ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SrivathsaJoshi Column: ರಾಘವೇಂದ್ರ ಭಟ್ಟರ ಖಜಾನೆಯಿಂದ ಮತ್ತಷ್ಟು ರಸಪ್ರಸಂಗಗಳು

ಧೂಮವಿಲಾಸವನ್ನು ರಾಘವೇಂದ್ರ ಭಟ್ಟರು ನೆನಪಿಸಿಕೊಂಡದ್ದು ‘ತಂಬಾಕಿನ ಸ್ಮೋಕ ಒಳ್ಳೆಯದಲ್ಲ, ಶ್ಲೋಕ ಒಳ್ಳೆಯದೇ!’ ಲೇಖನಕ್ಕೆ ಪ್ರತಿಕ್ರಿಯೆಯಾಗಿ: “ಅಡಿಗರ ಧೂಮಲೀಲೆ ಕವಿತೆ ನೆನಪಾಯ್ತು

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಡಿಗರ ಧೂಮವಿಲಾಸವನ್ನು ರಾಘವೇಂದ್ರ ಭಟ್ಟರು ನೆನಪಿಸಿಕೊಂಡಿದ್ದರ ಬಗ್ಗೆ ಕಳೆದ ವಾರ ಒಂದೇ ವಾಕ್ಯದಲ್ಲಿ ಚುಟುಕಾಗಿ ಉಲ್ಲೇಖಿಸಿದ್ದೆ. ನಿಜವಾಗಿ ಯಾದರೆ ಅದೊಂದು ಸ್ವಾರಸ್ಯಕರ ಸುದೀರ್ಘ ಟಿಪ್ಪಣಿ. ಅಂಕಣದ ಮಿತಿಯಿಂದಾಗಿ ಹ್ರಸ್ವಗೊಳಿಸಬೇಕಾಯ್ತು. ಅಂಥ ಕೆಲವನ್ನಾದರೂ ಒಂದೆಡೆ ಎಲ್ಲರ ಓದಿಗೆ ಒದಗಿಸಬೇಕೆಂಬ ಉದ್ದೇಶದಿಂದ ಇಂದಿನ ಅಂಕಣದಲ್ಲಿ ಮುಂದುವರಿದ ಭಾಗ ಎಂಬಂತೆ ವಿಸ್ತೃತವಾಗಿ ಬರೆಯುತ್ತಿದ್ದೇನೆ.

ಧೂಮವಿಲಾಸವನ್ನು ರಾಘವೇಂದ್ರ ಭಟ್ಟರು ನೆನಪಿಸಿಕೊಂಡದ್ದು ‘ತಂಬಾಕಿನ ಸ್ಮೋಕ ಒಳ್ಳೆಯದಲ್ಲ, ಶ್ಲೋಕ ಒಳ್ಳೆಯದೇ!’ ಲೇಖನಕ್ಕೆ ಪ್ರತಿಕ್ರಿಯೆಯಾಗಿ: “ಅಡಿಗರ ಧೂಮಲೀಲೆ ಕವಿತೆ ನೆನಪಾಯ್ತು. ಸಿಗರೇಟಿನ ಹೊಗೆ ವರ್ತುಳ ವರ್ತುಳ ಧೂಪಧೂಮ ಮಾಲೆ; ವಿವಿಧರೂಪ ವಿಹ್ವಲವಿಲಾಪಗಳು ವಿಕೃತ ಚಿತ್ರಗಳು ಗಾಳಿಯಲೆಯ ಮೇಲೆ… ಎಂದು ಅದರ ಆರಂಭ. ಮೈಸೂರಿನ ಕಾಫೀಹೌಸಿನಲ್ಲಿ ಜತೆಯ ಗುಂಡುಗೋವಿಗಳ ನಡುವೆ ಅವರ ಧೂಮವಿಲಾಸ ನಡೆಯುತ್ತಿತ್ತು. ಆ ದಿನಗಳಲ್ಲಿ ಅಡಿಗರು ಒಂದು ಸಣ್ಣ ಬಟ್ಟೆ ಕೈಚೀಲ ಹಿಡಿದು ಬಸ್ ಹತ್ತಿ ದೇವರಾಜ ಮಾರ್ಕೆಟ್ ಹತ್ತಿರದ ಕಾಫೀಹೌಸ್‌ಗೆ ಬಂದರೆ ಈ ಪರಿವಾರ ದೈವಗಳು- ಅನಂತಮೂರ್ತಿ, ಬಿ.ಕೆ.ಸಿ. ಚನ್ನಯ್ಯ ಮುಂತಾದವರು- ಸುಮಾರು 2 ಗಂಟೆ ಮೀರಿ ಅಲ್ಲಿರುತ್ತಿದ್ದರು.

ಅಲ್ಲಿ ಎಣ್ಣೆ ಸೇವನೆಯೇನೂ ಇರ್ತಿರಲಿಲ್ಲ. ಮಿಕ್ಕವರು ತಮ್ಮದೇ ಗುಂಗಿನಲ್ಲಿದ್ದರೆ ಅಡಿಗರಂತೂ ತಮ್ಮ ಧೂಮಲೀಲೆ ಯಲ್ಲೇ ಇರೋರು. ಅಲ್ಲೊಂದು ಜೂಕ್‌ಬಾಕ್ಸ್ ಸಹ ಇತ್ತು; ಹಿಂದೀ ಹಾಡಿನ ತಟ್ಟೆಗಳೇ ಹೆಚ್ಚು; ಆಗಾಗ ಅದರ ಕೇಳ್ಮೆಗೆ ನಾನೂ ಹೋದಾಗಲೆಲ್ಲಾ ಈ ಭಾನುವಾರದ ಗುಂಪು ತಪ್ಪದೇ ಇರೋದು. ಹಾಗೆ, ಸುಖಸಂಕಥಾ ವಿನೋದದಿಂದಿದ್ದ ಅಡಿಗರನ್ನು ಕೆ.ಎಚ್. ಶ್ರೀನಿವಾಸರು ಸಾಗರದ ಲಾಲ್‌ಬಹದ್ದೂರ್ ಕಾಲೇಜಿಗೆ ಪ್ರಿನ್ಸಿಪಾಲ್ ಆಗಿ ನೆಮ್ಮದಿಯ ಮೈಸೂರಿಂದ ಹಾರಿಸಿ ಒಯ್ದದ್ದೂ, ಅಡಿಗರು ‘ಸಾಕ್ಷಿ’ ಎಂಬ ಅನಿಯತಕಾಲಿಕೆಯಲ್ಲಿ ‘ರಾಕ್ಷಸರು’ ಎಂಬ ಬರೆಹ ಬರೆದದ್ದೂ ಇತಿಹಾಸ. ಹಾಗೆಯೇ, ಪಾಪದ ಕು.ಶಿ.ಹರಿದಾಸ ಭಟ್ಟರನ್ನು ಕುರಿತು ಖಾರವಾಗಿ ಕಾರಂತರು ಇಂಥದೇ ರೀತಿಯಲ್ಲಿ ಕಾದಂಬರಿ ಬರೆದಾಗ ಸುತ್ತಲೂ ಲತ್ತೆ ಕೊಡುವ ಕತ್ತೆ ನೆನಪಾಗಿ ಅದನ್ನೋದಿ ಕನಿಕರ ಪಟ್ಟವರ ಪೈಕಿ ನಾನೂ ಒಬ್ಬ. ನನ್ನ ಆರೋಗ್ಯ, ವಯಸ್ಸು ಮತ್ತು ಪರಿಸರಕ್ಕೆ ತಕ್ಕಂತೆ ಹವಣಾಗಿ ಇರೋದಕ್ಕೆ ಇಂಥ ನೆನಪುಗಳೇ ನನಗೆ ಟಾನಿಕ್ ಅಂದ್ರೆ ಅನ್ಯಥಾ ಭಾವಿಸಬೇಡಿ!".

