ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಹಸಿರು ಪರಿವರ್ತನೆ ಕ್ಷೇತ್ರದಲ್ಲಿ 2030ರ ವೇಳೆಗೆ 170 ಮಿಲಿಯನ್‌ ಉದ್ಯೋಗ ಸೃಷ್ಟಿ: ಪ್ರಲ್ಹಾದ್‌ ಜೋಶಿ

Pralhad Joshi: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಇಂದು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. ಹಸಿರು ಪರಿವರ್ತನೆಯಂತಹ ಕ್ಷೇತ್ರದಲ್ಲಿ 2030ರ ವೇಳೆಗೆ 170 ಮಿಲಿಯನ್‌ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರ: ಜೋಶಿ

Profile Siddalinga Swamy Mar 30, 2025 9:54 AM

ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಇಂದು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. ಹಸಿರು ಪರಿವರ್ತನೆಯಂತಹ ಕ್ಷೇತ್ರದಲ್ಲಿ 2030ರ ವೇಳೆಗೆ 170 ಮಿಲಿಯನ್‌ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಗುಜರಾತಿನ ಚಿಖಾಲಿಯಲ್ಲಿ ಶನಿವಾರ, 5.4 ಗಿಗಾವ್ಯಾಟ್ ಹೈಟೆಕ್ ಸೌರ ಘಟಕವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿದ ʼಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2025ʼ ರ ಪ್ರಕಾರ ಹಸಿರು ಇಂಧನ ಪರಿವರ್ತನೆ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿ. 2030 ರ ವೇಳೆಗೆ 170 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.

2014ರಲ್ಲಿ ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯ ಕೇವಲ 2.82 ಗಿಗಾವ್ಯಾಟ್ ಇತ್ತು. ಇದೀಗ 2025ರ ವೇಳೆಗೆ 104 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯದೊಂದಿಗೆ ಅಭೂತಪೂರ್ವ ಸಾಧನೆ ತೋರಿದ್ದೇವೆ. ಇದು ಶೇ.3580 ರಷ್ಟು ಗಮನಾರ್ಹ ಹೆಚ್ಚಳವಾಗಿದೆ ಎಂದು ಹೇಳಿದರು.

2030ಕ್ಕೆ ಭಾರತ ಹೊಸ ಎತ್ತರಕ್ಕೆ

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪರಿಸರ ಸುಸ್ಥಿರತೆ ಕಡೆಗೆ ಭಾರತದ ದೃಷ್ಟಿಕೋನ ಬದಲಾಗಿದೆ. ಜಾಗತಿಕ ಇಂಧನ ಕ್ರಾಂತಿಯಲ್ಲಿ ನಾವು ವಿಶ್ವವನ್ನೇ ಮುನ್ನಡೆಸುವ ಮಟ್ಟಕ್ಕೆ ಬೆಳೆದಿದ್ದೇವೆ. 2030ರ ವೇಳೆಗೆ ಭಾರತ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ತಲುಪಲಿದೆ. ಸೌರ ಮಾಡ್ಯೂಲ್‌ಗಳ ಉತ್ಪಾದನೆಯಲ್ಲಿ 150 ಗಿಗಾವ್ಯಾಟ್ ತಲುಪುವ ವಿಶ್ವಾಸವಿದೆ. ಸೌರ ಕೋಶಗಳಲ್ಲಿ ನಮ್ಮ ಸಾಮರ್ಥ್ಯ 100 ಗಿಗಾವ್ಯಾಟ್ ಗೆ ಹೆಚ್ಚಾಗುತ್ತದೆ. ವೇಫರ್ ಉತ್ಪಾದನೆಯು 40 ಗಿಗಾವ್ಯಾಟ್ ತಲುಪುತ್ತದೆ ಎಂದು ಹೇಳಿದರು.

ಮಾಡ್ಯೂಲ್ ಉತ್ಪಾದನೆಗೂ ಒತ್ತು ನೀಡಿದ್ದು, ಅದರ ಸಾಮರ್ಥ್ಯವು 2014 ರಲ್ಲಿದ್ದ 2 ಗಿಗಾವ್ಯಾಟ್‌ನಿಂದ ಇಂದು 80 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ. 2014ರಲ್ಲಿ ಸೌರ ಕೋಶಗಳು ಮತ್ತು ವೇಫರ್‌ಗಳ ಉತ್ಪಾದನೆ ಇರಲಿಲ್ಲ. ಆದರೆ ಇಂದು ಭಾರತ 25 ಗಿಗಾವ್ಯಾಟ್ ಕೋಶಗಳನ್ನು ಮತ್ತು 2 ಗಿಗಾವ್ಯಾಟ್ ವೇಫರ್‌ಗಳನ್ನು ಉತ್ಪಾದಿಸುತ್ತಿದೆ ಎಂದರು.

