Chandrasheratanaya Column: ಬೆಂದು ಬೇಂದ್ರೆಯಾದ ಅಂಬಿಕಾತನಯದತ್ತ !
ಬೇಂದ್ರೆಯವರ ‘ನಾಕುತಂತಿ’ ಕೃತಿಗೆ ‘ಜ್ಞಾನಪೀಠ’ ಪುರಸ್ಕಾರ ಸಿಕ್ಕಾಗಲಂತೂ ಅವರ ಅಭಿಮಾನಿ ಗಳು ಹಿರಿಹಿರಿ ಹಿಗ್ಗಿದ್ದುಂಟು. ಅಂತೆಯೇ ರಾಜ್ಯದ ಹಲವೆಡೆ ಬೇಂದ್ರೆಯವರಿಗೆ ಅಭಿನಂದನಾ ಸಮಾರಂಭ ಗಳು ನಡೆದಿದ್ದುಂಟು. ಇಂಥ ವೇಳೆ, ಇದು ತಮ್ಮದೇ ಮನೆಯ ಸಮಾರಂಭವೇನೋ ಎಂಬಷ್ಟರ ಮಟ್ಟಿ ಗಿನ ಅಭಿಮಾನವಿಟ್ಟುಕೊಂಡು ಜನರು ಅಪಾರ ಸಂಖ್ಯೆಯಲ್ಲಿ ಜಮಾವಣೆ ಗೊಂಡು ಬೇಂದ್ರೆಯವ ರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುತ್ತಿದ್ದುದುಂಟು ಮತ್ತು ಅವರ ರುಚಿಕಟ್ಟಾದ ಮಾತುಗಳಿಗೆ ಕಿವಿ ಯಾಗುತ್ತಿದ್ದುದುಂಟು
![ಬೆಂದು ಬೇಂದ್ರೆಯಾದ ಅಂಬಿಕಾತನಯದತ್ತ !](https://cdn-vishwavani-prod.hindverse.com/media/original_images/D_R_B_ok.jpg)
![Profile](https://vishwavani.news/static/img/user.png)
ಒಂದ್ಸಲಾ ಏನಾಯ್ತಪ್ಪಾ ಅಂದ್ರೇ...
ಚಂದ್ರಶೇಖರತನಯ
‘ಇಳಿದು ಬಾ ತಾಯಿ ಇಳಿದು ಬಾ’, ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’, ‘ನೀ ಹೀಂಗ ನೋಡಬ್ಯಾಡ ನನ್ನಾ’, ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದಾ..’ ಇಂಥ ನೂರಾರು ಅನುಪಮ ಗೀತೆಗಳನ್ನು ಕನ್ನಡ ಕುಲಕೋಟಿಗೆ ಕಟ್ಟಿಕೊಟ್ಟವರು ‘ಅಂಬಿಕಾತನಯ ದತ್ತ’ ಕಾವ್ಯನಾಮದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಅಭಿಮಾನಿಗಳ ಪಾಲಿಗೆ ಇವರು ‘ವರಕವಿ’ ದ.ರಾ.ಬೇಂದ್ರೆ. ‘ಬದುಕಲ್ಲಿ ಬೆಂದರೆ ಬೇಂದ್ರೆ ಆಕ್ತೀಯೆ’ ಎಂಬುದಾಗಿ ಹಿರಿಯರು ಚಿಕ್ಕವ ರಿಗೆ ಬೇಂದ್ರೆಯವರ ಬದುಕನ್ನೇ ಉದಾಹರಣೆಯಾಗಿ ನೀಡುವಷ್ಟರ ಮಟ್ಟಿಗೆ ಬೇಂದ್ರೆಯವರದ್ದು ಶುರುವಿನಿಂದಲೂ ಬವಣೆಯ ಬದುಕೇ. ಆದರೆ ಕಿತ್ತು ತಿನ್ನುವ ಬಡತನದ ನಡುವೆಯೂ ಕುಟುಂಬ ಸದಸ್ಯರಲ್ಲಿ ಪ್ರೀತಿಯ ಸೆಲೆಯನ್ನೇ ಉಕ್ಕಿಸಿದವರು ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ ಅನರ್ಘ್ಯ ರತ್ನಗಳನ್ನು ನೀಡಿದವರು ಬೇಂದ್ರೆ ಕಾಕಾ!
