ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ನಾಲ್ಕೇ ನಾಲ್ಕು ನಿಮಿಷದಲ್ಲಿ ಎಟಿಎಂ ದೋಚಿದ ಕಿಲಾಡಿ ಕಳ್ಳರು; ವಿಡಿಯೊ ವೈರಲ್

ನಾಲ್ವರು ದರೋಡೆಕೋರರು ಎಟಿಎಂ ಮೆಷಿನ್‍ನಿಂದ 30 ಲಕ್ಷ ರೂ.ಗಳನ್ನು ದೋಚಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ಎಟಿಎಂ ಕಿಯೋಸ್ಕ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಎಮರ್ಜೆನ್ಸಿ ಅಲಾರಾಂ ಆಫ್‌ ಮಾಡಿ ಎಟಿಎಂ ಕೊಳ್ಳೆ ಹೊಡೆದ ದರೋಡೆಕೋರರು

Profile pavithra Mar 3, 2025 6:52 PM

ಹೈದರಾಬಾದ್: ಮನೆಗೆ ಕನ್ನ, ಬ್ಯಾಂಕಿಗೆ ಕನ್ನ ಹಾಕಿರುವ ಘಟನೆ ಸಾಕಷ್ಟು ನಡೆದಿವೆ. ಈಗ ನಾಲ್ವರು ದರೋಡೆಕೋರರು ಎಟಿಎಂ ಮೆಷಿನ್‍ನಿಂದ 30 ಲಕ್ಷ ರೂ.ಗಳನ್ನು ದೋಚಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಿಂದ ಕಳ್ಳರು ಹಣವನ್ನು ಲೂಟಿ ಮಾಡಿದ್ದಾರೆ. ಈ ಘಟನೆಯು ಎಟಿಎಂ ಕಿಯೋಸ್ಕ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಭಾನುವಾರ (ಮಾರ್ಚ್‌ 2) ಮುಂಜಾನೆ 2 ಗಂಟೆ ಸುಮಾರಿಗೆ ಈ ದರೋಡೆ ನಡೆದಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಳ್ಳರಲ್ಲಿ ಒಬ್ಬ ಕಾರಿನಿಂದ ಇಳಿದು ಮಹೇಶ್ವರಂನಲ್ಲಿರುವ ಎಟಿಎಂ ಸೆಂಟರ್‌ಗೆ ಹೋಗುವುದು ಸೆರೆಯಾಗಿದೆ. ಗೇಟ್‍ನಲ್ಲಿರುವ ಸಿಸಿಟಿವಿ ಕ್ಯಾಮೆರಾಕ್ಕೆ ಯಾವುದೋ ವಸ್ತುವನ್ನು ಸಿಂಪಡಿಸಿದ್ದಾನೆ. ಆದರೆ ಎಟಿಎಂ ಸೆಂಟರ್‌ನ ಒಳಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಕಳ್ಳತನದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಅವನು ವೈಯರ್‌ ಕತ್ತರಿಸುವ ಮೂಲಕ ಎಮರ್ಜೆನ್ಸಿ ಅಲಾರಾಂ ಅನ್ನು ನಿಷ್ಕ್ರಿಯಗೊಳಿಸಿದ್ದಾನೆ ಎಂದು ವರದಿಯಾಗಿದೆ. ಹೀಗಾಗಿ ಕಳ್ಳತನ ನಡೆಯುತ್ತಿದ್ದ ಬಗ್ಗೆ ಯಾರಿಗೂ ಸುಳಿಯು ಸಿಗಲಿಲ್ಲ.



ಎಟಿಎಂ ಮೆಷಿನ್‍ ಅನ್ನು ಕತ್ತರಿಸಲು ಕಳ್ಳರು ಕಬ್ಬಿಣದ ರಾಡ್ ಮತ್ತು ಗ್ಯಾಸ್ ಕಟ್ಟರ್ ಅನ್ನು ಬಳಸಿದ್ದಾರೆ. ಕಳ್ಳರು ಒಟ್ಟು 29.69 ಲಕ್ಷ ರೂ.ಗಳನ್ನು ಲೂಟಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಎಟಿಎಂ ಕಿಯೋಸ್ಕ್‌ನಿಂದ ಹೊರಡುವ ಮೊದಲು, ಅವರು ಶಟರ್ ಅನ್ನು ಸಹ ಕೆಳಗೆ ಎಳೆದಿದ್ದಾರೆ. ಕೇವಲ ನಾಲ್ಕು ನಿಮಿಷಗಳಲ್ಲಿ ಚಾಣಕ್ಷತನದಿಂದ ಈ ದರೋಡೆ ಮಾಡಿದ್ದಾರೆ.

ನಂತರ ಎಂಟಿಎಂ ಕಳ್ಳತನ ಆಗಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ನೀಡಲಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ಶುರು ಮಾಡಿದ್ದಾರೆ. ಕಳ್ಳರ ಕಾರನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.

"ಈ ಕಳ್ಳತನದಲ್ಲಿ ಐವರು ಭಾಗಿಯಾಗಿದ್ದಾರೆ. ಕಾರಿನಲ್ಲಿ ಓರ್ವ, ಹೊರಗೆ ಒಬ್ಬರು ನಿಂತಿದ್ದರು. ಮೂವರು ಒಳಗೆ ಹೋಗಿ ಕಳವು ಮಾಡಿದ್ದಾರೆ. ಎಟಿಎಂ ಮೆಷಿನ್‍ ಅನ್ನು ಒಡೆದು ನೋಟುಗಳನ್ನು ತೆಗೆದುಕೊಳ್ಳಲು ಅವರು ಗ್ಯಾಸ್ ಕಟ್ಟರ್‌ಗಳು ಮತ್ತು ಕಬ್ಬಿಣದ ರಾಡ್‌ಗಳನ್ನು ಬಳಸಿದ್ದಾರೆ" ಎಂದು ಪ್ರದೇಶದ ಸಹಾಯಕ ಪೊಲೀಸ್ ಆಯುಕ್ತ ರಾಜು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Robbery Case: ಬೀದರ್ ಎಟಿಎಂ ದರೋಡೆಕೋರರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ

ಕಳ್ಳರು ಹರಿಯಾಣ ಮೂಲದವರಾಗಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಈ ಕಳ್ಳರು ಮತ್ತೊಂದು ಎಟಿಎಂ ಅನ್ನು ಲೂಟಿ ಮಾಡಲು ಪ್ರಯತ್ನಿಸಿದ್ದರಂತೆ. ಆದರೆ ವೈಯರ್‌ ಕತ್ತರಿಸುವಾಗ ಕರೆಂಟ್ ಶಾಕ್‍ ಹೊಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದೇ ಗ್ಯಾಂಗ್ ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರಿನಲ್ಲಿ ಎಟಿಎಂ ಕಳ್ಳತನ ಮಾಡಿದೆ ಎಂದು ಪೊಲೀಸರು ಶಂಕಿಸಿದ್ದಾರ. ಕಳ್ಳರನ್ನು ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ.