ವಿಶ್ವವಾಣಿ ವಿಶೇಷ
ರಾಜ್ಯದ ಆದಾಯಕ್ಕೆ ಅಪಾಯ, ಬಜೆಟ್ ಅನುಷ್ಠಾನ ಆಯೋಮಯ, ಆತಂಕದಲ್ಲಿ ರಾಜ್ಯಾಡಳಿತ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ಒಮೈಕ್ರಾನ್ಗೆ ಹೆದರಿ ಮತ್ತೆ ಲಾಕ್ಡೌನ್ ಮಾಡಿದರೆ ರಾಜ್ಯದಲ್ಲಿ ಆರ್ಥಿಕ ದಿವಾಳಿ ಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.
ದೇಶದಲ್ಲೇ ಪ್ರಥಮ ಬಾರಿಗೆ ಎರಡು ಒಮೈಕ್ರಾನ್ ಕೇಸುಗಳು ಪತ್ತೆಯಾಗಿದ್ದು, ಮತ್ತೆರಡು ಪ್ರಕರಣಗಳು ಬೆಳಕಿಗೆ ಬರುವ
ಶಂಕೆಯಿದೆ. ಇದರ ಬೆನ್ನಲ್ಲೆ ಸರಕಾರ ಇತ್ತೀಚಿಗೆ ತೆರವುಗೊಳಿಸಿದ್ದ ಕರೋನಾ ನಿಯಂತ್ರಣದ ಹಿಂದಿನ ಕಠಿಣ ನಿಯಮಗಳನ್ನು ಮತ್ತೆ ಜಾರಿಗೊಳಿಸಲು ತೀರ್ಮಾನಿಸಿದೆ. ಅಷ್ಟೇ ಅಲ್ಲ. ಪ್ರಕರಣಗಳು ಗಂಭೀರ ಸ್ವರೂಪಕ್ಕೆ ತಿರುಗಿದರೆ ಲಾಕ್ಡೌನ್ ಜಾರಿ
ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಲಾಕ್ ಡೌನ್ಗೆ ಸರಕಾರ ಸಿದ್ಧವಿಲ್ಲ. ಕಾರಣ ಕುಸಿಯುತ್ತಿರುವ ರಾಜಸ್ವ ಸಂಗ್ರಹ, ನೆಲ ಕಚ್ಚುತ್ತಿರುವ ಬಜೆಟ್ ಅನುಷ್ಠಾನ.
ಕೈ ಕೊಟ್ಟ ಆದಾಯಗಳು: ಸರಕಾರ ಬಜೆಟ್ ಅನುಷ್ಠಾನಕ್ಕೆ ನಂಬಿರುವ ವಾಣಿಜ್ಯ, ಮೋಟಾರ್ ವಾಹನಗಳ ನೋಂದಣಿ, ಅಬಕಾರಿ ಹಾಗೂ ಮುದ್ರಾಂಕ ಇಲಾಖೆ ಮೂಲಗಳು ನಿರೀಕ್ಷಿತ ಬೆಳವಣಿಗೆ ಕಂಡಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಇತ್ತೀಚಿಗೆ ಶೇ.೧೫ರಷ್ಟು ಚೇತರಿಕೆ ಕಂಡಿದ್ದವು. ಆದರೆ ಮತ್ತೆ ಲಾಕ್ಡೌನ್ ಹೇರಿದರೆ ಆದಾಯ ಮೂಲಗಳು ನೆಲ ಕಚ್ಚುವ ಸಾಧ್ಯತೆಯಿದೆ.
