Sunday, 28th April 2024

ಸಿಡಿ ಪ್ರಕರಣ: ಆಪ್ತರ ಮೂಲಕ ದೂರು ದಾಖಲಿಸಿದ ಸಾಹುಕಾರ

ಬೆಂಗಳೂರು: ಸಿಡಿ ಪ್ರಕರಣದ ಕುರಿತು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್​ಐಟಿ) ತನಿಖೆ ಆರಂಭಿಸಿದೆ. ತನಿಖಾ ತಂಡಕ್ಕೆ ಸಹಕಾರ ನೀಡುವ ಉದ್ದೇಶದಿಂದಾಗಿ ರಮೇಶ್​ ಜಾರಕಿಹೊಳಿ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಮೇಶ್​ ಜಾರಕಿಹೊಳಿ ಬರೆದ ದೂರಿನ ಪ್ರತಿಯನ್ನು ಅವರ ಆಪ್ತ ನೆಲಮಂಗಲ ಮಾಜಿ ಶಾಸಕ ನಾಗರಾಜ್ ಪೊಲೀಸ್​ ಠಾಣೆಗೆ ನೀಡಿದ್ದಾರೆ. ಇದೊಂದು ನಕಲಿ ಸಿಡಿ ಯಾಗಿದ್ದು, ಈ ಮೂಲಕ ತಮ್ಮ ತೇಜೋವಧೆ ಮಾಡಲಾಗಿದೆ.

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸುಮಾರ್​ ಎರಡೂವರೆ ಪುಟಗಳ ದೂರು ಸಲ್ಲಿಕೆ ಮಾಡಲಾಗಿದೆ. ​

ದೂರು ಸ್ವೀಕಾರದ ಬಳಿಕ ಮಾಹಿತಿ ನೀಡಿದ ಡಿಸಿಪಿ ಅನುಚೇತನ್​, ದೂರಲ್ಲಿ ಯಾರ ಹೆಸರಲ್ಲೂ ಉಲ್ಲೇಖಿಸಿಲ್ಲ. ತೇಜೋವಧೆ ಮಾಡಲು ಯತ್ನಿಸಿದ್ದಾರೆಂದು ದೂರು ಸಲ್ಲಿಸಲಾಗಿದೆ. ಈ ಸಿಡಿ ಮೂಲಕ ಬ್ಲ್ಯಾಕ್​ಮೇಲ್​ಗೆ ಯತ್ನಿಸಿದ್ದಾರೆ. ಇದು ನಕಲಿ ಸಿಡಿ ಎಂದು ನಮೂದಿಸಿದ್ದು, ಇದರ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೇ ಸಿಡಿಯಲ್ಲಿರುವುದು ನಾನಲ್ಲ ಎಂದು ರಮೇಶ್ ತಿಳಿಸಿದ್ದು, ಕಳೆದ 4 ತಿಂಗಳಿಂದ ಸಿಡಿ ಷಡ್ಯಂತ್ರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಡಿ ಪ್ರಕರಣದ ಕುರಿತು ಯಾವುದೇ ದೂರು ದಾಖಲಾಗದ ಹಿನ್ನಲೆ ಇದುವರೆಗೂ ಎಫ್​ಐಆರ್​ ದಾಖಲಾಗಿಲ್ಲ. ಈ ಹಿಂದೆ ರಮೇಶ್​ ಜಾರಕಿಹೊಳಿ ಉದ್ಯೋಗದ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನೊಂದ ಯುವತಿ ಪರವಾಗಿ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಬಳಿಕ ದೂರನ್ನು ಹಿಂಪಡೆದಿದ್ದರು. ಈ ಹಿನ್ನಲೆ ತನಿಖೆಗೆ ಸಹಕಾರಿಯಾಗಲು ದೂರು ದಾಖಲಿಸುವಂತೆ ಸೂಚಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!