ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಭೃಕಭೌಮನು ಬೀರ್‌ ಬಲ್ಲವನಾಗಿ ನಡೆಸಿದ ರಾಜಿ ಪಂಚಾಯಿತಿಕೆ

Srivathsa Joshi Column: ಭೃಕಭೌಮನು ಬೀರ್‌ ಬಲ್ಲವನಾಗಿ ನಡೆಸಿದ ರಾಜಿ ಪಂಚಾಯಿತಿಕೆ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಮೆರಿಕದಲ್ಲಿ ಸುಮಾರು 15 ವರ್ಷಗಳ ಹಿಂದೆ, ಬರಾಕ್ ಒಬಾಮ ರಾಷ್ಟ್ರಾಧ್ಯಕ್ಷರಾಗಿದ್ದಾಗ ನಡೆದ ಒಂದು ರಸಪ್ರಸಂಗವಿದು. ಪಕ್ಕಾ ರಸವಾರ್ತೆ ಮಾದರಿಯದು. ಇದರ ಸಂಕ್ಷಿಪ್ತ ರೂಪವನ್ನು ಆಗ ನಾನು ‘ವಿಜಯ ಕರ್ನಾಟಕ’ ಪತ್ರಿಕೆಗೆ ಬರೆಯುತ್ತಿದ್ದ ‘ಪರಾಗಸ್ಪರ್ಶ’ ಅಂಕಣದಲ್ಲಿಯೂ ಒಮ್ಮೆ ಬರೆದಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ, ಈ ರಸಪ್ರಸಂಗದ ವಿವರಗಳೆಲ್ಲ ನನಗೆ ಮರೆತೇ ಹೋಗಿದ್ದವು. ಮೊನ್ನೆ ಸಾಮಾಜಿಕ ಜಾಲ ತಾಣಗಳಲ್ಲಿ ‘ಒಳಗೆ ಸೇರಿದರೆ ಗುಂಡು… ಕಮಲಾ ಹ್ಯಾರಿ ಸ್ ಆಗುವಳೇ ಗಂಡು?’ ಎಂದು ತಮಾಷೆ ಮಾಡುವುದಕ್ಕೆ ತಕ್ಕುದಾಗಿ ಹರಿದಾಡಿದ ಕಮಲಾ ಹ್ಯಾರಿ ಸ್‌ರ ತಥಾಕಥಿತ ಗುಂಡುಸೇವನೆ ವಿಡಿಯೋಗಳನ್ನು ನೋಡಿದಾಗ ನನಗಿದು ಥಟ್ಟನೆ ನೆನಪಾಯಿತು. ಇದರಲ್ಲೂ ಗುಂಡಿನ ಸಮಾಚಾರ ಬರುತ್ತದೆ, ಅಷ್ಟೊಂದು ಹಾಟ್ ಆಗಿ ಅಲ್ಲ, ಬರೀ ಬಿಯರ್ ಮಾತ್ರ.

ಅಲ್ಲದೇ ಬರಾಕ್ ಒಬಾಮ ಆಗ ಅಧ್ಯಕ್ಷ ಗದ್ದುಗೆಯಲ್ಲೇ ಇದ್ದವರು, ಸೋಲಿನ ಸಂಕಟ ಮರೆಯಲಿಕ್ಕೆ ಸೋಮರಸದ ಮೊರೆ ಹೊಕ್ಕಿದ್ದಲ್ಲ. ತಾನೊಬ್ಬನೇ ಕುಡಿದು ದಾಂಧಲೆ ಎಬ್ಬಿಸಿದ್ದೂ ಅಲ್ಲ. ಆಗ ಉಪಾಧ್ಯಕ್ಷರಾಗಿದ್ದ ಜೋ ಬೈಡನ್‌ರನ್ನೂ ಸೇರಿಸಿ, ಇನ್ನೂ ಇಬ್ಬರು ವಿಶೇಷ ಅತಿಥಿ ಗಳಿಗೆ ಸತ್ಕಾರದ ನೆಪದಲ್ಲಿ ಬಿಳಿಮನೆಯ ಹುಲ್ಲುಹಾಸಿನ ಮೇಲೆ ರಾಜಾರೋಷವಾಗಿ ಬಿಯರ್‌ಪಾರ್ಟಿ ನಡೆಸಿದ್ದು. ರಸವಾರ್ತೆ ಎಂದೆನಿಸಿ ಕೊಳ್ಳುವ ಹೊತ್ತಿಗೇ ಇದರಲ್ಲಿ ನಿಮಗೆ ಅಮೆರಿಕದ ಸಾಮಾಜಿಕ ಜನಜೀವನ, ನೆರೆಕೆರೆಯಲ್ಲಿ ಒಬ್ಬರಿಗೊಬ್ಬರು ಪರಿಚಯವಿಲ್ಲದೇ ಇರುವ ಪರಿಸ್ಥಿತಿಗಳು, ಕಾನೂನಿನ ಚೌಕಟ್ಟು ಮತ್ತು ಕಟ್ಟುನಿಟ್ಟು, ಪ್ರಪಂಚದೆಲ್ಲೆಡೆಯಂತೆ ಇಲ್ಲಿಯೂ ಮಾಧ್ಯಮದ ಮಂದಿ ಕೆಟ್ಟ ಕುತೂಹಲದ ಸುದ್ದಿಗಳಿಗೆ ಹಪಹಪಿಸುತ್ತಿರುವುದು, ರಾಷ್ಟ್ರಾಧ್ಯಕ್ಷನನ್ನೂ ಪ್ರಜೆಗಳು ತರಾಟೆಗೆ ತೆಗೆದುಕೊಳ್ಳುವುದು, ನಿರ್ನಾಮವಾಗಿದೆ ಎಂದು ಎಷ್ಟು ಅಂದುಕೊಂಡರೂ ಆಗಾಗ ಅಲ್ಲಲ್ಲಿ ತಲೆಯೆತ್ತುವ ವರ್ಣಭೇದ ನೀತಿ… ಮುಂತಾದ ಎಲ್ಲ ಸೂಕ್ಷ್ಮ ಅಂಶಗಳೂ ಗೋಚರಿಸುತ್ತವೆ.

ಆದರೆ ರಸವಾರ್ತೆಯಂತೆ ಪ್ರಸ್ತುತಪಡಿಸುವುದಕ್ಕೆ ಮೊದಲು ಒಂದು ಸಿಂಪಲ್ ಚಂದಮಾಮ ಕಥೆಯಂತೆ ಘಟನೆ ಯನ್ನು ವಿವರಿಸುತ್ತೇನೆ. ಆಮೇಲೆ ಅಸಲಿ ರೂಪಕ್ಕೆ ಬರೋಣ. ಒಂದಾನೊಂದು ಊರಿನಲ್ಲಿ ಗಟ್ಟಯ್ಯನೆಂಬ ಒಬ್ಬ ಬಡ ಶಿಕ್ಷಕನಿದ್ದನು. ಮನೆಯಲ್ಲಿ ಒಬ್ಬನೇ ವಾಸವಾಗಿದ್ದನು. ಅಕ್ಕಪಕ್ಕದ ಮನೆಗಳವರೊಡನೆ ಆತನ ಒಡನಾಟ, ಆತ್ಮೀಯತೆಗಳೆಲ್ಲ ಅಷ್ಟಕ್ಕಷ್ಟೇ.

ಒಮ್ಮೆ ಗಟ್ಟಯ್ಯನು ದೂರದ ಊರಿಗೆ ಪ್ರವಾಸ ಹೋಗಿಬಂದನು. ಹಿಂದಿರುಗಿ ಮನೆ ತಲುಪಿದಾಗ ಅವನಿಗೊಂದು ವಿಚಿತ್ರ ಪರಿಸ್ಥಿತಿ ಎದುರಾ ಯಿತು. ಮುಂಬಾಗಿಲಿನ ಬೀಗ ತೆಗೆದು ಬಾಗಿಲು ತೆರೆಯೋ ಣವೆಂದರೆ ಏನು ಮಾಡಿದರೂ ತೆರೆಯಲಿಲ್ಲ. ಬಲಪ್ರಯೋಗ ಮಾಡಿದರೂ ಬಾಗಿಲು ಒಂಚೂರೂ ಮಿಸುಕಲಿಲ್ಲ. ಗಟ್ಟಯ್ಯನ ಪಕ್ಕದ ಮನೆಯಲ್ಲಿ ವಲಿಯಮ್ಮ ಎಂಬ ಹೆಂಗಸು ವಾಸಿಸುತ್ತಿದ್ದಳು. ಅವಳಿನ್ನೂ ಆ ವಠಾರಕ್ಕೆ ಹೊಸಬಳು. ಪಕ್ಕದ ಮನೆಗಳವರ ಪರಿಚಯ ಇಲ್ಲದವಳು. ನೆರೆಮನೆಯ ಬಾಗಿಲಿನ ಮೇಲೆ ಯಾರೋ ಅಪರಿಚಿತ ವ್ಯಕ್ತಿ ಬಲಪ್ರಯೋಗ ಮಾಡುತ್ತಿರುವುದನ್ನು ಕಂಡ ಆಕೆ ಅವನೊಬ್ಬ ಕಳ್ಳನಿರಬೇಕೆಂದುಕೊಂಡು ಬೊಬ್ಬೆ ಹಾಕಿದಳು.

ಅಲ್ಲೇ ಗಸ್ತು ತಿರುಗುತ್ತಿದ್ದ ಒಬ್ಬ ಕಾವಲುಗಾರ ಬೊಬ್ಬೆ ಕೇಳಿ ಅಲ್ಲಿಗೆ ಬಂದನು. ಅಷ್ಟುಹೊತ್ತಿಗೆ ಗಟ್ಟಯ್ಯ ತನ್ನ ಮನೆಬಾಗಿಲು ತೆರೆಯುವುದರಲ್ಲಿ ಸಫಲನಾಗಿ ಮನೆಯೊಳಗೆ ಹೋಗಿ ಆಗಿತ್ತು. ಮುಂಬಾಗಿಲು ಇನ್ನೂ ತೆರೆದೇ ಇತ್ತು. ಕಳ್ಳ ಒಳನುಗ್ಗಿದ್ದಾನೆ ಎಂದುಕೊಂಡ ಕಾವಲುಗಾರ ಆ ಮನೆಯ ಒಳಗೆ ಹೋಗಿ ಬಡಪಾಯಿ ಗಟ್ಟಯ್ಯನನ್ನೇ ಹಿಡಿದುಕೊಂಡನು. ಗಲಿಬಿಲಿಯಾದ ಮತ್ತ ಸಿಡಿಮಿಡಿಗೊಂಡ ಗಟ್ಟಯ್ಯ ಕಾವಲುಗಾರನೊಡನೆ ಜಗಳವಾಡಿದನು. ಇದರಿಂದ ಕುಪಿತನಾದ ಕಾವಲುಗಾರ ಗಟ್ಟಯ್ಯನಿಗೆ ಬೇಡಿ ತೊಡಿಸಿ ಅವನನ್ನು ಬಂಧಿಸಿದನು. ಆಮೇಲೆ ಗಟ್ಟಯ್ಯ ಕಳ್ಳನಲ್ಲ, ಅವನೇ ಆ ಮನೆಯ ಯಜಮಾನ ಎಂದು ಗೊತ್ತಾದ ಮೇಲಷ್ಟೇ ಅವನನ್ನು ಬಿಟ್ಟುಬಿಟ್ಟನು.