ಬೇಂದ್ರೆಯವರ ‘ನಾಕುತಂತಿ’ ಕೃತಿಗೆ ‘ಜ್ಞಾನಪೀಠ’ ಪುರಸ್ಕಾರ ಸಿಕ್ಕಾಗಲಂತೂ ಅವರ ಅಭಿಮಾನಿ ಗಳು ಹಿರಿಹಿರಿ ಹಿಗ್ಗಿದ್ದುಂಟು. ಅಂತೆಯೇ ರಾಜ್ಯದ ಹಲವೆಡೆ ಬೇಂದ್ರೆಯವರಿಗೆ ಅಭಿನಂದನಾ ಸಮಾರಂಭಗಳು ನಡೆದಿದ್ದುಂಟು. ಇಂಥ ವೇಳೆ, ಇದು ತಮ್ಮದೇ ಮನೆಯ ಸಮಾರಂಭವೇನೋ ಎಂಬಷ್ಟರ ಮಟ್ಟಿಗಿನ ಅಭಿಮಾನವಿಟ್ಟುಕೊಂಡು ಜನರು ಅಪಾರ ಸಂಖ್ಯೆಯಲ್ಲಿ ಜಮಾವಣೆ ಗೊಂಡು ಬೇಂದ್ರೆಯವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳುತ್ತಿದ್ದುದುಂಟು ಮತ್ತು ಅವರ ರುಚಿಕಟ್ಟಾದ ಮಾತುಗಳಿಗೆ ಕಿವಿಯಾಗುತ್ತಿದ್ದುದುಂಟು.
ಇದನ್ನೂ ಓದಿ: Dr N Someshwara Column: ಇಂಥ ಮಕ್ಕಳನ್ನು ಹೆರದಿರುವುದು ಕೂಡ ಸಮಾಜಸೇವೆಯೇ !
ಬೇಂದ್ರೆಯವರ ಖ್ಯಾತಿ, ಸಾಹಿತ್ಯಿಕ ಪ್ರತಿಭೆ- ಪ್ರಭೆಯನ್ನು ಮನಗಂಡ ಮೈಸೂರು ವಿಶ್ವವಿದ್ಯಾಲಯ 1966ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದರೆ, ಬನಾರಸ್ ಹಿಂದೂ ವಿಶ್ವ ವಿದ್ಯಾಲಯವೂ ಇದೇ ಹೆಜ್ಜೆಗುರುತನ್ನು ಅನುಸರಿಸಿತು.
ನಂತರವಷ್ಟೇ, ಕರ್ನಾಟಕ ವಿಶ್ವವಿದ್ಯಾಲಯವೂ ಬೇಂದ್ರೆಯವರಿಗೆ ಗೌರವ ಡಾಕ್ಟರೇಟ್ ನೀಡಲು 1968ರಲ್ಲಿ ನಿರ್ಧರಿಸಿತಂತೆ. ಆದರೆ ಈ ಸಂಬಂಧವಾಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಯುವಾಗ ಕೆಲ ಸದಸ್ಯರು ‘ಅವರಿಗ್ಯಾಕೆ ಮತ್ತೊಂದು ಡಾಕ್ಟರೇಟ್?’ ಎಂಬ ಧಾಟಿಯಲ್ಲಿ ಅಪಸ್ವರ ಹಾಡಿಬಿಟ್ಟರಂತೆ.
