ಶ್ವೇತಪತ್ರ
shwethabc@gmail.com
‘ಪುಟ್ಟ ರಾಗಿ ಕಾಳಿನಷ್ಟು ನಂಬಿಕೆ ನಿನ್ನೊಳಗಿದ್ದರೆ ಎದುರಿಗಿರುವ ಬೆಟ್ಟವನ್ನು ಈ ಕಡೆಯಿಂದ ಆ ಕಡೆಗೂ ಆ ಕಡೆಯಿಂದ ಈ ಕಡೆಗೂ ಜರುಗಿಸಿಬಿಡ ಬಹುದು’ ಹೀಗೊಂದು ಸ್ಪೂರ್ತಿ ತುಂಬುವ ಮಾತು ಬೈಬಲ್‌ನಲ್ಲಿದೆ. ನಂಬಿಕೆಯು ನಮ್ಮ ಆಸೆ ಹಾಗೂ ಸಾಧನೆಯ ನಡುವಿನ ಸೇತುವೆ. ನಂಬಿಕೆಗೆ ಅದೆಂಥ ದೊಡ್ಡ ಶಕ್ತಿಯಿದೆ ಗೊತ್ತಾ? ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೇ ಕೆಟ್ಟರೆ ಕೆಡಲಿ, ಅಂಬುಜನಾಭನ ಪಾದವ ನೆನೆಯೆ ಭವಾಂಬುಧಿ ದುಃಖವ ಪರಿಹರಿಸುವ ಕೃಷ್ಣ | ಬಲಿಯ ಪಾತಾಳಕ್ಕೆ ಇಳಿಸಿ ಭಕ್ತ-ಗೊಲಿದು ಬಾಗಿಲ ಕಾಯ್ದನು ಛಲದೊಳು ಅಸುರನ ಶಿರಗಳ ತರಿದು ತಾನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ | ತರಳ ಪ್ರಹ್ಲಾದಗೊಲಿದು ಉಗುರಿನಿಂದ ಹಿರಣ್ಯನುದುರ ಸೀಳಿದ ಕರಿರಾಜಗೊಲಿದು ನೆಗಳು ನುಂಗಿರ ಲಾಗಿ ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ | ಪಾಂಡವರಿಗೊಲಿದು ಕೌರವರನ್ನು ತುಂಡು ಛಿದ್ರವ ಮಾಡಿದ ಅಂಡಲೆದು ದ್ರೌಪದಿ ಸಭೆಯೊಳು ಕೂಗೆ ಬಂದು ಕಾಯ್ದ ಶ್ರೀ ಪುರಂದರ ವಿಠಲ || ಎನ್ನುತ್ತಾ ನಂಬಿಕೆಯೆಡೆಗೆ ಮತ್ತಷ್ಟು ನಂಬಿಕೆಯನ್ನು ಮೂಡಿಸುತ್ತಾರೆ ಪುರಂದರದಾಸರು.