ನನಗೆ ಅನೇಕ ಸಲ ಅನಿಸಿದ್ದಿದೆ, ಇಂಥ ನೆನಪುಗಳನ್ನೆಲ್ಲ ರಾಘವೇಂದ್ರ ಭಟ್ಟರು ಒಂದೆಡೆ ಬರೆದಿಡಬೇಕಿತ್ತು, ಅದು ಪುಸ್ತಕರೂಪದಲ್ಲಿ ಪ್ರಕಟವಾಗಬೇಕಿತ್ತು, ಅಥವಾ ಕನಿಷ್ಠ ಧ್ವನಿಮುದ್ರಣವನ್ನಾದರೂ ಮಾಡಿಡಬೇಕಿತ್ತು ಎಂದು. ಮೇಲಿನ ಧೂಮವಿಲಾಸದ ನಿದರ್ಶನವನ್ನೇ ತೆಗೆದುಕೊಂಡರೂ- ಸಾಹಿತಿಗಳು ಆ ರೀತಿ ಸಂಜೆಹೊತ್ತು ಅಥವಾ ವಾರಾಂತ್ಯದಲ್ಲಿ ಒಂದೆಡೆ ಸೇರಿ ಹರಟುತ್ತಿದ್ದರು ಅನ್ನೋದು ವಿಶೇಷವಲ್ಲ, ಧಾರವಾಡದಲ್ಲಿ ಮನೋಹರ ಗ್ರಂಥ ಮಾಲೆ ಕಚೇರಿಯ ಅಟ್ಟದ ಮೇಲೆ ಬೇಂದ್ರೆ ಆದಿಯಾಗಿ ಸಾಹಿತಿಗಳ ಹರಟೆ ನಡೆಯುತ್ತಿದ್ದದ್ದು ಪ್ರಸಿದ್ಧವೇ.

ಆದರೆ ಪ್ರತ್ಯಕ್ಷದರ್ಶಿಯೊಬ್ಬರು ಅಕ್ಷರಗಳಲ್ಲಿ ಅದನ್ನೆಲ್ಲ ದಾಖಲಿಸಿಟ್ಟರೆ ಮತ್ತೆಮತ್ತೆ ಓದಿ ಚಪ್ಪರಿ ಸುವುದಕ್ಕೆ ಸ್ವಾರಸ್ಯಕರವಾಗಿರುತ್ತದೆ. ಅದರಲ್ಲೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸಾಹಿತ್ಯ-ಸಂಸ್ಕೃತಿಯ ದಿಗ್ಗಜರ ಪರಿಚಯ, ಒಡನಾಟ ಇದ್ದ ರಾಘವೇಂದ್ರ ಭಟ್ಟರು ಅಷ್ಟಿಷ್ಟ ನ್ನಾದರೂ ಬರೆದಿಡಬೇಕಿತ್ತು ಎಂಬ ಅಪೇಕ್ಷೆ ಅತಾರ್ಕಿಕವಲ್ಲ. ಜಿ.ಟಿ.ನಾರಾಯಣ ರಾಯರ ಸೊಸೆ ರುಕ್ಮಿಣಿ ಮಾಲಾ ಮೊನ್ನೆ ಫೇಸ್‌ಬುಕ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದರಲ್ಲೂ ಈ ಅಂಶ ವ್ಯಕ್ತವಾಗಿತ್ತು: “ರಾಘವೇಂದ್ರ ಭಟ್ಟರು ಕನ್ನಡ, ಸಂಸ್ಕೃತ, ಆಂಗ್ಲ ವಿಷಯಗಳಲ್ಲಿ ಪಂಡಿತೋತ್ತಮರು. ನಮ್ಮ ಮಾವನವರ ಪರಮಾಪ್ತ ಸ್ನೇಹಿತರು.