‘ಅತ್ತೂ ಕರೆದೂ ಔತಣಕ್ಕೆ ಕರೆಸಿಕೊಳ್ಳುವ’ ಜಾಯಮಾನ ದವರಲ್ಲದ, ಕಿತ್ತು ತಿನ್ನುವ ಬಡತನ ವಿದ್ದರೂ ಸ್ವಾಭಿಮಾನಕ್ಕೇನೂ ಕೊರತೆಯಿಲ್ಲದವರಾಗಿದ್ದ ಬೇಂದ್ರೆಯವರಿಗೆ ಕೆಲ ಸಿಂಡಿಕೇಟ್ ಸದಸ್ಯರ ಈ ವರ್ತನೆಯಿಂದ ಬೇಸರವಾಗಿದ್ದು ಹೌದಾದರೂ, ಅದಕ್ಕೆ ಉತ್ತರಿಸಲು ಸಮಯವಿನ್ನೂ ಪಕ್ವವಾಗಿಲ್ಲ ಎಂದು ಮೌನವಾಗಿದ್ದರು. ಆ ವರ್ಷದ ನವೆಂಬರ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾ ಲಯದ ಘಟಿಕೋತ್ಸವ ಕಾರ್ಯಕ್ರಮ ಆಯೋಜನೆಯಾಯಿತು, ಅದರಲ್ಲಿ ಪಾಲ್ಗೊಂಡ ಬೇಂದ್ರೆಯ ವರು ಗೌರವ ಡಾಕ್ಟರೇಟ್ ಪುರಸ್ಕಾರವನ್ನು ವಿನಯಪೂರ್ವಕವಾಗಿಯೇ ಸ್ವೀಕರಿಸಿದ್ದೂ ಆಯಿತು.
ಪುರಸ್ಕೃತರು ನಾಲ್ಕು ಮಾತಾಡದಿದ್ದರೆ ಹೇಗೆ? ಅದರಲ್ಲೂ ವೇದಿಕೆ ಮೇಲಿದ್ದುದು ತಮ್ಮ ಚಿತ್ತಾ ಕರ್ಷಕ ದನಿಗೆ ಮತ್ತು ಮಾತಿಗೆ ಹೆಸರಾಗಿದ್ದ ‘ಬೇಂದ್ರೆ ಕಾಕಾ’ ಎಂಬ ಚುಂಬಕ! ಮಾತಿಗೆ ನಿಲ್ಲದಿದ್ದರೆ ಅಭಿಮಾನಿಗಳು ಬಿಟ್ಟಾರೆಯೇ?! ಮನೆ ಯಿಂದ ಹೊರಡುವಾಗಲೇ ಸಿಂಡಿಕೇಟ್ ಸದಸ್ಯರಿಗೆ ಚುರುಕು ಮುಟ್ಟಿಸಲು ಸಂಕಲ್ಪಿಸಿಕೊಂಡಿದ್ದ ಬೇಂದ್ರೆಯವರು, “ಇಲ್ಲಿ ನೋಡ್ರೆಪಾ.... ನನಗ ಯಾರೂ ಹೊಸದಾಗಿ ಡಾಕ್ಟರೇಟು- ಪಾಕ್ಟರೇಟು ಪ್ರಶಸ್ತಿ ಕೊಡೋ ಪ್ರಮೇಯವೇ ಇಲ್ಲಾಗೇತಿ.
ಯಾಕಂದ್ರ, ನಮ್ಮ ಅವ್ವ-ಅಪ್ಪ ನಾ ಹುಟ್ಟಿದಾಗಲೇ ನನಗ ಡಾಕ್ಟರೇಟ್ ನೀಡಿ ಬಿಟ್ಯಾರ! ತೆಲಿ ಒಳಗ ಹುಳ ಹೊಕ್ಕಂಗೆ ಆಯ್ತೇನ? ನನ್ನ ಹೆಸರಾ ‘ಡಿ.ಆರ್.ಬೇಂದ್ರೆ’ ಅಂತೈತಿ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಎಂಬುದರ ಹೃಸ್ವರೂಪ!). ಹೆಸರಿನ ಜೊತಿ ಯಾಗಾ ಹೀಂಗ ‘ಡಿಆರ್’ ಇರೂವಾಗ ನಿಮ್ಮ ಡಾಕ್ಟರೇಟ್ ಕಟಗೊಂಡು ನಾ ಯೇನ ಮಾಡ್ಲೋ ಯಪ್ಪಾ" ಎಂದುಬಿಟ್ಟರಂತೆ.
ಬೇಂದ್ರೆ ಕಾಕಾನ ರಂಜನೀಯ ಮಾತುಗಳನ್ನು ಕೇಳಿ ಸಭೆಯಲ್ಲಿ ನೆರೆದಿದ್ದ ಅಭಿಮಾನಿಗಳು ಒಂದೆಡೆ ಚಪ್ಪಾಳೆ ತಟ್ಟುತ್ತಿದ್ದರೆ, ಮತ್ತೊಂದೆಡೆ ಬೇಂದ್ರೆಯವರಿಗೆ ನೀಡಬೇಕಿದ್ದ ಡಾಕ್ಟರೇಟ್ ಪುರಸ್ಕಾರಕ್ಕೆ ಕೊಕ್ಕೆ ಹಾಕಲು ಹೊರಟಿದ್ದ ವಿವಿಯ ಸಿಂಡಿಕೇಟ್ ಸದಸ್ಯರು ತಲೆ ತಗ್ಗಿಸಿ ಕೂತಿದ್ದರಂತೆ!
ಬೇಂದ್ರೆಯವರು ಸಾಽಸಿದ ಸಾಹಿತ್ಯಿಕ ಔನ್ನತ್ಯ, ಅದಕ್ಕೆ ಪೂರಕವಾಗಿ ಒದಗಿಬಂದ ಪ್ರಶಸ್ತಿ - ಪುರ ಸ್ಕಾರ - ಮನ್ನಣೆ - ಮಾನ್ಯತೆಗಳು ರಾತ್ರೋರಾತ್ರಿಯಲ್ಲಿ ಜರುಗಿದ ವಿದ್ಯಮಾನಗಳಲ್ಲ. ಅವನ್ನು ಕೈಗೂಡಿಸಿಕೊಳ್ಳುವುದಕ್ಕೆ ಸಾಕಷ್ಟು ರಾಗಿಬೀಸಿದ ಜೀವ ಬೇಂದ್ರೆಯವರು. ಆಗಿನ್ನೂ ಬೇಂದ್ರೆ ತರುಣ ಸಾಹಿತಿ. ಇವರಂಥ ಸಮಾನಮನಸ್ಕರೆಲ್ಲ ಧಾರವಾಡದಲ್ಲಿ ಒಂದು ಅಡ್ಡಾದಲ್ಲಿ ಆಗೀಗ ಸೇರಿ ಕೊಂಡು ವಿಭಿನ್ನ- ವಿಶಿಷ್ಟ ವಿಷಯಗಳನ್ನು ಚರ್ಚಿಸುವುದು ವಾಡಿಕೆಯಾಗಿತ್ತು.
ಈ ಸೃಜನಶೀಲ ಪಟಾಲಂನ ಸಹವರ್ತಿಗಳಲ್ಲಿ ವಿ.ಕೃ.ಗೋಕಾಕರೂ ಒಬ್ಬರಾಗಿದ್ದರು. ಸಾಮಾಜಿಕ ವಾಗಿ ಹೇಳುವುದಾದರೆ, ಬೇಂದ್ರೆಯವರು ಮತ್ತು ಗೋಕಾಕರು ನೆಲೆಗೊಂಡಿದ್ದ ಸ್ತರಗಳೇ ಬೇರೆಯ ವಾಗಿದ್ದವು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ವಯಸ್ಸಿನಲ್ಲಿ ಸಾಕಷ್ಟು ಚಿಕ್ಕವರಾಗಿದ್ದ ಗೋಕಾ ಕರು ಬೇಂದ್ರೆಯವರಿಗಿಂತ ಉನ್ನತ ಸಾಮಾಜಿಕ ಸ್ತರದಲ್ಲಿದ್ದರು, ವೃತ್ತಿಬದುಕಲ್ಲೂ ಔನ್ನತ್ಯ ದಲ್ಲಿದ್ದರು.
