Belagavi Assault Case: ಮಹಾರಾಷ್ಟ್ರ ಬಳಿಕ ಕರ್ನಾಟಕದಿಂದಲೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ
Belagavi Assault Case: ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪ್ರತಿಭಟನೆ ನಡೆಸಿ, ರಾಜ್ಯದ ಬಸ್‌ಗಳಿಗೆ ಕಪ್ಪು ಮಸಿ ಮಳಿದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಾಗಕ್ಕೆ ಹೊರಡುವ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ.


ಚಿಕ್ಕೋಡಿ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಪ್ರಕರಣ (Belagavi Assault Case) ಇದೀಗ ತೀವ್ರ ಸ್ವರೂಪ ಪಡೆಯುತ್ತಿದೆ. ಘಟನೆ ಖಂಡಿಸಿ ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್ ಹಾಗೂ ಚಾಲಕನಿಗೆ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದ್ದರು. ಈ ನಡುವೆ ಕೊಲ್ಹಾಪುರದಲ್ಲಿ ಶಿವಸೇನೆ ಭಾರಿ ಪ್ರತಿಭಟನೆ ನಡೆಸಿ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೊರಟ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು, ಮಸಿ ಬಳಿದಿದ್ದರು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕಕ್ಕೆ ಬರುತ್ತಿದ್ದ ಎಲ್ಲಾ ಬಸ್‌ಗಳ ಸಂಚಾರವನ್ನು ಮಹಾರಾಷ್ಟ್ರ ಸ್ಥಗಿತಗೊಳಿಸಿತ್ತು. ಇದೀಗ ಮಹಾರಾಷ್ಟ್ರ ಭಾಗಕ್ಕೆ ಹೊರಡುವ ರಾಜ್ಯದ ಕೆಎಸ್‌ಆರ್‌ಟಿಸ್ ಬಸ್‌ಗಳನ್ನೂ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಸರ್ಕಾರಿ ಬಸ್ ಸಂಚಾರ ನೆನ್ನೆಯಿಂದ ಬಂದ್ ಆಗಿದ್ದು, ಇಂದು ಕೂಡ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೊಲ್ಲಾಪುರದಲ್ಲಿ ಶಿವಸೇನೆ ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣವಾಗಿದೆ. ನಿಪ್ಪಾಣಿ, ಚಿಕ್ಕೋಡಿ, ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರಕ್ಕೆ ಹೋಗುವ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಈ ಮಾರ್ಗದಲ್ಲಿ 120 ಬಸ್‌ಗಳು ಸಂಚರಿಸುತ್ತಿದ್ದವು. ಕರ್ನಾಟಕದಿಂದ ಕೊಲ್ಲಾಪುರ, ಇಂಚಲಕರಂಜಿ ಸೇರಿದಂತೆ ಗಡಿ ಗ್ರಾಮಗಳಿಗೆ ತೆರಳುತ್ತಿದ್ದ 120 ಬಸ್‌ಗಳ ಸಂಚಾರವನ್ನು ಸಾರಿಗೆ ಇಲಾಖೆ ಸ್ಥಗಿತಗೊಳಿಸಿದೆ.
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನೆ ಪ್ರತಿಭಟನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಾಗಕ್ಕೆ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಮಹಾರಾಷ್ಟ್ರದಿಂದಲೂ ಬಸ್ ಸೇವೆ ಸ್ಥಗಿತಗೊಂಡಿದೆ.
ಈ ಸುದ್ದಿಯನ್ನೂ ಓದಿ | Road Accident: ಅಥಣಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ತಂದೆ-ಮಗಳ ದುರ್ಮರಣ
ಮಹಾರಾಷ್ಟ್ರ ಚಾಲಕನಿಗೆ ಮಸಿ; 10 ಮಂದಿ ಬಂಧನ
ಚಿತ್ರದುರ್ಗ: ಮರಾಠಿ ಮಾತನಾಡಲು ಬರುವುದಿಲ್ಲ ಎಂದಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ಹಿರಿಯೂರು ತಾಲೂಕಿನ ಗುಯಿಲಾಳ ಟೋಲ್ ಬಳಿ ಮಹಾರಾಷ್ಟ್ರ ಬಸ್ ತಡೆದು ಚಾಲಕನಿಗೆ ಮಸಿ ಬಳಿದಿದ್ದರು. ಘಟನೆ ಸಂಬಂಧ ಐಮಂಗಲ ಠಾಣೆ ಪೊಲೀಸರು ಶನಿವಾರ 10 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮರಾಠಿಗರು ಪುಂಡಾಟ ನಡೆಸಿದ್ದಾರೆ ಎಂದು ಆರೋಪಿಸಿ ನವನಿರ್ಮಾಣ ಸೇನೆ ಸದಸ್ಯರು ರಾಷ್ಟ್ರೀಯ ಹೆದ್ದಾರಿ- 48ರ ಪ್ರತಿಭಟನೆ ನಡೆಸಿದ್ದರು. ಮಹಾರಾಷ್ಟ್ರ ಸಾರಿಗೆ ಬಸ್ ತಡೆದು, ಬಸ್‌ಗೆ ಕಪ್ಪು ಬಣ್ಣದ ಸ್ಪ್ರೇ ಸಿಂಪಡಿಸಿ, ಬಸ್ ಚಾಲಕ ಹರಿ ಜಾದವ್ ಮುಖಕ್ಕೂ ಮಸಿ ಬಳಿದಿದ್ದರು. ಚಾಲಕ ಐಮಂಗಲ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡ ಲಕ್ಷ್ಮಿಕಾಂತ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.