ಪ್ರತಿನಿತ್ಯ ಇಬ್ಬರಿಗೂ ವಾಯುವಿಹಾರಕ್ಕೋ, ಸಂಗೀತ ಕಛೇರಿಗೋ ಜತೆಯಾಗಿ ನಡೆದುಕೊಂಡೇ ಹೋಗುವುದು ಪರಿಪಾಠ. ಮಾವನವರು ಲೇಖನ, ಪುಸ್ತಕ ಬರವಣಿಗೆಯಲ್ಲಿ ತೊಡಗಿದ್ದಾಗ, ಏನೇ ಸಂಶಯ ಬಂದರೂ ಭಟ್ಟರಲ್ಲಿ ಚರ್ಚಿಸಿಯೇ ಮುಂದುವರಿಕೆ. ಪುಸ್ತಕಗಳ ಅಚ್ಚಿಗೆ ಮುನ್ನ ಕರಡು ತಿದ್ದುವ ಕೆಲಸವೂ ಅವರದೇ. ಆದರೆ ನಮ್ಮ ಮಾವನಿಗೆ ಒಂದು ಕಾರಣಕ್ಕೆ ಅವರ ಮೇಲೆ ಮುನಿ ಸಿತ್ತು- ಇಷ್ಟು ವಿದ್ವತ್ತಿರುವ ವ್ಯಕ್ತಿ, ಲೇಖನ ಬರೆಯಿರೆಂದರೆ ಸುತರಾಂ ಒಪ್ಪುತ್ತಿರಲಿಲ್ಲ ಎಂದು. ಮಾವ ಈ ವಿಷಯದಲ್ಲಿ ಹತಾಶರಾಗಿ ಸೋಲೊಪ್ಪಿಕೊಂಡಿದ್ದರು. ಭಟ್ಟರು ಆಗ ಜಯಶಾಲಿ ಯಾಗಿದ್ದರು. ಆದರೆ, ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆಯವರು ಭಟ್ಟರನ್ನು ಈ ವಿಷಯದಲ್ಲಿ ಸೋಲಿಸಿ, ಅವರಿಂದ ಮೂರು ಚಿಂತನ ಹೇಳಿಸುವಲ್ಲಿ ವಿಜಯಿಯಾದರು.

ಭಟ್ಟರ ಯಾವ ಸಬೂಬಿಗೂ ಕಿವಿಗೊಡದೆ, ಅವರಿಂದ ಲೇಖನಿ ಹಿಡಿಸಿ, ಚಿಂತನ ಬರೆಯಿಸಿ, ಆಕಾಶವಾಣಿಯಲ್ಲಿ ಪ್ರಸಾರ ಮಾಡಿಸಿದ ಕೀರ್ತಿ ದಿವಾಕರ ಹೆಗಡೆಯವರದು. ಅಂತೂ ನೀವು ಸೋತಿರಿ. ತಪ್ಪಿಸಿಕೊಳ್ಳಲಾಗಲಿಲ್ಲ. ಈಗ ಮಾವನವರು ಸ್ವರ್ಗದಲ್ಲೇ ಬಹಳ ಖುಷಿಪಟ್ಟಿರಬಹುದು ಎಂದು ಆ ಸಂದರ್ಭದಲ್ಲಿ ನಾನು ಭಟ್ಟರ ಕಾಲೆಳೆದಾಗ, ಕೂಡಲೇ ಮಾತು ಬೇರೆಡೆ ತಿರುಗಿಸಿ ತಪ್ಪಿಸಿ ಕೊಂಡಿದ್ದರು!".

ಆಕಾಶವಾಣಿಯ ವಿಚಾರವನ್ನು ರಾಘವೇಂದ್ರ ಭಟ್ಟರು ಒಮ್ಮೆ ನನ್ನಲ್ಲೂ ಹಂಚಿಕೊಂಡಿದ್ದರು: “ನಿಮ್ಮ ಮಂಗಳೂರು ಆಕಾಶವಾಣಿ ಸಂದರ್ಶನವನ್ನು ಕೇಳಿ, ಲೇಖನ ಓದಿ, ನನ್ನ ಆಕಾಶವಾಣಿ ಅನುಭವ ನೆನಪಿಸಿಕೊಂಡೆ. ಮೈಸೂರು ಮಹಾರಾಜಾ ಕಾಲೇಜಿನ ನಾವು ನಾಲ್ವರು ಅಂತರ ವಿ.ವಿ. ಚರ್ಚೆಗೆ ಆಯ್ಕೆ ಆಗಿದ್ದೆವು. ಜಿ. ಎಚ್.ನಾಯಕ್, ವೈಕುಂಠರಾಜು, ಸೋಮಶೇಖರ ರಾವ್ ಮತ್ತು ನಾನು. ಹೀಗೆ ಬೆಂಗಳೂರಿಗೆ ಹೋದಾಗಿನ ಲಾಭ-ಕಾಳಿಂಗರಾಯರು ಸೋಹನ್‌ಕುಮಾರಿ ಮತ್ತು ಮೋಹನ್ ಕುಮಾರಿಯರೊಡನೆ ಆವತ್ತು ಆಕಾಶವಾಣಿ ನಿಲಯಕ್ಕೆ ಬಂದಿದ್ದರು.

ಅವರ ಪಾಳಿ ಆದ ಮೇಲೆ ನಮ್ಮದು. ಆಗ ಆಕಾಶವಾಣಿ ಯಲ್ಲಿ ವಿ.ಸೀ. ಮತ್ತು ಶ್ರೀರಂಗ ಬೇರೆಬೇರೆ ವಿಭಾಗ ಗಳಲ್ಲಿದ್ದರು. ವಿ.ಸೀ. ತಮ್ಮ ಮನೆಯ ಗ್ರಂಥಾಲಯದಿಂದ ಬಂಗಾಳಿ ಸಾಹಿತ್ಯ ಕುರಿತ ಪುಸ್ತಕ ತರಿಸಿಕೊಂಡು, ಅಂದು ಮಾತನಾಡುವವರ ಜತೆ ರೆಕಾರ್ಡಿಂಗ್ ಮಾಡುತ್ತ ಉದಾಹರಣೆಗಳನ್ನು ತಮ್ಮ ಪುಸ್ತಕದಿಂದ ಓದಿದ್ದರು. ಆಮೇಲೆಹೀಗೆಯೇ ಹರಟುತ್ತ ನಮಗೊಂದು ವಿಚಿತ್ರ ಸುದ್ದಿ ಕೊಟ್ಟರು- ಇಲ್ಲಿ ಅಲ್ಪ ಗೌರವಧನದ ಚೆಕ್ ಪಡೆದ ಜನ ಕೆಲವರು ರಸ್ತೆ ತುದಿಯ ಪ್ರಜಾವಾಣಿ ಕಚೇರಿಗೆ ಹೋಗಿ ದೂರು ಕೊಟ್ಟು ಹೋಗುವರು. ಹೀಗಿದೆ ನಮ್ಮ ಪಾಡು,ನೋಡಿ- ಎಂದು. ಆಕಾಶ ವಾಣಿಯಲ್ಲಿ ಅವರನ್ನು ನಡೆಸಿಕೊಂಡ ಪರಿ ಹಾಗಿರುತ್ತಿತ್ತು.

