ದಕ್ಷಿಣ ಭಾರತದಿಂದ ಆಧ್ಯಾತ್ಮಿಕತೆಗೆ ದೊಡ್ಡಮಟ್ಟದ ಕೊಡುಗೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಆಧ್ಯಾತ್ಮಿಕವಾಗಿ ನಮ್ಮೊಂದಿಗೆ ಇದ್ದಾರೆ. ಅವರ ವಿಚಾರಧಾರೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಡಿನಲ್ಲಿ ಮಠ ಉತ್ತಮ ಕಾರ್ಯ ಕೈಗೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.


ತುಮಕೂರು: ಉತ್ತರ ಭಾರತವು ದಕ್ಷಿಣ ಭಾರತದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ದಕ್ಷಿಣ ಭಾರತವು ಆಧ್ಯಾತ್ಮಿಕತೆಗೆ ದೊಡ್ಡ ಮಾರ್ಗದರ್ಶನ ನೀಡಿದೆ. ಅದಕ್ಕೆ ಸಿದ್ಧಗಂಗಾ ಶ್ರೀಗಳು ಹಾಗೂ ಶಂಕರಾಚಾರ್ಯರು ನಿದರ್ಶನವಾಗಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು. ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ ಮತ್ತು ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
ವಿಶ್ವಗುರು ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು, ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಸಾಧು ಸಂತರ ತತ್ವಾದರ್ಶಗಳನ್ನು ಅನುಸರಿಸಬೇಕು. ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಆಧ್ಯಾತ್ಮಿಕವಾಗಿ ನಮ್ಮೊಂದಿಗೆ ಇದ್ದಾರೆ. ಅವರ ವಿಚಾರಧಾರೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಡಿನಲ್ಲಿ ಮಠ ಉತ್ತಮ ಕಾರ್ಯ ಕೈಗೊಂಡಿದೆ. 5 ಸಾವಿರ ವರ್ಷಗಳಾದರೂ ಭಾರತದ ನಾಗರೀಕತೆ ಶ್ರೀಮಂತವಾಗಲು ಶ್ರೀ ಶಿವಕುಮಾರ ಸ್ವಾಮೀಜಿಗಳಂತಹ ಸಾಧು ಸಂತರು ನಮ್ಮ ಸಂಸ್ಕೃತಿಯನ್ನು ರಕ್ಷಿಸಿರುವುದೇ ಕಾರಣ ಎಂದರು.
ಆರ್ಥಿಕ, ಭೌತಿಕ, ಆಧ್ಯಾತ್ಮಿಕ ಸೇವೆಯನ್ನು ನೀಡಬೇಕು. ಮನಸ್ಸನ್ನು ವಿಕಸಿತಗೊಳಿಸುವುದೇ ಆಧ್ಯಾತ್ಮಿಕತೆ. ಶ್ರೀಗಳ ಆಧ್ಯಾತ್ಮಿಕತೆಯಿಂದಲೇ ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾದರು. ಶಿಕ್ಷಣದ ಉದ್ದೇಶ ಉದ್ಯೋಗ ಗಳಿಸುವುದಲ್ಲ, ವಿಕಸಿತ ಮಾಡುವುದೇ ಆಗಿದೆ. ಶಿಕ್ಷಣದಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿರ್ಮಾಣ ಮಾಡಬಹುದು. ಆದರೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸಾಧ್ಯವಿಲ್ಲ. ಸಿದ್ಧಗಂಗಾ ಮಠ ಮಕ್ಕಳಿಗೆ ಸಂಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣ ನೀಡುತ್ತಿದೆ ಎಂದರು.
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಮನವಿ
ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಕೇಂದ್ರ ಸರಕಾರ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ ತರಬೇಕು ಎಂದು ರಾಜ್ಯದ ಜನರ ಹಾಗೂ ರಾಜ್ಯ ಸರಕಾರದ ಪರವಾಗಿ ಮನವಿ ಮಾಡುತ್ತೇನೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ಧಗಂಗಾ ಮಠ ಪವಿತ್ರ ಸ್ಥಳ ಎಂದು ಹೇಳಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಹೀಗೆ ಮನುಷ್ಯತ್ವದ ಪ್ರತಿರೂಪವಾದ ಶಿವಕುಮಾರಸ್ವಾಮೀಜಿ ಅವರನ್ನು ನೆನೆಸಿಕೊಂಡು, ಅವರ ಆಚಾರ ವಿಚಾರಗಳನ್ನು ಮೈಗೂಢಿಸಿಕೊಳ್ಳಲು ನಾವು ಇಲ್ಲಿ ಸೇರಿದ್ದೇವೆ ಎಂದರು.
ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆ" ಎಂದರು.
ಶ್ರೀಗಳು ಹಾಕಿಕೊಟ್ಟ ಹಾದಿ, ಅವರ ಆಚಾರ ವಿಚಾರ, ಅವರ ನುಡಿಮುತ್ತುಗಳು ನಮ್ಮ ಬದುಕಿಗೆ ಶಕ್ತಿ ತುಂಬುತ್ತವೆ. ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಆಗಮಿಸಿದ್ದೆ. ಇಲ್ಲಿನ ಅನ್ನದಾಸೋಹ ಕಾರ್ಯಕ್ರಮ ನೋಡಿ ಎಸ್.ಎಂ. ಕೃಷ್ಣ ಅವರು ವಾಪಸ್ ತೆರಳುವಾಗ ಮಹತ್ವದ ನಿರ್ಧಾರ ಮಾಡಿದರು. ಸಿದ್ಧಗಂಗಾ ಮಠದ ಅನ್ನದಾಸೋಹ ಕಾರ್ಯಕ್ರಮ ನಮ್ಮ ಸರ್ಕಾರದ ಕಾರ್ಯಕ್ರಮವಾಗಿ ಪರಿವರ್ತನೆ ಆಗಬೇಕು ಎಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದರು ಎಂದು ಸ್ಮರಿಸಿದರು.
ಅನ್ನ ಕೊಟ್ಟು, ಅಕ್ಷರ ಕಲಿಸಿದ ಮಹಾಚೇತನರಿಗೆ ನಾವು ಇಂದು ನಮಿಸಲು ಬಂದಿದ್ದೇವೆ. ನಾನು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಷಕರು ನನಗೆ ಒಂದು ಕತೆ ಹೇಳಿದ್ದರು. ಅಲೆಕ್ಸಾಂಡರ್ ಭಾರತವನ್ನು ಗೆಲ್ಲಲು ಆಕ್ರಮಣ ಮಾಡುವ ಮುನ್ನ ಗುರುಗಳನ್ನು ಭೇಟಿ ಮಾಡಲು ಹೋದಾಗ, ಅವರ ಗುರು ಒಂದು ಮಾತು ಹೇಳಿದರು. ಭಾರತದಿಂದ ನೀನು ಬರುವಾಗ ರಾಮಾಯಣ, ಮಹಾಭಾರತ ಗ್ರಂಥ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ತತ್ವಜ್ಞಾನಿಯನ್ನು ನಿನ್ನ ಜತೆ ತೆಗೆದುಕೊಂಡು ಬಾ, ಈ ಐದು ವಸ್ತುಗಳನ್ನು ನೀನು ತಂದರೆ ಇಡೀ ಭಾರತವನ್ನು ಗೆದ್ದುಕೊಂಡು ಬಂದಂತೆ ಎಂದು ಹೇಳಿದರು. ಅದೇ ರೀತಿ ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇಡೀ ವಿಶ್ವದ ಜನ ನಮ್ಮ ಆಚಾರ ವಿಚಾರಗಳನ್ನು ನಂಬಿ ಶರಣಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ, ಸಚಿವರಾದ ಪರಮೇಶ್ವರ್ ರಾಜಣ್ಣ, ಸಂಸದ ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕರಾದ ಜ್ಯೋತಿ ಗಣೇಶ್ ಸುರೇಶ್ ಗೌಡ, ಶ್ರೀನಿವಾಸಯ್ಯ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | DK Shivakumar: ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ʼಭಾರತ ರತ್ನʼ ನೀಡಲು ಕೇಂದ್ರ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