ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

NZ vs BAN: ಬಾಂಗ್ಲಾಗೆ ಮಣ್ಣು ಮುಕ್ಕಿಸಿದ ಕಿವೀಸ್‌, ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ!

BAN vs NZ Match Highlights: ಸೋಮವಾರ ಬಾಂಗ್ಲಾದೇಶ ವಿರುದ್ದ ನ್ಯೂಜಿಲೆಂಡ್‌ ತಂಡ 5 ವಿಕೆಟ್‌ಗಳಿಂದ ಗೆಲುವು ಪಡೆಯುವ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿತು. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಕೂಡ ಅಧಿಕೃತವಾಗಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಆದರೆ, ಎರಡೂ ಪಂದ್ಯಗಳಲ್ಲಿ ಸೋತ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ನಾಕ್‌ಔಟ್‌ನಿಂದ ಹೊರ ಬಿದ್ದಿವೆ.

NZ vs BAN: ಬಾಂಗ್ಲಾಗೆ ಸೋಲು, ಸೆಮಿಫೈನಲ್‌ಗೇರಿದ ಭಾರತ, ನ್ಯೂಜಿಲೆಂಡ್‌!

ಸೆಮಿಫೈನಲ್‌ಗೇರಿದ ನ್ಯೂಜಿಲೆಂಡ್‌, ಭಾರತ

Profile Ramesh Kote Feb 24, 2025 10:35 PM

ರಾವಲ್ಪಿಂಡಿ: ಮೈಕಲ್‌ ಬ್ರೇಸ್‌ವೆಲ್‌ (26ಕ್ಕೆ 4) ಸ್ಪಿನ್‌ ಮೋಡಿ ಹಾಗೂ ರಚಿನ್‌ ರವೀಂದ್ರ (112 ರನ್‌ಗಳು) ಅವರ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ, ಎದುರಾಳಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್ಸ್‌ಗೆ ಕಿವೀಸ್‌ ಪ್ರವೇಶ ಮಾಡಿತು. ಅಷ್ಟೇ ಅಲ್ಲದೆ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿದ್ದ ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾ ಕೂಡ ಅಂತಿಮ ನಾಲ್ಕರ ಘಟ್ಟಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿತು. ಲೀಗ್‌ ಹಂತದ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಇನ್ನೂ ಕೊನೆಯ ಪಂದ್ಯ ಬಾಕಿ ಇರುವಾಗಲೇ ಟೂರ್ನಿಯ ನಾಕ್‌ಔಟ್‌ನಿಂದ ಅಧಿಕೃತವಾಗಿ ಹೊರಬಿದ್ದಿವೆ.

ಸೋಮವಾರ ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ನೀಡಿದ್ದ 237 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ತಂಡ, ಆರಂಭಿಕ ಆಘಾತ ಅನುಭವಿಸಿದರೂ ರಚಿನ್‌ ರವೀಂದ್ರ (112) ಶತಕ ಹಾಗೂ ಟಾಮ್‌ ಲೇಥಮ್‌ (55) ಅರ್ಧಶತಕದ ಬಲದಿಂದ 46.1 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 240 ರನ್‌ಗಳನ್ನು ಗಳಿಸಿ ಗೆಲುವಿನ ದಡ ಸೇರಿತು. ನ್ಯೂಜಿಲೆಂಡ್‌ ತಂಡದ ಪರ ಬೌಲಿಂಗ್‌ನಲ್ಲಿ 4 ವಿಕೆಟ್‌ ಸಾಧನೆ ಮತ್ತು ಒಂದು ಸ್ಟನಿಂಗ್‌ ಕ್ಯಾಚ್‌ ಪಡೆದಿದ್ದ ಮೈಕಲ್‌ ಬ್ರೇಸ್‌ವೆಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

BAN vs NZ: ನಜ್ಮುಲ್‌ ಹುಸೇನ್‌ ಶಾಂತೊರ ಸ್ಟನಿಂಗ್‌ ಕ್ಯಾಚ್‌ ಪಡೆದ ಮೈಕಲ್‌ ಬ್ರೇಸ್‌ವೆಲ್‌! ವಿಡಿಯೊ