ಆದರೆ ಗೋಕಾಕರದ್ದು ಅದೆಂಥಾ ವಿನಯವೆಂದರೆ, ಧಾರವಾಡದ ಈ ಅಡ್ಡಾದಲ್ಲಿ ಸಾಹಿತ್ಯಿಕ ಮಿತ್ರ ರೆಲ್ಲಾ ಮಾತುಕತೆ-ಚರ್ಚೆಗೆ ಸೇರಿದಾಗ, “ನಾನು ಬೇಂದ್ರೆಯವರೊಡನೆ ಮಾತು- ಮಂಥನ ಮುಗಿಸಿ ಎದ್ದಾಗ ಬೇರೆಯವನೇ ಆಗಿಬಿಡುತ್ತಿದ್ದೆ, ಹೀಗಾಗಿ ಅವರನ್ನು ನನ್ನ ಗುರುವಾಗಿ ಸ್ವೀಕರಿಸಿದ್ದೆ" ಎಂದು ಒಂದೆಡೆ ಹೇಳಿಕೊಂಡಿದ್ದುಂಟು, ಇರಲಿ.ತರುಣ ಬೇಂದ್ರೆಯವರಿಗೆ ಇನ್ನೂ ಜೀವನೋಪಾಯದ ಮಾರ್ಗ ಸಿಕ್ಕಿರಲಿಲ್ಲ, ನಿರುದ್ಯೋಗಿಯಾಗಿದ್ದರು.
ಹೀಗಾಗಿ ಮಹಾರಾಷ್ಟ್ರದ ಪುಣೆಯಲ್ಲಿದ್ದ ಅವರ ಚಿಕ್ಕಪ್ಪ ಬಂಡೋಪಂತರು, “ಇಲ್ಲಿಗೆ ಬಂದು ಮುಂಬೈ ವಿಶ್ವವಿದ್ಯಾಲಯದ ಎಂ.ಎ ಪರೀಕ್ಷೆಯನ್ನಾದರೂ ಕಟ್ಟು" ಎಂದು ಆಗ್ರಹಿಸಿ ಕರೆಸಿ ಕೊಂಡರು. ಅಲ್ಲಿನ ಸ್ನಾತಕೋತ್ತರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು ಯಾರು ಗೊತ್ತೇ? ಧಾರವಾಡದ ಸಾಹಿತ್ಯ ಮಿತ್ರರ ಅಡ್ಡಾ ದಲ್ಲಿ ಠಳಾಯಿಸುತ್ತಿದ್ದ ಇದೇ ಗೋಕಾಕರು! ಬಿ.ಎ ಮತ್ತು ಎಂ.ಎ ತರಗತಿಗಳಲ್ಲಿ ಪ್ರಥಮ ಸ್ಥಾನವನ್ನು ದಕ್ಕಿಸಿಕೊಂಡಿದ್ದರಿಂದ ಅವರನ್ನು ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಿಸಲಾಗಿತ್ತಂತೆ.