ನಂಬಿಕೆ ಎಂದಿಗೂ ಗರ್ಭಧಾರಣೆಯಂತಿರಬೇಕು, ನಿರ್ದಿಷ್ಟ ಸಮಯದಲ್ಲಿ ಅದು ಮೊಳಕೆಯೊಡೆಯಬೇಕು. ಸೃಷ್ಟಿಯ ಕ್ರಿಯೆಗೆ ಇರುವ ಪ್ರಕೃತಿ ನಿಯಮವೇ ಅಂಥದ್ದು. ತಾಯಿಯ ಗರ್ಭದಲ್ಲಿ ಜನಿಸುವ ಮಗುವಿನಂತೆ, ನವಮಾಸಗಳನ್ನು ದಾಟಿ ಜೀವ ಮೈದಳೆಯುವಂತೆ, ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆದು ಫಸಲು ಮೈದುಂಬುವಂತೆ. ನಂಬಿಕೆಯು ಹೀಗೆ ಸೃಷ್ಟಿಯ ಲಯ-ಕ್ರಿಯೆಯಂತೆ ಮನಸ್ಸಿನೊಳಗೆ ಮೈದಳೆಯಬೇಕು. ಅದು ಚಿಗುರೊಡೆ ಯುವ ಮುನ್ನವೇ ಅಸಹನೆಯ ಸೆಲೆಗೆ ಸಿಲುಕಿ ನಂಬಿಕೆ ಹುಟ್ಟುವುದೋ ಇಲ್ಲವೋ ಎಂಬ ಅಸ್ಥಿರತೆಯನ್ನು ನಮ್ಮದಾಗಿಸಿಕೊಂಡರೆ ನಂಬಿಕೆಯಾದರೂ ಹುಟ್ಟುವುದು ಹೇಗೆ? ಯಾವುದೇ ಯಶಸ್ಸಿನ ಮೊದಲ ರಹಸ್ಯವೇ ಸ್ವಯಂ-ನಂಬಿಕೆ. ನಾವು ನಮ್ಮನ್ನು ನಂಬಬೇಕು.
ಮರದ ರೆಂಬೆಯ ಮೇಲೆ ಕುಳಿತ ಹಕ್ಕಿಗಳಿಗೆ ಗಾಳಿ ಬೀಸಿ ರಂಬೆ ಅಲುಗಾಡಿತೆಂಬ ಭಯವಿಲ್ಲ. ಅವುಗಳಿಗೆ, ಬಿಚ್ಚಿ ಹಾರಬಹುದಾದ ತಮ್ಮ ರೆಕ್ಕೆಗಳ ಮೇಲೆ ಇನ್ನಿಲ್ಲದ ನಂಬಿಕೆ. ಮಗುವೊಂದು ವಿಮಾನದಲ್ಲಿ ಕುಳಿತಿತ್ತು. ಇದ್ದಕ್ಕಿದ್ದ ಹಾಗೆ ವಿಮಾನವು ತುರ್ತು ಭೂಸ್ಪರ್ಶ ಮಾಡಲಿದೆ ಎಂಬ ಪ್ರಕಟಣೆ ಬಿತ್ತರ ಗೊಳ್ಳುತ್ತಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರ ಮುಖದಲ್ಲೂ ಆತಂಕ; ಆದರೆ ಮುದ್ದು ಮಗುವಿನ ಮುಖದಲ್ಲಿ ಮಾತ್ರ ಮಂದಹಾಸ. ಪ್ರಯಾಣಿಕ ನೊಬ್ಬ ಮಗುವನ್ನು ‘ನಿನಗೆ ಭಯವಾಗುತ್ತಿಲ್ಲವೇ?’ ಎಂದು ಕೇಳಿದ.
