Friday, 13th December 2024

’ಮೆಟ್ರೋ ಮ್ಯಾನ್‌’ ಸೇವೆ ಕೊಂಡಾಡಿದ ನಟ ಮೋಹನ್‌ಲಾಲ್‌

ಪಾಲಕ್ಕಾಡ್‌: ಮೆಟ್ರೋ ಮ್ಯಾನ್‌ ಎಂದರೆ ಯಾರಿಗೂ ತಿಳಿಯದ ವಿಷಯವಲ್ಲ. ಕೇರಳದ ಇ.ಶ್ರೀಧರನ್‌ ತಮ್ಮ ಕಾರ್ಯಗಳ ಮೂಲಕವೇ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಹಾಗೂ ಜನಮಾನಸದಲ್ಲಿ ನೆಲೆಸಿದ್ದಾರೆ.

ಈಗ ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುತ್ತಿರುವ ಇ.ಶ್ರೀಧರನ್‌ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಕೂಡ ಹೌದು. ಇದೇ ಶ್ರೀಧರನ್‌ ಅವರ ಕಾರ್ಯ ವೈಖರಿಗೆ ಮಲಯಾಳಂ ಚಿತ್ರರಂಗದ ಮಹಾನ್‌ ನಟ ಮೋಹನ್‌ ಲಾ‌ಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮದೇ ಮಾತಿನಲ್ಲಿ ವಿಡಿಯೋವೊಂದರಲ್ಲಿ ಇ.ಶ್ರೀಧರನ್‌ ಅವರ ಕುರಿತು ನಟ ಮೋಹನ್‌ ಲಾಲ್‌ ಅವರು, ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ನಾಗರಿಕ ಈ ಮಹಾನ್ ಸಾಧಕನಿಗಾಗಿ ಹೆಮ್ಮೆಪಡಬೇಕೆಂದು ಹೇಳಿದ್ದಾರೆ. ಅವರ ಕಾರ್ಯ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪಂಬನ್‌ ಸೇತುವೆ, ಭಾರೀ ಮಳೆಗೆ ಕೊಚ್ಚಿ ಹೋದಾಗ ಕೇವಲ 46 ದಿನಗಳಲ್ಲಿ ಸಿದ್ದಪಡಿಸಿ, ತಮ್ಮ ಕಾರ್ಯತತ್ಪರತೆ ತೋರಿಸಿ ದವರು.

ದೇಶದ ಪ್ರಮುಖ ವಲಯ ಹಾಗೂ ಕ್ಷೇತ್ರವಾಗಿರುವ ಮತ್ತು ಇಂದು ಮಧ್ಯಮ ವರ್ಗದವರಿಗೆ ಸಾರಿಗೆ ಪ್ರಮುಖ ಕೊಂಡಿಯಾಗಿರುವ ಕೊಂಕಣ್ ರೈಲ್ವೆ ಪ್ರಾಜೆಕ್ಟನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದವರು.

ನಿಗದಿತ ಸಮಯದೊಳಗೆ ಕೇರಳದ ಕೊಚ್ಚಿ ಹಾಗೂ ನವದೆಹಲಿಯಲ್ಲಿ ಮೆಟ್ರೋ ಪ್ರಾಜೆಕ್ಟನ್ನು ಸಂಪೂರ್ಣಗೊಳಿಸಿ, ಈ ಯೋಜನೆ ಬಳಿಕ ಉಳಿದ ಬಾಕಿ ಮೊತ್ತವನ್ನು ಸರ್ಕಾರಕ್ಕೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದವರು.

ಇಂಥ ವ್ಯಕ್ತಿಗಳು ನಮ್ಮ ನಡುವೆ ಇದ್ದರೇನೆ, ಅಲ್ಲಿ ಅಭಿವೃದ್ದಿ ಎಂಬ ಪದಕ್ಕೆ ನೈಜವಾದ ಅರ್ಥ ಸಿಗುತ್ತದೆ ಎಂದು ನಟ ಮೋಹನ್‌ ಲಾಲ್‌ ಅವರು, ಬಿಜೆಪಿ ಅಭ್ಯರ್ಥಿ ಇ.ಶ್ರೀಧರ್‌ ಅವರಿಗೆ ಚುನಾವಣೆ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ವಿಭನ್ನ ನಟನೆ ಮೂಲಕ ಮನೆಮಾತಾಗಿರುವ ಮೋಹನ್‌ ಲಾಲ್‌ ಅವರು, ಇ.ಶ್ರೀಧರನ್‌ ಅವರನ್ನುದ್ದೇಶಿಸಿ, ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಹಲವಾರು ಅಸಾಧ್ಯ ಪ್ರಾಜೆಕ್ಟ್‌ ಗಳನ್ನು ಮಾಡಿ ತೋರಿಸಿ ಸೈ ಎನಿಸಿಕೊಂಡಿರುವ ಇವರು ಕೇರಳದ ಲೇಟ್‌ ಮೆಟ್ರೋ ಪ್ರಾಜೆಕ್ಟ್‌ (ಕೋಜಿಕ್ಕೋಡ್‌ ಹಾಗೂ ತಿರುವನಂತಪುರಂ) ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿಕೆ ನೀಡಿರುವುದು ನೋವುಂಟು ಮಾಡಿದೆ. ಪ್ರಾಜೆಕ್ಟ್‌ ಕುರಿತಾದ ವಿವಾದಕ್ಕೆ ನೀವು ಕಾರಣರಲ್ಲದೇ ಇರಬಹುದು. ಆದರೆ, ಓರ್ವ ಮಲಯಾಳಿಯಾಗಿ, ಈ ಭೂಮಿಯನ್ನು ಪ್ರೀತಿಸುವವನಾಗಿ ನಿಮ್ಮ ಸೇವೆ ನಮಗೆ ತೀರಾ ಅಗತ್ಯವಿದೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily