Rangaswamy Mookanahalli: ವಿಶ್ವೇಶ್ವರ್ ಭಟ್ಟರಿಂದ ರಂಗಸ್ವಾಮಿ ಮೂಕನಹಳ್ಳಿ ಅವರ ʼಜಪಾನಿನಲ್ಲಿ ರಂಗʼ ಪುಸ್ತಕ ಬಿಡುಗಡೆ
ಲೇಖಕ ಮತ್ತು ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ಅವರ ʼಜಪಾನಿನಲ್ಲಿ ರಂಗʼ ಪುಸ್ತಕವನ್ನು ವಿಶ್ವವಾಣಿ ಪತ್ರಿಕೆ ಮತ್ತು ಟಿವಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರು ಸೋಮವಾರ(ಫೆ.10) ವಿಶ್ವವಾಣಿ ಟಿವಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಹಿರಿಯ ಪತ್ರಕರ್ತರಾದ ನಂಜನಗೂಡು ಮೋಹನ್, ಅನುವಾದಕರಾದ ನಲ್ಲ ತಂಬಿ, ವಿಶ್ವವಾಣಿ ಪತ್ರಿಕೆಯ ಸಿಇಓ ಚಿದಾನಂದ್ ಕಡಲಾಸ್ಕರ್, ವಿಶ್ವವಾಣಿ ಟಿವಿ ಸಿಇಓ ರಮೇಶ್ ಕುಮಾರ್ ನಾಯಕ್,ಕೇಶವ ಪ್ರಸಾದ್ ಮತ್ತು ನವೀನ್ ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
![ವಿಶ್ವೇಶ್ವರ್ ಭಟ್ಟರಿಂದ ಜಪಾನಿನಲ್ಲಿ ರಂಗ ಪುಸ್ತಕ ಬಿಡುಗಡೆ](https://cdn-vishwavani-prod.hindverse.com/media/original_images/Rangaswamy_Mookanahalli.jpg)
Rangaswamy Mookanahalli
![Profile](https://vishwavani.news/static/img/user.png)
ಬೆಂಗಳೂರು: ಕನ್ನಡದಲ್ಲಿ ಜಪಾನ್ ಬಗ್ಗೆ ಬಂದಿರುವ ಸಾಹಿತ್ಯ ತೀರಾ ಕಡಿಮೆ. ಒಂದಷ್ಟು ಲೇಖಕರು ಸೀಮಿತ ವ್ಯಾಪ್ತಿಯಲ್ಲಿ ಬರೆದಿದ್ದಾರೆ. ಆದರೆ ಜಪಾನ್ ದೇಶದ ಬಗ್ಗೆ ಸಮಗ್ರವಾಗಿ ಪರಿಚಯ ಮಾಡಿಕೊಡುವ ಪುಸ್ತಕ ಕನ್ನಡದಲ್ಲಿ ಬಂದಿರುವಂತದ್ದು ಬಹಳ ಕಡಿಮೆ. ʼಜಪಾನಿನಲ್ಲಿ ರಂಗʼ ಪುಸ್ತಕ ಆ ಒಂದು ದೊಡ್ಡ ಕೊರತೆಯನ್ನು ನೀಗುತ್ತದೆ ಎಂದು ವಿಶ್ವವಾಣಿ(Vishwavani) ಪತ್ರಿಕೆ ಮತ್ತು ಟಿವಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ (Vishweshwar Bhat) ಅವರು ಹೇಳಿದರು. ಸೋಮವಾರ(ಫೆ.10) ವಿಶ್ವವಾಣಿ ಟಿವಿ ಕಚೇರಿಯಲ್ಲಿ ಲೇಖಕ ಮತ್ತು ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ(Rangaswamy Mookanahalli) ಅವರ ʼಜಪಾನಿನಲ್ಲಿ ರಂಗʼ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಂಗಸ್ವಾಮಿ ಅವರು ಏನು ಬರೆದರೂ ಸ್ವಾರಸ್ಯಕರವಾಗಿ ಬರೆಯುತ್ತಾರೆ. ಅವರ ಪ್ರತಿ ಬರಹದಲ್ಲೂ ಕುತೂಹಲವಿರುತ್ತದೆ. ಈ ಪುಸ್ತಕವೂ ಓದುಗನಲ್ಲಿ ಕುತೂಹಲ ಹುಟ್ಟಿಸುತ್ತದೆ. ನಾನು ಕೂಡ ಈವರೆಗೆ ಜಪಾನ್ ದೇಶದ ಬಗ್ಗೆ ಸಾಕಷ್ಟು ಅಂಕಣಗಳನ್ನು ಬರೆದಿದ್ದೇನೆ. ಆದರೆ ನನ್ನ ಮತ್ತು ರಂಗಸ್ವಾಮಿ ಅವರ ಬರಹಗಳಲ್ಲಿ ಯಾವುದೇ ಸಾಮ್ಯತೆಯಿಲ್ಲ. ಇಬ್ಬರೂ ಬೇರೆಯದ್ದೆ ದೃಷ್ಟಿಕೋನದಲ್ಲಿ ಜಪಾನ್ ದೇಶವನ್ನು ನೋಡಿದ್ದೇವೆ. ಜಪಾನ್ ಕುರಿತು ಎಷ್ಟು ಬರೆದರೂ ಸಾಲದು. ಅದು ಅದ್ಭುತವಾದ ದೇಶ. ರಂಗಸ್ವಾಮಿ ಅತ್ಯಂತ ಅಗತ್ಯವಿದ್ದ ಪುಸ್ತಕವನ್ನು ಕನ್ನಡದ ಓದುಗರಿಗೆ ನೀಡಿದ್ದಾರೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:Pariksha Pe Charcha: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ: ಬಾಲಕಿಯ ಪಟಪಟ ಹಿಂದಿ ಮಾತುಗಳಿಗೆ ಮೋದಿ ಫುಲ್ ಫಿದಾ!
ಕೃತಿಯ ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿ ಮಾತನಾಡಿ ನನ್ನ ಜಪಾನಿನಲ್ಲಿ ರಂಗ ಪುಸ್ತಕವು ಒಂದು ಅನುಭವ ಕಥನ. ಗೂಗಲ್‌ನಲ್ಲಿ ಸಿಗುವಂಥ ವಿಷಯಗಳನ್ನು ನಾನು ಆಯ್ಕೆ ಮಾಡಿಕೊಂಡಿಲ್ಲ. ಗೂಗಲ್ ಇಂದು ಎಲ್ಲವನ್ನೂ ಹೇಳುತ್ತದೆ. ನಾನು ಗೂಗಲ್‌ನಲ್ಲಿ ಸಿಗದ ಮತ್ತು ನನಗೆ ದಕ್ಕಿದ ವಿಷಯಗಳ ಕುರಿತು ಬರೆದಿದ್ದೇನೆ ಎಂದರು. ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಹಿರಿಯ ಪತ್ರಕರ್ತರಾದ ನಂಜನಗೂಡು ಮೋಹನ್, ಅನುವಾದಕರಾದ ನಲ್ಲ ತಂಬಿ, ವಿಶ್ವವಾಣಿ ಪತ್ರಿಕೆಯ ಸಿಇಓ ಚಿದಾನಂದ ಕಡಲಾಸ್ಕರ್, ವಿಶ್ವವಾಣಿ ಟಿವಿ ಸಿಇಓ ರಮೇಶ್ ಕುಮಾರ್ ನಾಯಕ್,ಕೇಶವ ಪ್ರಸಾದ್ ಮತ್ತು ನವೀನ್ ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.