ಇದಕ್ಕೆ ಉತ್ತರಿಸಿದ ಮಗು, ‘ಈ ವಿಮಾನ ಓಡಿಸುತ್ತಿರುವುದು ನನ್ನ ಅಪ್ಪ. ನನಗೆ ಗೊತ್ತು ನನ್ನ ಅಪ್ಪ ನನಗೇನೂ ಆಗದಂತೆ ನೋಡಿಕೊಳ್ಳುತ್ತಾನೆ’ ಎಂದಿತು. ನಂಬಿಕೆಯೆಂದರೆ ಇದು. ಬದುಕಿನ ಬಹುದೊಡ್ಡ ಶಕ್ತಿಯದು. ಇಲ್ಲಿ ರೂಮಿ ಎಂಬ ನನ್ನ ವಿದ್ಯಾರ್ಥಿನಿಯ ನಂಬಿಕೆಯ ಕುರಿತಾದ ನೈಜ ಕಥೆಯನ್ನು ತೆರೆದಿಡಲು ಇಚ್ಛಿಸುತ್ತೇನೆ. ರೂಮಿ ಕೆಲಸಕ್ಕೆಂದು ಹಲವಾರು ಕಡೆಗಳಲ್ಲಿ ಪ್ರಯತ್ನಿಸುತ್ತಿದ್ದಳು. ಎಲ್ಲಾ ಕಡೆಯೂ ಇಂಟರ್‌ವ್ಯೂ ಕೊಡು ವುದು, ಕೊನೆಗೆ ಆಯ್ಕೆಯಾಗದೆ ನಿರಾಸೆ ಹೊಂದುವುದು ಹೀಗೇ ಮುಂದುವರಿಯುತ್ತಿತ್ತು. ಒಂದು ದಿನ ಆಪ್ತ ಸಲಹೆಗೆಂದು ನನ್ನ ಬಳಿ ಬಂದ ರೂಮಿ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡು ಅಳತೊಡಗಿದಳು. ಅವಳಿಗೆ ಸ್ವಯಂ ನಂಬಿಕೆಯ ತಂತ್ರಗಳನ್ನು ಹೇಳಿಕೊಟ್ಟ ನಾನು ಅವಳಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನಂತೂ ಮಾಡಿದೆ. ಇದಾದ ನಂತರದಲ್ಲಿ ರೂಮಿ ಪ್ರತಿದಿನ ರಾತ್ರಿ ತನ್ನ ಮನಸ್ಸಿನ ಅನಿಸಿಕೆಗಳನ್ನು ಒಂದು ಪುಟ್ಟ ಡೈರಿಯಲ್ಲಿ ದಾಖಲಿಸತೊಡಗಿದಳು.
‘ದೇವರೇ, ನನಗೆ ಕೆಲಸದ ಅವಶ್ಯಕತೆ ಖಂಡಿತ ಇದೆ; ಕೆಲಸ ಸಿಗದೇ ಹೋದರೆ ಅಪ್ಪ-ಅಮ್ಮ ಇಷ್ಟವಿಲ್ಲದ ಮದುವೆ ಮಾಡಿಬಿಡುತ್ತಾರೆ. ನನಗೆ ಕೆಲಸ ಮಾಡುವ ಮತ್ತು ಪಡೆಯುವ ಎಲ್ಲಾ ಅರ್ಹತೆಗಳು ಇವೆ. ನನ್ನಿಂದ ಆಗದ ಯಾವುದನ್ನಾದರೂ ನಾನು ಆಶಿಸಿದ್ದರೆ ಇಷ್ಟೊತ್ತಿಗಾಗಲೇ ಅದಕ್ಕೆ ಪರ್ಯಾಯ ವಾಗಿರುವುದನ್ನೇ ನನಗೆ ನೀನು ನೀಡುತ್ತಿದ್ದೆ. ನನ್ನಿಂದ ಎಲ್ಲವೂ ಸಾಧ್ಯ; ಅಸಾಧ್ಯವಾದದ್ದು ಏನೂ ಇಲ್ಲ. ನನ್ನ ನಂಬಿಕೆಯನ್ನು ಖಂಡಿತ ನೀನು ಸುಳ್ಳಾಗಿಸುವುದಿಲ್ಲ’ ಹೀಗೆ ರೂಮಿ ತನ್ನ ಮನಸ್ಸಿನ ಮಾತುಗಳಿಗೆ ದಿನವೂ ಅಕ್ಷರ ರೂಪ ಕೊಟ್ಟು ನಂಬಿಕೆಯ ದೀಪ ಹಚ್ಚುತ್ತಿದ್ದಳು. ಇದಾಗಿ ಕೇವಲ ಹತ್ತೇ ದಿನ ಕಳೆದಿರಬಹುದು. ಆಕೆಗೆ ಅವಳಿಷ್ಟ ಪಟ್ಟ ಕೆಲಸ ದೊರಕಿತು.
