ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market Update: ಟ್ರಂಪ್‌ ಟಾರಿಫ್‌ ಎಫೆಕ್ಟ್‌, ಸೆನ್ಸೆಕ್ಸ್‌ 322 ಅಂಕ ಪತನ

Bombay Stock Market: ಮುಂಬೈ ಷೇರು ಮಾರುಕಟ್ಟೆ (Bombay Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 322 ಅಂಕ ಕುಸಿತಕ್ಕೀಡಾಗಿದ್ದು, 76,295ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 82 ಅಂಕ ಕಳೆದುಕೊಂಡು 23,250ಕ್ಕೆ ಸ್ಥಿರವಾಯಿತು. ಅಮೆರಿಕವು ಭಾರತದ‌ ಆಮದಿನ ವಿರುದ್ಧ 26 ಪರ್ಸೆಂಟ್ ರೆಸಿಪ್ರೊಕಲ್‌ ಟ್ಯಾಕ್ಸ್‌ ಅನ್ನು ಘೋಷಿಸಿದ್ದು, ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರಿತು.

ಟ್ರಂಪ್‌ ಟಾರಿಫ್‌ ಎಫೆಕ್ಟ್‌, ಸೆನ್ಸೆಕ್ಸ್‌ 322 ಅಂಕ ಪತನ

ಸಾಂದರ್ಭಿಕ ಚಿತ್ರ.

Profile Ramesh B Apr 3, 2025 6:04 PM

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Bombay Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 322 ಅಂಕ ಕುಸಿತಕ್ಕೀಡಾಗಿದ್ದು, 76,295ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 82 ಅಂಕ ಕಳೆದುಕೊಂಡು 23,250ಕ್ಕೆ ಸ್ಥಿರವಾಯಿತು. ಅಮೆರಿಕವು ಭಾರತದ‌ ಆಮದಿನ ವಿರುದ್ಧ 26 ಪರ್ಸೆಂಟ್ ರೆಸಿಪ್ರೊಕಲ್‌ ಟ್ಯಾಕ್ಸ್‌ ಅನ್ನು ಘೋಷಿಸಿದ್ದು, ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರಿತು. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಎಲ್ಲ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು 413 ಲಕ್ಷ ಕೋಟಿ ರೂಪಾಯಿಗೆ ಏರಿದ್ದು (Stock market update), 44,169 ಕೋಟಿ ರೂಪಾಯಿ ಹೆಚ್ಚಳವಾಯಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರೆಸಿಪ್ರೊಕಲ್‌ ಟಾರಿಫ್‌ಗಳನ್ನುಘೋಷಣೆ ಮಾಡಿದ ಬಳಿಕ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ತೀವ್ರ ಕುಸಿತಕ್ಕೀಡಾಯಿತು. ಇನ್ಫೋಸಿಸ್‌, ಟೆಕ್‌ ಮಹೀಂದ್ರಾ, ಟಿಸಿಎಸ್‌ ಷೇರುಗಳ ಮಾರಾಟದ ಭರಾಟೆ ಕಂಡು ಬಂದಿತು. ನಿಫ್ಟಿ ಐಟಿ ಇಂಡೆಕ್ಸ್‌ 4.2% ಇಳಿಯಿತು. ಹೀಗಿದ್ದರೂ ಔಷಧ ಕ್ಷೇತ್ರದ ಷೇರುಗಳ ದರ ಏರಿಕೆ ದಾಖಲಿಸಿತು. ಟ್ರಂಪ್‌ ಅವರು ಔಷಧ ಕ್ಷೇತ್ರಕ್ಕೆ ಟಾರಿಫ್‌ನಿಂದ ವಿನಾಯಿತಿ ನೀಡಿರುವುದು ಇದಕ್ಕೆ ಕಾರಣ.



ಈ ಸುದ್ದಿಯನ್ನೂ ಓದಿ: Donald Trump's Tariff War: ಟ್ರಂಪ್‌ ತೆರಿಗೆ ಸಮರ; ಭಾರತಕ್ಕೇನು ಎಫೆಕ್ಟ್?