ಈ ಘಟನೆಯಿಂದ ಊರಿನ ಜನರೆಲ್ಲ ಅಚ್ಚರಿಗೊಂಡರು. ಕೆಲವರು ಗಟ್ಟಯ್ಯನ ಪರವಾಗಿಯೂ ಮತ್ತೆ ಕೆಲವರು ಕಾವಲುಗಾರನ ಪರವಾಗಿಯೂ ಮಾತನಾಡತೊಡಗಿದರು. ಈ ಸುದ್ದಿಯು ರಾಜ ಭೃಕಭೌಮನವರೆಗೂ ಹೋಯಿತು. ಶಿಕ್ಷಕ ಸಮುದಾಯದ ಬಗ್ಗೆ ತುಸು ಜಾಸ್ತಿಯೇ ಸಹಾನು ಭೂತಿ ಹೊಂದಿದ್ದ ಭೃಕಭೌಮನು ಗಟ್ಟಯ್ಯನ ಪರ ವಹಿಸಿ, ಕಾವಲುಗಾರ ಮಾಡಿದ್ದು ಶತಮೂರ್ಖತನ ಎಂದುಬಿಟ್ಟನು. ರಾಜ ಹಾಗೆಹೇಳಿದ್ದನ್ನು ಕೇಳಿಸಿಕೊಂಡ ಊರಿನ ಕಾವಲುಗಾರರೆಲ್ಲ ರಾಜನ ವಿರುದ್ಧ ತಿರುಗಿಬಿದ್ದರು. ರಾಜನದೂ ಅತಿಯಾಯ್ತು ಎಂದು ಕೆಲ ಪ್ರಭಾವಿ ಪ್ರಜೆಗಳು ಆಡಿಕೊಳ್ಳ ತೊಡಗಿದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದೆಯೆಂದು ಎಚ್ಚರಗೊಂಡ ಭೃಕಭೌಮನು ಕಾವಲು ಗಾರ ಮತ್ತು ಗಟ್ಟಯ್ಯನನ್ನು ಪ್ರತ್ಯೇಕವಾಗಿ ಮಾತನಾಡಿಸಿ ಇಬ್ಬರನ್ನೂ ಅರಮನೆಗೆ ಕರೆಸಿದನು. ಒಂದು ಪಾನಗೋಷ್ಠಿಯನ್ನು ಹಮ್ಮಿಕೊಂಡು ರಾಜಿ ಪಂಚಾಯಿತಿಕೆ ನಡೆಸಿದನು. ಭೃಕಭೌಮನ ಮಾತಿನ ಮೋಡಿಯೋ ಅಥವಾ ಪಾನಕದ ಪ್ರಭಾವವೋ ಅಂತೂ ಗಟ್ಟಯ್ಯ ಮತ್ತು ಕಾವಲುಗಾರ ಇಬ್ಬರ ಮುಖದಲ್ಲೂ ಮುನಿಸು ಮಾಯವಾಗಿ ಮಂದಹಾಸ ಮೂಡಿತು. ನಸುನಗುತ್ತ ಅವರು ತಮ್ಮತಮ್ಮ ಮನೆಗೆ ತೆರಳಿದರು. ಆಮೇಲೆ ಭೃಕಭೌಮ ಮತ್ತವನ ಪ್ರಜೆಗಳು ಸುಖಶಾಂತಿಯಿಂದ ಬಾಳಿದರು.

ಚಂದಮಾಮ ಶೈಲಿಯಲ್ಲಿದ್ದರೆ ಕಥೆ ಓದುವ ಮಜವೇ ಬೇರೆ, ಅಲ್ಲವೇ? ನಿಮಗೆ ಅಂಥ ಅನುಭವದ ನೆನಪು ತಾಜಾ ಆಗಲಿ ಎಂದು ಬೇಕಂತಲೇ ಆ ಧಾಟಿಯಲ್ಲಿ ನಿರೂಪಿಸಿದೆ. ಈಗ ನಿಜ ಘಟನೆಗೆ ಮರಳೋಣ. ಚಂದಮಾಮ ಕಥೆಯಲ್ಲಿರುವ ಪಾತ್ರಗಳು ಮತ್ತು ಸನ್ನಿವೇಶಗಳನ್ನು ನೈಜತೆಗೆ ಸಮೀಕರಿಸೋಣ. ಕಥೆಯಲ್ಲಿ ಬರುವ ಶಿಕ್ಷಕ ಗಟ್ಟಯ್ಯ ಯಾರೆಂದರೆ ಅಮೆರಿಕದ ಅತಿಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ರಾಗಿರುವ ಪ್ರೊ. ಹೆನ್ರಿ ಲೂಯಿಸ್ ಗೇಟ್ಸ್ ಎಂಬುವವರು. ವಲುಗಾರ ಯಾರೆಂದರೆ ಕೇಂಬ್ರಿಡ್ಜ್ ಸಿಟಿ ಪೊಲೀಸ್ ಪಡೆಯ ದಕ್ಷ ಮತ್ತು ಕರ್ತವ್ಯ ನಿಷ್ಠ ಅಧಿಕಾರಿ ಸಾರ್ಜೆಂಟ್ ಜೇಮ್ಸ್ ಕ್ರೌಲೆ. ನೆರೆಮನೆ ಹೆಂಗಸು ವಲಿಯಮ್ಮನಾಗಿ ಪೋಷಕ ಪಾತ್ರ ನಿರ್ವಹಿಸಿದವಳು ಲೂಸಿಯಾ ವ್ಹಲೆನ್ ಎಂಬೊಬ್ಬ ಗೃಹಿಣಿ. ಮತ್ತೆ, ರಾಜ ಭೃಕಭೌಮ ಯಾರೆಂದು ನೀವು ಈಗಾಗಲೇ ಊಹಿಸಿರಬಹುದಲ್ಲ? ಹೌದು, ಘಟನೆ ನಡೆದಾಗ ಅಮೆರಿಕ ಸಂಯುಕ್ತ ಸಂಸ್ಥಾನ ಗಳ ಪ್ರೆಸಿಡೆಂಟ್ ಆಗಿದ್ದ ಬರಾಕ್ ಹುಸೇನ್ ಒಬಾಮ!

2009ರ ಜುಲೈ 16, ಗುರುವಾರ. ಮಟಮಟ ಮಧ್ಯಾಹ್ನದ ಸಮಯ. ಅಮೆರಿಕದ ಈಶಾನ್ಯ ಭಾಗದಲ್ಲಿ ರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಕೂಗಳತೆಯ ದೂರದಲ್ಲಿ ಪ್ರೊ.ಹೆನ್ರಿ ಗೇಟ್ಸ್ ಮನೆಯ ಮುಂಭಾಗ. ಚೀನಾ ದೇಶಕ್ಕೆ ಪ್ರವಾಸ ಹೋಗಿದ್ದ ಪ್ರೊಫೆಸರರು ಆಗಷ್ಟೇ ಹಿಂದಿರುಗಿದ್ದಾರೆ. ಮನೆ ಬಾಗಿಲಿನ ಬೀಗ ತೆಗೆದು ಚಿಲಕ ಸರಿಸಿದರೂ ಬಾಗಿಲು ತೆರೆದುಕೊಳ್ಳದಿದ್ದಾಗ, ಬಹುಶಃ ಮಳೆಗೆ ಹಲಗೆ ಉಬ್ಬಿಕೊಂಡು ಹಾಗೆ ಆಗಿರಬಹುದುಎಂದು ತಮ್ಮ ಬೆನ್ನಿನಿಂದೊಮ್ಮೆ, ಭುಜಗಳಿಂದೊಮ್ಮೆ ಬಾಗಿಲ ಮೇಲೆ ಬಲಪ್ರಯೋಗ ಮಾಡಿದ್ದಾರೆ. ಈ ದೃಶ್ಯವನ್ನು ದೂರದಿಂದ ನೋಡಿದ ನೆರೆಮನೆಯಾಕೆ ಲೂಸಿಯಾ, ಅದ್ಯಾರೋ ಕಳ್ಳನಿರಬೇಕೆಂದು ಗಾಬರಿಯಿಂದ ತುರ್ತುಸಹಾಯ ಸಂಖ್ಯೆ 911ಕ್ಕೆ ದೂರ ವಾಣಿ ಕರೆ ಮಾಡಿದ್ದಾರೆ. ಆ ಹೊತ್ತಿಗೆ ಅದೇ ಪ್ರದೇಶದಲ್ಲಿ ಡ್ಯೂಟಿ ನಿರ್ವಹಿಸುತ್ತಿದ್ದ ಪೊಲೀಸ್ ಆಫೀಸರ್ ಕ್ರೌಲೆಗೆ ತುರ್ತುಸಹಾಯ ಕೇಂದ್ರವು ಕರೆ ಬಂದ ವಿಳಾಸಕ್ಕೆಹೋಗುವಂತೆ ಆದೇಶಿಸಿದೆ.

ಕ್ರೌಲೆ ಬರುವ ಹೊತ್ತಿಗೆ ಪ್ರೊಫೆಸರ್ ಬಾಗಿಲನ್ನು ತೆಗೆದು ಮನೆಯೊಳಕ್ಕೆ ಹೋಗಿ ಆಗಿದೆ. ಆದರೆ ಕ್ರೌಲೆಗೆ ಗೇಟ್ಸ್ ಯಾರೆಂದು ಗೊತ್ತಿಲ್ಲವಾದ್ದರಿಂದ ಆತನೊಬ್ಬ ಕಳ್ಳ ಇರಬಹುದು ಎಂಬ ಶಂಕೆ ಯಿಂದ ಮನೆಯೊಳಕ್ಕೆ ಬಂದು, “ಶರಣಾಗು!" ಎಂದು ಕೂಗಿದ್ದಾರೆ. ಇದು ಗೇಟ್ಸ್‌ರನ್ನು ಕೆರಳಿಸಿದೆ. “ನಾನೊಬ್ಬ ಕಪ್ಪುಮನುಷ್ಯ ಎಂಬ ಕಾರಣದಿಂದ ನನ್ನ ಮೇಲೆ ಗದರುತ್ತಿದ್ದೀಯಾ?" ಎಂದು ಬಿಳಿ ಯ ಕ್ರೌಲೆಯನ್ನು ದಬಾಯಿಸಿದ್ದಾರೆ. ಕೋಪ ಅವಮಾನಗಳಿಂದ ಹತಾಶರಾಗಿ ಚೆನ್ನಾಗಿ ಬೈದಿದ್ದಾರೆ. ಜನಾಂಗದ್ವೇಷಿ ಎಂದು ಜರೆದಿದ್ದಾರೆ.

ಗುರುತು ಚೀಟಿ ಕೇಳಿದಾಗ ಮೊದಲು ತೋರಿಸದೆ ಒರಟಾಗಿ ವರ್ತಿಸಿದ್ದಲ್ಲದೆ ಪೊಲೀಸ್ ಆಫೀಸರನ ಹೆಸರು ಮತ್ತು ಬ್ಯಾಡ್ಜ್ ಸಂಖ್ಯೆ ಕೇಳಿದ್ದಾರೆ. ಮೊದಮೊದಲು ವಿನಯದಿಂದಲೇ ಸ್ಪಂದಿಸಿದ ಕ್ರೌಲೆ ಒಂದು ಹಂತದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ಅಲ್ಲಿಗೆ ಕರೆಸಿದ್ದಾರೆ.