ಈಚೆಗೆ, ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆಯವರು ನನ್ನನ್ನು ಒತ್ತಾಯಿಸಿದರು. ಡಿವಿಜಿ ಮತ್ತು ಕೈಲಾಸಂ ಬಗ್ಗೆ ಮೂರು ಹೊಸೆದು ನಿಭಾಯಿಸಿದೆ! ಶ್ರೇಯಸ್ಸು ದಿವಾಕರರಿಗೇ ಸಲ್ಲಬೇಕು. ಏಕವ್ಯಕ್ತಿ ತಾಳಮದ್ದಳೆ ಪ್ರಸ್ತುತಿಯಲ್ಲಿ ಅವರು ಪ್ರಖ್ಯಾತರು. ಆಕಾಶವಾಣಿಯಲ್ಲಿ ಇಂಥ ಬಹುಶ್ರುತ ಸಜ್ಜನರು ಸಾಕಷ್ಟಿದ್ದಾರೆ; ಬಳಸಿಕೊಳ್ಳುವ ಧಣಿಗಳು ಇರಬೇಕಷ್ಟೆ" ಎಂದು. ಇನ್ನೊಂದು ಸಂದರ್ಭ ದಲ್ಲಿ, ಆಕಾಶವಾಣಿ ಎಂಬ ಹೆಸರಿನ ಬಗ್ಗೆಯೂ ಬರೆದಿದ್ದರು: “ಮಹಾರಾಜಾ ಕಾಲೇಜಿನ ಅಧ್ಯಾಪಕರ ಕೊಠಡಿಯಲ್ಲಿ, ಇದಕ್ಕೊಂದು ಹೆಸರು ಹೇಳಿರಯ್ಯಾ ಎಂದು ಕೇಳಿದ ಗೋಪಾಲ ಸ್ವಾಮಿಗಳಿಗೆ ತಟಕ್ಕನೆ ‘ಆಕಾಶವಾಣಿ’ ಅಂತ ನಾಮಕರಣಿಸಿದ್ದು ನಾ.ಕಸ್ತೂರಿ ಎಂದು ಮೂರ್ತಿ ರಾಯರು ಮತ್ತು ನನ್ನ ಗುರುಗಳು ಕೆ.ವೆಂಕಟರಾಮಪ್ಪನವರ ಬಾಯಲ್ಲಿ ಕೇಳಿದ್ದೆ!" ನೋಡಿ! ಇಂಥ ಮೌಖಿಕ ದಾಖಲೆಗಳು ಮರೆಯಾದಾಗ ಇತಿಹಾಸದ ಸತ್ಯ ಮಸುಕಾಗುತ್ತದೆ. ಅದೇ ಬೇಜಾರು.

ಜಿ.ಟಿ.ನಾರಾಯಣ ರಾಯರ ಪ್ರಸ್ತಾವ ರಾಘವೇಂದ್ರ ಭಟ್ಟರ ಟಿಪ್ಪಣಿಗಳಲ್ಲಿ ಆಗಾಗ ಬರುವುದಿತ್ತು. ಪದ್ಮಪತ್ರ ಮಿವಾಂಭಸಾ ತತ್ತ್ವಜ್ಞಾನ ಮತ್ತದರ ಹಿಂದಿನ ವಿಜ್ಞಾನ ಲೇಖನದಲ್ಲಿ ಏಕಾಂಗಿತನ, ನಿರ್ಲಿಪ್ತತೆ, ಏಕಾಂತ ಮುಂತಾದ ವಿಚಾರಗಳನ್ನೋದಿ “ಜಿಟಿಎನ್ ಬಾಯಿಂದ ಈ ಏಕಾಂಗಿ ಮತ್ತು ಏಕಾಂತ ಎಂಬುದರ ವಿಶ್ಲೇಷಣೆ ಯನ್ನು ಅದೆಷ್ಟು ಸಲ ಕೇಳಿದ್ದೇನೋ!" ಎಂದು ಸ್ಮರಿಸಿದ್ದರು. “ಟಾನಿಕ್ ಶಕ್ತಿವರ್ಧಕ ಆದ್ದರಿಂದ ಅದಕ್ಕೊಂದು ಮಹಾಪ್ರಾಣ ಸೇರಿಸಿ ಠಾನಿಕ್ ಎನ್ನಬೇಕು ಎಂದು ಜಿಟಿಎನ್ ಸೋಂಕಿಸಿದ ಉಚ್ಚಾರಣೆ" ಎಂದಿದ್ದರು.

ಪಾವೆಂ ಆಚಾರ್ಯರ ಬಗ್ಗೆ ಬರೆದಾಗಲೂ “ಪಾವೆಂ ಅವರ ನಿಕಟಮಿತ್ರರು ನಮ್ಮ ಜಿಟಿಎನ್. ಆಚಾರ್ಯರ ವಿಶಾಲ ಓದು ಮತ್ತು ಸೂಕ್ಷ್ಮಗ್ರಾಹಿ ದೃಷ್ಟಿಯ ಬಗ್ಗೆ ರಾಯರಿಂದ ಕೇಳಿ ಬಲ್ಲೆ; ಪಾವೆಂ ಅವರಿಗೆ ಹಮ್ಮಿಣಿ ಒಂದನ್ನು ಮೈಸೂರಿನ ಅಭಿಮಾನಿಗಳಿಂದ ಒಪ್ಪಿಸಿ ಧನ್ಯತೆ ಕಂಡವರು ಜಿಟಿಎನ್" ಎಂದು ಬರೆದಿದ್ದರು. “ಕೆ.ಎಸ್.ನಿಸಾರ್ ಅಹ್ಮದ್ ಮತ್ತು ಜಿಟಿಎನ್ ನಡುವೆ ಒಂದು ತೆರನ ಕಾಲೆಳೆಯುವ ಸಂಬಂಧವಿತ್ತು. ಕನ್ನಡದ ಮೊತ್ತಮೊದಲ ಧ್ವನಿಸುರುಳಿ ‘ನಿತ್ಯೋತ್ಸವ’ ಬಂದಾಗ ಸಜೀವ (ಲೈವ್) ಸಂಗೀತದ ಸವಿ ಕೆಸೆಟ್ಟಿನಲ್ಲಿ ಕೇವಲ ನೀರಸವೆಂದಿದ್ದರು ರಾಯರು. ವಿಡಿಯೊದಲ್ಲಿ ನೃತ್ಯಪ್ರದರ್ಶನ ವೀಕ್ಷಿಸುವುದೂ ಅವರಿಗೆ ಹಿಡಿಸದು. ಏನಿದ್ದರೂ ಪ್ರತ್ಯಕ್ಷ ಸವಿಯಬೇಕು" ಎಂದು ಒಮ್ಮೆ ಬರೆದಿದ್ದರು.