ಈಗ ರೂಮಿ ಕೆನಡಾದಲ್ಲಿದ್ದಾಳೆ. ಅಲುಗಾಡದ ನಂಬಿಕೆಯೊಂದರಿಂದಲೇ ಆ ಎತ್ತರಕ್ಕೆ ಏರಲು ಅವಳಿಗೆ ಸಾಧ್ಯವಾದದ್ದು. ಪ್ರಾರ್ಥಿಸುವಾಗ ನಮ್ಮ ಕಣ್ಣುಗಳಲ್ಲಿ ಇಣುಕುವ ಅಗಾಧ ಶಕ್ತಿಯೇ ನಂಬಿಕೆ. ಈ ನಂಬಿಕೆಯು ಗ್ರಹಿಕೆ, ಪುರಾವೆ, ಪುನರಾವರ್ತನೆ, ಸಮಯ ಇವುಗಳ ಒಟ್ಟು ಮೊತ್ತವೇ ಆಗಿದೆ. ನಮ್ಮ ಬಗ್ಗೆ ನಮಗಿರುವ ಗ್ರಹಿಕೆ, ವರ್ಷಗಳಿಂದ ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ಪುರಾವೆ, ಅನೇಕ ಪುನರಾವರ್ತನೆಗೊಂಡ ನಮ್ಮವೇ ವರ್ತನೆ ಗಳು, ಜತೆಗೆ ಇಷ್ಟೆಲ್ಲವನ್ನು ಹಿಡಿದಿಟ್ಟ ಸಮಯವೇ ನಂಬಿಕೆ. ಈ ನಂಬಿಕೆಯನ್ನು ಹೆಚ್ಚು ಹೊತ್ತು ನಮ್ಮದಾಗಿಸಿಕೊಂಡಷ್ಟೂ ಅದು ಆಳವಾಗಿ ಬೇರೂರಿ ಹೆಮ್ಮರವಾಗುತ್ತದೆ, ನಂಬಿಕೆ ಹುಟ್ಟುವುದೇ ಹೀಗೆ!
ಡಾಕ್ಟರ್ ಮಾರ್ಕ್ ಎನ್ನುವ ಪ್ರಸಿದ್ಧ ಕ್ಯಾನ್ಸರ್ ತಜ್ಞನೊಬ್ಬನಿದ್ದ. ಕ್ಯಾನ್ಸರ್ ರೋಗದ ಚಿಕಿತ್ಸೆಯ ಕುರಿತಾಗಿ ಆತನ ಅಗಾಧವಾದ ಸಂಶೋಧನಾ ಸೇವೆ ಯನ್ನು ಪರಿಗಣಿಸಿ ಆತನಿಗೆ ವೈದ್ಯಕೀಯ ಲೋಕದ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಲಾಯಿತು. ಪ್ರಶಸ್ತಿಯನ್ನು ಪಡೆಯಲು ಆತ ಬಹಳ ಉತ್ಸುಕ ನಾಗಿದ್ದ, ಪ್ರಶಸ್ತಿ ಪಡೆಯಲು ಆತ ಮತ್ತೊಂದು ದೇಶಕ್ಕೆ ಪ್ರಯಾಣಿಸಬೇಕಿತ್ತು. ವಿಮಾನವೇರಿದ ಎರಡು ತಾಸಿನ ಬಳಿಕ ವಿಮಾನ ಅದ್ಯಾವುದೋ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿತು. ಡಾಕ್ಟರ್ ಮಾರ್ಕನಿಗೆ ತಾನು ಸರಿಯಾದ ಸಮಯಕ್ಕೆ ತಲುಪಲಾರೆನೆಂಬ ಅನುಮಾನ ಕಾಡಿ ರಿಸೆಪ್ಷನ್ ಕೌಂಟರ್ ಬಳಿ ಓಡಿದ. ನೋಡಿದರೆ ಮುಂದಿನ -ಟ್ ಇದ್ದದ್ದು ಹತ್ತು ತಾಸಿನ ನಂತರದಲ್ಲಿ. ಅಲ್ಲಿನ ಸಿಬ್ಬಂದಿಯ ಸಲಹೆಯ ಮೇರೆಗೆ ಕಾರೊಂದನ್ನು
ಬಾಡಿಗೆ ಪಡೆದು ತಾನೇ ಡ್ರೈವ್ ಮಾಡುತ್ತಾ ಮುನ್ನಡೆಯ ತೊಡಗಿದ.
