Sunday, 19th May 2024

ಶಿಕ್ಷಕರಿಗೆ ನಿರಂತರ ಓದು, ಪುನರ್‌ಮನನ ಅಗತ್ಯ

– ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸಲಹೆ
– ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಗೆ ಭೇಟಿ
– ಶೈಕ್ಷಣಿಕ ವಾತಾವರಣಕ್ಕೆ ಮನಸೋತ ಪತ್ರಕರ್ತ

ಕೊಪ್ಪಳ: ಶಿಕ್ಷಕರು ಹಾಗೂ ಪತ್ರಕರ್ತರು ಹೊಸ ಹೊಸ ಸಂಗತಿ, ವಿಷಯಗಳನ್ನು ನಿರಂತರವಾಗಿ ತಿಳಿದುಕೊಳ್ಳಬೇಕು. ಜೊತೆಗೆ ಪುನರ್ ಮನನ ಶಿಕ್ಷಕರಿಗೆ ಬಹುಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಶಿಕ್ಷಕರಿಗೆ ಸಲಹೆ ನೀಡಿದರು.

ಅವರು ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿರುವ ಶ್ರೀ ವಿದ್ಯಾ ನಿಕೇತನ ಪಬ್ಲಿಕ್ ಶಾಲೆಗೆ ಭೇಟಿ ನೀಡಿ, ಶಿಕ್ಷಕ ರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಶಿಕ್ಷಕರು ಮತ್ತು ಪತ್ರಕರ್ತರು ಸಮಾಜ ತಿದ್ದುವ, ಸಮಾಜ ವನ್ನು ನಿರ್ದಿಷ್ಟ ಗುರಿಯತ್ತ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಅವರಲ್ಲಿ ಹೊಸದನ್ನು ಕಲಿಯುವ ಆಸಕ್ತಿ ಇರಬೇಕು. ನಿರಂತರ ಕಲಿಯು ತ್ತಿದ್ದರೆ ವಿದ್ಯಾರ್ಥಿಗಳಿಗೆ ಉತ್ತಮವಾದದ್ದನ್ನು ಹೊಸ ಹೊಸ ಬಗೆಯಲ್ಲಿ ಕಲಿಸಲು ಸಾಧ್ಯ. ನಾವು ಹೊಸದನ್ನು ಕಲಿಯದಿದ್ದರೆ ನಮ್ಮ ವೃತ್ತಿಯಲ್ಲಿ ನಿರಾಸಕ್ತಿ ಮೂಡುತ್ತದೆ. ಆಗ ಮಕ್ಕಳಿಗೆ ಏನನ್ನೂ ಕಲಿಸಲು ಸಾಧ್ಯವಿಲ್ಲ. ನಿರಂತರ ಅವಿಷ್ಕಾರ ಮಾಡಿ ಕೊಳ್ಳುತ್ತಿರಬೇಕು. ಆಗ ಮಾತ್ರ ನಾವು ಉತ್ತಮ ಶಿಕ್ಷಕರಾಗಲು ಸಾಧ್ಯ. ಶಿಕ್ಷಕರೇ ಶ್ರೇಷ್ಠ ವಿದ್ಯಾರ್ಥಿ. ನಿರಂತರ ಕಲಿತು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಹೀಗಾಗಿ ಅವರು ನಿಜವಾದ ಕಲಿಕಾ ವಿದ್ಯಾರ್ಥಿ. ಹೊಸದನ್ನು ನೀವು ಕಲಿತು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು.

ಸಮಾಜವನ್ನು ಸುಧಾರಿಸುವಂತ, ಬದಲಾಯಿಸುವಂತ, ಜನರ ಬಾಳಿನಲ್ಲಿ ಭರವಸೆ ಮೂಡಿಸುವ ಕೆಲಸವನ್ನು ಸೂರಿಬಾಬು ಅವರು ಮಾಡಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಇಂತಹ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ. ಈ ಶಾಲಾ ಪರಿಸರ ನೋಡಿದಾಗ ಸಂತಸವಾಗಿದೆ. ನಾನು ಸಹ ಏಷಿಯನ್ ಸ್ಕೂಲ್ ಆಫ್ ಜರ್ನಲಿಸಂ ಕಾಲೇಜಿನಲ್ಲಿ ಪ್ರಧ್ಯಾಪಕನಾಗಿ ಕೆಲಸ ಮಾಡಿರುವೆ. ನನ್ನ ಬಳಿ ಕಲಿತ ೪೦೦ಕ್ಕೂ ಹೆಚ್ಚು ಜನ ಪತ್ರಕರ್ತರು ಇಂದು ದೇಶದ ವಿವಿಧ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಭೇಟಿಯಾದಾಗ ನಾನು ಶಿಕ್ಷಕನಾಗಿ ಕೆಲಸ ಮಾಡಿದ್ದಕ್ಕೆ ಸಾರ್ಥಕ ಎನ್ನುವ ಭಾವ ಮೂಡುತ್ತದೆ ಎಂದರು.