ಬೇರೆಯವರಾಗಿದ್ದರೆ ಅಲ್ಲಿಂದ ಬಿಟ್ಟು ಓಡಿಬಿಡುತ್ತಿದ್ದರೇನೋ? ಆದರೆ ಬೇಂದ್ರೆಯವರು ಈ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡರು, ‘ಇಗೋ’ ಸುಳಿಯುವುದಕ್ಕೆ ಅನುವು ಮಾಡಿ ಕೊಡಲಿಲ್ಲ. ಆದರೆ ಗೋಕಾಕರು ಅಲ್ಲೂ ಕರಾಮತ್ತು ಮಾಡುತ್ತಿದ್ದರು! ತರಗತಿಗೆ ಹೋಗುವವರೆಗೆ ಮಾತ್ರವೇ ಅವರಲ್ಲಿ ‘ಬೋಧಕನ ಗಾಂಭೀರ್ಯ’ ಇರುತ್ತಿತ್ತು, ತರಗತಿಯನ್ನು ಪ್ರವೇಶಿಸುತ್ತಿದ್ದಂತೆ ಅವರು ಶಿಷ್ಯರಾಗುತ್ತಿದ್ದರು, ಬೇಂದ್ರೆ ಗುರುಗಳಾಗಿಬಿಡುತ್ತಿದ್ದರು.
ಏಕೆಂದರೆ, ಸಾಹಿತ್ಯದ ಬಗ್ಗೆ ಅಲ್ಲಿ ಹೆಚ್ಚು ಮಾತನಾಡುತ್ತಿದ್ದುದು ಬೇಂದ್ರೆಯವರೇ ಅಂತೆ!ವಿಧಿಯ ವೈಚಿತ್ರ್ಯ ಹೇಗಿರುತ್ತದೆ ನೋಡಿ! ಎಂ.ಎ ಪರೀಕ್ಷೆಯಲ್ಲಿ ಬೇಂದ್ರೆಯವರಿಗೆ ಅವರ ಕವನವನ್ನೇ ವಿಮರ್ಶೆ ಮಾಡಲು ನೀಡಲಾಗಿತ್ತು! ಆದರೆ, ಅವರು ಮಾಡಿದ ವಿಮರ್ಶೆ ಸಮರ್ಪಕವಾಗಿಲ್ಲವೆಂದು ಹೇಳಿ ಕಡಿಮೆ ಅಂಕಗಳನ್ನು ಅದಕ್ಕೆ ನೀಡಲಾಯಿತು. ಹೀಗಾಗಿ ಬೇಂದ್ರೆ ಉತ್ತೀರ್ಣರಾಗಿದ್ದು ಮೂರನೇ ದರ್ಜೆಯಲ್ಲಿ. ಕಾರಣ, ಬೇಂದ್ರೆಯವರ ‘ವಿಮರ್ಶಾ ದೃಷ್ಟಿಕೋನ’ವೇ ಬೇರೆಯದಾಗಿತ್ತು, ಪರೀಕ್ಷಕರು ಬಯಸಿದ್ದ ಉತ್ತರವೇ ಮತ್ತೊಂದಾಗಿತ್ತು.
ತಮ್ಮ ದೃಷ್ಟಿಕೋನವು ಪರೀಕ್ಷಕರಿಗೆ ಅರ್ಥವಾಗಿರಲಿಕ್ಕಿಲ್ಲ ಎಂದು ಭಾವಿಸಿ ಬೇಂದ್ರೆಯವರೂ ಈ ಬಗ್ಗೆ ದನಿಯೆತ್ತದೆ ಮೌನವನ್ನು ಕಾಯ್ದುಕೊಂಡರು. ಒಟ್ಟಿನಲ್ಲಿ, ಮೂರನೇ ದರ್ಜೆಯಲ್ಲಿ ತೇರ್ಗಡೆ ಯಾಗಿದ್ದರ ಪರಿಣಾಮವೋ ಏನೋ, ಬೇಂದ್ರೆಯವರಿಗೆ ಸೂಕ್ತ ಕೆಲಸ ಸಿಗಲಿಲ್ಲ. ಆದರೆ, ಮುಂದೆ ಬೇಂದ್ರೆಯವರು ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದೂ ಸೇರಿದಂತೆ ಅನೇಕ ಔನ್ನತ್ಯಗಳನ್ನು ಮೆರೆದರು ಎನ್ನಿ, ಅದು ಬೇರೆಯದೇ ಅಧ್ಯಾಯ.