ಇನ್ನೊಂದು ಟಿಪ್ಪಣಿಯಲ್ಲಿ “ಮೋಹನಮೂರ್ತಿ ನನ್ನ ಶಿಷ್ಯ; ಅವರ ಪ್ರೆಸ್ಸಿನಲ್ಲಿ ಜಿಟಿಎನ್ ಪುಸ್ತಕಗಳು ಅಚ್ಚಾಗು ವಾಗ ‘ಬನ್ನಿ, ನಿಮ್ಮ ಶಿಷ್ಯನನ್ನು ಹರಸಿ’ ಎಂದು ಜಿಟಿಎನ್ ನನ್ನನ್ನೂ ಕರೆದೊಯ್ಯುವರು. ಮೋಹ ನಮೂರ್ತಿಯ ತಂದೆ ರಾ.ವೆಂ.ಶ್ರೀನಿವಾಸ ಮೂರ್ತಿ ನನ್ನನ್ನಷ್ಟೇ ಪಕ್ಕಕ್ಕೆ ಕರೆದು ಮಾತನಾಡಿಸುವರು. ಜಿಟಿಎನ್ ನಿರೀಶ್ವರವಾದಿ ಯೆಂದು ಅವರಿಗೆ ಇಷ್ಟವಾಗದು!" ಎಂದು ಬರೆದಿದ್ದರು.

ಜಿಟಿಎನ್ ಸಖ್ಯದಿಂದಾಗಿಯೇ ಇರಬಹುದು, ರಾಘವೇಂದ್ರ ಭಟ್ಟರಿಗೆ ವಿಜ್ಞಾನದಲ್ಲಿ ವಿಶೇಷ ಆಸಕ್ತಿ. ಗಣಿತದಿಂದ ದೂರ ಓಡಿಹೋದೆನಾದರೂ ವಿಜ್ಞಾನ ತನಗೆ ನೆಚ್ಚಿನದೆನ್ನುತ್ತಿದ್ದರು. ಖ್ಯಾತ ವಿಜ್ಞಾನ ಲೇಖಕ ಹಾಲ್ದೊಡ್ಡೇರಿ ಸುಧೀಂದ್ರರ ಅಕಾಲನಿಧನದ ಸುದ್ದಿಯಿಂದ ತೀವ್ರ ನೊಂದಿದ್ದರು. “ಸಾಧ್ಯವಾದರೆ, ಸುಧೀಂದ್ರರನ್ನು ಕುರಿತಾದ ಬರಹ ನಿಮ್ಮಿಂದ ಬರಲೆಂದು ನನ್ನ ಆಗ್ರಹದ ಕರೆ. ಅಪಾರ ವಿದ್ವತ್ತಿನ ಅನನ್ಯ ಸಂಶೋಧಕ ಮತ್ತು ಕನ್ನಡದ ಚೆನ್ನುಡಿಯ ಸುಮಧುರ ಶೈಲಿಯ ಅವರ ಬಗೆಗೆ ಬರೀತೀರಿ ತಾನೆ?" ಎಂದು ನನ್ನನ್ನು ಕೇಳಿದ್ದರು.

‘ವಿಶ್ವವಾಣಿ’ ಯಲ್ಲಿ ಪ್ರಕಟವಾಗಿದ್ದ ಶ್ರದ್ಧಾಂಜಲಿ ಲೇಖನವನ್ನು ಅವರ ಗಮನಕ್ಕೆ ತಂದಾಗ “ನನ್ನ ಕೋರಿಕೆಗೆ ದೊರೆತ ನಿಮ್ಮ ಮರುನುಡಿ ಮನತುಂಬಿತು. ಇಂಥ ಸರಳ ಸಜ್ಜನರ ನೆನಪೇ ನಮಗೆಲ್ಲ ಟಾನಿಕ್ಕು. ಕಸ್ತೂರಿಯಲ್ಲಿ ಅವರ ಲೇಖನಗಳು ನನ್ನನ್ನೂ ನನ್ನ ಮನೆಯವರನ್ನೂ ಅದೆಷ್ಟು ಹಿಡಿದಿಟ್ಟಿತೆಂದರೆ ಬೇರೆಲ್ಲದಕ್ಕೂ ಮೊದಲು ಇವೇ ನಮ್ಮ ಮೊದಲ ಗುಟುಕು. ಟಿ.ಎಸ್.ಅನಂತ ರಾಮು ಅವರಂಥ ಜಿಟಿಎನ್ ಗರಡಿಯಲ್ಲಿ ಸಾಮು ತೆಗೆದವರು ಬೆರಳೆಣಿಕೆಯಷ್ಟು ಮಂದಿ ನಮ್ಮಲ್ಲಿ ಉಳಿದಿದ್ದಾರೆ; ನಮ್ಮ ಪತ್ರಿಕೆಗಳು ಯುವಪ್ರತಿಭೆಗಳನ್ನು ಇನ್ನಷ್ಟು ಬೆಳೆಸುವ ರೆಂದು ನಂಬಿದ್ದೇನೆ" ಎಂದಿದ್ದರು.

ಇಸ್ರೋ ವಿಜ್ಞಾನಿ ಸಿ.ಆರ್.ಸತ್ಯ ಅವರ ಆತ್ಮಚರಿತ್ರೆ ‘ತ್ರಿಮುಖಿ’ ಪುಸ್ತಕದ ಬಗೆಗಿನ ಲೇಖನ ಓದಿ “ಕಳೆದ ಮೂರು ತಿಂಗಳ ಅಪರಂಜಿಯಲ್ಲಿ ತ್ರಿಮುಖಿ ಬಗ್ಗೆ ಪ್ರಕಟಣೆ ಇದ್ದರೂ ಅದನ್ನು ಹೇಗೆ ಸಂಪಾದಿಸಲೆಂದು ತಿಳಿಯದೆ ಬೆಪ್ಪನಾದವನಿಗೆ ಈ ಲೇಖನ ಚುರುಕು ಮುಟ್ಟಿಸಿದೆ. ಇಂದೇ ಮೂರು ದಿಕ್ಕಿಗೆ ಅಂಚೆ ಕಳಿಸಿದ್ದೇನೆ. ತ್ರಿಮುಖಿ ಸಿಕ್ಕರೆ ಕೊಂಡು ಓದಿ ಕೊಂಡಾಡುವೆನು!" ಎಂದು ಬರೆದಿದ್ದರು; ಪುಸ್ತಕ ತರಿಸಿ ಓದಿದ್ದರು. ಇತ್ತೀಚೆಗೆ ಶರತ್ ಭಟ್ ಸೇರಾಜೆಯವರ ‘ಹತ್ತೇವು ವಿಜ್ಞಾನದ ಜೀಪ!’ ಪುಸ್ತಕ ಪ್ರಕಟವಾಗಲಿದೆಯೆಂದು ತಿಳಿದಾಗ “ಮುನ್ನುಡಿಗೇ ಫಿದಾ ಆದೆ. ಶರತ್ ಭಟ್ಟರನ್ನು ಸಂಪರ್ಕಿಸುತ್ತೇನೆ" ಎಂದಿದ್ದರು.

ವಿಧಿಲೀಲೆ ಎನ್ನಬೇಕು, ಪುಸ್ತಕದ ಪ್ರಕಾಶಕ ಸೂರ್ಯಪ್ರಕಾಶ ಪಂಡಿತರು ಇನ್ನೂ ಮೀನಮೇಷ ಎಣಿಸುತ್ತಿದ್ದು ಪುಸ್ತಕವು ಸೂರ್ಯಪ್ರಕಾಶ ಕಂಡಿಲ್ಲ. ರಾಘವೇಂದ್ರ ಭಟ್ಟರ ಓದಿಗೆ ಅದು ಸಿಗಲೇ ಇಲ್ಲ! ಮೈಸೂರಿನ ರೀಜನಲ್ ಕಾಲೇಜಿನಲ್ಲಿ ರಾಘವೇಂದ್ರ ಭಟ್ಟರಿಗೆ ಭೈರಪ್ಪ ಸಹೋದ್ಯೋಗಿ. “ಭೈರಪ್ಪನವರೂ ನಾನೂ ಕಾಲೇಜಿನ ಕೆಲಸದ ಮೇಲೆ ಧಾರವಾಡಕ್ಕೆ ಹೋಗಿದ್ದಾಗ ಅಲ್ಲಿ ತಂಗಿದ್ದು ಪಾವೆಂ ಆಚಾರ್ಯರ ಭಾವನವರ ಹೋಟೆಲಿನಲ್ಲಿ. ಆಗಸ್ಟ್ ತಿಂಗಳ ಮಳೆಗಾಲ. ಅಸ್ತಮಾಲಂಕೃತ ಪಾವೆಂ ತಾತ್ಕಾಲಿಕವಾಗಿ ಅಲ್ಲೇ ವಾಸವಾಗಿದ್ದರು; ಆಗೆಲ್ಲ ಭೈರಪ್ಪ ತಮ್ಮಬರವಣಿಗೆಯ ಅನೇಕ ವಿಷಯಗಳನ್ನು ಈ ಹಿರಿಯರೊಡನೆ ಪ್ರಸ್ತಾವಿಸಿ ಮಾರ್ಗದರ್ಶನ ಪಡೆದರು; ಅದರ ಲಾಭ ಕನ್ನಡಿ ಗರಿಗೆ ಈಗಲೂ ದೊರಕುತ್ತಿದೆ" ಅಂತ ಒಮ್ಮೆ ಬರೆದಿದ್ದರು.

ಮತ್ತೊಮ್ಮೆ “ಶಿವಮೊಗ್ಗದಲ್ಲಿ ಎಸ್.ವಿ.ರಂಗಣ್ಣನವರ ಅಧ್ಯಕ್ಷತೆಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಕೆ.ವಿ.ಸುಬ್ಬಣ್ಣ ತುರ್ತುಪರಿಸ್ಥಿತಿ ಬಗ್ಗೆ ಮಾತನಾಡಲು ತೊಡಗಿದಾಗ ಗೋಷ್ಠಿಯ ಅಧ್ಯಕ್ಷ ಭೈರಪ್ಪ ತಡೆದು ನಿಲ್ಲಿಸಿದ್ದರು! ಅಲ್ಲಿ ಹಾಜರಿದ್ದ ನನಗೆ ಸಹೋದ್ಯೋಗಿ ಭೈರಪ್ಪನವರ ಬಗ್ಗೆ ಅಭಿಮಾನವೆನ್ನಿಸಿತು. ಸುಬ್ಬಣ್ಣ ಎಷ್ಟಿದ್ದರೂ ಅನಂತಮೂರ್ತಿ ಬಳಗದವರು. ಈ ತೆರನ ಮುಖ ಭಂಗ ಅವರಿಗಾದದ್ದು ನನಗೆ ಇಷ್ಟವಾಯ್ತು. ಏಕೆಂದರೆ ಶಿವಮೊಗ್ಗದಲ್ಲಿ ಸಂಘದವರಿಗೆ ಕಟ್ಟಾ ವಿರೋಧಿಗಳು ಈ ಸೋಷಲಿಸ್ಟರು" ಎಂದು ಬರೆದಿದ್ದರು.

ಡಾ.ಮೈ.ಶ್ರೀ.ನಟರಾಜರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಬಂದಾಗಿನ ಲೇಖನದಲ್ಲಿ ಅನಂತಮೂರ್ತಿ ಯವರ ಪ್ರಸ್ತಾವವೂ ಇತ್ತಾದ್ದರಿಂದ ನಟರಾಜರಿಗೂ ನನಗೂ ಒಂದೇ ಮಿಂಚಂಚೆ ಬರೆದು “ಶಿವಮೊಗ್ಗ ದಲ್ಲಿ ಅನಂತ ಮೂರ್ತಿ ನನಗೂ ಮೇಷ್ಟ್ರು. ಆಗ ಅವರನ್ನು ಸಂಘದ ಚಡ್ಡಿಗಳು ಹೇಗೆಲ್ಲ ಗೋಳಾಡಿಸಿದೆವೆಂದು ನಮಗೇ ಮರೆತರೂ ನೂವೆ ಎಷ್ಟೋ ವರ್ಷ ಕಳೆದು ನಮ್ಮ ಸಹೋದ್ಯೋ ಗಿಯ ಮಗಳ ಜತೆ ಕೆ.ವಿ.ಅಕ್ಷರರ ಮಗನ ಮದುವೆಗೆ ಗಿರೀಶ್ ಕಾಸರವಳ್ಳಿ, ಜಿ.ಕೆ ಗೋವಿಂದರಾಯರೇ ಮುಂತಾದ ಸಮಾಜವಾದಿ ಸಾಥಿಗಳ ಜತೆಗೆ ಮಡದಿ ಎಸ್ತರರ ಕೂಡೆ ಬಂದ ಅನಂತಮೂರ್ತಿಗಳು ತಮ್ಮದೇ ವಿಶಿಷ್ಟ ತಬ್ಬುಗೆಯಲ್ಲಿ ನನ್ನನ್ನ ಹಿಡಿದು ‘ನೀನು ನನ್ನ ವೈರಿ ಕಣಯ್ಯಾ’! ಎಂದಿದ್ದರು.

