Share Market: ಭಾರತಕ್ಕೆ ಟ್ರಂಪ್ ಭಾರಿ ರಿಸ್ಕ್? ಸೆನ್ಸೆಕ್ಸ್ 857 ಅಂಕ ಪತನ
ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 857 ಅಂಕಗಳ ಕುಸಿತಕ್ಕೀಡಾಗಿದ್ದು, 74,454ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ 242 ಅಂಕ ಕಳೆದುಕೊಂಡು 22,553 ಅಂಕಗಳಿಗೆ ಪತನವಾಗಿದೆ. ಅಮೆರಿಕ ಒಂದು ವೇಳೆ ತನ್ನ ಟ್ರೇಡ್ ವಾರ್‌ತೀವ್ರಗೊಳಿಸಿದರೆ, ಭಾರತ, ದಕ್ಷಿಣ ಕೊರಿಯಾ, ವಿಯೆಟ್ನಾಂ, ತೈವಾನ್ ಮತ್ತು ಥಾಯ್ಲೆಂಡ್‌ಗೆ ಹೆಚ್ಚು ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ.

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Share Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 857 ಅಂಕಗಳ ಕುಸಿತಕ್ಕೀಡಾಗಿದ್ದು, 74,454ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ 242 ಅಂಕ ಕಳೆದುಕೊಂಡು 22,553 ಅಂಕಗಳಿಗೆ ಪತನವಾಗಿದೆ. ಈ ನಡುವೆ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ವರದಿ ಬಿಡುಗಡೆಯಾಗಿದ್ದು, ಅದರ ಪ್ರಕಾರ ಅಮೆರಿಕ ಒಂದು ವೇಳೆ ತನ್ನ ಟ್ರೇಡ್ ವಾರ್ (Trade War) ಅನ್ನು ತೀವ್ರಗೊಳಿಸಿದರೆ, ಭಾರತ, ದಕ್ಷಿಣ ಕೊರಿಯಾ, ವಿಯೆಟ್ನಾಂ, ತೈವಾನ್ ಮತ್ತು ಥಾಯ್ಲೆಂಡ್‌ಗೆ ಹೆಚ್ಚು ಅಪಾಯ ಉಂಟಾಗಲಿದೆ. ಅಮೆರಿಕವು ಈಗಾಗಲೇ ಚೀನಾ ವಿರುದ್ಧ ಹೆಚ್ಚುವರಿ 10% ಆಮದು ತೆರಿಗೆಯನ್ನು ವಿಧಿಸಿದೆ. ಉಕ್ಕು ಮತ್ತು ಅಲ್ಯುಮಿನಿಯಂ ಆಮದಿಗೆ 25% ಆಮದು ತೆರಿಗೆಯನ್ನು ಜಾರಿಗೊಳಿಸಿದೆ. ಹೀಗಿದ್ದರೂ ಭಾರತ ಮತ್ತು ಜಪಾನ್‌ಗೆ ಕೆಲವು ಅಡ್ವಂಟೇಜ್ ಕೂಡ ಇದೆ. ಇವೆರಡೂ ದೇಶಗಳು ಆರ್ಥಿಕ ಬೆಳವಣಿಗೆಗೆ ತಮ್ಮದೇ ದೇಶೀಯ ಮಾರುಕಟ್ಟೆಯನ್ನು ಕೂಡ ಅವಲಂಬಿಸಿವೆ. ಹೀಗಾಗಿ ಅಮೆರಿಕದ ಟ್ರೇಡ್ ವಾರ್ ಅನ್ನು ತಕ್ಕಮಟ್ಟಿಗೆ ಎದುರಿಸುವ ಶಕ್ತಿಯನ್ನೂ ಗಳಿಸಿವೆ ಎಂದು ಎಸ್ & ಪಿ ವರದಿ ವಿವರಿಸಿದೆ.
ಜಾಗತಿಕ ಮಾರುಕಟ್ಟೆಯ ವೀಕ್ನೆಸ್ ಮತ್ತು ಅಮೆರಿಕದ ಕನ್‌ಸ್ಯೂಮರ್ ಡಿಮಾಂಡ್ ಬಗೆಗಿನ ಕಳವಳ ಮತ್ತು ಟಾರಿಫ್ ಥ್ರೆಟ್‌ನ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಕುಸಿದಿವೆ. ಬಹುತೇಕ ಎಲ್ಲ ಸೆಕ್ಟರ್‌ಗಳಲ್ಲಿ ಷೇರುಗಳ ಮಾರಾಟ ಕಂಡು ಬಂದಿತು. ಇದರ ಪರಿಣಾಮ ಜೊಮ್ಯಾಟೊ, ಎಚ್‌ಸಿಎಲ್ ಟೆಕ್, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್ ಸೇರಿದಂತೆ ಹಲವಾರು ಷೇರುಗಳ ದರ ಇಳಿಯಿತು. ಸೆಕ್ಟರ್‌ಗಳ ಬಗ್ಗೆ ಹೇಳೋದಿದ್ದರೆ, ನಿಫ್ಟಿ ಐಟಿ, ಫೈನಾನ್ಷಿಯಲ್ ಸರ್ವೀಸ್, ಲೋಹ ವಲಯದ ಷೇರುಗಳ ದರ ಇಳಿಯಿತು. ಸನ್ ಫಾರ್ಮಾ, ಮಾರುತಿ ಸುಜುಕಿ, ಮಹೀಂದ್ರಾ & ಮಹೀಂದ್ರಾ, ಬಜಾಜ್ ಫೈನಾನ್ಸ್ ಷೇರುಗಳು ಲಾಭ ಗಳಿಸಿತು.