ತಾನು ತಲುಪಬೇಕಾದ ಜಾಗಕ್ಕೆ ನಾಲ್ಕು ಗಂಟೆಯ ಪ್ರಯಾಣ ಮಾತ್ರ ಬಾಕಿ ಇತ್ತು. ಬೇರೆ ಆಯ್ಕೆ ಆತನೆದುರು ಇರಲಿಲ್ಲ. ಅದು ಮರಳುಗಾಡಿನ ಪ್ರದೇಶ.
ದಾರಿ ಸ್ವಲ್ಪವೇ ಸಾಗಿತ್ತು. ನೋಡಿದರೆ ಹವಾಮಾನದಲ್ಲಿ ದಿಢೀರನೆ ಬದಲಾವಣೆ ಉಂಟಾಗಿ ಜೋರಾದ ಗಾಳಿ ಸಹಿತ ಮಳೆ. ಸತತ ಎರಡು ಗಂಟೆಯ ಪ್ರಯಾಸಕರ ಪ್ರಯಾಣದ ನಂತರ ಹಸಿವು, ಸಂಕಟ, ಒತ್ತಡ, ಆಯಾಸ, ನಿರಾಸೆ ಎಲ್ಲವೂ ಸೇರಿ ಇನ್ನು ದಾರಿ ಸಾಗಲು ತನ್ನಿಂದ ಸಾಧ್ಯವಿಲ್ಲ ವೆನಿಸ ತೊಡಗಿತ್ತು. ಮರಳುಗಾಡಿನ ಮಧ್ಯೆ ಯಾವುದಾದರೂ ಮನೆ ಕಾಣಿಸಬಹುದೆಂದು ಆತ ಹುಡುಕತೊಡಗಿದ. ಸ್ವಲ್ಪ ಸಮಯದ ನಂತರ ಅವನಿಗೆ
ಕುಸಿದ ಮನೆಯೊಂದು ಕಾಣಿಸಿತು. ಡಾ.ಮಾರ್ಕ್ ಆ ಮನೆಯ ಕದ ತಟ್ಟಿದ. ಹೆಂಗಸೊಬ್ಬಳು ಬಾಗಿಲನ್ನು ತೆರೆದಳು.
ತನ್ನ ಕಥೆಯನ್ನೆಲ್ಲ ಹೇಳಿದ ಮಾರ್ಕ್ ತಾನು ಟೆಲಿಫೋನನ್ನು ಬಳಸಬಹುದೇ ಎಂದು ಆಕೆಯಲ್ಲಿ ಅನುಮತಿ ಕೇಳಿದ. ತಮ್ಮ ಮನೆಯಲ್ಲಿ ಆ ಅನುಕೂಲ ತೆಗಳೆಲ್ಲ ಇಲ್ಲವೆಂದು ತಿಳಿಸಿದ ಹೆಂಗಸು ಆತನನ್ನು ಒಳಗೆ ಬರಮಾಡಿಕೊಂಡಳು. ಹಸಿವು-ಆಯಾಸ ಅವನನ್ನು ಹೈರಾಣಾಗಿಸಿದ್ದವು. ವಿಧಿ ಇಲ್ಲದೆ ಮನೆಯೊಳಗೆ ಹೊಕ್ಕ ಮಾರ್ಕ್, ಆಕೆ ನೀಡಿದ ಚಹಾ ಮತ್ತು ತಿಂಡಿಯನ್ನು ಸೇವಿಸತೊಡಗಿದ. ತಾನು ಪ್ರಾರ್ಥನೆ ಮಾಡಿ ಬರುವುದಾಗಿ ತಿಳಿಸಿದ ಹೆಂಗಸು ಅಲ್ಲೇ ಪಕ್ಕದಲ್ಲಿದ್ದ ಕೊಠಡಿಯೊಂದಕ್ಕೆ ತೆರಳಿದಳು. ಆ ಕೊಠಡಿಯಲ್ಲೊಂದು ಮಗು ಮಲಗಿರುವುದು ಡಾಕ್ಟರ್ ಮಾರ್ಕ್‌ಗೆ ಕಾಣಿಸಿತು. ಹೆಂಗಸು ಒಂದಾದ ಮೇಲೆ ಒಂದರಂತೆ ಪ್ರಾರ್ಥನೆಯನ್ನು ಮಾಡತೊಡಗಿದಳು.