ಸದ್ಯ ವಾಣಿಜ್ಯ ತೆರಿಗೆಯ ಗುರಿ ?೭೬,೪೭೩ ಕೋಟಿಗಳಲ್ಲಿ ೬೮,೬೧೮ ಕೋಟಿ ಮಾತ್ರ ಸಂಗ್ರಹವಾಗಿದೆ. ಮೋಟಾರ್ ವಾಹನ ನೋಂದಣಿಯಿಂದ ಸಂಗ್ರಹವಾಗಬೇಕಿರುವ ಗುರಿ ?೭,೫೧೪ ಕೋಟಿಗಳಿಗೆ ಕೇವಲ ?೩,೯೯೦ ಕೋಟಿ ಲಭಿಸಿದೆ. ಅಬಕಾರಿ ?೨೪,೫೮೪ ಕೋಟಿಗಳ ಗುರಿಗೆ ೧೬,೭೬೧ ಕೋಟಿ ಮಾತ್ರ ದೊರಕಿದೆ. ಇನ್ನು ಮುದ್ರಾಂಕ ಮತ್ತು ನೋಂದಣಿಯಿಂದ ಆದಾ
ಯವನ್ನು ನಿರೀಕ್ಷಿಸುವಂತೆಯೇ ಇಲ್ಲ ಎನ್ನುತ್ತಾರೆ ಹಣಕಾಸು ಇಲಾಖೆ ಅಽಕಾರಿಗಳು.
ಏನಾಗಿದೆ ಬಜೆಟ್ ಸ್ಥಿತಿ?
ರಾಜ್ಯ ಬಿಜೆಪಿ ಸರಕಾರ ಪ್ರಸಕ್ತ ಸಾಲಿಗೆ ? 1.46ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು, ಇದರ ಅನುಷ್ಠಾನಕ್ಕಾಗಿ ಬೇಕಾದ ಆದಾಯ ಮಾತ್ರ ಶೇ.60ರಷ್ಟು ಮಾತ್ರ. ಇನ್ನುಳಿದ ಮೂರುವರೆ ತಿಂಗಳಲ್ಲಿ ಸರಕಾರ ಶೇ.40ರಷ್ಟು ರಾಜಸ್ವ ಸಂಗ್ರಹಿಸಬೇಕಿದೆ. ಆದರೆ ಒಮೈಕ್ರಾನ್ ನಿಂದ ರಾಜ್ಯದ ರಾಜಸ್ವಕ್ಕೆ ಬಜೆಟ್ ಅನುಷ್ಠಾನಕ್ಕೆ ಆತಂಕ ಎದುರಾಗಿದೆ. ಸದ್ಯ ಬಜೆಟ್ ಅನುಷ್ಠಾನ ಶೇ.20ರಷ್ಟೂ ಕೂಡ ಆಗಿಲ್ಲ. ಬದಲಾದ ಸರಕಾರದ ನಾಯಕತ್ವ, ಸಚಿವ ಸಂಪುಟ ಹಾಗೂ ನಂತರದ ರಾಜಕೀಯ ಪರಿಣಾಮ ಗಳಿಂದ ಬಹುತೇಕ ಇಲಾಖೆಗಳಲ್ಲಿ ಬಜೆಟ್ ಕಾರ್ಯಕ್ರಮ ಗಳ ಅನುಷ್ಠಾನ ಇರಲಿ, ಅವುಗಳ ಕ್ರಿಯಾ ಯೋಜನೆಗಳನ್ನೂ ಮಾಡಿಲ್ಲ. ಇಂಥ ಸ್ಥಿತಿಯಲ್ಲಿ ಲಾಕ್ಡೌನ್ ಮಾಡಿದರೆ ಪ್ರಸ್ತುತ ಬಜೆಟ್ ಗತಿ ಏನು? ಮುಂದಿನ ಬಜೆಟ್ ಮಂಡಿಸುವುದಾದರೂ ಹೇಗೆ ಎನ್ನುವ ಚಿಂತೆ ಸರಕಾರದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೈಗಾರಿಕೆಗಳು, ಕಾರ್ಮಿಕರ ಗತಿ?
