Karnataka Bandh: ಕರ್ನಾಟಕ ಬಂದ್ ಯಾಕೆ? ನೀವು ತಿಳಿಯಬೇಕಾದ ಮಾಹಿತಿ
Karnataka Bandh: ಕಳೆದ ತಿಂಗಳು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಚಲಿಸುತ್ತಿದ್ದ ಬಸ್ಸಿನ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆಸಿದ್ದರು. ಇದನ್ನು ಪ್ರತಿಭಟಿಸಿ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ನೀಡದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಳಗಾವಿಯಲ್ಲಿ (Belagavi) ಕನ್ನಡಿಗ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು (Assault) ಪ್ರತಿಭಟಿಸಿ, ಕನ್ನಡ ಪರ ಸಂಘಟನೆಗಳು ಇಂದು (ಮಾರ್ಚ್ 22, ಶನಿವಾರ) ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ನೀಡಿರುವ ಕರ್ನಾಟಕ ಬಂದ್‌ಗೆ (Karnataka Bandh) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನಿರ್ವಾಹಕರ ಮೇಲೆ ಮರಾಠಿ ಮಾತನಾಡದ ಕಾರಣ ಇತ್ತೀಚೆಗೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿಚಾರ ಹಾಗೂ ಕನ್ನಡಿಗರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್ ಆಚರಿಸಲಾಗುತ್ತಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕೆಲ ಪ್ರಮುಖ ಸಂಘಟನೆಗಳೇ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸದೇ ದೂರ ಉಳಿದಿವೆ. ಇದರ ಮಧ್ಯೆ ಓಲಾ, ಉಬರ್ ಸೇರಿದಂತೆ ಹಲವು ವಾಹನಗಳ ಒಕ್ಕೂಟಗಳು ಬಂದ್‌ಗೆ ಬೆಂಬಲಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ನಮ್ಮ ಮೆಟ್ರೋ ಸಂಚರಿಸುತ್ತಾ ಎಂಬ ಗೊಂದಲ ಬೆಂಗಳೂರು ಸೇರಿದಂತೆ ರಾಜ್ಯದ ಜನರನ್ನು ಕಾಡುತ್ತಿವೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ತಿಳಿಸಿದ್ದರು. ಇದು ಸರಿಯಾದ ಕ್ರಮವಲ್ಲ ಎಂದು ಬಂದ್‌ಗೆ ಕರೆ ನೀಡಿದ ಸಂಘಟನೆಗಳಿಗೆ ನಾವು ಹೇಳಲು ಬಯಸುತ್ತೇವೆ. ಏಕೆಂದರೆ, ಈಗಾಗಲೇ ಶಾಲಾ ಮಕ್ಕಳ ಪರೀಕ್ಷೆಗಳು ಪ್ರಾರಂಭವಾಗಿರುವುದರಿಂದ ಬಂದ್ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದರು.
ಬೆಳಗಾವಿ ಮತ್ತು ರಾಜ್ಯದ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರು, ವ್ಯಾಪಾರ ವಹಿವಾಟು ಮತ್ತು ವಿದ್ಯಾರ್ಥಿಗಳ ಸಾಮಾನ್ಯ ದಿನಚರಿಯ ಮೇಲೆ ಬಂದ್ನಿಂದ ಪರಿಣಾಮ ಬೀರುವ ಸಾಧ್ಯತೆ ಇದೆ.
ಇಂದಿನ ಕರ್ನಾಟಕ ಬಂದ್‌ಗೆ ಖಾಕಿ ಕಟ್ಟೆಚ್ಚರ ಇರುತ್ತದೆ. ರಸ್ತೆಯಲ್ಲಿ ಮೆರವಣಿಗೆ ಅಥವಾ ಪ್ರತಿಭಟನೆ ಇಲ್ಲ. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಬಲವಂತವಾಗಿ ಬಂದ್ ಮಾಡಿದರೆ ಶಿಸ್ತುಕ್ರಮದ ಎಚ್ಚರಿಕೆಯನ್ನು ಪೊಲೀಸ್ ಕಮಿಷನರ್ ನೀಡಿದ್ದಾರೆ. ಈಗಾಗಲೇ ಬಂದ್ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್‌ಗೆ ಸುಪ್ರಿಂ ಕೋರ್ಟ್ ಗೈಡ್ ಲೈನ್ಸ್ ಮನವರಿಕೆ ಮಾಡಲಾಗಿದೆ.
