IND vs PAK: 20 ರನ್‌ಗೆ ಔಟಾದರೂ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ!
Rohit Sharma breaks Sachin Tendulkar's Record: ರೋಹಿತ್ ಶರ್ಮಾ ಆರಂಭಿಕನಾಗಿ 9000 ಏಕದಿನ ರನ್‌ಗಳನ್ನು ಪೂರ್ಣಗೊಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಅವರು 181 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕ್ರಿಕೆಟ್ ದೇವರು 197 ಇನಿಂಗ್ಸ್‌ಗಲ್ಲಿ ಇಷ್ಟು ರನ್‌ಗಳನ್ನು ಪೂರ್ಣಗೊಳಿಸಿದ್ದರು. ಪಾಕಿಸ್ತಾನ ವಿರುದ್ಧ ಭಾನುವಾರ ನಡೆದಿದ್ದ 2025ರ ಚಾಂಪಿಯನ್ಸ್ ಟ್ರೋಫಿಯ ಈ ಪಂದ್ಯದಲ್ಲಿ ರೋಹಿತ್ ಈ ದಾಖಲೆ ಬರೆದಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ.

ದುಬೈ: ಭಾನುವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, 20 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೂ ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ 9000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 9000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವ ಮೂಲಕ ರೋಹಿತ್ ಶರ್ಮಾ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳಿವೆ. ತಮ್ಮ 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಅವರು 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದಿನಿಂದ ತೆಂಡೂಲ್ಕರ್ ಅವರ ಒಂದಲ್ಲ ಒಂದು ದಾಖಲೆಗಳನ್ನು ವಿವಿಧ ಆಟಗಾರರು ಮುರಿಯುತ್ತಿದಾರೆ.
IND vs PAK: ಕೊಹ್ಲಿ ಶತಕ ವೈಭವ; ಪಾಕ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 14 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಅವರು ಸಚಿನ್ ತೆಂಡೂಲ್ಕರ್‌ಗಿಂತ ವೇಗವಾಗಿ 14000 ಒಡಿಐ ರನ್‌ಗಳನ್ನು ಗಳಿಸಿದರು. ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಪಾಕಿಸ್ತಾನ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ 9000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ರೋಹಿತ್ ಶರ್ಮಾ ನಿಯಮಿತವಾಗಿ ಏಕದಿನ ಪಂದ್ಯಗಳಲ್ಲಿ ಭಾರತ ಪರ ಓಪನರ್ ಆಗಿ ಆಡುತ್ತಿದ್ದಾರೆ. ಇದಕ್ಕೂ ಮೊದಲು ಅವರ ವೃತ್ತಿಜೀವನ ವಿಶೇಷವಾಗಿರಲಿಲ್ಲ. ಓಪನರ್ ಆದ ನಂತರ ರೋಹಿತ್ ಅದೃಷ್ಟ ಬದಲಾಯಿತು. ಅವರು ಶೀಘ್ರದಲ್ಲೇ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿದರು. ಆರಂಭಿಕ ಆಟಗಾರನಾಗಿ ರೋಹಿತ್ 181 ಇನಿಂಗ್ಸ್‌ಗಳಲ್ಲಿ 54.99ರ ಸರಾಸರಿಯಲ್ಲಿ 9019 ರನ್ ಗಳಿಸಿದ್ದಾರೆ.
IND vs PAK: ʻಬಾಬರ್ ಆಝಮ್ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್ ಅಖ್ತರ್ ಕಿಡಿ!
ರೋಹಿತ್ ಶರ್ಮಾ 181 ಇನಿಂಗ್ಸ್‌ಗಳಲ್ಲಿ 9 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು. ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ದಿಗ್ಗಜ ಸಚಿನ್ ತೆಂಡೂಲ್ಕರ್ 197 ಇನಿಂಗ್ಸ್‌ಗಳಲ್ಲಿ ಆರಂಭಿಕನಾಗಿ 9,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದರು. ರೋಹಿತ್ ಮತ್ತು ಸಚಿನ್ ಅವರಲ್ಲದೆ, ಸನತ್ ಜಯಸೂರ್ಯ, ಕ್ರಿಸ್ ಗೇಲ್, ಆಡಮ್ ಗಿಲ್‌ಕ್ರಿಸ್ಟ್ ಮತ್ತು ಸೌರವ್ ಗಂಗೂಲಿ ಕೂಡ ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ 9000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸಚಿನ್ ಅತಿ ಹೆಚ್ಚು ರನ್ ಗಳಿಸಿದ್ದಾರೆ, ಅಂದರೆ 15310 ರನ್‌ಗಳು. ಜಯಸೂರ್ಯ ಮತ್ತು ಗೇಲ್ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ವೇಗವಾಗಿ 9000 ರನ್ ಗಳಿಸಿದ ಆಟಗಾರ
181 ಇನಿಂಗ್ಸ್ - ರೋಹಿತ್ ಶರ್ಮಾ
197 ಇನಿಂಗ್ಸ್ - ಸಚಿನ್ ತೆಂಡೂಲ್ಕರ್
231 ಇನಿಂಗ್ಸ್ - ಸೌರವ್ ಗಂಗೂಲಿ
246 ಇನಿಂಗ್ಸ್ - ಕ್ರಿಸ್ ಗೇಲ್
253 ಇನಿಂಗ್ಸ್ - ಆಡಮ್ ಗಿಲ್‌ಕ್ರಿಸ್ಟ್
268 ಇನಿಂಗ್ಸ್ - ಸನತ್ ಜಯಸೂರ್ಯ