ಹಸಿರು ಭವಿಷ್ಯಕ್ಕೆ ಬದ್ಧವಾಗಿವೆ 100ಕ್ಕೂ ಹೆಚ್ಚು ದೇಶಗಳು

ಪ್ರಸ್ತುತ 100ಕ್ಕೂ ಹೆಚ್ಚು ದೇಶಗಳು ಐಎಸ್‌ಎ ಮೂಲಕ ಹಸಿರು ಭವಿಷ್ಯಕ್ಕೆ ಬದ್ಧವಾಗಿವೆ. ಹಲವು ವರ್ಷಗಳಿಂದ ಒಂದು ದೇಶ (ಚೀನಾ) ನವೀಕರಿಸಬಹುದಾದ ಮತ್ತು ನವಯುಗದ ಸಂಪನ್ಮೂಲಗಳ ಕ್ಷೇತ್ರದಲ್ಲಿ ಪ್ರಬಲ ಶಕ್ತಿಯಾಗಿತ್ತು. ಆದರೆ ಇಂದು ಭಾರತ ಜಾಗತಿಕ ಮಿತ್ರನಾಗಿ ಹೊರಹೊಮ್ಮುತ್ತಿದೆ, ಜಾಗತಿಕ ದಕ್ಷಿಣದ ಧ್ವನಿಯಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ ಭಾರತ ʼಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ʼ ಉಪಕ್ರಮವನ್ನು ಪ್ರಾರಂಭಿಸಿತು. ಇದೇ ಕಾರಣಕ್ಕೆ ಇಂದು ಯುರೋಪಿಯನ್ ಯೂನಿಯನ್ ಕಾಲೇಜ್ ಆಫ್ ಕಮಿಷನರ್ಸ್ ಜಗತ್ತಿನಲ್ಲಿ 195 ದೇಶಗಳಿದ್ದರೂ ಇದೇ ಮೊದಲ ಬಾರಿಗೆ ಭಾರತಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಇಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯಾಗಲಿ, ವಿಶ್ವ ಆರ್ಥಿಕ ವೇದಿಕೆಯಾಗಲಿ, ಐಎಂಎಫ್ ಆಗಲಿ, ವಿಶ್ವಬ್ಯಾಂಕ್ ಆಗಲಿ ಎಲ್ಲರೂ ಭಾರತವನ್ನು ನಾಯಕತ್ವಕ್ಕಾಗಿ ಎದಿರು ನೋಡುತ್ತಿವೆ. ಇದೆಲ್ಲವೂ ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಸೌರ ಶಕ್ತಿಯಲ್ಲಿ ಗುಜರಾತ್‌ ಮಾದರಿ ರಾಜ್ಯ

ಸೌರ ಶಕ್ತಿಯಲ್ಲಿ ಗುಜರಾತ್ ಒಂದು ಮಾದರಿ ರಾಜ್ಯವಾಗಿದೆ. ಇದು ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಿದೆ. ಗುಜರಾತ್ ಒಟ್ಟು ಇಂಧನ ಸಾಮರ್ಥ್ಯದ ಶೇ.57 ರಷ್ಟನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುತ್ತಿದ್ದರೆ, ಉಷ್ಣ ವಿದ್ಯುತ್‌ ಉತ್ಪಾದನೆ ಶೇ.43 ರಷ್ಟಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 3.85 ಲಕ್ಷ ವಿದ್ಯುತ್ ಸ್ಥಾಪನೆಗಳನ್ನು ಮಾಡಲಾಗಿದೆ. ಗುಜರಾತಿನಲ್ಲಿ ಇಂದು ಉದ್ಘಾಟಿಸಿದ ಸೌರ ಶಕ್ತಿ ಘಟಕ ಭಾರತವನ್ನು ಸೌರಶಕ್ತಿ ಕ್ಷೇತ್ರದಲ್ಲಿ ಜಾಗತಿಕ ಸೂಪರ್ ಪವರ್ ಮಾಡಲು ಕೊಡುಗೆ ನೀಡುತ್ತದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Karnataka Weather: ನಾಳೆ ದಕ್ಷಿಣ ಕನ್ನಡ, ಕೊಡಗು ಸೇರಿ ಈ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ

ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಗುಜರಾತ್ ಇಂಧನ ಮತ್ತು ಪೆಟ್ರೋಕೆಮಿಕಲ್ಸ್ ಸಚಿವ ಕನುಭಾಯಿ ದೇಸಾಯಿ, ಗೃಹ, ಕ್ರೀಡೆ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವ ಹರ್ಷಭಾಯಿ ಸಾಂಘ್ವಿ, ಪರಿಸರ, ಹವಾಮಾನ ಬದಲಾವಣೆ ಮತ್ತು ಜಲ ಸಂಪನ್ಮೂಲಗಳ ರಾಜ್ಯ ಸಚಿವ ಮುಖೇಶಭಾಯಿ ಪಟೇಲ್ ಮತ್ತು ಪಿ.ಪಿ.ಚೌಧರಿ ಉಪಸ್ಥಿತರಿದ್ದರು.