1955ಕ್ಕೆ ಮೊದಲು ಶಿವಮೊಗ್ಗದಲ್ಲಿ ಆಮೇಲೆ ಮೈಸೂರಲ್ಲಿ ಅವರ ವಿದ್ಯಾರ್ಥಿ ಆಗಿದ್ದವನು ತರುವಾಯ ರೀಜನಲ್ ಕಾಲೇಜಿನಲ್ಲಿ ಸಹೋದ್ಯೋಗಿಯೂ ಆಗಿ ಅವರಿಗೂ ಭೈರಪ್ಪನವರಿಗೂ ಆಗುತ್ತಿದ್ದ ಜುಗಲ್ಬಂದಿ ನೋಡಿದ ನನಗೆ ಹೇಗಾಗಿರಬೇಡ?" ಎಂದು ಮೆಲುಕು ಹಾಕಿದ್ದರು. ಆದರೆ ಒಂದು ಮಾತು. ರಾಘವೇಂದ್ರ ಭಟ್ಟರದು ‘ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ’ ಬಸವತತ್ತ್ವದ ಕಟ್ಟುನಿಟ್ಟಿನ ಪರಿಪಾಲನೆ. ತನಗೆ ಸಿಕ್ಕ ಗೌರವ-ಮೆಚ್ಚುಗೆಗಳನ್ನೂ ‘ನ ಮಮ’ ಎಂಬಂತೆ ಕಂಡವರು. “ವನಮಾಲಾ ವಿಶ್ವನಾಥ್ ನನ್ನ ಶಿಷ್ಯೆ. ಎಂ.ಎ. ತರುವಾಯ ಇನ್ನಷ್ಟು ಪರಿಣತಿಯ ಭಾಷಾಂತರ ಕ್ಷೇತ್ರದಲ್ಲಿ ಸ್ಪಷ್ಟ ಮೈಲಿಗಲ್ಲುಗಳನ್ನು ಸ್ಥಾಪಿಸುವ ಶ್ಲಾಘನೀಯ ಸಾಧನೆ ಮಾಡಿಯೂ ಗುರುಪರಂಪರೆ ಯಲ್ಲಿ ಸಮುಚಿತ ಗೌರವಾಭಿಮಾನ ಇರಿಸಿದ್ದಾರೆ.

ಇಂಥ ಶಿಷ್ಯರ ಪ್ರಗತಿಯು ಸಮಾಜದ ಸಾಂಸ್ಕೃತಿಕ ಸಂಸ್ಕರಣಕ್ಕೆ ಕಾರಣವಾದಂತೆಲ್ಲ ಅದರ ಎಲ್ಲ ಯಶಸ್ಸು ನಮ್ಮ ಗುರುಗಳ ಪಾದದಲ್ಲಿ ಒಪ್ಪಿಸುವಷ್ಟು ಆ ದಿವ್ಯ ಪೂರ್ವಸೂರಿಗಳಿಂದ ಕಲಿತು ಅರಗಿಸಿಕೊಂಡ ಹೆಮ್ಮೆ ನನಗಿದೆ" ಎನ್ನುವರು. ಎಂಥ ವಿನಮ್ರತೆ! ಈರೀತಿ ಗುಣಗ್ರಾಹಿ ನಿಃಸ್ವಾರ್ಥಿ ಗಳು ಇನ್ನಂತೂ ಯಾರೂ ಸಿಗಲಾರರೇನೋ.

ತಪ್ಪು ತಿದ್ದಿಕೊಳ್ಳಲಿಕ್ಕೆ ಹೇಳುವಾಗಲೂ ಅಷ್ಟೇ. ಬೆಣ್ಣೆಯಿಂದ ಕೂದಲು ತೆಗೆದಂತೆ, ಮನನೋಯಿ ಸದೆ ತಿಳಿಸುವರು. ‘ಪುತ್ತಳಿ’ ಸರಿಯಾದ ರೂಪ, ‘ಪುತ್ಥಳಿ’ ಅಲ್ಲ ಎಂದು ಅವರಿಂದಲೇ ನಾನು ಕಲಿತದ್ದು. ಒಮ್ಮೆ, ‘ಕುರಿತೋದದೆಯುಂ ಕಾವ್ಯಪ್ರಯೋಗಪರಿಣಿ ತಮತಿಗಳ್’ ಎಂದು ಬರೆದಿದ್ದೆ. ‘ಪರಿಣಿತ’ ಎಂದರೆ ಮದುವೆ ಯಾದವಳು, ಅದು ‘ಪರಿಣತ’ ಮತಿಗಳ್ ಆಗಬೇಕು ಎಂದು ತಿಳಿಸಿದ್ದರು. ‘ಅಕ್ಷರಮಾತ್ರಂ ಕಲಿಸಿದಾತಂ ಗುರು’ ಎಂದು ಬರೆದಿದ್ದಕ್ಕೆ ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎಂದು ತಿದ್ದಿಕೊಂಡರೆ ಚೆನ್ನು ಅಂತ ಬರೆದಿದ್ದರು. ಒಂದು ಲೇಖನದಲ್ಲಿ ‘ಏಸು’ಕ್ರಿಸ್ತ ಎಂಬ ಪದ ಪ್ರಯೋಗ ನೋಡಿ “ಯೇಸು ಸರಿಯಾದ ರೂಪ. Jesus ಎಂಬುದಕ್ಕೆ ಇದೇ ಸಂವಾದಿಯಾದದ್ದು.

