ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Budget session: ರಾಜ್ಯದಲ್ಲಿ ಅಭಿವೃದ್ಧಿ ವೇಗ ಚುರುಕು; ಗ್ಯಾರಂಟಿ ಯೋಜನೆಗಳನ್ನು ಹಾಡಿ ಹೊಗಳಿದ ರಾಜ್ಯಪಾಲ ಗೆಹ್ಲೋಟ್‌

Joint Session: ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆ ಭವಿಷ್ಯವನ್ನು ಸರ್ಕಾರ ಸುಳ್ಳು ಮಾಡಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದ್ದಾರೆ.

Budget session: ಗ್ಯಾರಂಟಿಗಳನ್ನು ಹಾಡಿ ಹೊಗಳಿದ ರಾಜ್ಯಪಾಲ ಗೆಹ್ಲೋಟ್‌

Profile Prabhakara R Mar 3, 2025 3:12 PM

ಬೆಂಗಳೂರು: ರಾಜ್ಯ ಬಜೆಟ್‌ ಅಧಿವೇಶನ (budget session) ಇಂದಿನಿಂದ (ಮಾ.3) ಆರಂಭವಾಗಿದ್ದು, ವಿಧಾನಮಂಡಲದ ಜಂಟಿ ಅಧಿವೇಶನವನ್ನು (Joint Session ) ಉದ್ದೇಶಿಸಿ ರಾಜ್ಯಪಾಲ ಥಾವರ್‌‌ ಚಂದ್ ಗೆಹ್ಲೋಟ್‌ ಅವರು ಸೋಮವಾರ ಭಾಷಣ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದಿರುವ ಅವರು, ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹಾಡಿ ಹೊಗಳಿದ್ದಾರೆ. ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆ ಭವಿಷ್ಯವನ್ನು ಸರ್ಕಾರ ಸುಳ್ಳು ಮಾಡಿದೆ. ಪ್ರತಿಯೊಂದು ವಲಯದಲ್ಲೂ ರಾಜ್ಯವು ಉತ್ತಮವಾದ ಸಾಧನೆಗಳನ್ನು ದಾಖಲಿಸಿದೆ ಎಂದು ರಾಜ್ಯಪಾಲ ಥಾವರ್‌‌ ಚಂದ್ ಗೆಹ್ಲೋಟ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾತ್ಮ ಗಾಂಧಿ ಅವರು ಹೇಳಿದಂತೆ ಆಡಳಿತವನ್ನು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವೆಂಬಂತೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಹಲವು ಅಭಿವೃದ್ಧಿ ಯೋಜನೆಗಳಿಂದ ರಾಜ್ಯದ ಆದಾಯ ಹೆಚ್ಚುತ್ತಿದೆ. ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಎಸ್‌ಟಿ ಬೆಳವಣಿಗೆ ದರ ಉತ್ತಮವಾಗಿದೆ ಎಂದು ತಿಳಿಸಿದರು.

2024-25ನೇ ಸಾಲಿನ ಬಜೆಟ್‌ನಲ್ಲಿ ಆದೇಶ ಹೊರಡಿಸಬೇಕಾಗಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಘೋಷಣೆ ಮಾಡಿದ್ದ ಕಾರ್ಯಕ್ರಮಗಳೂ ಸಹ. ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಘೋಷಣೆಗಳೂ ಆದೇಶ ಹೊರಡಿಸುವ ಹಂತದಲ್ಲಿವೆ. ಇನ್ನುಳಿದ ಘೋಷಣೆಗಳೂ ಆದೇಶ ಹೊರಡಿಸುವ ಹಂತದಲ್ಲಿವೆ.

ಆತ್ಮಹತ್ಯೆಗಳು ಕಡಿಮೆಯಾಗಿದೆ:

ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ತೀವ್ರರೂಪದ ಅತಿವೃಷ್ಟಿ ಅನಾವೃಷ್ಟಿಗಳಿಲ್ಲದ ಕಾರಣ ರೈತರ ಕೈಗೆ ಉತ್ತಮ ಫಸಲು ಸಿಕ್ಕಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಂದ ಸುಮಾರು 149 ಲಕ್ಷ ಟನ್ನುಗಳಷ್ಟು ಕೃಷಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಸರ್ಕಾರವು ತೆಗೆದುಕೊಂಡ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ನನ್ನ ಸರ್ಕಾರವು ರಚನೆಯಾದಾಗಿಂದಲೂ ತೊಗರಿ ಮತ್ತು ಕೊಬ್ಬರಿಗೆ ಬೆಲೆಗಳು ಕುಸಿದಾಗ ರೈತರ ನೆರವಿಗೆ ನಿಂತು ಪ್ರೋತ್ಸಾಹ ಧನವನ್ನು ನೀಡಿದೆ. ಕೃಷಿಭಾಗ್ಯ ಯೋಜನೆಯನ್ನು ಮುಂದುವರಿಸುವ ಮೂಲಕ ಅಗತ್ಯ ಇರುವ ಕಡೆಗಳಲ್ಲೆಲ್ಲಾ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ.

ಕರ್ನಾಟಕವು ಹಾಲಿನ ಉತ್ಪಾದನೆಯಲ್ಲಿ ದಾಖಲೆ ಬರೆದಿದೆ. ಕೆಎಂಎಫ್ ಈ ಬಾರಿ ದಿನವೊಂದಕ್ಕೆ 1 ಕೋಟಿ ಲೀಟರ್‌ಗಳಷ್ಟು ಹಾಲನ್ನು ಸಂಗ್ರಹಿಸಿದೆ. ಹೈನೋದ್ಯಮಕ್ಕೆ ನೀಡುತ್ತಿರುವ ಪ್ರೋತ್ಸಾಹದ ಕಾರಣಕ್ಕಾಗಿಯೇ ಈ ಸಾಧನೆ ಸಾಧ್ಯವಾಗಿದೆ. ಸರ್ಕಾರವು ಇದುವರೆಗೆ ರೂ.ಗಳಷ್ಟು 1500 3 ಪ್ರೋತ್ಸಾಹಧನ ನೀಡಿದೆ. ಸರ್ಕಾರವು ಪಶುಪಾಲಕರ ನೆರವಿಗಾಗಿ ಅನುಗ್ರಹ ಯೋಜನೆಯನ್ನು ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದ 24934 ರಾಸುಗಳು ಹಾಗೂ 33373 ಕುರಿ ಮತ್ತು ಮೇಕೆಗಳಿಗೆ 26.60 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡಿದೆ.



5 ಗ್ಯಾರಂಟಿಗಾಗಿ 70,000 ಕೋಟಿ ರೂ. ವ್ಯಯ

ಸಮಾಜವು ಸೋಷಿಯಲ್ ಡಾರ್ವಿನಿಸಂ ಹೋಗಬಾರದೆಂದು ನಮ್ಮ ಹಿರಿಯರು ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರ ಮೂಲಕ ಈ ದೇಶಕ್ಕೆ ಅತ್ಯಂತ ಮಾನವೀಯವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಸಂವಿಧಾನವು ಅಸಮಾನತೆಯನ್ನು ತಗ್ಗಿಸಿ ಆದಾಯದ ನ್ಯಾಯಯುತ ಪಾಲನ್ನು ಜನರಿಗೆ ಖಾತರಿಪಡಿಸಬೇಕೆಂದು ಹೇಳುತ್ತದೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ವರ್ಷಕ್ಕೆ 52 ಸಾವಿರ ಕೋಟಿಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 5 ಗ್ಯಾರಂಟಿ ಯೋಜನೆಗಳಿಗಾಗಿ 70,000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗಳಿಗೆ ವರ್ಗಾಯಿಸಿದೆ. ಕಲ್ಯಾಣ ಕಾರ್ಯಕ್ರಮಗಳಿಗಾಗಿ ವರ್ಷಕ್ಕೆ ಒಟ್ಟಾರೆ 90 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ.