ಹಾಗಾದರೆ ಇವತ್ತಿನ ಸೆನ್ಸೆಕ್ಸ್, ನಿಫ್ಟಿ ಕುಸಿತಕ್ಕೆ ಪ್ರಮುಖ ಕಾರಣಗಳನ್ನು ನೋಡೋಣ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾನಾ ದೇಶಗಳ ಜತೆಗೆ ನಡೆಸುತ್ತಿರುವ ಟಾರಿಫ್ ವಾರ್‌ನ ಪರಿಣಾಮ ಅಂತಾರಾಷ್ಟ್ರೀಯ ವಾಣಿಜ್ಯ ಬಿಕ್ಕಟ್ಟು ಸಂಭವಿಸುವ ಕಳವಳ ಉಂಟಾಗಿದೆ. ಇದು ಒಂದು ವೇಳೆ ಬಹು ದೊಡ್ಡ ಟ್ರೇಡ್ ವಾರ್ ಆಗಿ ಬದಲಾದರೆ ಜಾಗತಿಕ ಆರ್ಥಿಕ ಬೆಳವಣಿಗೆ ಕುಂಠಿತವಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿದೆ.
ಅಮೆರಿಕದಲ್ಲಿ ಅಚ್ಚರಿ ಎಂಬಂತೆ ಕನ್‌ಸ್ಯೂಮರ್ ಸೆಂಟಿಮೆಂಟ್ ಕುಸಿದಿದೆ. ಕನ್‌ಸ್ಯೂಮರ್ ಸೆಂಟಿಮೆಂಟ್ ಕಳೆದ 15 ತಿಂಗಳಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟಾರಿಫ್ ವಾರ್‌ನ ಪರಿಣಾಮ ಅಮೆರಿಕದ ಸೇವಾ ಕ್ಷೇತ್ರದ ಚಟುವಟಿಕೆಗಳು ಒತ್ತಡ ಎದುರಿಸುತ್ತಿವೆ. ಚೀನಾದ ಆಮದಿನ ವಿರುದ್ಧ ಅಮೆರಿಕ ತೆರಿಗೆ ವಿಧಿಸುತ್ತಿರುವುದರಿಂದ ಹಣದುಬ್ಬರ ಹೆಚ್ಚಬಹುದು ಎಂಬ ಆತಂಕ ಉಂಟಾಗಿದೆ. ಹೀಗಾಗಿ ಅಲ್ಲಿನ ಗ್ರಾಹಕರ ಸೆಂಟಿಮೆಂಟ್ ಕುಸಿಯುತ್ತಿದೆ. ಫೆಬ್ರವರಿಯಲ್ಲಿ 15 ತಿಂಗಳಿನ ಕನಿಷ್ಠ ಮಟ್ಟಕ್ಕೆ ತಗ್ಗಿದೆ.
ಅಮೆರಿಕದಲ್ಲಿ ದೀರ್ಘಾವಧಿಗೆ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಕಡಿಮೆಯಾಗುತ್ತಿದೆ. ಒಂದು ವೇಳೆ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಹೆಚ್ಚಿಸಿದರೂ, ಹಾಲಿ ಬಾಂಡ್‌ಗಳ ದರ ಇಳಿಯಲು ಆರಂಭವಾಗುತ್ತದೆ. ಆಗ ಎಫ್ ಐಐಗಳು ಭಾರತದ ಮಾರುಕಟ್ಟೆಗೆ ಮತ್ತೆ ಬರುವ ಸಾಧ್ಯತೆಯೂ ಇದೆ. ಹೀಗಾಗಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದೆ.
