CP Yogeshwar: ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಕೊಟ್ಟ ಪತ್ನಿ, ಪುತ್ರಿ
CP Yogeshwar: ಸಿ.ಪಿ.ಯೋಗೇಶ್ವರ್ ತಮ್ಮದೇ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಕಾನೂನಾತ್ಮಕವಾಗಿ ನಾವು ದೂರವಾಗಿಲ್ಲ. ಆದರೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಸರಿಪಡಿಸಿಕೊಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಮನವಿ ಮಾಡಿದ್ದಾರೆ.


ಬೆಂಗಳೂರು: ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ (CP Yogeshwar) ವಿರುದ್ಧ ಪತ್ನಿ ಮತ್ತು ಪುತ್ರಿ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಬೆಂಗಳೂರಿನ ಕೆಪಿಸಿಸಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾದ ಯೋಗೇಶ್ವರ್ ಪತ್ನಿ ಮಾಳವಿಕಾ ಸೋಲಂಕಿ ಹಾಗೂ ಪುತ್ರಿ ನಿಶಾ ಸಿ.ಪಿ ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ.
ಸಿ.ಪಿ.ಯೋಗೇಶ್ವರ್ ತಮ್ಮದೇ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಪದೇ ಪದೇ ಕೋರ್ಟ್ ಗಳಲ್ಲಿ ಕೇಸ್ ಹಾಕುತ್ತಿದ್ದಾರೆ. ಕಾನೂನಾತ್ಮಕವಾಗಿ ನಾವು ದೂರವಾಗಿಲ್ಲ. ಆದರೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಸರಿಪಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಈ ವೇಳೆ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಮಾತನಾಡಿ, ನನ್ನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ನಮ್ಮ ತಂದೆ ಬಲಶಾಲಿ. ಒಬ್ಬ ಹೆಣ್ಣುಮಗಳಿಗೆ ಎಷ್ಟು ಕಷ್ಟ ಅನ್ನೋದು ಗೊತ್ತಿದೆ. ಕೋರ್ಟ್ ಹೋರಾಟ ನಡೆಯುತ್ತಿದೆ, ನಮಗೆ ಸಮಸ್ಯೆ ಆಗಬಾರದು ಎಂದು ಸಹಾಯ ಕೇಳಿದ್ದೇವೆ. ಸುರ್ಜೇವಾಲಾ ಸಮಯ ಕೊಟ್ಟು, ಮಾತಾಡಿ ಭರವಸೆ ಕೊಟ್ಟಿದ್ದಾರೆ. ನನಗೆ ಜೀವನದಲ್ಲಿ ಭಯ ಹೋಗಿದೆ, ಕಳೆದುಕೊಳ್ಳುವುದು ಏನಿಲ್ಲ. ನಾನು ತಂದೆ ವಿರುದ್ಧವೇ ಹೋರಾಡುವ ಸಂದೇಶ ಕೊಡಲು ನನಗೂ ಇಷ್ಟ ಇಲ್ಲ. ಇದು ಬರೀ ಆಸ್ತಿ ವಿಚಾರ ಅಲ್ಲ, ನ್ಯಾಯ ಮತ್ತು ಅಧಿಕಾರದ ವಿಚಾರ. ಅವರು ತಂದೆಯಾಗಿ ಮಾಡೋದು ಬಹಳ ಇದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Fraud Case: ಸಿಎಂ, ಡಿಸಿಎಂ ಹೆಸರಲ್ಲಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದ ಮಹಿಳೆ ಅರೆಸ್ಟ್
ಇದೇ ವೇಳೆ ಯೋಗೇಶ್ವರ್ ಮೊದಲ ಪತ್ನಿ ಮಾಳವಿಕಾ ಸೋಲಂಕಿ ಮಾತನಾಡಿ, ಸುರ್ಜೇವಾಲಾ ಸಮಯ ಕೊಟ್ಟರು, ಅವರು ನಮ್ಮ ಮಾತನ್ನು ಕೇಳಿಸಿಕೊಂಡಿದ್ದಾರೆ. ನಮಗೆ ಭರವಸೆ ಕೊಟ್ಟಿದ್ದಾರೆ, ಸಿಎಂ, ಡಿಸಿಎಂ ಜತೆ ಮಾತನಾಡುತ್ತಾರೆ. ಸುಮಾರು ವರ್ಷದಿಂದ ಚೆನ್ನಾಗಿಯೇ ಇದ್ದೆವು. ಆದರೆ ಈಗ ನನ್ನ ಮಕ್ಕಳಿಗೆ ಉಸಿರಾಡಲು ಆಗುತ್ತಿಲ್ಲ. ಮಕ್ಕಳು ಬೀದಿಗೆ ಬಂದಿದ್ದಾರೆ, ಮಕ್ಕಳ ಮೇಲೆ ಕೇಸ್ ಹಾಕಿದ್ದಾರೆ. ತಾಯಿಯಾಗಿ ನನ್ನ ಕರ್ತವ್ಯ ಮಾಡುತ್ತಿದ್ದೇನೆ. 300 ಆಸ್ತಿಗಳ ಮೇಲೆ ನಾವು ಸ್ಟೇ ತಂದಿದ್ದೇವೆ. ನನ್ನ ಮಕ್ಕಳಿಗೂ ಇಷ್ಟ ಇಲ್ಲ, ತಂದೆ ವಿರುದ್ಧ ಹೋರಾಡಬೇಕಾದ ಸ್ಥಿತಿ ಬಂದಿದೆ. ಅವರ ವಿರುದ್ಧ ಹೋರಾಡುವ ಶಕ್ತಿಯೂ ಇಲ್ಲ. ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಇರುವ ವ್ಯಕ್ತಿ ಮನೆ ವಿಷಯವನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.