ಕರ್ನಾಟಕ ಬಂದ್‌ಗೆ ಕಾರಣವೇನು?
ಕಳೆದ ತಿಂಗಳು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಚಲಿಸುತ್ತಿದ್ದ ಬಸ್ಸಿನ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆಸಿದ್ದರು. ಇದನ್ನು ಪ್ರತಿಭಟಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ಆಗಿದ್ದವು. ಪ್ರತಿಯಾಗಿ ಮಹಾರಾಷ್ಟ್ರದಲ್ಲಿ ಇನ್ನೂ ಕೆಲವು ಕೆಎಸ್‌ಆರ್‌ಟಿಸಿ ನೌಕರರಿಗೆ ಹಿಂಸೆ ಕೊಡಲಾಗಿತ್ತು. ಈ ಘಟನೆಗಳ ನಂತರ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಅಂತರರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಕಂಡಕ್ಟರ್ ಮೇಲಿನ ದಾಳಿಯು ಎರಡು ರಾಜ್ಯಗಳ ನಡುವಿನ ಭಾಷಾ ವಿವಾದಗಳ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಮರಾಠಿ ಪರ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಈ ಬಂದ್‌ಗೆ ಕರೆ ನೀಡಿದೆ.
ಇಂದು ಏನೇನಿದೆ, ಏನೇನಿಲ್ಲ?
ಬಸ್ ಸೇವೆಗಳು: ಕೆಎಸ್‌ಆರ್‌ಟಿಸಿ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಕ್ಕೂಟಗಳು ಬಂದ್‌ಗೆ ಬೆಂಬಲ ನೀಡಿದ್ದು, ಇದು ರಾಜ್ಯಾದ್ಯಂತ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು.
ಓಲಾ, ಉಬರ್: ಓಲಾ, ಉಬರ್‌ನಂತಹ ಕ್ಯಾಬ್ ಅಗ್ರಿಗೇಟರ್ಗಳು, ಕೆಲವು ರಿಕ್ಷಾ ಒಕ್ಕೂಟಗಳು ಸಹ ಬಂದ್‌ಗೆ ಬೆಂಬಲ ನೀಡಿವೆ. ಆದಾಗ್ಯೂ, ಮೆಟ್ರೋ, ರೈಲ್ವೆ ಮತ್ತು ವಿಮಾನ ನಿಲ್ದಾಣ ಸೇವೆಗಳು ಇರಲಿವೆ.
ಬ್ಯಾಂಕ್‌ಗಳು: ಇಂದು ಶನಿವಾರವಾದ್ದರಿಂದ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಕೆಲವು ಶಾಲೆಗಳು ಮತ್ತು ಕಾಲೇಜುಗಳಿಗೆ ಇಂದು ರಜೆ ಇರಬಹುದು, ಆದರೆ ಈ ವಿಚಾರವಾಗಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ.
ಸರ್ಕಾರಿ ಕಚೇರಿಗಳು: ಸರ್ಕಾರಿ ಕಚೇರಿಗಳು ಸಹ ತೆರೆದಿರುತ್ತವೆ. ಆರೋಗ್ಯ ಸೇವೆ ಅಥವಾ ಇತರ ಅಗತ್ಯ ಸೇವೆಗಳನ್ನು ಒದಗಿಸುವ ಎಲ್ಲವೂ ಕಾರ್ಯನಿರ್ವಹಿಸುತ್ತವೆ.
ಅಗತ್ಯ ವಸ್ತುಗಳ ಪೂರೈಕೆ: ಹಾಲು, ಅಗತ್ಯ ವಸ್ತುಗಳ ಪೂರೈಕೆ ಎಂದಿನಂತೆಯೇ ಇರಲಿದೆ.
ಇದನ್ನೂ ಓದಿ: Karnataka Bandh: ಅಖಂಡ ಕರ್ನಾಟಕ ಬಂದ್ ಆರಂಭ, ಅಂಗಡಿ ಮುಂಗಟ್ಟುಗಳು ಕ್ಲೋಸ್