MAMCOS Election: ಮ್ಯಾಮ್ಕೋಸ್ ಚುನಾವಣೆ: ಪಕ್ಷಗಳ ಜಿದ್ದಾಜಿದ್ದಿ, ಅರ್ಥವಾಗದ ರಾಜಕೀಯ ಹೇಳಿಕೆ!
MAMCOS Election: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮ್ಯಾಮ್ಕೋಸ್) ದ ಚುನಾವಣೆ ಫೆ. 4 ರಂದು ನಡೆಯಲಿದೆ. ಇಲ್ಲೂ ಕೂಡ ರಾಷ್ಟ್ರೀಯ ಪಕ್ಷಗಳ ನೇರ ಒಳಗೊಳ್ಳುವಿಕೆ ಇಲ್ಲದಿದ್ದರೂ, ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಿಗೆ, ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿಯೇ ಇದೆ.
| ವರದಿ: ಅರವಿಂದ್ ಸಿಗದಾಳ್, ಮೇಲುಕೊಪ್ಪ
ಗ್ರಾಮ ಪಂಚಾಯಿತಿ, ಸಹಕಾರಿ ಸಂಘಗಳ ಎಲೆಕ್ಷನ್ನಲ್ಲಿ ರಾಜಕೀಯ ಪಕ್ಷಗಳ ನೇರ ಒಳಗೊಳ್ಳುವಿಕೆ ಇರುವುದಿಲ್ಲ. ಪಕ್ಷಗಳ ಹೆಸರು, ಚಿಹ್ನೆಗಳು ಬ್ಯಾಲೆಟ್ ಪೇಪರ್ನಲ್ಲಿ ಇರುವುದಿಲ್ಲ. ಬ್ಯಾಲೆಟ್ ಪೇಪರ್ನಲ್ಲಿ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು, ಅಭ್ಯರ್ಥಿಯ ಫೋಟೋ ಮತ್ತು ಚುನಾವಣಾ ಆಯೋಗ ನೀಡುವ ಬೇರೆ ಬೇರೆ ಚಿಹ್ನೆಗಳು ಮಾತ್ರ ಇರುತ್ತವೆ. ಆದರೆ, ಗ್ರಾಮ ಪಂಚಾಯಿತಿ ಮತ್ತು ಸಹಕಾರಿ ಸಂಘಗಳ (MAMCOS Election) ಎಲೆಕ್ಷನ್ ನಡೆಯುವುದು ಪರೋಕ್ಷವಾಗಿ ಪ್ರಮುಖ ಪಕ್ಷಗಳ ಬೆಂಬಲಿತವಾಗಿಯೇ. ನೇರವಾಗಿ ಪಕ್ಷಗಳ ಹೆಸರಿಲ್ಲದಿದ್ದರೂ ಪಂಚಾಯಿತಿ ಮತ್ತು ಸಹಕಾರಿ ಸಂಘಗಳ ಅಧಿಕಾರದ ಫಲಿತಾಂಶ ಪ್ರಕಟವಾಗುವಾಗ ಅಧಿಕೃತ ಸುದ್ಧಿಯಾಗುವುದು ಬಿಜೆಪಿ ಮೇಲುಗೈ, ಕಾಂಗ್ರೆಸ್ ಸೋಲು, ಖಾತೆ ತೆರೆಯದ ದಳ ಅಥವಾ ಕಾಂಗ್ರೆಸ್ ಜಯ, ಬಹುಮತ ಪಡೆಯದ ಬಿಜೆಪಿ, ದಳದ ಪ್ರಾಬಲ್ಯ ಎಂಬಿತ್ಯಾದಿಯಾಗಿಯೇ.
ಅದರಂತೆ, ರಾಜ್ಯದ ಬಹುತೇಕ ಸಹಕಾರಿ ಸಂಘಗಳ ಚುನಾವಣೆ ನಡೆದಿದ್ದು ಫಲಿತಾಂಶ ಪ್ರಕಟವಾಗಿ, ವಿವಿಧ ಪಕ್ಷಗಳು ಮಿಶ್ರ ಪ್ರಾಬಲ್ಯದೊಂದಿಗೆ ಅಧಿಕಾರ ಹಿಡಿದಿವೆ. ಮಲೆನಾಡಿನ ದೈತ್ಯ ಸಹಕಾರಿ ಸಂಘಗಳಲ್ಲಿ ಒಂದಾದ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮ್ಯಾಮ್ಕೋಸ್) ದ ಚುನಾವಣೆ ಫೆ. 4 ರಂದು ನಡೆಯಲಿದೆ. ಇಲ್ಲೂ ಕೂಡ ರಾಷ್ಟ್ರೀಯ ಪಕ್ಷಗಳ ನೇರ ಒಳಗೊಳ್ಳುವಿಕೆ ಇಲ್ಲದಿದ್ದರೂ, ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಿಗೆ, ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿಯೇ ಇದೆ.