ರಾಜ್ಯದ ಒಟ್ಟಾರೆ ಆದಾಯದಲ್ಲಿ ಉದ್ಯಮ ಕ್ಷೇತ್ರದ ಪಾಲುದಾರಿಕೆ ಶೇ.45ರಷ್ಟಿದೆ. ಅದರಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರ ಕೈಗಾರಿಕೆಗಳ ಪಾಲೇ ಹೆಚ್ಚು. ಕರೋನಾ ನಂತರ ರಾಜ್ಯದಲ್ಲಿ ಶೇ.25ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಇನ್ನು ಮತ್ತೆ ಲಾಕ್ಡೌನ್ ಮಾಡಿದರೆ ಮತ್ತೆ ಶೇ.20ರಷ್ಟು ಕೈಗಾರಿಕೆಗಳು ಬಂದ್ ಆಗಲಿವೆ. ಕರೋನಾ ನಂತರ ಕೇಂದ್ರದಿಂದ ಸರಿಯಾದ ಪರಿಹಾರ ಮತ್ತು ಸಹಕಾರಗಳು ಸಿಗದೆ ಕೈಗಾರಿಕೆಗಳು ನಶಿಸಿ ಹೋಗಿದ್ದು, ಇರುವ ಕೈಗಾರಿಕೆಗಳು ಕಷ್ಟದಲ್ಲಿವೆ. ಕಚ್ಚಾಟ ಪದಾರ್ಥ ಗಳ ಬೆಲೆ ದುಪ್ಪಟ್ಟಾಗಿದ್ದು ಸಣ್ಣ ಉದ್ಯಮಿಗಳು ಹೆಚ್ಚಿನ ಜಿಎಸ್ಟಿ ಪಾವತಿಸಿ, ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ ಹೆಚ್ಚಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಣ್ಣ ಕೈಕಾರಿಗಳು ನಾಶವಾಗಿ ಅವುಗಳನ್ನು ನಂಬಿರುವ ಲಕ್ಷಾಂತರ ಕಾರ್ಮಿಕರ ಜೀವನ ದುಸ್ತರ ವಾಗಲಿದೆ. ಹೀಗಾಗಿ ಸರಕಾರ ಲಾಕ್ಡೌನ್ ಬದಲು ಪರ್ಯಾಯ ಮಾರ್ಗಗಳ ಕಡೆ ಚಿಂತಿಸಬೇಕು ಎಂದು ಸಣ್ಣ ಕೈಗಾರಿಕೆಗಳ ಕ್ಷೇತ್ರದ ತಜ್ಞ ಆರ್.ರಾಜು ಹೇಳಿದ್ದಾರೆ.
****
ಮತ್ತೆ ಏನಾದರೂ ಲಾಕ್ಡೌನ್ ಮಾಡಿದರೆ ರಾಜ್ಯದಲ್ಲಿ ವ್ಯಾಪಾರ, ವ್ಯವಹಾರ ಸ್ತಬ್ಧವಾಗಿ ವಾಣಿಜ್ಯ ತೆರಿಗೆ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಬಜೆಟ್ ಅನುಷ್ಠಾನ ಕೊಡ ಕಷ್ಟವಾಗಬಹುದು.
– ಬಿ.ಟಿ.ಮನೋಹರ್ ತೆರಿಗೆ ತಜ್ಞ
***
ಒಮೈಕ್ರಾನ್ ನಿಂದ ಸದ್ಯ ವ್ಯಾಪಾರ, ವ್ಯವಹಾರ ನಿಲ್ಲಿಸಿ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಆದರೆ ಎಲ್ಲರೂ ಎಚ್ಚರ ವಹಿಸುವ ಅಗತ್ಯವಿದೆ. ಯಾವುದೇ ಕಾರಣಕ್ಕೂ ಮೈಮರೆಯಬಾರದು.
– ಡಾ.ನಾಗರಾಜ್
ರಾಜೀವ್ ಗಾಂಧಿ ಎದೆರೋಗಗಳು ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕರು