ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದಲ್ಲಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹ
ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ 120 ಎಕರೆ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ ಶಿಫಾರಸು ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆಯು ತಕ್ಷಣವೇ ಈ ಶಿಫಾರಸುಗಳನ್ನು ಹಿಂಪಡೆಯಬೇಕು ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಸರ್ಕಾರವು ಈ ಶಿಫಾರಸನ್ನು ತಿರಸ್ಕರಿಬೇಕೆಂದು ಕೆಆರ್‌ಎಸ್ ಪಕ್ಷ ಆಗ್ರಹಿಸಿದೆ.


ತುಮಕೂರು: ಜಿಲ್ಲೆಯ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದ (Bukkapatna Chinkara Wildlife Sanctuary) ಪರಿಸರ ಸೂಕ್ಷ್ಮ ಪ್ರದೇಶದ 120 ಎಕರೆ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆ ಶಿಫಾರಸು ಮಾಡಿರುವುದಕ್ಕೆ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬುಕ್ಕಾಪಟ್ಟಣ ವನ್ಯಜೀವಿಧಾಮದಲ್ಲಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಕೆಆರ್‌ಎಸ್ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ. ಈ ಹಿಂದೆ ಇದೇ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಈ ಗಣಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಈಗ ಗಣಿಗೆ ಮತ್ತಷ್ಟು ಅರಣ್ಯ ಪ್ರದೇಶವನ್ನು ಸೇರಿಸಿ ಮತ್ತೊಮ್ಮೆ ಹರಾಜು ಹಾಕಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಸರಕಾರ ಮುಂದಾಗಿದೆ. ಜಿಲ್ಲೆಯಲ್ಲಿನ ಆಕ್ರಮ ಗಣಿಗಾರಿಕೆಯಿಂದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಆರೋಗ್ಯ ಹದಗೆಟ್ಟಿತ್ತು ಮತ್ತು ಕೃಷಿಗೆ ಅಪಾರ ಹಾನಿಯಾಗುತ್ತದೆ ಎಂದು ಕೆಆರ್‌ಎಸ್ ಪಕ್ಷದ ಮುಖಂಡರು ಕಿಡಿಕಾರಿದ್ದಾರೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಿಪಟೂರು ಮತ್ತು ಗುಬ್ಬಿ ತಾಲೂಕುಗಳಲ್ಲಿ ಗಣಿಗಾರಿಕಾ ಬಾಧಿತ ಪ್ರದೇಶಗಳ ಪುನಶ್ಚೇತನ ಮತ್ತು ಪುನರ್ ನಿರ್ಮಾಣಕ್ಕಾಗಿ ವಿಶೇಷ ಕಂಪನಿಯನ್ನು 10 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ, ಆದರೆ ಸಾವಿರಾರು ಕೋಟಿ ಹೊಂದಿರುವ ಈ ಕಂಪನಿಯ ಮೂಲಕ ಒಂದು ಪೈಸೆಯನ್ನು ಸರ್ಕಾರವು ಬಳಸಿಕೊಂಡು ಜನರ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಮತ್ತಷ್ಟು ಪರಿಸರ ಹಾಳು ಮಾಡಲು ಮುಂದಾಗಿರುವುದು ಮಾತ್ರ ಖೇದಕರ. ಎಲ್ಲವನ್ನು ಹಾಳು ಮಾಡುವುದು ಮತ್ತು ಹಣ ಮಾಡುವುದು ಮಾತ್ರ ಇವರ ಗುರಿಯಾಗಿರುವಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಅರಣ್ಯ ಇಲಾಖೆಯು ತಕ್ಷಣವೇ ಈ ಶಿಫಾರಸುಗಳನ್ನು ಹಿಂಪಡೆಯಬೇಕು ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಸರ್ಕಾರವು ಈ ಶಿಫಾರಸನ್ನು ತಿರಸ್ಕರಿಬೇಕೆಂದು ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧೂ ಸ್ವಾಮಿ ಆಗ್ರಹಿಸಿದ್ದಾರೆ.
ಜಿಲ್ಲೆಯು ಬಯಲು ಸೀಮೆಯಾಗಿದ್ದು, ಜಿಲ್ಲೆಯ ಬಹುತೇಕ ಭಾಗವು ಅದರಲ್ಲೂ ಪ್ರಸ್ತುತ ಗಣಿಗಾರಿಕೆಗೆ ಪ್ರಸ್ತಾವನೆ ಆಗಿರುವ ಪ್ರದೇಶವು ಬರಪೀಡಿತ ಪ್ರದೇಶದ ವ್ಯಾಪ್ತಿಗೆ ಸೇರುತ್ತದೆ. ಇದೇ ಪ್ರದೇಶದಲ್ಲಿ ಈ ಹಿಂದೆ ಅಕ್ರಮ ಗಣಿಗಾರಿಕೆಯಿಂದ ಬಹುತೇಕ ಪರಿಸರ ನಾಶವಾಗಿರುತ್ತದೆ. ಹಾಗೆಯೇ ಜಿಲ್ಲೆಯಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಸಾವಿರಾರು ಮರಗಳನ್ನು ಬಲಿ ಕೊಡಲಾಗಿದ್ದು, ಅದಕ್ಕೆ ಬದಲಾಗಿ ಮರಗಳನ್ನು ಬೆಳೆಸುವ ಅರಣ್ಯೀಕರಣ ಯೋಜನೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಇದರ ಜೊತೆಗೆ ಜಿಲ್ಲೆಯಲ್ಲಿನ ಉಳಿದುಕೊಂಡಿರುವ ಗೋಮಾಳಗಳನ್ನು ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ನೀಡಲಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿನ ಲಕ್ಷಾಂತರ ಮರಗಳ ಹನನವಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ವಾಸಸ್ಥಾನ ಹಸ್ತಕ್ಷೇಪದಿಂದ ಮಾನವ ಮತ್ತು ವನ್ಯಪ್ರಾಣಿಗಳ ನಡುವೆ ಸಂಘರ್ಷ ಸಾಕಷ್ಟಿದೆ. ಈಗ ಮತ್ತೆ ಸಂರಕ್ಷಿತ ಅರಣ್ಯವನ್ನು ಗಣಿಗಾರಿಕೆಗೆ ನೀಡಿದರೆ, ಅದು ಮತ್ತಷ್ಟು ಹೆಚ್ಚುತ್ತದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತದೆ. ತಕ್ಷಣವೇ ಬುಕ್ಕಾಪಟ್ಟಣ ವನ್ಯಜೀವಿಧಾಮದ ಬಳಿ ಅಥವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆಗೆ ಅನುಮತಿಯನ್ನು ನೀಡಬಾರದು ಮತ್ತು ಈಗ ನೀಡಿರುವ ಶಿಫಾರಸ್ಸನ್ನು ವಾಪಸ್ಸು ಪಡೆಯಬೇಕು, ಇಲ್ಲ ತಿರಸ್ಕರಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧೂ ಸ್ವಾಮಿ ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | H D Kumaraswamy: ಸಿಎಂ ಅನುಕೂಲಕ್ಕೆ ತಕ್ಕಂತೆ ಲೋಕಾಯುಕ್ತ ವರದಿ; ಹೆಚ್.ಡಿ.ಕುಮಾರಸ್ವಾಮಿ ಟೀಕೆ