Bengaluru News: ಬೆಂಗಳೂರಿನಲ್ಲಿ ಫೆ. 22ರಂದು ನೃತ್ಯಕಥಾ- ನೃತ್ಯೋತ್ಸವ
Bengaluru News: ಉಡುಪ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಫೆ. 22ರ ಸಂಜೆ 5.30ಕ್ಕೆ 4ನೇ ಆವೃತ್ತಿಯ ನೃತ್ಯಕಥಾ -ನೃತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನೃತ್ಯೋತ್ಸವ ಆಯೋಜಕರು ಮತ್ತು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ರಾಜಧಾನಿ ಈಗ ವಿಭಿನ್ನವಾದ ನೃತ್ಯ ಉತ್ಸವಕ್ಕೆ ಅಣಿಯಾಗಿದೆ. ಪ್ರತಿ ಬಾರಿಯೂ ವಿಶೇಷ, ವಿಭಿನ್ನ ಸಂಗೀತ - ನೃತ್ಯ ಸಮಾರಾಧನೆ ಮಾಡುವ ಉಡುಪ ಪ್ರತಿಷ್ಠಾನ ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಫೆ. 22ರ ಸಂಜೆ 5.30 ಕ್ಕೆ 4ನೇ ಆವೃತ್ತಿಯ ʼನೃತ್ಯಕಥಾ -ನೃತ್ಯೋತ್ಸವʼ ಕಾರ್ಯಕ್ರಮವನ್ನು ಆಯೋಜಿಸಿದೆ. ಪದ್ಮಶ್ರೀ ಪುರಸ್ಕೃತ ಖ್ಯಾತ ಕಲಾವಿದೆ ಮಾಳವಿಕಾ ಸಾರುಕ್ಕೈ ಅವರು ‘ದರ್ಶನʼ ಮತ್ತು ಆಚಾರ್ಯ ಇಂದಿರಾ ಕಡಂಬಿ ಅವರು ಅಂಬಲಂ ತಂಡದೊಂದಿಗೆ ‘ಕೊಹಂ- ದಿ ಸರ್ಚ್ʼ ಎಂಬ ವಿಷಯಾಧಾರಿತ ವಿಶೇಷ ನೃತ್ಯ ಪ್ರಸ್ತುತಿ ಮಾಡುತ್ತಿರುವುದು ಬಹು ವಿಶೇಷವಾಗಿದೆ ಎಂದು ನೃತ್ಯೋತ್ಸವ ಆಯೋಜಕರು ಮತ್ತು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Kolar News: 315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿಯ ಕ್ರೋನ್ಸ್ ಕಂಪನಿಯ ಉತ್ಪಾದನಾ ಘಟಕ ವೇಮಗಲ್‌ನಲ್ಲಿ ಆರಂಭ
ದಶಮಾನೋತ್ಸವ ಸಂಭ್ರಮ
ಉಡುಪ ಪ್ರತಿಷ್ಠಾನವು ಪ್ರತಿ ತಿಂಗಳೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆ, ವೃದ್ಧಾಶ್ರಮ, ಕ್ಯಾನ್ಸರ್ ಪುನರ್ವಸತಿ ಕೇಂದ್ರ ಮತ್ತು ಆಟಿಸಂ ಕೇಂದ್ರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಅಲ್ಲಿನವರಿಗೆ ಮನೋಲ್ಲಾಸ ನೀಡುವ ಸೇವೆ ಮಾಡುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಾನವು ಈವರೆಗೆ ದೇಶ- ವಿದೇಶಗಳ 292 ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಿ 148 ಸಂಗೀತ ಕಛೇರಿಗಳನ್ನು ವಿವಿಧೆಡೆ ಆಯೋಜನೆ ಮಾಡಿದ ಕೀರ್ತಿಗೆ ಭಾಜನವಾಗಿದೆ. ಇದೀಗ 149ನೇ ಕಾರ್ಯಕ್ರಮ ಸಮರ್ಪಣೆಯಾಗಲಿದೆ ಎಂದು ನೃತ್ಯೋತ್ಸವ ಆಯೋಜಕರು ಮತ್ತು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.