ಗೋವಿಂದ ಪೈಗಳ ಗೊಲ್ಗೊಥಾ ಖಂಡಕಾವ್ಯದಲ್ಲಿ John ಯೋಹಾನ ಆದಂತೆ, Judas ಯೂದಾಯ ಆದಂತೆ. ನಮ್ಮ ಭಾಷೆಯನ್ನೇ ನೋಡಿ: ಯಜ್ಞ-ಜನ್ನ. ಯಾತ್ರೆ-ಜಾತ್ರೆ. ಯಮುನೆ-ಜಮುನೆ ತಾನೇ?" ಎಂದು ತಿಳಿ ಹೇಳಿದ್ದರು. ಮತ್ತೊಮ್ಮೆ ‘ಮೌಲಿಕ’ ಬದಲಿಗೆ ‘ಮೌಲ್ವಿಕ’ ಎಂದು ತಪ್ಪಾಗಿ ಬರೆದಿದ್ದಾಗ ‘ಮೌಲ್ವಿ’ ಎಂದರೆ ಮುಸಲ್ಮಾನ ಧರ್ಮ ಗುರು ಎಂದು ಎಚ್ಚರಿಸಿದ್ದರು. ಲೇಖನ ಕಲೆಯ ಕೆಲವು ಸೂಕ್ಷ್ಮಗಳನ್ನು ಗಮನಿಸಿ ಮೆಚ್ಚುಗೆಯನ್ನೂ ತಿಳಿಸುತ್ತಿದ್ದರು. “ಇಂದಿನ ಲೇಖನದಲ್ಲಿ ಒಂದುಕಡೆ- ಕೋವಿಡಾಯನದಲ್ಲಿ ‘ಷಟ್ಪದ ದೂರ’ ನಮಗೆಲ್ಲ ಗೊತ್ತಾಗಿದೆ, ಸಾಧ್ಯ ವಾದಷ್ಟೂ ಮಟ್ಟಿಗೆ ಅದನ್ನು ನಾವೆಲ್ಲ ಪಾಲಿಸಿದ್ದೇವೆ ಕೂಡ.

ಈಗ ಷಟ್ಪದ ಸಾಮೀಪ್ಯ ಏನೆಂದು ತಿಳಿದುಕೊಳ್ಳೋಣ- ಅಂತ ಬರೆದಿದ್ದೀರಿ. ವಿಷಯ ನಿರೂಪಣೆ ಯಲ್ಲಿ ಇಂಥ ಮಾತು ನುಸುಳಿದರೆ ಓದುಗನಿಗೆ ಜೋಕಾಲಿಯಲ್ಲಿ ಜೀಕಿದ ಅನುಭವ ಕೊಡಬಲ್ಲ ದು!" ಎಂದು ಬೆನ್ನು ತಟ್ಟಿದ್ದರು. ಇನ್ನೊಮ್ಮೆ “ಇಂದಿನ ಲೇಖನ ಓದಿದಾಗ ಭದ್ರಗಿರಿ ಅಚ್ಯುತದಾಸರ ನೆನಪಾಯ್ತು. ಹೇಗೆಂದರೆ, ಪ್ರಾರಂಭದಲ್ಲಿ ಒಂದು ಕೀರ್ತನೆ ಹಾಡಿ ಕ್ರಮೇಣ ಕಥಾಸಾಗರದಲ್ಲಿ ನಮ್ಮನ್ನು ಓಲಾಡಿಸಿ ಮುಕ್ತಾಯದಲ್ಲಿ ಅದೇ ಕೀರ್ತನೆಗೆ ಬಂದು ಬಿಡುತ್ತಿದ್ದರು; ಸುಮಾರು ಒಂದೂವರೆ ತಾಸು ಕಳೆದದ್ದೇ ನಮಗೆ ಗೊತ್ತಾಗುತ್ತಿರಲಿಲ್ಲ. ಎಲ್ಲ ಬರಹಗಳನ್ನೂ ಹೀಗೆ ನಿಭಾಯಿ ಸಲು ಬರುವುದಿಲ್ಲವಾದರೂ ಅವಕಾಶ ಸಿಕ್ಕಾಗ, ನಿಮ್ಮಂಥವರು ಅದನ್ನು ಪಾಲಿಸಿದಾಗ, ಯುಕ್ತ ಮುಕ್ತಾಯವನ್ನು ಓದಿದ ನನ್ನಂಥವರಿಗೆ ತೃಪ್ತಿ ದೊರಕುವುದು" ಎಂದಿದ್ದರು.

ನಿಜ, ಪ್ರತಿ ಸಲ ಹಾಗೆ ಯುಕ್ತ ಮುಕ್ತಾಯ ಕೊಡಲಿಕ್ಕಾಗಲಿಕ್ಕಿಲ್ಲ, ಆದರೆ ಎಲ್ಲಿಂದ ಆರಂಭಿಸಿದೆವೋ ಅಲ್ಲಿಗೇ ತಂದು ನಿಲ್ಲಿಸಿದರೆ ಅದಕ್ಕೊಂದು ಚಂದ. ಕಳೆದವಾರ ರಾಘವೇಂದ್ರ ಭಟ್ಟರು ಸ್ವರ್ಗದಲ್ಲೇ ಓದಿರಬಹುದಾದ ಅಂಕಣಬರಹದಲ್ಲಿ ಹಾಗೇ ಮಾಡಿದ್ದೆ: ‘ಬಾಗಿಲು ತೆರೆಯೇ ಸೇಸಮ್ಮ…’ ಎಂಬ ವಾಕ್ಯವಿದ್ದ ಅವರ ಮಿಂಚಂಚೆಯ ಉಲ್ಲೇಖದಿಂದ ಆರಂಭಿಸಿ ‘ಅವರೀಗ ಸ್ವರ್ಗದ ಬಾಗಿಲನ್ನು ತೆರೆಸಿಕೊಂಡರು’ ಎಂದು ಮುಗಿಸಿದ್ದೆ! ಅದನ್ನು ಕಲಿಸಿದ ತಸ್ಮೈ ಶ್ರೀ ಗುರವೇ ನಮಃ.

ಇದನ್ನೂ ಓದಿ: Srivathsa Joshi Column: ಗುಳಿಗೆ ರಸಗಳಿಗೆ ಹರಟೆ ಮತ್ತೊಂದು ಲೆಕ್ಕ ಮಿದುಳಿಗೆ