RO Water Plants: ಶುದ್ಧ ನೀರಿನ ಘಟಕಗಳ ನಿರ್ವಹಣೆ ಜಲಮಂಡಳಿ ಸುಪರ್ದಿಗೆ; ಡಿಸಿಎಂ ಆದೇಶ
RO Water Plants: ನೀರಿಲ್ಲದೆ ನಾಗರಿಕರಿಗೆ ತೊಂದರೆ ಆಗುವುದನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ಬೆಂಗಳೂರು ನಗರದ ನೀರು ಸರಬರಾಜಿನ ನಿರ್ವಹಣೆಯನ್ನು ಮಾಡುತ್ತಿರುವ ಬೆಂಗಳೂರು ಜಲಮಂಡಳಿಯವರೇ ಆರ್.ಒ. ಪ್ಲಾಂಟ್‌ಗಳ ನಿರ್ವಹಣೆಯನ್ನು ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.


ಬೆಂಗಳೂರು: ನಗರದ ನಾಗರಿಕರಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿಯನ್ನು ಬೆಂಗಳೂರು ಜಲಮಂಡಳಿಯು ನಿರ್ವಹಿಸುತ್ತಿದೆ. ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕಗಳ (RO Water Plants) ನಿರ್ವಹಣೆಯನ್ನು ಬಿ.ಬಿ.ಎಂ.ಪಿಯು ನಿರ್ವಹಿಸುತ್ತಿದ್ದು, ಒಂದು ವೇಳೆ ಕೊಳವೆಬಾವಿಗಳು ಬತ್ತಿ ಹೋದಲ್ಲಿ ಆರ್.ಒ ಘಟಕಕ್ಕೆ ಬೇಕಾಗುವ ನೀರನ್ನು ಬೆಂಗಳೂರು ಜಲಮಂಡಳಿಯ ಮುಖಾಂತರವೇ ಪೂರೈಸಬೇಕಾಗುತ್ತದೆ. ಈ ಸಮಯದಲ್ಲಿ ಸಮನ್ವಯದ ಕೊರತೆ ಉಂಟಾಗಿ ನಾಗರಿಕರಿಗೆ ತೊಂದರೆ ಆಗುವುದನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ಬೆಂಗಳೂರು ನಗರದ ನೀರು ಸರಬರಾಜಿನ ನಿರ್ವಹಣೆಯನ್ನು ಮಾಡುತ್ತಿರುವ ಬೆಂಗಳೂರು ಜಲಮಂಡಳಿಯವರೇ ಆರ್.ಒ. ಪ್ಲಾಂಟ್‌ಗಳ ನಿರ್ವಹಣೆಯನ್ನು ಮಾಡಬೇಕು ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ.
ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದು, ಕೂಡಲೇ ಆರ್.ಒ. ಪ್ಲಾಂಟ್‌ಗಳ ನಿರ್ವಹಣೆಯ ಸುಪರ್ದಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ಸೂಕ್ತ ಆದೇಶ ಹೊರಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಸೂಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Power Cut: ತುಮಕೂರು: ಫೆ. 24, ಫೆ. 27, ಫೆ. 28ರಂದು ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ
ಕುಡಿಯುವ ನೀರಿನ ದುರ್ಬಳಕೆ; 5.60 ಲಕ್ಷ ರೂ.ಗಳ ದಂಡ ವಸೂಲಿ
ಬೆಂಗಳೂರು : ರಾಜಧಾನಿಯಲ್ಲಿ ಅನಗತ್ಯವಾಗಿ ಕುಡಿಯುವ ನೀರಿನ ದುರ್ಬಳಕೆ ಮಾಡುವವರಿಗೆ ಜಲಮಂಡಳಿಯು ದಂಡದ ಬಿಸಿ ಮುಟ್ಟಿಸುತ್ತಿದೆ. ಕಳೆದ ಒಂದು ವಾರದಲ್ಲಿ 112 ಪ್ರಕರಣಗಳನ್ನು ಪತ್ತೆಹಚ್ಚಿ, ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡಿದವರಿಂದ 5.60 ಲಕ್ಷ ರೂ.ಗಳ ದಂಡ ವಸೂಲಿಗೆ ಕ್ರಮ ಕೈಗೊಂಡಿದೆ.
ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಫೆ.17ರಂದು ನಿಷೇಧದ ಆದೇಶ ಹೊರಡಿಸಿದ ನಂತರ ಜಲಮಂಡಳಿ, ಕುಡಿಯುವ ನೀರಿನ ಬಳಕೆ ಬಗ್ಗೆ ತಪಾಸಣೆ ಕೈಗೊಂಡಿದೆ. ಕಾರು, ಬೈಕ್ ಸೇರಿ ವಾಹನಗಳ ಸ್ವಚ್ಛತೆಗೆ, ಮನೆಯ ಅಂಗಳ ಸ್ವಚ್ಛತೆಗೆ, ಗಾರ್ಡನ್ ಗಿಡಗಳ ಪೋಷಣೆ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಕುಡಿಯುವ ನೀರು ಬಳಸುವಂತಿಲ್ಲ. ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ದಂಡ ವಿಧಿಸುವ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವ ಉದ್ದೇಶದಿಂದ ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡದಂತೆ ಜಲಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಪ್ರಸ್ತುತ ನಗರದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಯ ಕೊರತೆಯಿಂದ ಅಂತರ್ಜಲ ಸಹ ಕುಸಿತವಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
ನಗರದಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಅಭಾವ ಎದುರಾಗಬಹುದು ಎಂದು ಐಐಎಸ್‌ಸಿ ವಿಜ್ಞಾನಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ ಎನ್ನುವುದನ್ನು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಜಲಮಂಡಳಿ ಅಧ್ಯಕ್ಷರು, ಈಗಿನಿಂದಲೇ ಸಾರ್ವಜನಿಕರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಸುವುದು ಹಾಗೂ ಅನಗತ್ಯ ವ್ಯರ್ಥ ಮಾಡುವುದನ್ನು ತಡೆಯುವುದು ಕುಡಿಯುವ ನೀರಿನ ದುರ್ಬಳಕೆ ನಿಷೇಧ ಆದೇಶದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.