ಪ್ರೊಫೆಸರರನ್ನು ಮನೆಯ ಹೊರಕ್ಕೆ ಕರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕಪಕ್ಕದ ಮನೆ ಗಳವರೆಲ್ಲ ಹೊರಗೆ ಬಂದು ಈ ದೃಶ್ಯವನ್ನು ಬೆರಗು ಗಣ್ಣಿಂದ ನೋಡಿದ್ದಾರೆ. ಸಾರ್ವಜನಿಕರೆದುರು ಅನುಚಿತ ವರ್ತನೆ ಮತ್ತು ಸಮವಸಧಾರಿ ಪೊಲೀಸ್ ಆಫೀಸರರಿಗೆ ನಿಂದನೆ ಮಾಡಿದ ಅಪರಾಧದ ಮೇಲೆ ಗೇಟ್ಸ್ ಕೈಗೆ ಕೋಳ ತೊಡಿಸಿ ಬಂಧಿಸಲಾಗಿದೆ. ಆಮೇಲೆ ಸ್ಟೇಷನ್ ಗೆ ಒಯ್ದು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ. ಇಷ್ಟೇ ಆಗಿದ್ದಿದ್ದರೆ ಈ ಘಟನೆ ಮಾಧ್ಯಮಗಳಲ್ಲಿ ಒಂದು ರಸವಾರ್ತೆ ಯಂತೆ ಪ್ರಕಟವಾಗಿ ಕ್ರಮೇಣ ಜನಮಾನಸದಿಂದ ಮರೆಯಾಗುತ್ತಿತ್ತು. ಆದರೆ ಜುಲೈ 22ರಂದು ಬೇರೆಯೇ ಒಂದು ಪ್ರಮುಖ ವಿಷಯದ ಚರ್ಚೆಗೆಂದು ಶ್ವೇತಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯ ಕೊನೆಯಲ್ಲಿ ಪತ್ರಕರ್ತರು ‘ಪ್ರೊ.ಗೇಟ್ಸ್ ಬಂಧನ ಮತ್ತು ಬಿಡುಗಡೆ’ ಸಂಗತಿಯನ್ನು ಪ್ರಸ್ತಾವಿಸಿದರು.

ಪತ್ರಕರ್ತರ ಚಾಳಿಯೇ ತಾನೆ ಅದು? ಮುಚ್ಚಿರುವುದನ್ನು ಬೇಕಂತಲೇ ಕೆದಕಿ ತೆಗೆಯುವುದು. ಅಧ್ಯಕ್ಷ ಬರಾಕ್ ಒಬಾಮ ಅದು ಕೇಂಬ್ರಿಡ್ಜ್ ಪೊಲೀಸರು ಮಾಡಿದ ಸ್ಟುಪಿಡ್ ಕೆಲಸ ಎಂದುಬಿಟ್ಟರು. ತಗೊಳ್ಳಿ, ಇಡೀ ಘಟನೆ ಹಠಾತ್ತನೆ ರಾಜಕೀಯ ಬಣ್ಣ ಪಡೆಯಿತು. ಕೈಗೆ ಕೋಳ ತೊಡಿಸಲ್ಪಟ್ಟು ಅವಮಾನಿತರಾದ ಪ್ರೊಫೆಸರ್ ಒಬ್ಬ ಕಪ್ಪು ಮನುಷ್ಯ, ಹಾಗಾಗಿ ಒಬಾಮ ಅವರ ಪರ ವಹಿಸಿ ಪರೋಕ್ಷವಾಗಿ ಬಿಳಿಯರನ್ನು ಮೂದಲಿಸುತ್ತಿದ್ದಾರೆ ಎಂದು ಗುಲ್ಲೆದ್ದಿತು.

ಸುದ್ದಿ ಹಸಿವಿನ ಮಾಧ್ಯಮಗಳು ಇದನ್ನು ಮುಖಪುಟದ ಸುದ್ದಿಯಾಗಿಸಿದವು, ಸಂಪಾದಕೀಯ ಬರೆದವು, ಸಿಎನ್‌ಎನ್ ಮತ್ತಿತರ ಚಾನಲ್‌ಗಳಲ್ಲಿ ಇದರ ಕುರಿತೇ ಪ್ಯಾನಲ್ ಡಿಸ್ಕಷನ್‌ಗಳು ನಡೆದವು. ಫ್ಯಾಕ್ಸ್ ಚಾನಲ್‌ನ ಒಬ್ಬ ಪಂಡಿತನಂತೂ “ಒಬಾಮ ಪಕ್ಕಾ ಜನಾಂಗದ್ವೇಷಿ ಮನುಷ್ಯ" ಎಂದು ಡೈರೆಕ್ಟ್ ಆಗಿ ಆರೋಪಿಸಿದನು. ಆಗೇನಾದರೂ ಈಗಿನಂತೆ ಸೋಶಿಯಲ್ ಮೀಡಿಯಾ ಇರುತ್ತಿದ್ದರೆ ಗೇಟ್ಸ್, ಕ್ರೌಲೆ ಮತ್ತು ಒಬಾಮಪರ-ವಿರೋಧವಾಗಿ ಕಾಳ್ಗಿಚ್ಚು ಹಬ್ಬುತ್ತಿತ್ತೋ ಏನೋ. ಆದರೂ ಆಗ ಫ್ಯಾಷನ್ ಆಗಿದ್ದ ಬ್ಲಾಗ್‌ಗಳಲ್ಲಿ ಓತಪ್ರೋತ ಬರಹಗಳು ಮೂಡಿದವು. ರೂಲ್‌ಬುಕ್‌ನಲ್ಲಿ ಇರುವ ನಿಯಮಗಳನ್ನು ಅಕ್ಷರಶಃ ಪಾಲಿಸುತ್ತ ತಾನು ಕರ್ತವ್ಯ ನಿರ್ವಹಿಸಿದ್ದನ್ನು ‘ಸ್ಟುಪಿಡ್’ ಎಂದದ್ದಕ್ಕೆ ಸಾರ್ಜೆಂಟ್ ಕ್ರೌಲೆ, ಅವನ ಬೆಂಬಲಕ್ಕೆ ಇಡೀ ಕೇಂಬ್ರಿಡ್ಜ್ ಪೊಲೀಸ್‌ಪಡೆ, ಅವರ ಬೆಂಬಲಕ್ಕೆ ದೇಶದೆಲ್ಲೆಡೆಯ ಪೊಲೀಸರು ಅಧ್ಯಕ್ಷ ಒಬಾಮ ಮೇಲೆ ಮುನಿಸಿಕೊಂಡರು.