ಆಟೊಮೊಬೈಲ್‌ ಸೆಕ್ಟರ್‌ನಲ್ಲೂ ಸೆಲ್ಲಿಂಗ್‌ ಪ್ರೆಶರ್‌ ಇತ್ತು. ಟಾಟಾ ಮೋಟಾರ್ಸ್‌ ಷೇರು ದರ ಇಳಿಯಿತು. ಇನ್ನು ಮುಂದೆ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಶೇ. 26ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ವ್ಯಾಪಾರದ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಅನಿವಾರ್ಯ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ಇದರಿಂದ ಔಷಧ, ಎಲೆಕ್ಟ್ರಾನಿಕ್ಸ್‌ ಮತ್ತು ಜವಳಿ ಕ್ಷೇತ್ರದಲ್ಲಿ ಭಾರತ ತನ್ನ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಹಾದಿ ಸುಗಮವಾಗಲಿದೆ ಎನ್ನುತ್ತಾರೆ ತಜ್ಞರು.

ವರ್ಷದ ದ್ವಿತೀಯಾರ್ಧದಲ್ಲಿ ಚೇತರಿಸುವ ನಿರೀಕ್ಷೆ

ಅಮೆರಿಕಕ್ಕೆ ರಫ್ತಾಗುವ ವಸ್ತುಗಳಿಗೆ ಕನಿಷ್ಠ ಶೇಕಡಾ ಹತ್ತರಷ್ಟು ತೆರಿಗೆಯನ್ನು ಯಾವುದೇ ದೇಶವಾದರೂ ಕೊಡಬೇಕಾಗುತ್ತದೆ. ಭಾರತದ ವಿರುದ್ಧದ ಶೇಕಡಾ 26ರ ತೆರಿಗೆಯು ಉನ್ನತ ಮಟ್ಟದ್ದಾಗಿದ್ದರೂ, ಅಮೆರಿಕದ ಜತೆಗೆ ವಾಣಿಜ್ಯ ಸಂಘರ್ಷದ ಬದಲಿಗೆ, ಮತ್ತಷ್ಟು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಬಹುದು. ಸ್ಟಾಕ್‌ ಮಾರ್ಕೆಟ್‌ ಮೇಲೆ ಈಗ ಒಂದಷ್ಟು ನಕಾರಾತ್ಮಕ ಪ್ರಭಾವ ಬಿದ್ದರೂ, ವರ್ಷದ ದ್ವಿತೀಯಾರ್ಧದಲ್ಲಿ ಚೇತರಿಸಿಕೊಳ್ಳಬಹುದು ಎಂದು ಪ್ರೈವೇಟ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಬರ್ನ್‌ಸ್ಟೀನ್‌ ವರದಿ ತಿಳಿಸಿದೆ. ವಾಣಿಜ್ಯ ಮಂಡಳಿ ಪಿಎಚ್‌ಡಿಸಿಸಿಐ ಪ್ರಕಾರ ಟ್ರಂಪ್‌ ಅವರ ಟಾರಿಫ್‌ನಿಂದ ಭಾರತದ ಜಿಡಿಪಿಗೆ ತಾತ್ಕಾಲಿಕವಾಗಿ ಕೇವಲ ಶೇಕಡಾ 0.1ರಷ್ಟು ಮಾತ್ರ ನಷ್ಟವಾಗಬಹುದು. ಅದನ್ನು ಕೂಡ ಭವಿಷ್ಯದಲ್ಲಿ ಭರಿಸಿಕೊಳ್ಳಬಹುದು. ಇದಕ್ಕೆ ಕಾರಣ ಭಾರತದ ಆತ್ಮನಿರ್ಭರ, ಮೇಕ್‌ ಇನ್‌ ಇಂಡಿಯಾ, ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗಳು (PLI) ಎಂದು ಮಂಡಳಿಯ ಅಧ್ಯಕ್ಷ ಹೇಮಂತ್‌ ಜೈನ್‌ ತಿಳಿಸಿದ್ದಾರೆ. ಮೊದಲಿನಿಂದಲೂ ಭಾರತವು ತನ್ನದೇ ವಿಶಾಲ ಮಾರುಕಟ್ಟೆಯನ್ನು ಹೊಂದಿರುವುದರದಿಂದ ತೊಂದರೆ ಆಗದು ಎಂದು ಅಸೊಚೆಮ್‌, ಮೋರ್ಗಾನ್‌ ಸ್ಟ್ಯಾನ್ಲಿ ಇತ್ಯಾದಿ ಸಂಸ್ಥೆಗಳು ಹೇಳಿವೆ.