ರಚಿನ್‌ ರವೀಂದ್ರ ಭರ್ಜರಿ ಶತಕ

ಸಂಪೂರ್ಣ ಫಿಟ್‌ ಇಲ್ಲದ ಕಾರಣ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ರಚಿನ್‌ ರವೀಂದ್ರ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದರು. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಬಂದ ರಚಿನ್‌ ರವೀಂದ್ರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದರು. ವಿಲ್‌ ಯಂಗ್‌ ಮತ್ತು ಕೇನ್‌ ವಿಲಿಯಮ್ಸನ್‌ ವಿಕೆಟ್‌ ಬಹುಬೇಗ ಉರುಳಿದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ರಚಿನ್‌ ರವೀಂದ್ರ, 105 ಎಸೆತಗಳಲ್ಲಿ ಒಂದು ಶತಕ ಹಾಗೂ 12 ಬೌಂಡರಿಗಳೊಂದಿಗೆ 112 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ತನ್ನ ಮೊದಲ ಶತಕವನ್ನು ಪೂರ್ಣಗೊಳಿಸಿದರು.



ಇದಕ್ಕೂ ಮುನ್ನ ಡೆವೋನ್‌ ಕಾನ್ವೆ 30 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ರಚಿನ್‌ ರವೀಂದ್ರಗೆ ನಾಲ್ಕನೇ ವಿಕೆಟ್‌ಗೆ ಮತ್ತೊಂದು ತುದಿಯಲ್ಲಿ 130 ರನ್‌ ಜೊತೆಯಾ ಟಾಮ್‌ ಲೇಥಮ್‌ 76 ಎಸೆತಗಳಲ್ಲಿ 55 ರನ್‌ಗಳನ್ನು ಗಳಿಸಿದ್ದರು. ಗ್ಲೆನ್‌ ಫಿಲಿಪ್ಸ್‌ ಕೊನೆಯಲ್ಲಿ 21 ರನ್‌ ನೆರವು ನೀಡಿದ್ದರು.

236 ರನ್‌ ಕಲೆ ಹಾಕಿದ್ದ ಬಾಂಗ್ಲಾದೇಶ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಬಾಂಗ್ಲಾದೇಶ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿಬರಲಿಲ್ಲ. ನಜ್ಮುಲ್‌ ಹುಸೇನ್‌ ಶಾಂತೊ (77 ರನ್)‌ ಹಾಗೂ ಜಾಕಿರ್‌ ಅಲಿ (45 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ಬೌಲಿಂಗ್‌ ದಾಳಿಯ ಎದುರು ಮಂಕಾದರು. ಇದರ ಪರಿಣಾಮವಾಗಿ ಬಾಂಗ್ಲಾ ತನ್ನ ಪಾಲಿನ 50 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್‌ ನಷ್ಟಕ್ಕೆ 236 ರನ್‌ಗಳಿಗೆ ಸೀಮಿತವಾಯಿತು.



ಅರ್ಧಶತಕ ಸಿಡಿಸಿದ ನಜ್ಮುಲ್‌ ಹುಸೇನ್‌ ಶಾಂತೊ

ಬಾಂಗ್ಲಾದೇಶ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ನಜ್ಮುಲ್‌ ಹುಸೇನ್‌ ಶಾಂತೊ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕೆ ಇಳಿದಿದ್ದ ಅವರು, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ದೀರ್ಘಾವಧಿ ಬ್ಯಾಟ್‌ ಮಾಡಿದ್ದರು. ನಜ್ಮುಲ್‌ ಆಡಿದ 110 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಕಲೆ ಹಾಕಿ ವಿಕೆಟ್‌ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಜಾಕಿರ್‌ ಅಲಿ 55 ಎಸೆತಗಳಲ್ಲಿ 45 ರನ್‌ಗಳ ಕೊಡುಗೆಯನ್ನು ನೀಡಿ ಅರ್ಧಶತಕದಂಚಿನಲ್ಲಿ ಔಟ್‌ ಆದರು. ಇವರಿಬ್ಬರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.



ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮೈಕಲ್‌ ಬ್ರೇಸ್‌ವೆಲ್‌

ನ್ಯೂಜಿಲೆಂಡ್‌ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಮೈಕಲ್‌ ಬ್ರೇಸ್‌ವೆಲ್‌, ಬೌಲ್‌ ಮಾಡಿದ 10 ಓವರ್‌ಗಳಲ್ಲಿಕೇವಲ 26 ರನ್‌ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಬಾಂಗ್ಲಾ ತಂಡವನ್ನು 236ಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಬೌಲಿಂಗ್‌ ಪ್ರದರ್ಶನದಿಂದ ಅವರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.