Saturday, 27th April 2024

ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ನಿಧನ

ಮಂಗಳೂರು: ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಸಂಪಾಜೆ ಶೀನಪ್ಪ ರೈ ಅವರು ಮಂಗಳವಾರ ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶೀನಪ್ಪ ರೈ ಅವರು ಮಂಗಳೂರಿನ ಪುತ್ರನ ಮನೆಯಲ್ಲಿ ವಾಸವಿದ್ದರು. ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಶೀನಪ್ಪ ರೈ ಅವರು ಜನಿಸಿದ್ದು ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ. ತಂದೆ ಕೂಡಾ ಯಕ್ಷಗಾನ ಕಲಾವಿದರಾಗಿದ್ದರು. ಆರಂಭಿಕ ಪಾಠವನ್ನು ತಂದೆಯಿಂದ ಕಲಿತ ಅವರು ನಂತರ ನಾಟ್ಯಾಭ್ಯಾಸವನ್ನು ಕುಂಬಳೆ ಕಣ್ಣನ್ ಅವರಿಂದ, ಬಣ್ಣಗಾರಿಕೆಯನ್ನು ಬಣ್ಣದ ಕುಟ್ಯಪ್ಪರಿಂದ ಕಲಿತರು.

ತನ್ನ 13ನೇ ವಯಸ್ಸಿನಲ್ಲೇ ಇರಾ ಸೋಮನಾಥೇಶ್ವರ ಮೇಳದಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ ಶೀನಪ್ಪ ಅವರು, ನಂತರ ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ ಮೇಳ, ಕಟೀಲು ಮೇಳ, ಹೊಸನಗರ ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡಿ ಕಳೆದ ಕೆಲ ವರ್ಷಗಳ ಹಿಂದೆ ತಿರುಗಾಟ ನಿಲ್ಲಿಸಿದ್ದರು.

ರಾಜ್ಯ ಪ್ರಶಸ್ತಿ, ಯಕ್ಷಗಾನ ಬಯಲಾಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

Leave a Reply

Your email address will not be published. Required fields are marked *

error: Content is protected !!