Murder Case: 30 ಸಾವಿರ ರೂ. ಸಾಲ ಮರುಪಾವತಿ ಮಾಡದ್ದಕ್ಕೆ ಯುವಕನ ಕೊಲೆ!
Yadgir News: ಯಾದಗಿರಿ ನಗರದ ಲಾಡಿಸ್ ಗಲ್ಲಿಯಲ್ಲಿ ಘಟನೆ ನಡೆದಿದೆ. ಸಾಲ ಮರು ಪಾವತಿಸದ ಹಿನ್ನೆಲೆ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ಯುವಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.


ಯಾದಗಿರಿ: ಕೊಟ್ಟ ಸಾಲ ಸಕಾಲಕ್ಕೆ ಮರು ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಯುವಕನ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ (Murder Case) ನಗರದಲ್ಲಿ ನಡೆದಿದೆ. ನಗರದ ಲಾಡಿಸ್ ಗಲ್ಲಿಯ ಯುವಕ ಖಾಸೀಂ (28) ಮೃತ ದುರ್ದೈವಿಯಾಗಿದ್ದು, ಯಾಸಿನ್ ಹತ್ಯೆಗೈದ ಆರೋಪಿಯಾಗಿದ್ದಾನೆ.
ಪ್ರಕರಣದ ವಿವರ
ಆರೋಪಿ ಯಾಸಿನ್ ಬಳಿ ಖಾಸೀಂ 30 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಹೀಗಾಗಿ ಕಳೆದ ಜ. 19ರಂದು 35 ಸಾವಿರ ರೂ. ಸಾಲ ಮರು ಪಾವತಿಸಬೇಕಿತ್ತು. ಆದರೆ, ದುಡ್ಡು ವಾಪಸ್ ಕೊಡಲು ಸಾಧ್ಯವಾಗದೆ, ಇನ್ನಷ್ಟು ದಿನ ಸಮಯ ಕೇಳಿದ್ದ. ಈ ಕಾರಣಕ್ಕೆ ಖಾಸೀಂ ಮೇಲೆ ಯಾಸಿನ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಗಾಯಗೊಂಡ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸೀಂ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪ್ರತಿಕ್ರಿಯಿಸಿ, 'ಯಾಸೀನ್ ಬಳಿ ಖಾಸೀಂ 30 ಸಾವಿರ ಸಾಲ ಪಡೆದಿದ್ದ. ಆದರೆ, ಹಿಂತಿರುಗಿಸಿಲ್ಲ ಎನ್ನುವ ಕಾರಣಕ್ಕೆ ಹಲ್ಲೆ ನಡೆದಿದೆ. ನಾಲ್ಕು ದಿನಗಳ ನಂತರ ಖಾಸೀಂ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಸುದ್ದಿಯನ್ನೂ ಓದಿ | Self Harming: ಪತ್ನಿಯ ಮನೆಯಲ್ಲಿ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಸಾಲದ ಬಾಧೆ, ಮಂತ್ರಿ ಮಾಲ್‌ನ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು: ಸಾಲದ ಬಾಧೆಯಿಂದ (Debt) ಬೇಸತ್ತು ಆತ್ಮಹತ್ಯೆ (Self harming) ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ (Bengaluru news) ಅಂಥ ಮತ್ತೊಂದು ಆತ್ಮಹತ್ಯೆ ಪ್ರಕರಣ (Crime news) ವರದಿಯಾಗಿದೆ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು, ಸಾಲದಿಂದ ಬೇಸತ್ತು ಬೆಂಗಳೂರಿನ ಮಲ್ಲೇಶ್ವರ ಬಳಿ ಇರುವ ಮಂತ್ರಿ ಮಾಲ್‌ನ (Mantri Mall) 2ನೇ ಮಹಡಿಯಿಂದ ಜಿಗಿದು ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತುಮಕೂರು ಜಿಲ್ಲೆಯ ತಿಪಟೂರಿನ ನಿವಾಸಿ ಟಿ.ಸಿ. ಮಂಜುನಾಥ್ (55) ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ 9ರ ಸುಮಾರಿಗೆ ಮಾಲ್‌ನಲ್ಲಿ ಹೆಚ್ಚಿನ ಗ್ರಾಹಕರು ಇದ್ದರು. ಅದೇ ವೇಳೆ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುನಾಥ್ ಅವರು ಬ್ಯಾಂಕ್ ಸೇರಿದಂತೆ ವಿವಿಧೆಡೆ ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.