ಸಾಮಾಜಿಕ ಪಿಂಚಣಿಗಳು, ರೈತರ ಪಂಪು ಸೆಟ್ಟುಗಳಿಗೆ ಉಚಿತ ವಿದ್ಯುತ್, ಕೃಷಿ-ತೋಟಗಾರಿಕೆ, ರೇಷ್ಮೆ ಪಶುಪಾಲನೆ, ಮೀನುಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು, ಕೈಮಗ್ಗ ಮತ್ತು ಜವಳಿ, ವಸತಿ, ಶಿಕ್ಷಣ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವಾರು ಇಲಾಖೆಗಳ ವತಿಯಿಂದ ನೀಡುವ ನೇರ ನಗದು ಯೋಜನೆಗಳು ಮತ್ತು ಸಬ್ಸಿಡಿ, ಪ್ರೋತ್ಸಾಹ ಧನಗಳಿಂದ ಸುಮಾರು 1.25 ಕೋಟಿಗೂ ಹೆಚ್ಚು ಕುಟುಂಬಗಳು ಅನುಕೂಲ ಪಡೆಯುತ್ತಿವೆ. ಅಭಿವೃದ್ಧಿಯಲ್ಲಿ ಕರ್ನಾಟಕದ ವಿಶಿಷ್ಟ ಮಾದರಿಯನ್ನು ಸರ್ಕಾರವು ರೂಪಿಸುತ್ತಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರಕ್ಕಾಗಿ ಅಪಾರ ಪ್ರಮಾಣದ ಸಂಪನ್ಮೂಲವನ್ನು ವಿನಿಯೋಗಿಸಲಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ 13000 ಕ್ಕೂ ಹೆಚ್ಚಿನ ಪದವೀಧರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 1088 ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಸಲಾಗಿದೆ. 8,311 ಸಂಖ್ಯೆಯ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿವೇಕ ಯೋಜನೆ ಹಾಗೂ ವಿಶೇಷ ಅನುದಾನದಡಿ 5349 ಶಾಲಾ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿವೆ. ಪ್ರಸ್ತುತ 784 ಕೊಠಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. 522 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ 1953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ನರ್ಸರಿ ಶಾಲೆಗಳನ್ನು ತೆರೆಯಲಾಗಿದೆ. ಇದಷ್ಟೇ ಅಲ್ಲದೆ, ಮಕ್ಕಳಿಗೆ ರಜಾ ದಿನಗಳನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಂದು ಸರ್ಕಾರ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ನುಗಳು ಸೇರಿ ಮೊಟ್ಟೆಯನ್ನು ನೀಡುತ್ತಿವೆ.



ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸಲು ಕ್ರಮ:

ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ 2002 ರಲ್ಲಿ ಡಾ. ಡಿ.ಎಂ.ನಂಜುಂಡಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ವರದಿಯನ್ನು ಆಧರಿಸಿ ಇದುವರೆಗೆ 37,662 ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಈ ದಿಶೆಯಲ್ಲಿ ಖರ್ಚು ಮಾಡಿದ ಸಂಪನ್ಮೂಲಗಳ ಪರಿಣಾಮ ಹಾಗೂ ಮುಂದುವರಿದ ಪ್ರಾದೇಶಿಕ ಅಸಮತೋಲನದ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು ಆರ್ಥಿಕ ತಜ್ಞರಾದ ಡಾ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈ ವರ್ಷವೇ ತನ್ನ ವರದಿಯನ್ನು ಸಲ್ಲಿಸಲಿದೆ. ವರದಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಲ್ಲಿ ಸಮತೋಲನವನ್ನು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸರ್ಕಾರವು ಇತ್ತೀಚೆಗೆ ತಾನೆ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದೆ. ವಿಶ್ವದ 19 ಪ್ರಮುಖ ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು. ಈ ಸಮ್ಮೇಳನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೂಡಿಕೆಯಲ್ಲಿ ಹೊಸ ದಾಖಲೆಯನ್ನ ಬರೆದಿದೆ. 10.27 ಲಕ್ಷ ಕೋಟಿ ರೂ.ಗಳಷ್ಟು ಮೊತ್ತವನ್ನು ಹೂಡಿಕ ಮಾಡಲು ಒಡಂಬಡಿಕೆಗಳಾಗಿವೆ. ಈ ಬಾರಿ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ವ್ಯಾಪ್ತಿಯಿಂದ ಹೊರಗೆ ಶೇ.75ಕ್ಕೂ ಹೆಚ್ಚಿನ ಪ್ರಮಾಣದ ಹೂಡಿಕೆ ಒಪ್ಪಂದಗಳಾಗಿವೆ. ಉತ್ತರ ಕರ್ನಾಟಕದಲ್ಲಿ ಶೇ.45ರಷ್ಟು ಹೂಡಿಕ ಮಾಡಲು ಉದ್ದಿಮೆದಾರರು ಮುಂದೆ ಬಂದಿದ್ದಾರೆ. ಇದರಿಂದ ರಾಜ್ಯದ ನಿರುದ್ಯೋಗ ಸಮಸ್ಯೆಯನ್ನು ನಿಯಂತ್ರಿಸಲು ನೆರವಾಗುತ್ತದೆ.

ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲೂ ಕರ್ನಾಟಕವು ಇಡೀ ದೇಶದಲ್ಲಿ ಮುಂಚೂಣಿ ರಾಜ್ಯವಾಗಿದೆ. ರಾಜ್ಯವು ತನ್ನ 2024-25 ರ ಬಜೆಟ್‌ನ ಶೇ.15.01ರಷ್ಟು ಸಂಪತ್ತನ್ನು ಬಂಡವಾಳ ವೆಚ್ಚಗಳಿಗಾಗಿ ವಿನಿಯೋಗಿಸುತ್ತಿದೆ. ಇದು ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ಮುಂತಾದ ಪ್ರಗತಿಪರ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದ್ದಾಗಿದೆ.

1 ಟ್ರಿಲಿಯನ್ ಡಾಲರ್ ಆರ್ಥಿಕತೆ ರೂಪಿಸಲು ಪ್ರಯತ್ನ:

ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸಲು ಸಮಗ್ರ ಹಾಗೂ ಸಮರ್ಥ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಜನರಿಗೆ ಆರೋಗ್ಯ, ಶಿಕ್ಷಣ, ನೈರ್ಮಲ್ಯ ಹಾಗೂ ಸುಸ್ಥಿರ ಕೃಷಿ ವ್ಯವಸ್ಥೆಯುಳ್ಳ ರಾಜ್ಯವನ್ನಾಗಿ ರೂಪಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ನನ್ನ ಸರ್ಕಾರವು 2024-25ನೇ ಸಾಲಿನಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರೊಂದಿಗೆ ವಿತ್ತೀಯ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಿದೆ. 2024-25ರ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ರಾಜ್ಯದ ರಾಜಸ್ವ ಸಂಗ್ರಹಣೆಯು 1,81,908 ಕೋಟಿ ರೂ.ಗಳಿಗೆ ತಲುಪಿರುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ, ಡಿಸೆಂಬರ್ ತಿಂಗಳ ಅಂತ್ಯದವರೆಗೆ ರಾಜ್ಯದ ರಾಜಸ್ವ ಸ್ವೀಕೃತಿಯು ಶೇಕಡ 13 ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯಗಳಿಂದ ಸ್ವೀಕೃತವಾಗುವ ಒಟ್ಟು ಜಿ.ಎಸ್.ಟಿ ತೆರಿಗೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ 2ನೇ ಸ್ಥಾನದಲ್ಲಿದ್ದು ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಜಿ.ಎಸ್.ಟಿ ತೆರಿಗೆಯು ಶೇ.12ರಷ್ಟು ವರ್ಷವಾರು ಬೆಳವಣಿಗೆ ಸಾಧಿಸಿದೆ.

ಸಾಲ ವಸೂಲಾತಿಯಲ್ಲಿ ಕಿರುಕುಳ ತಡೆಗೆ ಸುಗ್ರೀವಾಜ್ಞೆ:

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗದ ಜನತೆಯಿಂದ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಕರ್ನಾಟಕ ರಾಜ್ಯದಲ್ಲಿ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಗಂಭೀರ ಕ್ರಮಗಳನ್ನು ಕೈಗೊಳ್ಳಲು, ಕಿರುಕುಳ ನೀಡುವ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 10 ವರ್ಷಗಳ ವರೆಗೆ ವಿಸ್ತರಿಸಬಹುದಾದ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಯನ್ನು ಅನುಷ್ಠಾನಗೊಳಿಸಿದೆ. ಸರ್ಕಾರ ವಸೂಲಾತಿಯ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಶಾಸನಾತ್ಮಕವಾದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ.

ಈ ಸುದ್ದಿಯನ್ನೂ ಓದಿ | Kodi Mutt Swamiji: ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಇಳಿಸುವುದು ಅಷ್ಟು ಸುಲಭವಲ್ಲ: ಕೋಡಿಮಠ ಶ್ರೀ ಭವಿಷ್ಯ

ಸರ್ಕಾರವು ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಜನ ಕಲ್ಯಾಣವನ್ನೆ ಪ್ರಧಾನ ಧೈಯವಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ. ಸರ್ವರ ಶಾಂತಿ, ಸರ್ವರ ಅಭ್ಯುದಯವೆ ಸಂವಿಧಾನದ ಆಶಯ. ಈ ಆಶಯವನ್ನು ಚಾಚೂ ತಪ್ಪದೆ ಪಾಲಿಸುತ್ತಿದೆ ಎಂದು ತಿಳಿಸಿದರು.