ಸಂಸ್ಕೃತದಲ್ಲಿ ಅಕ್ಷರ ಎಂದರೆ ನಾಶಪಡಿಸಲು ಆಗದಿರುವುದು. ಜಗತ್ತಿನಲ್ಲಿ ಎಲ್ಲವನ್ನೂ ನಾಶ ಮಾಡಬಹುದು. ಆದರೆ ಕಲಿಸಿದ ಅಕ್ಷರವನ್ನು ಮಾತ್ರ ನಾಶ ಮಾಡಲು ಆಗುವು ದಿಲ್ಲ. ನಾವು ಕಲಿತದ್ದು ಪುಸ್ತಕ ರೂಪದಲ್ಲಿ ಬಂದಾಗ ನಮಗೆ ಖುಷಿಯಾಗುತ್ತದೆ. ನೀವು ಸಹ ಇಂದು ಅಕ್ಷರ ಕಲಿಸುವ ವೃತ್ತಿಯಲ್ಲಿ ಇದ್ದೀರಿ. ಓರ್ವ ಶಿಕ್ಷಕ, ಶಿಕ್ಷಕಿ ಕಲಿಸಿದ ಅಕ್ಷರ, ಶಿಕ್ಷಣವನ್ನು ಯಾರೂ ಸಹ ನಾಶ ಮಾಡಲು ಆಗುವುದಿಲ್ಲ. ಇದು ನೊಬೆಲ್ ಪ್ರೊಫೆಷನ್. ಮಹಾತ್ಮ ಗಾಂಧಿ, ವಿವೇಕಾನಂದರು, ಜೀಸಸ್, ಮಹಾತ್ಮ ಬುದ್ಧ, ಪೈಗಂಬರ್ ಯಾವುದೋ ಮನೆ, ಸಿನೆಮಾ ಹಾಲ್, ಮಹಲ್, ಶಾಪಿಂಗ್ ಮಹಲ್ ಕಟ್ಟಲಿಲ್ಲ. ಅವರೆಲ್ಲ ಬದುಕಿಗೆ ಬೇಕಾದ ಮಹತ್ವಗಳನ್ನು ಕಲಿಸಿಕೊಟ್ಟರು. ಹೀಗಾಗಿ ಅವರು ಮಹಾತ್ಮರಾದರು. ನೀವು ಸಹ ಸರಿಯಾದದ್ದನ್ನು ಕಲಿಸಿಕೊಡಿ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಯಾವುದೇ ಬಾಡಿಗೆ ಕೊಡದೇ ತಲೆಯಲ್ಲಿ ಇಟ್ಟುಕೊಳ್ಳುವುದು ಶಿಕ್ಷಕ ರನ್ನು ಮಾತ್ರ. ನಮ್ಮ ವೃತ್ತಿಯನ್ನು ಪ್ರೀತಿಸುವುದನ್ನು ಕಲಿಸಬೇಕು. ಕಾರಣ ನಾವು ಬೇರೆಯವರ ಜೀವನದಲ್ಲಿ ಮುಖ್ಯವಾಗಿದ್ದೇವೆ. ನಾವು ಎಲ್ಲಿ ಬದಲಾವಣೆ ತರುತ್ತೇ ವೆಯೋ ಅಲ್ಲಿ ಪ್ರೇರಣೆ ಕೊಡಬೇಕು. ಅದು ನಮ್ಮ ಕರ್ತವ್ಯ ಕೂಡ ಹೌದು. ಯಾವುದೇ ಕೆಲಸ ಮಾಡಲಿ ಅದರಲ್ಲಿ ಶ್ರದ್ಧೆ, ಪ್ರೀತಿ ಇರಬೇಕು. ಯಾವುದೇ ವೃತ್ತಿಯಲ್ಲಿ ಕೀಳು ಎನ್ನುವುದು ಇಲ್ಲ. ನಮ್ಮ ಮನಸ್ಥಿತಿ ಮಾತ್ರ ಕೀಳಾಗಿರುತ್ತದೆ. ಅದನ್ನು ದಾಟಿ ನಾವು ನಮ್ಮ ವೃತ್ತಿಯಲ್ಲಿ ಪೂರ್ಣವಾಗಿ ತೊಡಗಬೇಕು. ನಿಮ್ಮಂತಹ ಶಿಕ್ಷಕರ ಶ್ರಮದಿಂದ ಮಕ್ಕಳು ಉತ್ತಮ ಅಂಕ ಪಡೆಯಲು ಸಾಧ್ಯ. ನಾವು ಏನು ಅಂದುಕೊಳ್ಳುತ್ತೇವೆಯೋ ಅದನ್ನು ಸಾಧಿಸಬೇಕು. ಶಿಕ್ಷಕರೆ ಶಾಲೆಯ ಆತ್ಮ. ಪಾಲಕರು ಶಿಕ್ಷಕರ ಮಡಿಲಿಗೆ ತಮ್ಮ ಮಕ್ಕಳನ್ನು ಹಾಕುತ್ತಾರೆ. ಸುರಕ್ಷಿತ ಆಶ್ರಯದಲ್ಲಿ ಮಗು ಇದೆ ಎಂಬ ನಂಬಿಕೆ ಅವರಲ್ಲಿ ಇರುತ್ತದೆ. ಈ ಕಾರಣಕ್ಕೆ ನಾವು ಶಿಕ್ಷಕ ವೃತ್ತಿ ಬಗ್ಗೆ ಹೆಮ್ಮೆ, ಗೌರವ ಹೊಂದಿರಬೇಕು.

