Saturday, 27th April 2024

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಯತ್ನ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟನೆ

ಕೊಪ್ಪಳ: ಶಿಕ್ಷಕರ ಎಲ್ಲ ಸಮಸ್ಯೆಗಳನ್ನೂ ಹಂತ, ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಅವರು ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ವರ್ಚ್ಯುವಲ್‌ ಆಗಿ ಉದ್ಘಾ ಟಿಸಿ ಮಾತನಾಡಿದರು. ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಶಿಕ್ಷಣದ ಮೂಲ ವಾರಸುದಾರರಾದ ಶಿಕ್ಷಕರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗುತ್ತಿದೆ. ಕಾರ್ಯಕ್ರಮ ಆಯೋಜಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಕರಿಗೆ ಅನೇಕ ಸಮಸ್ಯೆಗಳು ಇರಬಹುದು. ವರ್ಗಾವಣೆ ಸೇರಿದಂತೆ ಪ್ರಮುಖ ಮೂರು ಸಮಸ್ಯೆಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನನ್ನ ಗಮನಕ್ಕೆ ತಂದಿದೆ. ಅಧಿಕಾರಿಗಳು ಹಾಗೂ ಸಂಘಟನೆಯ ಜತೆ ಚರ್ಚಿಸಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಶಿಕ್ಷಕರು ಪ್ರಾಮಾಣಿಕವಾಗಿ ಬೋಧನೆ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಶಾಲೆಯಲ್ಲಿಯಲ್ಲಿರುವ ಕಟ್ಟಕಡೆಯ ಮಗುವೂ ಕೂಡ ಪರಿಣಾಮಕಾರಿ ಯಾದ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವ ಪ್ರೇರಕ ಶಕ್ತಿ ಶಿಕ್ಷಕರಾಗ ಬೇಕು ಎಂದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮಾತನಾಡಿ,‘ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮನವಿ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ  ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎಚ್.ಎಸ್‌.ಚೇತನ್ ನಿರ್ವಹಿಸಿದರು. ಶಿಕ್ಷಣ ತಜ್ಙರಾದ ನಿರಂಜನರಾಧ್ಯ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಷಯ ಮಂಡಿಸಿದರು.

ಅಖಿಲ ಭಾರತ ಶಿಕ್ಷಕರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ, ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಎಂ ನಾರಾಯಣಸ್ವಾಮಿ, ಉಪಾಧ್ಯಕ್ಷ ಕೆ.ನಾಗೇಶ, ಪದ್ಮಲತಾ ಜಿ, ಖಜಾಂಚಿ ಸುರೇಶ ಶಡಶ್ಯಾಳ, ಸುಮತಿ ಜಿ.ನಾಗನಗೌಡ, ಪ್ರಮೀಳಾ ಕಾಮನಹಳ್ಳಿ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಗಿರೀಶ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ ಇದ್ದರು.

Leave a Reply

Your email address will not be published. Required fields are marked *

error: Content is protected !!