ಮ್ಯಾಮ್ಕೋಸ್ ಚುನಾವಣೆಗೆ ಕೇವಲ ಇನ್ನು ಒಂದು ದಿನದ ಪ್ರಚಾರಕ್ಕೆ ಅವಕಾಶ ಇದ್ದು, ಮ್ಯಾಮ್ಕೋಸ್ ಸದಸ್ಯರ ಮನೆಮನೆಗೆ ತೆರಳಿ ಮತ ಕೇಳುವ, ದೂರವಾಣಿ ಕರೆ ಮಾಡಿ ಮತ ಯಾಚಿಸುವ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
ಎರಡು ದಶಕಗಳಿಂದ ಮ್ಯಾಮ್ಕೋಸ್ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಹಿಡಿತದಲ್ಲಿದ್ದು, ಈ ಬಾರಿಯೂ ಬಿಜೆಪಿ ಮಿತ್ರಪಕ್ಷ ದಳದೊಂದಿಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಹಠದಲ್ಲಿ ತೀವ್ರತರ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಅಷ್ಟೇ ಜಿದ್ದಾಜಿದ್ದಿನಲ್ಲಿ ರಾಜ್ಯದಲ್ಲಿ ಅಸೆಂಬ್ಲಿಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವೂ ಪ್ರಚಾರದಲ್ಲಿ ಮುನ್ನುಗ್ಗಿದೆ.
ಮ್ಯಾಮ್ಕೋಸ್ನ ಎಲ್ಲಾ ಸದಸ್ಯರಿಗೆ ಓಟಿನ ಹಕ್ಕಿಲ್ಲ
ಮ್ಯಾಮ್ಕೋಸ್ ಸಂಸ್ಥೆಯಲ್ಲಿ 31,162 ಸದಸ್ಯರಿದ್ದರೂ, ಮತದಾನ ಮಾಡುವ ಅರ್ಹತೆ ಇರುವುದು ಕೇವಲ 11,750 ಸದಸ್ಯರಿಗೆ ಮಾತ್ರ. ಸಂಸ್ಥೆಯ ಬೈಲಾ ನಿಯಮಾವಳಿ ಪ್ರಕಾರ ಸಾಮಾನ್ಯ ಸಭೆಗೆ ನಿರಂತರ ಗೈರು ಹಾಜರಿ, ನಿರಂತರವಾಗಿ ವಾರ್ಷಿಕ ಕನಿಷ್ಟ ಅಡಿಕೆ ವಹಿವಾಟು ಮಾಡದಿರುವವರು ಮತದಾನದ ಅರ್ಹತೆಯನ್ನು ಕಳೆದುಕೊಂಡಿರುತ್ತಾರೆ.
ಕ್ಷೇತ್ರವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರತೀ ಮತದಾರ 19 ಜನರಿಗೆ ಮತ ನೀಡಲು ಹಕ್ಕುಳ್ಳವರಾಗಿರುತ್ತಾರೆ. ಮ್ಯಾಮ್ಕೋಸ್ ರಾಜ್ಯದ 18 ಜಿಲ್ಲೆಗಳಲ್ಲಿ ವ್ಯವಹಾರ ಮತ್ತು ಸದಸ್ಯರನ್ನು ಹೊಂದಿದ್ದು, 9 ಕಡೆಗಳಲ್ಲಿ ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲ್ಪಟ್ಟಿದೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ 19 ಉಮೇದುವಾರರು ಮತ್ತು ಕಾಂಗ್ರೆಸ್ ಬೆಂಬಲಿತ 19 ಉಮೇದುವಾರರು ಸ್ಪರ್ಧೆಯಲ್ಲಿದ್ದು, ಒಬ್ಬರು ಯಾವುದೇ ಪಕ್ಷದ ಬೆಂಬಲವಿಲ್ಲದ ನಿಜರ್ಥದಲ್ಲಿ ಸ್ವತಂತ್ರ ಉಮೇದುವಾರರಾಗಿ ಕಣದಲ್ಲಿದ್ದಾರೆ.
ಅರ್ಥವಾಗದ ರಾಜಕೀಯ ಹೇಳಿಕೆ!
