Pralhad Joshi: ಮುಡಾ ಹಗರಣದಲ್ಲಿ ಸಿಎಂಗೆ ಕ್ಲೀನ್ ಚಿಟ್ ನಿರೀಕ್ಷಿತ ಎಂದ ಪ್ರಲ್ಹಾದ್ ಜೋಶಿ
Pralhad Joshi: ಮುಡಾ ಹಗರಣದಲ್ಲಿ ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಸಿಬಿಐ ತನಿಖೆಯೇ ಸೂಕ್ತ. ಸಿದ್ದರಾಮಯ್ಯ ಅವರಿಗೆ ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ ಮಾನಿಟರಿಂಗ್ ಮೂಲಕ ತನಿಖೆಯಾಗಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನಿರೀಕ್ಷಿತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿದಾಗಲೇ ಇದನ್ನು ಹೇಳಿದ್ದೆವು ಎಂದ ಅವರು, ಲೋಕಾಯುಕ್ತ ನ್ಯಾಯಾಧೀಶರ ಮೇಲೆ ನಮಗೆ ವಿಶ್ವಾಸ, ಗೌರವವಿದೆ. ಆದರೆ, ಲೋಕಾಯುಕ್ತದಲ್ಲಿ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಹಂತದ ಅಧಿಕಾರಿಗಳ ಪೋಸ್ಟಿಂಗ್ ಸಿಎಂ ಕೈಯಲ್ಲೇ ಇರುವುದು. ಹಾಗಾಗಿ ತಮ್ಮ ತನಿಖೆಗೆ ಅನುಕೂಲ ಆಗುವವರನ್ನು ನಿಯೋಜಿಸಿಕೊಂಡಿದ್ದಾರೆ ಎಂದು ಅವರು ಜೋಶಿ ಆರೋಪಿಸಿದರು.
ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಿಎಂಗೆ ಅನುಕೂಲ ಆದಾಗ ವಿಚಾರಣೆಗೆ ಕರೆದಿದ್ದಾರೆ. ರಾತ್ರಿ ವೇಳೆ ಅಧಿಕಾರಿಗಳು ಭೇಟಿ ಆಗಿದ್ದಾರೆ ಎಂದು ಪ್ರಲ್ಹಾದ್ ಜೋಶಿ ದೂರಿದರು.
ಶುದ್ಧರು ಅನ್ನೋದಾದ್ರೆ ಸಿಬಿಐಗೆ ವಹಿಸಲಿ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅಷ್ಟೊಂದು ಶುದ್ಧ ಹಸ್ತರು ಎಂದಾದರೆ ಸಿಬಿಐ ತನಿಖೆಗೇ ವಹಿಸಲಿ ಎಂದು ಒತ್ತಾಯಿಸಿದ ಜೋಶಿ, ಹಿಂದೆಯೂ ಇದನ್ನೇ ಹೇಳಿದ್ದೇವೆ. ಆದರೆ, ಸಿಎಂ ಅದನ್ನು ಮಾಡುತ್ತಿಲ್ಲ ಎಂದು ಅವರು ದೂರಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ಉತ್ತರಿಸಬೇಕು: ಜೋಶಿ ಆಗ್ರಹ
ಮುಡಾ ಹಗರಣದಲ್ಲಿ ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಸಿಬಿಐ ತನಿಖೆಯೇ ಸೂಕ್ತ. ಸಿದ್ದರಾಮಯ್ಯ ಅವರಿಗೆ ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ ಮಾನಿಟರಿಂಗ್ ಮೂಲಕ ತನಿಖೆಯಾಗಲಿ ಎಂದು ಸಚಿವ ಜೋಶಿ ಹೇಳಿದರು.