ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WIM vs INDM: ವಿಂಡೀಸ್‌ ಮಣಿಸಿ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದ ಭಾರತ

International Masters League: ಬಿರುಸಿನ ಬ್ಯಾಟಿಂಗ್‌ ನಡೆಸಿದ ರಾಯುಡು 34 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 50 ಎಸೆತಗಳಿಂದ 74 ರನ್‌ ಸಿಡಿಸಿದರು. ಸಿಡಿದದ್ದು 9 ಬೌಂಡರಿ ಮತ್ತು 3 ಸಿಕ್ಸರ್‌. ರಾಯುಡು ವಿಕೆಟ್‌ ಪತನದ ಬಳಿಕ ಬಂದ ಯೂಸುಫ್ ಪಠಾಣ್‌ ಶೂನ್ಯಕ್ಕೆ ಔಟಾದರು.

ವಿಂಡೀಸ್‌ ಮಣಿಸಿ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದ ಭಾರತ

Profile Abhilash BC Mar 16, 2025 11:11 PM

ರಾಯ್‌ಪುರ: ಅಂಬಾಟಿ ರಾಯುಡು ಅರ್ಧಶತಕ(74) ಮತ್ತು ಕನ್ನಡಿಗ ವಿನಯ್ ಕುಮಾರ್(26ಕ್ಕೆ 3) ಅವರ ಬೌಲಿಂಗ್‌ ನೆರವಿಂದ ಚೊಚ್ಚಲ ಆವೃತ್ತಿಯ ಅಂತಾರಾಷ್ಟ್ರೀಯ ಮಾಸ್ಟರ್ ಟಿ20 ಲೀಗ್‌ನಲ್ಲಿ ಇಂಡಿಯಾ ಮಾಸ್ಟರ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಮಾಸ್ಟರ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಮಣಿಸುವ ಮೂಲಕ ಈ ಸಾಧನೆಗೈದಿತು.

ಇಲ್ಲಿನ ಶಹೀದ್‌ ವೀರ್‌ ನಾರಾಯಣ ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸ್‌, ಲೆಂಡ್ಲ್‌ ಸಿಮನ್ಸ್‌(57) ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 148 ರನ್‌ ಬಾರಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ ಬಿರುಸಿನ ಬ್ಯಾಟಿಂಗ್‌ ಮೂಲಕ 17.1 ಓವರ್‌ನಲ್ಲಿ 4 ವಿಕೆಟ್‌ನಷ್ಟಕ್ಕೆ 149 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ರಾಯುಡು ಆರ್ಭಟ

ಚೇಸಿಂಗ್‌ ವೇಳೆ ಅಂಬಾಟಿ ರಾಯುಡು ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಗೆ ನಾಯಕ ಸಚಿನ್‌ ತೆಂಡೂಲ್ಕರ್‌ ಕೂಡ ಉತ್ತಮ ಸಾಥ್‌ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 67 ರನ್‌ ಒಟ್ಟುಗೂಡಿಸಿತು. ಸಚಿನ್‌ 18 ಎಸೆತಗಳಿಂದ 25 ರನ್‌ ಬಾರಿಸಿ ಟಿನೋ ಬೆಸ್ಟ್‌ಗೆ ವಿಕೆಟ್‌ ಒಪ್ಪಿಸಿದರು.

ಬಿರುಸಿನ ಬ್ಯಾಟಿಂಗ್‌ ನಡೆಸಿದ ರಾಯುಡು 34 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 50 ಎಸೆತಗಳಿಂದ 74 ರನ್‌ ಸಿಡಿಸಿದರು. ಸಿಡಿದದ್ದು 9 ಬೌಂಡರಿ ಮತ್ತು 3 ಸಿಕ್ಸರ್‌. ರಾಯುಡು ವಿಕೆಟ್‌ ಪತನದ ಬಳಿಕ ಬಂದ ಯೂಸುಫ್ ಪಠಾಣ್‌ ಶೂನ್ಯಕ್ಕೆ ಔಟಾದರು. ಗುರ್ಕೀರತ್ ಸಿಂಗ್ ಮಾನ್(14) ರನ್‌ ಗಳಿಸಿದರು. ವಿಂಡೀಸ್‌ ಪರ ಆಶ್ಲೇ ನರ್ಸ್ 2 ವಿಕೆಟ್‌ ಕಿತ್ತರು. ಅಂತಿಮವಾಗಿ ಯುವರಾಜ್‌ ಸಿಂಗ್‌ ಅಜೇಯ 13 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.



ಸಿಮನ್ಸ್‌ ಅರ್ಧಶತಕ ವ್ಯರ್ಥ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ಪರ ಆರಂಭಿಕ ಆಟಗಾರ ಡ್ವೇನ್‌ ಸ್ಮಿತ್‌ ಮತ್ತು ಲೆಂಡ್ಲ್‌ ಸಿಮನ್ಸ್‌ ಹೊರತುಪಡಿಸಿ ಉಳಿದವರೆಲ್ಲರೂ ವಿಫಲರಾದರು. ಒಟ್ಟಾರೆ ತಂಡದ ಪರ ಎರಡಂಕಿ ಮೊತ್ತ ಕಲೆ ಹಾಕಿದ್ದು ಕೇವಲ ಮೂವರು ಮಾತ್ರ. ಡ್ವೇನ್‌ ಸ್ಮಿತ್‌ 35 ಎಸೆತಗಳಿಂದ 45(6 ಬೌಂಡರಿ, 2 ಸಿಕ್ಸರ್‌) ಬಾರಿಸಿದರೆ, ಸಿಮನ್ಸ್‌ 5 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 57 ರನ್‌ ಬಾರಿಸಿ ಅರ್ಧಶತಕ ಪೂರೈಸಿದರು. ಉಭಯ ಆಟಗಾರರು ಕೂಡ ನಿಂತು ಆಡದಿದ್ದರೆ ತಂಡ ನೂರರ ಒಳಗೆ ಗಂಟು ಮೂಟೆ ಕಟ್ಟುತ್ತಿತ್ತು. ನಾಯಕ ಲಾರಾ 6 ರನ್‌ಗೆ ಸೀಮಿತರಾದರು.

ಭಾರತ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಕನ್ನಡಿಗ ವಿನಯ್ ಕುಮಾರ್ 26 ರನ್‌ಗೆ 3 ವಿಕೆಟ್‌ ಉರುಳಿಸಿದರು. ಶಹಬಾಜ್ ನದೀಮ್ 2, ಪವನ್‌ ನೇಗಿ ಮತ್ತು ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್‌ ಪಡೆದರು.