ಎರಡನೆಯದಾಗಿ ಫಾರಿನ್ ಪೋರ್ಟ್ ಫೋಲಿಯೊ ಇನ್ವೆಸ್ಟರ್ಸ್, ಫೆಬ್ರವರಿಯಲ್ಲಿ 37,000 ಕೋಟಿ ರುಪಾಯಿಗಳ ಷೇರುಗಳನ್ನು ಮಾರಾಟ ಮಾಡಿದ್ದಾರೆ. 2024ರ ಅಕ್ಟೋಬರ್‌ನಿಂದ 3 ಲಕ್ಷ ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಮೂರನೆಯದಾಗಿ ಚೀನಾ ಫ್ಯಾಕ್ಟರ್. ಚೀನಾದಲ್ಲಿ ಕಳೆದ ಕೆಲ ದಿನಗಳಿಂದ ಸ್ಟಾಕ್ ಮಾರ್ಕೆಟ್ ಚೆನ್ನಾಗಿ ಚೇತರಿಸುತ್ತಿದೆ. ಅಲ್ಲಿನ ಸರಕಾರ ಸ್ಟಾಕ್ ಮಾರ್ಕೆಟ್ ಅನ್ನು ಸಪೋರ್ಟ್ ಮಾಡಲು ಕೆಲವು ಸುಧಾರಣಾ ಕ್ರಮಗಳನ್ನು ಘೋಷಿಸಿದೆ. ಇದರ ಪರಿಣಾಮ " ಸೆಲ್ ಇಂಡಿಯಾ ವೈ ಚೀನಾʼ ಟ್ರೆಂಡ್ ಸೃಷ್ಟಿಯಾಗಿದ್ದು, ಕೆಲ ಕಾಲ ಮುಂದುವರಿಯುವ ಸಾಧ್ಯತೆ ಇದೆ.
ನಾಲ್ಕನೆಯದಾಗಿ 2025ರಲ್ಲಿ ಭಾರಯದ ಜಿಡಿಪಿ ಬೆಳವಣಿಗೆಯ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆ ಇದೆ. ಮೂಡೀಸ್ ಅನಾಲಿಟಿಕ್ಸ್ ಪ್ರಕಾರ ಭಾರತದ ಜಿಡಿಪಿ ಗ್ರೋತ್ ರೇಟ್ ಈ ವರ್ಷ 6.4 ಪರ್ಸೆಂಟ್‌ಗೆ ಇಳಿಯುವ ಸಾಧ್ಯತೆ ಇದೆ. 2024ರಲ್ಲಿ 6.6 ಪರ್ಸೆಂಟ್ ಇತ್ತು.
ಎಸ್ & ಪಿ ವರದಿ ಏನೇ ಹೇಳಿರಬಹುದು, ಆದರೆ ಅಮೆರಿಕ-ಚೀನಾ ನಡುವಣ ವಾಣಿಜ್ಯ ಸಂಘರ್ಷದಿಂದ ಭಾರತಕ್ಕೆ ಕೆಲವೊಂದು ಅವಕಾಶಗಳೂ ಸಿಗುವ ನಿರೀಕ್ಷೆ ಇದೆ. ಅಮೆರಿಕನ್ ಕಂಪನಿಗಳು ಚೀನಾ ಬದಲಿಗೆ ಭಾರತವನ್ನು ಹೂಡಿಕೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಚೀನಾದ ಮಿಲಿಟರಿ ಪ್ರಾಬಲ್ಯಕ್ಕೆ ಕೌಂಟರ್ ಬ್ಯಾಲೆನ್ಸ್ ಮಾಡಲು ಅಮೆರಿಕಕ್ಕೆ ಭಾರತದ ಮೈತ್ರಿಯ ಅಗತ್ಯವೂ ಉಂಟಾಗಿದೆ. ಭಾರತವು ಅಮೆರಿಕದಿಂದ ಕಚ್ಚಾ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಬಯಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Stock Market Outlook: ನಿಫ್ಟಿಗೆ 22,500ರಲ್ಲಿ ಸಿಗುತ್ತಾ ಸಪೋರ್ಟ್?
ಒಂದು ವೇಳೆ ಟ್ರಂಪ್ ಸರಕಾರವು ಭಾರತದಿಂದ ಆಮದಾಗುವ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಫೋನ್‌ಗಳ ಮೇಲೆ ಆಮದು ತೆರಿಗೆ ವಿಧಿಸಿದರೆ, ಸ್ವತಃ ಅಮೆರಿಕದ ಆಪಲ್ ಕಂಪನಿಗೆ ಸಮಸ್ಯೆಯಾಗಲಿದೆ. ಭಾರತದಲ್ಲಿನ ಅದರ ಹೂಡಿಕೆಯ ಮೇಲೆ ಪ್ರಭಾವ ಬೀರಬಹುದು. ಈಗಾಗಲೇ ಟ್ರಂಪ್ ಅವರು ಟೆಸ್ಲಾ ಕಾರಿನ ಘಟಕವು ಭಾರತದಲ್ಲಿ ಸ್ಥಾಪನೆಯಾಗುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭಾರತದ ವಿರುದ್ಧ ಆಮದು ತೆರಿಗೆಯನ್ನು ಹೆಚ್ಚಿಸುವುದಾಗಲಿ, ಭಾರತದಲ್ಲಿ ಅಮೆರಿಕನ್ ಕಂಪನಿಗಳ ಹೂಡಿಕೆಗೆ ತಕರಾರು ಉಂಟು ಮಾಡುವುದರಿಂದ ಸ್ವತಃ ಟ್ರಂಪ್ ಅವರಿಗೂ ಅಮೆರಿಕದ ಉದ್ಯಮಿಗಳ ಪ್ರತಿರೋಧ ಎದುರಾಗುವ ನಿರೀಕ್ಷೆಯೂ ಇದೆ.