CM Siddaramaiah: ವೀರಪ್ಪ ಮೊಯ್ಲಿ ಹೇಳುವುದು ಮುಖ್ಯವಲ್ಲ, ಹೈಕಮಾಂಡ್ ಏನು ಹೇಳುತ್ತಾರೋ ಅದು ಮುಖ್ಯ ಎಂದ ಸಿಎಂ
CM Siddaramaiah: ಡಿ.ಕೆ. ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳಾಗುವ ಸಾಧ್ಯತೆ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಾಕಿಯಿರುವ ಮೊತ್ತಗಳ ಪಾವತಿಗೆ ಮನವಿಕೊಂಡಿದ್ದು, ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು, ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ಲುಗಳು ಹೆಚ್ಚಿವೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವೇ ಎಂದು ಮರುಪ್ರಶ್ನಿಸಿದರು.
ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಅಪರಾಧ
ಅಧಿಕಾರಿಗಳ ಮಟ್ಟದಲ್ಲಿ ಕಮಿಷನ್ ದಂಧೆ ನಡೆದಿರುವುದಾಗಿ ಗುತ್ತಿಗೆ ಸಂಘದವರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಸಹ ಅಪರಾಧ. ಈ ರೀತಿಯ ಕೃತ್ಯದಲ್ಲಿ ಯಾರು ತೊಡಗಬಾರದು. ತಾನು ಇದುವರೆವಿಗೂ ಹಣಬಿಡುಗಡೆ ಮಾಡಲು ಯಾರಿಂದಲೂ ದುಡ್ಡು ಪಡೆದಿಲ್ಲವೆಂದರು.
ಹೈಕಮಾಂಡ್ ತೀರ್ಮಾನ ಅಂತಿಮ
ಡಿ.ಕೆ. ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳಾಗುವ ಸಾಧ್ಯತೆ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Lakshmi Hebbalkar: ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು: ಲಕ್ಷ್ಮೀ ಹೆಬ್ಬಾಳಕರ್
ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆ
ಉಭಯಸದನಗಳ ಕಾರ್ಯಕಲಾಪಗಳ ಸಲಹಾ ಸಮಿತಿಗಳ ಜಂಟಿ ಸಭೆ ನಡೆಸಲಾಗಿದೆ. ಸರ್ವಪಕ್ಷಗಳ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ನಂತರ, ನಾನು ಉತ್ತರ ನೀಡಲಿದ್ದೇನೆ. ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು. ಮಾರ್ಚ್ 19 ರವರೆಗೆ ಬಜೆಟ್ ಮೇಲಿನ ಚರ್ಚೆಗಳು ನಡೆಯಲಿದ್ದು, ಮಾರ್ಚ್ 19 ರಂದು ವಿಧಾನಸಭೆಯಲ್ಲಿ ಹಾಗೂ 20 ರಂದು ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.