ಮೊದಲ ಬಾರಿ ಕರಿಯನೊಬ್ಬ ಅಧ್ಯಕ್ಷನಾದನೆಂಬ ಬಿಳಿಯರ ಹೊಟ್ಟೆಯುರಿ ಭುಗಿಲೆದ್ದುದರಲ್ಲಿ ಆಶ್ಚರ್ಯವೇನಿಲ್ಲ. ಇದೆಲ್ಲೋ ಎಡವಟ್ಟಾಯಿತು ಎಂದರಿತ ಎಡಚ (ಎಲ್ಲ ರೀತಿಯಿಂದಲೂ) ಒಬಾಮ ಜುಲೈ 24ರಂದು ಶ್ವೇತಭವನದಲ್ಲಿ ಅರ್ಜೆಂಟಾಗಿ ಒಂದು ಪತ್ರಿಕಾಗೋಷ್ಠಿ ಕರೆದರು. ತಾವುಕೇಂಬ್ರಿಡ್ಜ್ ಪೊಲೀಸರ ಬಗ್ಗೆ ಮಾತನಾಡಲು ಆಯ್ದುಕೊಂಡ ಪದಗಳು ಅಷ್ಟು ಸಮಂಜಸ ವಾಗಿರಲಿಲ್ಲ, ಅದಕ್ಕಾಗಿ ವಿಷಾದಿಸುತ್ತೇನೆ ಎಂದು ಕ್ಷಮೆ ಕೇಳದೆಯೇ ಕ್ಷಮೆ ಕೇಳಿದಂತೆ ಮಾಡಿದರು. ಆವತ್ತೇ ಸಂಜೆ ದೂರವಾಣಿಯಲ್ಲಿ ಪ್ರೊ.ಗೇಟ್ಸ್ ಮತ್ತು ಸಾರ್ಜೆಂಟ್ ಕ್ರೌಲೆ ಜತೆ ಪ್ರತ್ಯೇಕವಾಗಿ ಮಾತನಾಡಿದರು.

ಇಬ್ಬರನ್ನೂ ಶ್ವೇತಭವನಕ್ಕೆ ಒಂದು ಸೌಹಾರ್ದ ಭೇಟಿಗೆ, ಸಂಜೆ ವೈಟ್‌ಹೌಸ್ ಪೋರ್ಟಿಕೊದಲ್ಲಿ ಕುಳಿತು ಬಿಯರ್ ಹೀರುತ್ತ ಲೋಕಾಭಿರಾಮ ಹರಟೆ ಹೊಡೆಯುವುದಕ್ಕೆ ಆಹ್ವಾನ ನೀಡಿದರು. ಅಧ್ಯಕ್ಷರೇ ಕರೆದಿದ್ದಾರೆಂದರೆ ನಿರಾಕರಿಸುವುದು ಸಾಧ್ಯವಿಲ್ಲವಷ್ಟೆ. ತಗೊಳ್ಳಿ ಮತ್ತೊಮ್ಮೆ ಮಾಧ್ಯಮ ಗಳ ಜಠರಾಗ್ನಿಗೆ ತುಪ್ಪ ಸುರಿದಂತಾಯ್ತು. ‘ಬಿಯರ್ ಸಮ್ಮಿಟ್’, ‘ಬಿಯರ್ ಡಿಪ್ಲೊಮೆಸಿ’ ಅಂತೆಲ್ಲ ಕಣ್ಣಿಗೆ ರಾಚುವಂತೆ ಪತ್ರಿಕೆಗಳಲ್ಲಿ ಬ್ಯಾನರ್ ಹೆಡ್ಡಿಂಗ್ ಗಳು ಮೂಡಿದವು. ಯಾವ ಬ್ರಾಂಡ್‌ನ ಬಿಯರ್ ಸರ್ವ್ ಮಾಡಬಹುದು, ಯಾವ ಬ್ರಾಂಡ್ ಸರ್ವ್ ಮಾಡಿದರೆ ಒಳ್ಳೆಯದು ಎಂದು ಆನ್‌ಲೈನ್ ಪೋಲ್‌ಗಳು, ಚರ್ಚೆಗಳು ನಡೆದವು. ಕಾಫಿಶಾಪ್‌ಗಳಲ್ಲಿ, ಕ್ಷೌರದಂಗಡಿಗಳಲ್ಲಿ ಬಿಯರ್ ಪಾರ್ಟಿಯದೇ ಮಾತಾಯಿತು. “ಬಿಯರ್ ಪಾರ್ಟಿ ಯಾಕೆ, ಗೇಟ್ಸ್ ಮತ್ತು ಕ್ರೌಲೆ ಇಬ್ಬರಿಗೂ ಒಬಾಮ ಬೈ-ಟೂ ಟೀ ಕುಡಿಸಿ ಇನ್ನೊಂದು ಚಾರಿತ್ರಿಕ ‘ಬಾಸ್ಟನ್ ಟೀ ಪಾರ್ಟಿ’ ಮಾಡಬಹುದಿತ್ತಲ್ಲ" (ಕೇಂಬ್ರಿಡ್ಜ್ ಇರುವುದು ಬಾಸ್ಟನ್‌ಗೆ ಹತ್ತಿರವೇ) ಎಂದು ಕೆಲವರು ಕೊಂಕು ತೆಗೆದರು.

“ಟೀ ಯಾಕೆ? ಅವರಿಬ್ಬರಿಗೂ ನೀರು ಕುಡಿಸಬಹುದಿತ್ತಲ್ಲ, ದೇಶಕ್ಕೆ ದೇಶವೇ ರಿಸೆಷನ್‌ನಲ್ಲಿ ಕಾಲು ಮುರಿದುಕೊಂಡು ಬಿದ್ದಿರುವಾಗ, ಇರಾಕ್, ಅಫ್ಘಾನಿಸ್ತಾನಗಳಲ್ಲಿ ಸೈನಿಕರು ದಿನಾ ಸಾಯುತ್ತಲೇ ಇರುವಾಗ ಇಲ್ಲಿ ಇವರದು ಬಿಯರ್ ಪಾರ್ಟಿಯಂತೆ ಬಿಯರ್ ಪಾರ್ಟಿ!" ಎಂದು ಇನ್ನುಕೆಲವರು ಮೂಗುಮುರಿದರು. ಒಬ್ಬ ಹಾಸ್ಯಲೇಖಕನಂತೂ ತನ್ನ ಕಲ್ಪನೆಯನ್ನು ಎಲ್ಲಿಯವರೆಗೆ ಹರಿಸಿದ ನೆಂದರೆ, ಬಿಯರ್ ಪಾರ್ಟಿಯಲ್ಲಿ ಬಿಯರ್ ಜಾಸ್ತಿಯಾಗಿ ಒಬಾಮ ಏನಾದರೂ ಅನುಚಿತ ವರ್ತನೆ (ಉದಾಹರಣೆಗೆ, ಲ್ಯಾಂಪ್‌ಶೇಡ್ ಅನ್ನು ಕಿತ್ತು ತಲೆಮೇಲೆ ಬೋರಲಾಗಿ ಹಾಕಿ ನಡೆಯುವುದು ವಗೈರಾ) ತೋರಿದರೆ ಆಗ ಸಾರ್ಜೆಂಟ್ ಕ್ರೌಲೆ ಸಾಕ್ಷಾತ್ ರಾಷ್ಟ್ರಾಧ್ಯಕ್ಷನಿಗೇ ಕೈಕೋಳ ತೊಡಿಸ ಬಹುದೇ ಎಂಬ ಕಪೋ ಲಕಲ್ಪನೆಯನ್ನೂ ಮಾಡಿದನು! ಅಥವಾ, ನಿರಾಯುಧನಾಗಿ ಸಿವಿಲ್ ಡ್ರೆಸ್‌ನಲ್ಲಿ ಬರುವ ಬಿಳಿಯ ಕ್ರೌಲೆಯನ್ನು ಬಿಳಿಮನೆಯಲ್ಲೇ ಇಬ್ಬರು ಕರಿಯರು ಸೇರಿ ‘ನೋಡಿ ಕೊಳ್ಳಬಹುದೇ?’ ಎಂದು ಸಹ ಕೆಲವರು (ಕೆಟ್ಟದ್ದನ್ನೇ ಯೋಚಿಸುವವರು) ಅನಗತ್ಯವಾಗಿ ಕಲ್ಪಿಸಿಕೊಂಡಿದ್ದೂ ಇರಬಹುದು.

ಕೊನೆಗೂ ಗುರುವಾರ ಜುಲೈ 30ರ ಸಂಜೆ ಆರು ಗಂಟೆಗೆ ಶ್ವೇತಭವನ ಪೂರ್ವಕಕ್ಷೆಯ ರೋಸ್ ಗಾರ್ಡನ್ ಅಂಗಳದ ಮೂಲೆಯಲ್ಲಿ ವಿಶಾಲ ವಾದ ಮರದ ಕೆಳಗೆ ವ್ಯವಸ್ಥೆ ಮಾಡಿದ್ದ ಪಿಕ್‌ನಿಕ್ ಟೇಬಲ್ ಮೇಲೆ ಬಿಯರ್ ಪಾರ್ಟಿ ನಡೆದುದನ್ನು ಟಿವಿ ವಾರ್ತಾವಾಹಿನಿಗಳು ನೇರಪ್ರಸಾರ ಮಾಡಿದವು. ಕೊನೇ ಗಳಿಗೆಯ ಸೇರ್ಪಡೆಯೋ ಏನೋ ವೈಸ್ ಪ್ರೆಸಿಡೆಂಟ್ ಜೋ ಬೈಡನ್ ಸಹ ನಾಲ್ಕನೆಯ ಆಟಗಾರನಾಗಿ ಕಾಣಿಸಿಕೊಂಡರು.

ಇನ್ನೂ ಒಬ್ಬರು ಇದ್ದಿದ್ದರೆ ನಿಜಕ್ಕೂ ಅದೊಂದು ಪಂಚಾಯಿತಿಕೆಯೇ ಆಗುತ್ತಿತ್ತು. ಆದರೆ ಆ ನಾಲ್ವರು ಏನು ಮಾತನಾಡಿದರೆಂದು ಯಾರಿಗೂ ಗೊತ್ತಾಗದ ಹಾಗೆ ಐವತ್ತಡಿ ಸುತ್ತಳತೆಯಲ್ಲಿ ಯಾರಿಗೂ ಪ್ರವೇಶವಿರಲಿಲ್ಲವಂತೆ! ಅಂದಹಾಗೆ, ಪ್ರೊ.ಗೇಟ್ಸ್ ಮತ್ತು ಸಾರ್ಜೆಂಟ್ ಕ್ರೌಲೆ ಇಬ್ಬರಿ ಗೂಸಕುಟುಂಬರಾಗಿಯೇ ಬರುವಂತೆ ಆಹ್ವಾನವಿತ್ತಾದ್ದರಿಂದ ಗಂಡಸರು ಬಿಯರ್ ಹೀರುತ್ತ ಲೋಕಾಭಿರಾಮ ಹರಟೆಯಲ್ಲಿ ತೊಡಗಿದ್ದಾಗ ಹೆಂಗಸರು ಮತ್ತು ಮಕ್ಕಳು ಶ್ವೇತಭವನದ ವೈಭವವನ್ನು, ಒಬಾಮ ಸಂಸಾರದ ವೈಭೋಗವನ್ನು ಕಂಡು ಕುಣಿಯುತ್ತ ಕರುಬುತ್ತ ತಲ್ಲೀನ ರಾಗಿದ್ದರು ಎಂದು ನಾವು ಊಹಿಸಬಹುದು. ಬಿಯರ್ ಪಾರ್ಟಿ ಮುಗಿಯುವಷ್ಟರಲ್ಲಿ ಪ್ರೊ.ಗೇಟ್ಸ್ ಮತ್ತು ಸಾರ್ಜೆಂಟ್ ಕ್ರೌಲೆ ನಡುವೆ ರಾಜಿ ಆಯ್ತು. ಕಪ್ಪು-ಬಿಳಿ ನಿಂದನೆಯ ಹೊಸದೊಂದು ಅಧ್ಯಾಯಕ್ಕೆ ತೆರೆ ಬಿತ್ತು. ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ನಿಭಾಯಿಸಿದ ಬರಾಕ್ ಒಬಾಮ ತಮ್ಮ ‘ಜೆಂಟಲ್‌ಮ್ಯಾನ್ ಪೊಲಿಟಿಷಿಯನ್’ ಇಮೇಜ್ ಅನ್ನು ಯಥಾಸ್ಥಿತಿಗೆ ಮರಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇನ್ನು ಈ ವಿದ್ಯಮಾನದಲ್ಲಿ ವಾಸನೆಯೇನೂ ಇಲ್ಲ (ಸುದ್ದಿಸ್ವಾರಸ್ಯ ಇಲ್ಲ) ಎಂದು ಬಗೆದ ಮಾಧ್ಯಮಗಳು ಅಲ್ಲಿಗೇ ತಣ್ಣಗಾದವು. ಜನಜೀವನ ಮಾತ್ರ ಮೊದಲೂ ಆಮೇಲೂ ಯಾವ ಪರಿಣಾಮವೂ ಇಲ್ಲದೆ ಮುಂದುವರಿಯಿತು. ಅಷ್ಟಾಗಿ, ಗಟ್ಟಯ್ಯನ (ಪ್ರೊ.ಗೇಟ್ಸ್ ಮಹಾಶಯರ)ಮನೆ ಬಾಗಿಲು ಮೊದಲು ಸುಲಭವಾಗಿ ತೆರೆದುಕೊಳ್ಳದೇ ಇದ್ದದ್ದು, ಆಮೇಲೆ ಎಷ್ಟೆಲ್ಲ ಬೆಳವಣಿಗೆಗಳನ್ನು ತೆರೆದಿಟ್ಟಿತು!

‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’ ಎನ್ನುವಂತೆ ಗಟ್ಟಯ್ಯ ಆವತ್ತು ಏನನ್ನು ಗುನು ಗುನಿಸುತ್ತ ಬಾಗಿಲು ತೆರೆಯಲು ಯತ್ನಿಸಿ ದನೋ ಅವನಿಗೆ ಎಂಥೆಂಥ ಸೇವೆ ಲಭಿಸಿತು ನೋಡಿ! ಮೊದಲಿಗೆ ಪೊಲೀಸರಿಂದ ಗದರಿಕೆಯ ಸೇವೆ. ತರುವಾಯ ಕೈಗಳಿಗೆ ಕೋಳಬಂಧನದ ಸೇವೆ. ರಾಷ್ಟ್ರೀಯ ವಾರ್ತಾಪತ್ರಿಕೆಗಳಲ್ಲಿ ಮುಖಪುಟ ಸುದ್ದಿಯಾಗುವ ಸೇವೆ. ಟಿವಿ ವಾಹಿನಿಗಳಲ್ಲಿ ಪ್ಯಾನಲ್ ಡಿಸ್ಕಷನ್‌ಗಳಿಗೆ ಗ್ರಾಸವಾಗುವ ಸೇವೆ. ರಾಷ್ಟ್ರಾಧ್ಯಕ್ಷನಿಂದ ಬಿಯರ್ ಸಮಾರಾಧನೆಯ ಸೇವೆ. ಇದೀಗ ‘ತಿಳಿರುತೋರಣ’ ಅಂಕಣದಲ್ಲೂ ಕಾಣಿಸಿಕೊಳ್ಳುವ ಸೇವೆ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ!

ಇದನ್ನೂ ಓದಿ: #srivathsajoshi