ಶಿಕ್ಷಕ, ಪತ್ರಕರ್ತ ಜ್ಞಾನ ಗಳಿಸುವ ವಿಷಯದಲ್ಲಿ ಸ್ವಾರ್ಥಿಗಳಾಗಿರಬೇಕು. ನಮ್ಮ ತಲೆ ಎಂಬ ಓವರ್ ಹೆಡ್ ಟ್ಯಾಂಕ್ ಥರ ಇರಬೇಕು. ನೀರಿನಿಂದ ಭರ್ತಿಯಾದಾಗ ಮಾತ್ರ ನಲ್ಲಿಯಲ್ಲಿ ನೀರು ಬರುತ್ತದೆ. ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇದ್ದಾಗ ಮಾತ್ರ ಚೆಕ್ ಬರೆಯಲು ಸಾಧ್ಯ. ನಾವು ವಿದ್ಯೆಯಲ್ಲಿ, ಜ್ಞಾನ ಪಡೆದು ತಲೆ ಎಂಬ ಟ್ಯಾಂಕ್‌ನಲ್ಲಿ ಜ್ಞಾನ ಭರ್ತಿ ಮಾಡಿಕೊಳ್ಳಬೇಕು. ಆಗ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ. ನಾವು ಅನ್ ಲರ್ನಿಂಗ್ ನಿಂದ ಲರ್ನಿಂಗ್ ನತ್ತ ಹೋಗಬೇಕು ಎಂದು ಕಲಾಂ ಅವರು ಹೇಳುತ್ತಿದ್ದರು ಎಂದು ಕಲಾಂ ಅವರೊಂದಿಗಿನ ವಿದೇಶಿ ಪ್ರವಾಸದ ಕುರಿತು ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥ ಸೂರಿಬಾಬು ನೆಕ್ಕಂಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಷ್ಮಾ ವಿಶ್ವೇಶ್ವರ ಭಟ್, ಶಾಲೆ ಪ್ರಾಚಾರ್ಯೆ ಅನ್ಸಾ ತತ್ರ, ಹಿರಿಯ ಪತ್ರಕರ್ತ ಅಮರಗುಂಡಪ್ಪ ಕಾರಟಗಿ, ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ವಿಶ್ವನಾಥ ಪಟೀಲ್, ವರದಿಗಾರ ವೀರೇಂದ್ರ ಪಾಟೀಲ್ ಸೇರಿದಂತೆ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

ಶಾಲಾ ವಾತವರಣಕ್ಕೆ ಫೀದಾ..
ಶಾಲೆಯ ಇಡೀ ವಾತಾವರಣ ಗನಿಸಿದ ವಿಶ್ವೇಶ್ವರ ಭಟ್ ಅವರು, ಇಂತಹ ಸುಸಜ್ಜಿತ ಶಾಲೆ ಹಿಂದುಳಿದ ಭಾಗದಲ್ಲಿ ಇದೇ ಎಂದು ನಂಬಲು ಆಗುತ್ತಿಲ್ಲ. ಮಕ್ಕಳಿಗೆ ಕೇವಲ ಶಿಕ್ಷಣ, ಕ್ರೀಡಾ ಚಟುವಟಿಕೆ ನೀಡದೇ, ಉತ್ತಮ ಸಂಸ್ಕಾರ, ವಿದ್ಯಾಭ್ಯಾಸದ ಜೊತೆಗೆ ಕೃಷಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿರುವುದು ನೂತನ ಪ್ರಯೋಗವೇ ಸರಿ. ಇಡೀ ದೇಶದಲ್ಲಿ ಶಿಕ್ಷಣದ ಜೊತೆಗೆ ಕೃಷಿ ಕಲಿಸುವ ಶಾಲೆ ಎಲ್ಲೂ ಕೇಳಿಲ್ಲ, ನೋಡಿಯೂ ಇಲ್ಲ ಎಂದರು. ಶಾಲಾ ಚಟುವಟಿಕೆಗಳು ಮತ್ತು ನರ್ಸರಿಯಿಂದ ನೌಕರಿ ವರೆಗೆ ಎಂಬ ಹೊಸ ಕಾನ್ಸೆಪ್ಟ್ ಬಗ್ಗೆ ಸಂಸ್ಥೆಯ ಅಧ್ಯಕ್ಷ ಸೂರಿಬಾಬು ಅವರಿಂದ ಕೇಳಿದಾಗ, ಇದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪೂರಕವಾಗಲಿದ ಎಂದರು.

Leave a Reply

Your email address will not be published. Required fields are marked *

error: Content is protected !!