಣರಾದ ಧಾರೇಶ್ವರರು ಹವ್ಯಕ ಕಲಾವಿದರಿಗೆ ಒಳ್ಳೆಯ ಪಾತ್ರಗಳ ನಿರ್ವಹಣೆಗೆ ಹೆಚ್ಚು ಅವಕಾಶವನ್ನು ನೀಡುತ್ತಿದ್ದರು, ರಂಗದಲ್ಲಿ ಕುಣಿಸುತ್ತಿದ್ದರು ಎಂಬ ಮಾತನ್ನೂ ನಾನು ಕೇಳಿದ್ದೇನೆ. ಅಂದರೆ, ಜಾತೀಯತೆಯು ಧಾರೇಶ್ವರರಲ್ಲಿತ್ತು ಎಂಬ ಆರೋಪವನ್ನೂ ಕೇಳಿದ್ದೇನೆ. ಹಲವು ವಿಚಾರಗಳಲ್ಲಿ ಧಾರೇಶ್ವರರೊಂದಿಗೆ ವೈಮನಸ್ಸನ್ನೂ ವೈಷಮ್ಯವನ್ನೂ ಹೊಂದಿದವರೂ ಇದ್ದಾರೆ. ವೈಯಕ್ತಿಕ ವಾದ ನೆಲೆಯಲ್ಲಿ ಇಂಥದ್ದನ್ನೆಲ್ಲ ಸಹಜವೆಂದೇ ಭಾವಿಸಬೇಕಾಗುತ್ತದೆ. ಧಾರೇಶ್ವರರಂಥ ಒಬ್ಬ ದೊಡ್ಡ ಕಲಾವಿದನ
ಅಗಲುವಿಕೆಯ ಈ ಸಂದರ್ಭದಲ್ಲಿ ಯಕ್ಷಗಾನ ಕಲೆಗೆ ಅವರು ಕೊಟ್ಟ ಕೊಡುಗೆಯನ್ನು ಮಾತ್ರ ನೆನಪಿಸಿಕೊಂಡು ವಿಷಾದವನ್ನು ಅಭಿವ್ಯಕ್ತಿಸುವುದು ಕಲಾವಿದನಿಗೆ ಕೊಡುವ ಬಹುದೊಡ್ಡ ಗೌರವವಾಗುತ್ತದೆ.
ಮೂರು ತಲೆಮಾರಿಗೆ ತಮ್ಮ ಇಂಪಾದ ಕೊರಳ ಸಿರಿ ಯಿಂದ ಯಕ್ಷಗಾನದ ಹುಚ್ಚನ್ನು ಹಿಡಿಸಿದ ಸುಬ್ರಹ್ಮಣ್ಯ ಧಾರೇಶ್ವರರು, ಇದು ಧಾರೇಶ್ವರರ ಶೈಲಿಯೆಂದೇ
ಜನಜನಿತವಾಗುವಷ್ಟು ಛಾಪನ್ನು ಮೂಡಿಸಿದವರು. ಧಾರೇಶ್ವರರ ಮಾತು ಚೆಂದ. ಏರಿ ಇಳಿಯುವ ಅವರ ಮಾತಿನ ಉಸಿರಿನ ಹದವನ್ನು ರಂಗದಲ್ಲಿ ಪಾತ್ರಗಳೊಂದಿಗೆ ಕೇಳುವುದೇ ಚೆಂದ. ರಂಗದಲ್ಲಿ ಸಹಜವಾದ ಮಾತಿಗೆ ನಿಂತರೂ ಧಾರೇಶ್ವರರು ಕಟ್ಟುವ ಮಾತಿನ ಹಂದರವೂ ಆಕರ್ಷಣೀಯವಾಗಿರುತ್ತದೆ. ಗುಣಗ್ರಾಹಿತ್ವ ಅವರ ದೊಡ್ಡತನ. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಅಭಿಮಾನಿಗಳನ್ನು ದುಡಿಸಿಕೊಂಡ ಹೆಗ್ಗಳಿಕೆ ಧಾರೇಶ್ವರ ರದ್ದು. ಅವರಿಗಾದದ್ದು ಅರುವತ್ತೇಳು ವರ್ಷ. ಸಾಯುವ ವಯಸ್ಸಂತೂ ಅದಲ್ಲವೇ ಅಲ್ಲ. ಯಕ್ಷಗಾನದ ಭವಿಷ್ಯದ ಬದುಕಿನಲ್ಲಿ ಧಾರೇಶ್ವರರ ಅಗಲಿಕೆ ಕಾಡುವುದಂತೂ ನೂರಕ್ಕೆ ನೂರು ಸತ್ಯ!
(ಲೇಖಕರು ಉಪನ್ಯಾಸಕರು)