Hosapete News: ವಿಜಯನಗರ ಜಿಲ್ಲಾ ನ್ಯಾಯಾಲಯ ಶೀಘ್ರ ಕಾರ್ಯಾರಂಭ; ಶಾಸಕ ಎಚ್.ಆರ್.ಗವಿಯಪ್ಪ
ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ನ್ಯಾಯಾಲಯ ಕಾರ್ಯಾರಂಭಕ್ಕೆ ತಾತ್ಕಾಲಿಕವಾಗಿ ನೀಡಿರುವ ತಹಶೀಲ್ದಾರ ಕಚೇರಿ ಆವರಣದ ಕಟ್ಟಡವನ್ನು ಜಿಲ್ಲಾ ಮಟ್ಟದ ನ್ಯಾಯಾಧೀಶರೊಂದಿಗೆ ಶಾಸಕ ಎಚ್.ಆರ್.ಗವಿಯಪ್ಪ ವೀಕ್ಷಿಸಿದರು. ʼʼನೂತನ ನ್ಯಾಯಾಲಯಕ್ಕೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲಾ ನ್ಯಾಯಾಧೀಶರು ಎಲ್ಲವನ್ನೂ ನಿರ್ವಹಿಸಲಿದ್ದಾರೆʼʼ ಎಂದು ತಿಳಿಸಿದರು.

ಕಟ್ಟಡ ಪರಿಶೀಲಿಸಿದ ಶಾಸಕ ಎಚ್.ಆರ್.ಗವಿಯಪ್ಪ.

ಹೊಸಪೇಟೆ: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ನ್ಯಾಯಾಲಯ ಕಾರ್ಯಾರಂಭಕ್ಕೆ ತಾತ್ಕಾಲಿಕವಾಗಿ ನೀಡಿರುವ ತಹಶೀಲ್ದಾರ ಕಚೇರಿ ಆವರಣದ ಕಟ್ಟಡವನ್ನು ಜಿಲ್ಲಾ ಮಟ್ಟದ ನ್ಯಾಯಾಧೀಶರೊಂದಿಗೆ ಶಾಸಕ ಎಚ್.ಆರ್.ಗವಿಯಪ್ಪ (HR Gaviyappa) ವೀಕ್ಷಿಸಿದರು (Hosapete News). ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ʼʼತಾಲೂಕು ಕಚೇರಿಯ ಹಳೆಯ ಕಟ್ಟಡವನ್ನು ಸದ್ಯಕ್ಕೆ ಜಿಲ್ಲಾ ನ್ಯಾಯಾಲಯ ಕಾರ್ಯಾರಂಭಕ್ಕೆ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ನ್ಯಾಯಾಲಯದ ಸಂಕೀರ್ಣ ನಿರ್ಮಾಣವಾಗುವವರೆಗೆ ಇಲ್ಲಿ ನ್ಯಾಯಾಲಯ ಕಾರ್ಯವನ್ನು ನಡೆಸಲಾಗುತ್ತದೆ. ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನು 2 ವರ್ಷ ಅಗತ್ಯವಿದೆʼʼ ಎಂದರು.
ನೇಮಕಾತಿ ಪ್ರತಿಕ್ರಿಯೆ
ʼʼನೂತನ ನ್ಯಾಯಾಲಯಕ್ಕೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲಾ ನ್ಯಾಯಾಧೀಶರು ಎಲ್ಲವನ್ನೂ ನಿರ್ವಹಿಸಲಿದ್ದಾರೆ. ಜಿಲ್ಲಾ ನ್ಯಾಯಾಲಯ ಸೇರಿ ಕಟ್ಟಡ ಸಹಿತ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ತಕ್ಷಣವೇ 200 ಕೋಟಿ ರೂ.ಗಿಂತ ಹೆಚ್ಚು ಅನುದಾನದ ಅಗತ್ಯವಿದೆ.ಇದನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಕೆಆರ್‌ಡಿಬಿ ಅನುದಾನವನ್ನು ಸಹ ಇಲ್ಲಿಗೆ ನೀಡುವಂತೆ ಆಗ್ರಹಿಸಲಾಗಿದೆʼʼ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥಸ್ವಾಮಿ ಎಚ್.ಎಂ., ಖಜಾಂಚಿ ಮರಿಯಪ್ಪ, ವಕೀಲರಾದ ಎ.ಕರುಣಾನಿಧಿ, ಕಟುಗೆ ಜಂಬಯ್ಯ, ಗುಜ್ಜಲ ನಾಗರಾಜ್, ಚಂದ್ರಶೇಖರ್ ಪಿ.ಯಲ್ಗೂಡು ಮತ್ತಿತರರು ಭಾಗವಹಿಸಿದ್ದರು.