ಇದಾದ ಕೆಲ ಸಮಯದ ನಂತರ ಡಾಕ್ಟರ್ ಮಾರ್ಕ್ ಹೆಂಗಸನ್ನು ಕುರಿತು, ‘ನಿನ್ನ ಪ್ರಾರ್ಥನೆ ಯಾರಿಗಾಗಿ? ಹಾಗೂ ಈ ನಿನ್ನ ಪ್ರಾರ್ಥನೆಯನ್ನು ದೇವರು ಎಂದಾದರೂ ಕೇಳುವನೆಂದು ನೀನು ಭಾವಿಸಿದ್ದೀಯಾ?’ ಎಂದು ಕೇಳುತ್ತಾನೆ. ವಿಷಾದದ ನಗೆ ಬೀರುವ ಆ ಹೆಂಗಸು ‘ನನ್ನ ಮಗು ವಿರಳವಾದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅದನ್ನು ಗುಣಪಡಿಸಲು ಸಾಧ್ಯವಿರುವುದು ಡಾಕ್ಟರ್ ಮಾರ್ಕ್ ಎಂಬ ಆ ವ್ಯಕ್ತಿಗೆ ಮಾತ್ರ. ಮಗುವನ್ನು ಆತನ ಬಳಿ ಕರೆದ್ಯೊಯ್ಯುವಷ್ಟು ಹಣ ನನ್ನ ಬಳಿಯಿಲ್ಲ. ಜತೆಗೆ ಆತ ಅದ್ಯಾವುದೋ ದೂರದೂರಿನಲ್ಲಿರುವುದರಿಂದ ಆತನನ್ನು ಕಾಣುವುದು ನನ್ನಿಂದ ಸಾಧ್ಯವಿಲ್ಲ. ಆದರೆ ನನ್ನ ನಂಬಿಕೆಯನ್ನು ಅಲುಗಾಡಿಸುವ ಭಯಗಳನ್ನು ಪ್ರಾರ್ಥನೆಯ ಮೂಲಕ ಹೊಡೆದೋಡಿಸುತ್ತಿರುವೆ’ ಎಂದು ಹೇಳುತ್ತಾಳೆ.
ಇದನ್ನು ಕೇಳಿಸಿಕೊಳ್ಳುತ್ತಿದ್ದ ಮಾರ್ಕ್ ಮಾತೇ ಹೊರಡದೆ ಮೂಕವಿಸ್ಮಿತನಾಗಿ ನಿಂತುಬಿಡುತ್ತಾನೆ. ಅವನ ಕಣ್ಣುಗಳಲ್ಲಿ ತನ್ನಿಂದ ತಾನೇ ನೀರು…
ಈ ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಅದು ಕಲಿಸುವ ನಂಬಿಕೆಯ ಪಾಠವಂತೂ ಬಹುದೊಡ್ಡದಿದೆ. ನಮ್ಮ ಹಾಗೂ ಅನೂಹ್ಯ ಶಕ್ತಿಯ ನಡುವಿನ ಅನಂತ ಸಾಧ್ಯತೆಯದು ನಂಬಿಕೆ.