ಮ್ಯಾಮ್ಕೋಸ್ ಚುನಾವಣೆ ಅಖಾಡ ರಂಗೇರುತ್ತಿದ್ದಂತೆ, ಪ್ರಚಾರದಲ್ಲಿ ಆರೋಪ, ಪ್ರತ್ಯಾರೋಪ, ಹೇಳಿಕೆಗಳೂ ಬಿಸಿ ಪಡೆಯುತ್ತಿದೆ. ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮ್ಯಾಮಕೋಸ್) ರೈತರಿಗೆ ಹತ್ತಿರವಾಗಬೇಕೆ ವಿನಾ ರಾಜಕಾರಣಿಗಳಿಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಅರ್ಥವಾಗದ ಹೇಳಿಕೆಯೊಂದು ಈಗ ಚರ್ಚೆಯಲ್ಲಿದೆ.
ಅವರು ಕಳೆದ ಶುಕ್ರವಾರ ಹಳೇಪೇಟೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಮ್ಕೋಸ್ ಇಷ್ಟು ವರ್ಷಗಳ ಕಾಲ ರಾಜಕಾರಣಿಗಳಿಗೆ ಹತ್ತಿರವಾಗಿತ್ತು. ಅದನ್ನು ತೆಗೆದುಹಾಕಿ ರೈತರಿಗೆ ಹತ್ತಿರವಾಗುವಂತಹ ಸಂಘವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಬಾರಿ ಪ್ರಯತ್ನ ನಡೆದಿದೆ. ತಮ್ಮ ಬೆಂಬಲಿತ 19 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಈ ಭಾಗದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಈ ಭಾಗದಲ್ಲಿ ಸ್ಪರ್ಧಿ ಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆ ಎಂದರು.
ಹೇಳಿಕೆ ಪತ್ರಿಕೆಯಲ್ಲಿ ಪ್ರಕಟವಾಗಿ, ಜಾಲತಾಣಗಳಲ್ಲಿ ಹರಡುತ್ತಿರುವಾಗ, ಸಚಿವರ ಹೇಳಿಕೆ ಒಂದು ಅರ್ಥವಾಗದ ಹೇಳಿಕೆ, ಅವರ ಹೇಳಿಕೆಯ ಮೊದಲ ವಾಕ್ಯಕ್ಕೂ ನಂತರದ ವಾಕ್ಯಗಳಿಗೂ ಸಂಬಂಧವೇ ಇಲ್ಲವಾಗಿದೆ. ಮ್ಯಾಮ್ಕೋಸ್ ರಾಜಕಾರಣಿಗಳಿಗೆ ಹತ್ತಿರವಾಗಿರಬಾರದು ಎಂದು ಹೇಳುತ್ತಲೇ, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಚುನಾವಣೆ ನಡೆಯುವ ಭಾಗದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಈ ಭಾಗದಲ್ಲಿ ಸ್ಪರ್ಧಿ ಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆ ಎಂದಿರುವುದು ಹಾಸ್ಯಾಸ್ಪದವಾಗಿದೆ ಎಂದು ಚರ್ಚೆಯಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Kisan Credit Card Loan: ರೈತರಿಗೆ ಬಜೆಟ್ನಲ್ಲಿ ಗುಡ್ನ್ಯೂಸ್; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ: ಹೀಗೆ ಅಪ್ಲೈ ಮಾಡಿ
ಮ್ಯಾಮ್ಕೋಸ್ ಚುನಾವಣೆ ಫೆ.4ರಂದು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಅಂದೇ ಶಿವಮೊಗ್ಗ ಮ್ಯಾಮ್ಕೋಸ್ ಕಟ್ಟಡದಲ್ಲಿ ಎಣಿಕೆಯಾಗಿ, ರಾತ್ರಿ ವೇಳೆ ಫಲಿತಾಂಶ ಪ್ರಕಟಣೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತದಾರರು ಮತದಾನಕ್ಕೆ ಬರುವಾಗ, ಮ್ಯಾಮ್ಕೋಸ್ ಸಂಸ್ಥೆಯ ಗುರುತಿನ ಕಾರ್ಡ್ ತರುವುದನ್ನು ಕಡ್ಡಾಯಗೊಳಿಸಿರುತ್ತದೆ.
ಒಟ್ಟಿನಲ್ಲಿ ಮ್ಯಾಮ್ಕೋಸ್ ಸಂಸ್ಥೆಯ ಚುನಾವಣೆಯ ವಿಷಯ ಮಲೆನಾಡಿನಲ್ಲಿ ಪ್ರಯಾಗರಾಜ್ ಕುಂಭಮೇಳ, ಕೇಂದ್ರ ಬಜೆಟ್ ಸುದ್ಧಿಯಷ್ಟೇ ಸೌಂಡ್ ಮಾಡ್ತಾ ಇದೆ.