ಹಂಪಿ ಉತ್ಸವ ಆಚರಣೆಗೆ ಸಿದ್ಧತೆ
ವಿಜಯನಗರ: ʼʼಫೆ. 28, ಮಾ.1 ಮತ್ತು 2ರಂದು 3 ದಿನಗಳ ಕಾಲ ಜರಗುವ ಹಂಪಿ ಉತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದೆ. ಯಶಸ್ವಿಯಾಗಿ ಉತ್ಸವ ನಡೆಸಲು ಭರದ ಸಿದ್ಧತೆ ನಡೆಯುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 20 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆʼʼ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಂಪಿ ಉತ್ಸವ 2025ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ʼʼಈ ಸಮಿತಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಗಿದೆ. ಯಾವುದೇ ಚ್ಯುತಿ ಬಾರದಂತೆ ನಿಗಾವಹಿಸಬೇಕುʼʼ ಎಂದು ಕರೆ ನೀಡಿದರು.
ʼʼಹಿಂದಿನ ಬಾರಿಯಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿಯೊಂದಕ್ಕೂ ಜಿಲ್ಲಾಧಿಕಾರಿ ಅನುಮತಿ ಬೇಕೆಂದು ಕಾಯದೇ, ವಿವೇಚನಾಯುಕ್ತವಾಗಿ ಕಾರ್ಯ ನಿರ್ವಹಿಸಬೇಕು. ಸಮಿತಿಗಳ ಅಧ್ಯಕ್ಷರು ಕೇಳುವ ಎಲ್ಲ ಸವಲತ್ತುಗಳನ್ನು ತಪ್ಪದೇ ಇತರ ಸಮಿತಿಗಳು ಒದಗಿಸಬೇಕುʼʼ ಎಂದರು.
ಈ ಸುದ್ದಿಯನ್ನೂ ಓದಿ: Hampi Utsav 2025: ಫೆ. 28ರಿಂದ ಹಂಪಿ ಉತ್ಸವ; 4 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ: ಡಿಸಿ ದಿವಾಕರ್ ಮಾಹಿತಿ
ʼʼಪ್ರತಿ ಬಾರಿಯಂತೆ ಈ ಸಲವೂ ಕೈಗಾರಿಕೆ, ಕೃಷಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಮತ್ಸ್ಯ ಮೇಳ, ಪುಸ್ತಕ ಪ್ರದರ್ಶನ, ಚಿತ್ರಕಲೆ, ಶಿಲ್ಪಕಲಾ ಪ್ರದರ್ಶನ, ಶ್ವಾನ, ಕುರಿ, ಎತ್ತುಗಳ ಸ್ಪರ್ಧೆ ಏರ್ಪಡಿಸಬೇಕು. ಕವಿಗೋಷ್ಠಿ, ಮಹಿಳಾ ವಿಚಾರ ಸಂಕಿರಣ ಹಾಗೂ ಹಂಪಿ ಇತಿಹಾಸ ಕುರಿತು ಗೋಷ್ಠಿಗಳ ಉದ್ಘಾಟನೆಗೆ ನಾಡಿನ ಪ್ರಖ್ಯಾತ ಕವಿಗಳು, ಸಂಪನ್ಮೂಲ ವ್ಯಕ್ತಿಗಳು, ಇತಿಹಾಸ ತಜ್ಞರನ್ನು ಆಹ್ವಾನಿಸಬೇಕುʼʼ ಎಂದು ಡಿಸಿ ಹೇಳಿದರು.